ಉಪಚುನಾವಣೆಗೆ ಮುನ್ನಾ ಬಿಜೆಪಿಯಲ್ಲಿ ಭಿನ್ನಮತ: ಇಕ್ಕಟ್ಟಿನಲ್ಲಿ ಯಡಿಯೂರಪ್ಪ
ಬೆಂಗಳೂರು, ಅಕ್ಟೋಬರ್ 24: ಬಿಜೆಪಿ ಪಕ್ಷದಲ್ಲಿ ಭಿನ್ನಮತ ಭುಗಿಲೆದ್ದಿದ್ದು, ಕೆಲವು ಮುಖಂಡರು ಯಡಿಯೂರಪ್ಪ ವಿರುದ್ಧವೇ ದನಿ ಏರಿಸಿದ್ದು, ಈ ಬೆಳವಣಿಗೆ ಯಡಿಯೂರಪ್ಪ ಅವರನ್ನು ಇಕ್ಕಟ್ಟಿಗೆ ಸಿಲುಕಿದ್ದಾರೆ.
15 ಕ್ಷೇತ್ರಗಳ ಉಪಚುನಾವಣೆ ಸಂಬಂಧ ನಿನ್ನೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಗರದಲ್ಲಿ ಸಭೆ ನಡೆಯಿತು.
ಅನರ್ಹ ಶಾಸಕರಿಗೆ ಉಪಚುನಾವಣೆ ಟಿಕೆಟ್ ನೀಡುವುದನ್ನು ಉಪಚುನಾವಣೆ ನಡೆಯುತ್ತಿರುವ ಕ್ಷೇತ್ರಗಳಲ್ಲಿ ಕಳೆದ ಬಾರಿ ಸೋತಿರುವ ಬಿಜೆಪಿ ಅಭ್ಯರ್ಥಿಗಳು ತೀವ್ರವಾಗಿ ವಿರೋಧಿಸಿದರು. ಕೆಲವರು ಪಕ್ಷ ತ್ಯಜಿಸಿ ಎದುರಾಳಿ ಪಕ್ಷ ಸೇರುವುದಾಗಿ ನೇರವಾಗಿಯೇ ಹೇಳಿದರು ಎನ್ನಲಾಗಿದೆ.
ವಿಶೇಷವಾಗಿ ಬೆಂಗಳೂರು ನಗರದಲ್ಲಿನ ಕ್ಷೇತ್ರಗಳವರು ಅನರ್ಹ ಶಾಸಕರಿಗೆ ಟಿಕೆಟ್ ನೀಡುವುದನ್ನು ಖಂಡಿಸಿದ್ದಾರೆ. ಅನರ್ಹರಿಗೆ ಟಿಕೆಟ್ ನೀಡಿದರೆ ಮುಂದೆ ಅವರು ಬಿಬಿಎಂಪಿ ಚುನಾವಣೆಯಲ್ಲಿ ತಮ್ಮ ಬೆಂಬಲಿಗರಿಗೆ ಟಿಕೆಟ್‌ಗಾಗಿ ಒತ್ತಾಯಿಸುತ್ತಾರೆ. ಅದು ಹೀಗೆಯೇ ಮುಂದುವರೆಯುತ್ತದೆ. ಪಕ್ಷಕ್ಕಾಗಿ ಇಷ್ಟು ವರ್ಷ ದುಡಿದವರ ಕತೆ ಏನಾಗಬೇಕು? ಎಂದು ಸಭೆಯಲ್ಲಿ ಬಿಜೆಪಿ ಮುಖಂಡರು ಪ್ರಶ್ನೆ ಮಾಡಿದ್ದಾರೆ.

ಸೋತ ಅಭ್ಯರ್ಥಿಗಳಿಂದ ತಕರಾರು
ಯಶವಂತಪುರ, ರಾಜರಾಜೇಶ್ವರಿ ನಗರ, ಮಹಾಲಕ್ಷ್ಮಿ ಲೇಔಟ್ ಕ್ಷೇತ್ರಗಳ ಸೋತ ಬಿಜೆಪಿ ಅಭ್ಯರ್ಥಿಗಳು ಅನರ್ಹರಿಗೆ ಟಿಕೆಟ್ ನೀಡುವುದನ್ನು ತೀವ್ರವಾಗಿ ಖಂಡಿಸಿದ್ದು, ಅದರಲ್ಲಿ ಕೆಲವರು ಪಕ್ಷ ತೊರೆಯುವ ಬೆದರಿಕೆ ಸಹ ಹಾಕಿದ್ದಾರೆ. ಬೆಂಗಳೂರು ಮಾತ್ರವಲ್ಲದೆ ಹೊಸಕೋಟೆ, ಗೋಕಾಖ ಸೇರಿದಂತೆ ಇನ್ನೂ ಕೆಲವು ಕ್ಷೇತ್ರಗಳ ಬಗ್ಗೆಯೂ ಬಿಸಿ-ಬಿಸಿ ಚರ್ಚೆಗಳಾಗಿವೆ.

ಗೋಪಾಲಯ್ಯಗೆ ಟಿಕೆಟ್ ನೀಡಲು ವಿರೋಧ
ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ಗೋಪಾಲಯ್ಯಗೆ ಟಿಕೆಟ್ ನೀಡುವುದನ್ನು ನೆ.ಲ.ನರೇಂದ್ರ ಬಾಬು, ಎಸ್.ಹರೀಶ್, ಎಂ.ನಾಗರಾಜ್ ವಿರೋಧಿಸಿದರು. ಆದರೆ ಯಡಿಯೂರಪ್ಪ ಎಚ್ಚರಿಕೆ ನೀಡಿದ ನಂತರ ನಾಗರಾಜು ಹಿಂದೆ ಸರಿದಿದ್ದಾರೆ. ನರೇಂದ್ರ ಬಾಬು ಅವರು ಸುಪ್ರೀಂ ತೀರ್ಪಿನ ನಂತರ ಅಭಿಪ್ರಾಯ ತಿಳಿಸುವುದಾಗಿ ಹೇಳಿದ್ದಾರೆ.

ಹುಣಸೂರು, ಶಿವಾಜಿನಗರ ಕ್ಷೇತ್ರಗಳಲ್ಲಿ ವಿರೋಧವಿಲ್ಲ
ಹುಣಸೂರು, ಕೆ.ಆರ್.ಪುರ, ಕೆ.ಆರ್.ಪೇಟೆ, ಶಿವಾಜಿನಗರ ಕ್ಷೇತ್ರಗಳ ಟಿಕೆಟ್ ಅನ್ನು ಅನರ್ಹ ಶಾಸಕರಿಗೆ ನೀಡುವ ಬಗ್ಗೆ ಹೆಚ್ಚಿನ ಆಕ್ಷೇಪಣೆಗಳು ವ್ಯಕ್ತವಾಗಲಿಲ್ಲ. ಹೊಸಕೋಟೆ ಕ್ಷೇತ್ರದ ಬಗ್ಗೆ ಬೆಳವಣಿಗೆ ಗಮನಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದರು.

ಅನರ್ಹ ಶಾಸಕರ ಅರ್ಜಿ ಇಂದು ವಿಚಾರಣೆ
ಹದಿನೇಳು ಅನರ್ಹ ಶಾಸಕರ ಅರ್ಜಿ ವಿಚಾರಣೆ ಇಂದು ಸುಪ್ರೀಂಕೋರ್ಟ್‌ನಲ್ಲಿ ನಡೆಯಲಿದೆ. ನಿನ್ನೆ ನಡೆಯಬೇಕಿದ್ದ ವಿಚಾರಣೆಯನ್ನು ಇಂದಿಗೆ ಮುಂದೂಡಲಾಗಿತ್ತು. ಇಂದಿನ ವಿಚಾರಣೆ ಹಾಗೂ ಆದೇಶ ರಾಜ್ಯ ರಾಜಕಾರಣದ ಮೇಲೆ ಭಾರಿ ಪ್ರಭಾವ ಬೀರಲಿದೆ.












Click it and Unblock the Notifications