ಕರ್ನಾಟಕ ಸರ್ಕಾರ ಜನರಿಗೆ ಕೊಟ್ಟಿರುವ ಶಾಪಗಳು ಪಟ್ಟಿ ಕೊಟ್ಟ ಬಿಜೆಪಿ!
ಬೆಂಗಳೂರು, ಸೆಪ್ಟೆಂಬರ್ 06; ಕರ್ನಾಟಕದ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಯೋಜನೆಗಳ ಭರವಸೆಯನ್ನು ರಾಜ್ಯದ ಜನರಿಗೆ ನೀಡಿ ಅಧಿಕಾರಕ್ಕೆ ಬಂದಿದೆ. 100 ದಿನಗಳಲ್ಲಿ 4 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ, ನುಡಿದಂತೆ ನಡೆದ ಸರ್ಕಾರ ನಮ್ಮದು ಎಂದು ಹೇಳಿಕೊಳ್ಳುತ್ತಿದೆ.
ಆದರೆ ಕರ್ನಾಟಕದ ಪ್ರತಿಪಕ್ಷ ಬಿಜೆಪಿ ಕರ್ನಾಟಕ ಸರ್ಕಾರದ ಆಡಳಿತ ವೈಫಲ್ಯಗಳನ್ನು ಪಟ್ಟಿ ಮಾಡಿದೆ. ಬುಧವಾರ ಟ್ವೀಟ್ ಮಾಡಿರುವ ಪಕ್ಷ 'ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡದೆ ಜನರಿಗೆ ಕೊಟ್ಟಿರುವ ಶಾಪಗಳು..!' ಎಂದು ಹಲವಾರು ಅಂಶಗಳನ್ನು ಪಟ್ಟಿ ಮಾಡಿದೆ.

ಬಿಜೆಪಿಯ ಟ್ವೀಟ್
* ವಿದ್ಯುತ್ ಬೆಲೆ ದುಪ್ಪಟ್ಟು ಏರಿಕೆ, ಲೋಡ್ ಶೆಡ್ಡಿಂಗ್ ಮೂಲಕ ಕತ್ತಲು ಭಾಗ್ಯ..!
* ಬೆಳೆ ಬೆಳೆಯದಂತೆ ರೈತರಿಗೆ ಕೃಷಿ ಮಂತ್ರಿಯೇ ತಾಕೀತು, ಅಕ್ಕಿ ಬೆಲೆಯಲ್ಲೂ ಭಾರೀ ಏರಿಕೆ, ಮೋದಿ ಸರ್ಕಾರದ 5 ಕೆಜಿ ಅಕ್ಕಿಗೂ ಕನ್ನ, ಸಿದ್ದರಾಮಯ್ಯ ಸರ್ಕಾರ ಅಕ್ಕಿಯೂ ಕೊಡುತ್ತಿಲ್ಲ, ದುಡ್ಡೂ ಕೊಡುತ್ತಿಲ್ಲ..!
* ಅಸಮರ್ಪಕ 'ಶಕ್ತಿ' ಮೂಲಕ ಸಾರಿಗೆ ನಿಗಮಗಳು ನಿಶ್ಯಕ್ತಿ, ಟಿಕೆಟ್ ದರ ಏರಿಕೆ, ಬೀದಿಗೆ ಬಂದ ಖಾಸಗಿ ಬಸ್ ಮತ್ತು ಟ್ಯಾಕ್ಸಿ ಹಾಗೂ ಆಟೋ ಚಾಲಕರ ಕುಟುಂಬಗಳು..!
* ರಾಜ್ಯದಲ್ಲಿ ಬರ ಮತ್ತು ನೆರೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತ, ಪರಿಹಾರ ಮಾತ್ರ ಶೂನ್ಯ..!
* ರಾಜ್ಯದ ಜನರಿಗೆ ಕಲುಷಿತ ಕುಡಿಯುವ ನೀರು ಮಾತ್ರ ಪೂರೈಕೆ, ತಮಿಳುನಾಡಿಗೆ ಮಾತ್ರ ಪರಿಶುದ್ಧ ಕಾವೇರಿ ನೀರು ಬಿಡುಗಡೆ..!
* ಪರಿಹಾರಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಸಚಿವ ಶಿವಾನಂದ ಪಾಟೀಲ್, ಕೃಷಿ ಇಲಾಖೆಯನ್ನು ವಸೂಲಿ ಕೇಂದ್ರವನ್ನಾಗಿಸಿದ ಸಚಿವ ಚೆಲುವರಾಯಸ್ವಾಮಿ..!
ಸಿದ್ದರಾಮಯ್ಯ ಅವರ ದುರಾಡಳಿತ ಕರ್ನಾಟಕಕ್ಕೆ ಅಪಾಯಕಾರಿಯಾಗಿದೆ. ಜನ ವಿರೋಧಿ ಹಾಗೂ ನಾಡ ವಿರೋಧಿತನವೇ ಕಾಂಗ್ರೆಸ್ಸಿನ ಡಿಎನ್ಎನಲ್ಲಿ ಸೇರಿಕೊಂಡಿದೆ..! ಎಂದು ಟ್ವೀಟ್‌ನಲ್ಲಿ ಬಿಜೆಪಿ ಆರೋಪ ಮಾಡಿದೆ.
ಕರ್ನಾಟಕ ಬಿಜೆಪಿ ಸೋಮವಾರದಿಂದ ಸರ್ಕಾರದ ವಿರುದ್ಧ ಸರಣಿ ಟ್ವೀಟ್‌ಗಳನ್ನು ಮಾಡುತ್ತಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುವುದು, ರಾಜ್ಯದಲ್ಲಿನ ಬರಗಾಲ ಸೇರಿದಂತೆ ವಿವಿಧ ವಿಚಾರಗಳನ್ನು ಉಲ್ಲೇಖ ಮಾಡುತ್ತಿದೆ.
ಬಿಜೆಪಿ ಒಂದು ಟ್ವೀಟ್‌ನಲ್ಲಿ, 'ರಾಜ್ಯದ ಬೊಕ್ಕಸವನ್ನು ಈಗಾಗಲೇ ಬರಿದು ಮಾಡಿರುವ ಕಾಂಗ್ರೆಸ್ ಸರ್ಕಾರ ಬರ ಘೋಷಿಸಲೂ ಮೀನಮೇಷ ಎಣಿಸುತ್ತಿದೆ. ಕಾಂಗ್ರೆಸ್ಸಿನ ದೂರದೃಷ್ಟಿಯ ಕೊರತೆ ಕರ್ನಾಟಕವನ್ನು ಸಂಕಷ್ಟದ ಪರಿಸ್ಥಿತಿಗೆ ತಂದು ನಿಲ್ಲಿಸಿದೆ. ಕೇಂದ್ರದ ಶ್ರೀ ನರೇಂದ್ರ ಮೋದಿ ಸರ್ಕಾರ ನೀಡದ ಹೊರತು ಯಾವುದೇ ಪರಿಹಾರ ಪ್ಯಾಕೇಜ್ ಘೋಷಿಸುವುದಕ್ಕೂ ರಾಜ್ಯ ಸರ್ಕಾರದ ಬಳಿ ಹಣ ಉಳಿದಿಲ್ಲ. ಹಾಗಾಗಿ ಈಗಾಗಲೇ ಪರಿಸ್ಥಿತಿ ಬಿಗಡಾಯಿಸಿದರೂ ಬರ ಘೋಷಿಸುವುದನ್ನು ಸಿದ್ದರಾಮಯ್ಯ ಅವರ ಸರ್ಕಾರ ಇನ್ನೂ ಒಂದು ವಾರ ಮುಂದಕ್ಕೆ ಹಾಕಿದೆ' ಎಂದು ಆರೋಪ ಮಾಡಿತ್ತು.
ಮತ್ತೊಂದು ಟ್ವೀಟ್‌ನಲ್ಲಿ, 'ವಿದ್ಯುತ್ ಬೆಲೆ ಏರಿಕೆಯ ಪರಿಣಾಮ ಅಕ್ಕಿ ಗಿರಣಿಗಳ ಮೇಲಿನ ಹೊರೆ ಹಾಗೂ ರಾಜ್ಯದಲ್ಲಿ ಬರ ಪರಿಸ್ಥಿತಿ, ಈ ಎರಡೂ ಪರಿಣಾಮಗಳ ಫಲವಾಗಿ ಅಕ್ಕಿ ಬೆಲೆ ಕೆಜಿಗೆ ₹10 ರಿಂದ ₹20ರ ವರೆಗೂ ಏರಿಕೆಯಾಗಿದೆ'
'ರಾಜ್ಯದಲ್ಲಿನ ಅಕ್ಕಿ ಹೊರ ರಾಜ್ಯಗಳಿಗೆ ಸಾಗಾಟವಾಗುತ್ತಿರುವುದೂ ಅಕ್ಕಿ ಬೆಲೆ ಗಗನಕ್ಕೇರಲು ಇರುವ ಮತ್ತೊಂದು ಕಾರಣ ಎಂಬುದು ತಿಳಿದಿದ್ದರೂ ಸಿದ್ದರಾಮಯ್ಯರವರ ಸರ್ಕಾರ ತನ್ನ I.N.D.I.Alliance ಸ್ನೇಹಿತರಿಗಾಗಿ ಕೈಕಟ್ಟಿ ಕೂತಿದೆ. ಸರ್ಕಾರ ಮಧ್ಯ ಪ್ರವೇಶಿಸಿ ಅಕ್ಕಿ ಖರೀದಿಸಿದಲ್ಲಿ ಅಕ್ಕಿ ಬೆಲೆ ಕೂಡಲೇ ನಿಯಂತ್ರಣಕ್ಕೆ ಬರುತ್ತದೆ. ಆದರೆ ಸರ್ಕಾರ ಈ ಬಗ್ಗೆ ಆಸಕ್ತಿಯನ್ನೇ ತೋರುತ್ತಿಲ್ಲ. 10 ಕೆಜಿ ಅಕ್ಕಿ ಕೊಡುತ್ತೇನೆ ಎಂದಿದ್ದ ಕಾಂಗ್ರೆಸ್ ಈಗ ಅಕ್ಕಿಯನ್ನೂ ಕೊಡದೆ, ಆ ಬಾಬ್ತು ಹಣವನ್ನೂ ಸಂದಾಯ ಮಾಡದೆ, ಅಕ್ಕಿ ಬೆಲೆ ಗಗನಕ್ಕೇರುವಂತೆ ಮಾಡಿ ತಮಾಷೆ ನೋಡುತ್ತಿದೆ' ಎಂದು ಬಿಜೆಪಿ ದೂರಿತ್ತು.












Click it and Unblock the Notifications