ಬಿಜೆಪಿ ನಾಯಕ, ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿಗೆ ಸಂಕಷ್ಟ: ಮತ್ತೆ ಜೈಲು ಪಾಲು
ಬೆಂಗಳೂರು, ಫೆಬ್ರವರಿ 06; ಮಾಜಿ ಸಚಿವ, ಬಿಜೆಪಿ ನಾಯಕ ಮಾಲೂರು ಕೃಷ್ಣಯ್ಯ ಶೆಟ್ಟಿಗೆ ಸಂಕಷ್ಟ ಎದುರಾಗಿದೆ. ಅವರ ವಿರುದ್ಧದ ವಂಚನೆ ಪ್ರಕರಣದ ತೀರ್ಪು ಪ್ರಕಟವಾಗಿದ್ದು, ಅವರು ದೋಷಿ ಎಂದು ಕೋರ್ಟ್ ಆದೇಶ ನೀಡಿದೆ. ನಕಲಿ ದಾಖಲೆಗಳ ಮೂಲಕ ಖಾಸಗಿ ಬ್ಯಾಂಕ್‌ಗೆ 7.17 ಕೋಟಿ ರೂ. ವಂಚನೆ ಮಾಡಿರುವ ಪ್ರಕರಣದಲ್ಲಿ ಕೃಷ್ಣಯ್ಯ ಶೆಟ್ಟಿ ದೋಷಿಯಾಗಿದ್ದು, ಶಿಕ್ಷೆ ಪ್ರಮಾಣ ಪ್ರಕಟವಾಗಬೇಕಿದೆ.
ಗುರುವಾರ ಬೆಂಗಳೂರು ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಈ ಕುರಿತು ಆದೇಶವನ್ನು ಹೊರಡಿಸಿದ್ದಾರೆ. ಖಾಸಗಿ ಬ್ಯಾಂಕ್‌ಗೆ ವಂಚನೆ ಮಾಡಿದ ಪ್ರಕರಣದಲ್ಲಿ ಮಾಲೂರು ಕೃಷ್ಣಯ್ಯ ಶೆಟ್ಟಿ ಸೇರಿ ನಾಲ್ವರ ವಿರುದ್ಧದ ಆರೋಪಗಳು ಸಾಬೀತಾಗಿವೆ.

ಮಾಲೂರು ಕೃಷ್ಣಯ್ಯ ಶೆಟ್ಟಿ ಸೇರಿದಂತೆ ನಾಲ್ವರು ಸಹ ದೋಷಿಗಳು ಎಂದು ಕೋರ್ಟ್ ತೀರ್ಪು ನೀಡಿದೆ. ಈ ವಂಚನೆ ಪ್ರಕರಣದ ಕುರಿತು ಸಿಬಿಐಗೆ ಬ್ಯಾಂಕ್ ದೂರು ನೀಡಿತ್ತು. ದೂರಿನ ಅನ್ವಯ ತನಿಖೆ ಕೈಗೊಂಡು ಸಿಬಿಐ ಕೋರ್ಟ್‌ಗೆ ದೋಷಾರೋಪ ಪಟ್ಟಿಯನ್ನು ಸಲ್ಲಿಕೆ ಮಾಡಿತ್ತು.
ಮಾಲೂರು ಕೃಷ್ಣಯ್ಯ ಶೆಟ್ಟಿ ಮತ್ತೆ ಜೈಲಿಗೆ: ನಕಲಿ ದಾಖಲೆಗಳ ಮೂಲಕ ಬ್ಯಾಂಕ್‌ಗೆ ವಂಚನೆ ಮಾಡಿ 7.17 ಕೋಟಿ ರೂ. ವಂಚನೆ ಮಾಡಿದ ಪ್ರಕರಣದಲ್ಲಿ ಮಾಲೂರು ಕೃಷ್ಣಯ್ಯ ಶೆಟ್ಟಿ, ಶ್ರೀನಿವಾಸ್ ಮತ್ತು ಮುನಿರಾಜು ದೋಷಿಗಳು ಎಂದು ಕೋರ್ಟ್ ತೀರ್ಪು ನೀಡಿದೆ. ಆದರೆ ಕೋರ್ಟ್ ಇನ್ನೂ ಎಷ್ಟು ವರ್ಷಗಳ ಜೈಲು ಶಿಕ್ಷೆ ಎಂದು ಆದೇಶ ಪ್ರಕಟಿಸಿಲ್ಲ.
ಮಾಲೂರು ಕ್ಷೇತ್ರದ ಶಾಸಕರೂ ಆಗಿದ್ದ ಮಾಲೂರು ಕೃಷ್ಣಯ್ಯ ಶೆಟ್ಟಿ ಬಾಲಾಜಿಕೃಪಾ ಎಂಟರ್‌ಪ್ರೈಸಸ್ ಮೂಲಕ 1993ರಲ್ಲಿ ಸಾರ್ವಜನಿಕ ಉದ್ದಿಮೆಗಳ ನೌಕರರಿಗೆ ಗೃಹ ಮಂಡಳಿ ಸಾಲ ಕೊಡಿಸುವುದಾಗಿ ಆಮಿಷವೊಡ್ಡಿದ್ದರು.
ಹಲವು ನೌಕರರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ, ಬ್ಯಾಂಕ್‌ನಿಂದ ಸಾಲವನ್ನು ಪಡೆದಿದ್ದರು. ಇದರಲ್ಲಿ 3.53 ಕೋಟಿ ರೂ. ಸಾಲವನ್ನು ಇನ್ನೂ ಸಹ ತೀರಿಸಿಲ್ಲ. ನಕಲಿ ದಾಖಲೆ ಮೂಲಕ ವಂಚನೆ ಮಾಡಿ ಸಾಲ ಪಡೆದ ಬಗ್ಗೆ ಬ್ಯಾಂಕ್ ಸಿಬಿಐಗೆ ದೂರು ನೀಡಿತ್ತು. ತನಿಖೆಯಲ್ಲಿ ವಂಚನೆ ಮಾಡಿರುವುದು ಸಾಬೀತಾಗಿತ್ತು.
ಸಿಬಿಐ ಮಾಲೂರು ಕೃಷ್ಣಯ್ಯ ಶೆಟ್ಟಿ ಸೇರಿ ಇತರರ ವಿರುದ್ಧ ಭಾರತೀಯ ದಂಡ ಸಂಹಿತೆ 120ಬಿ, 409, 419, 420, 467, 471 ಸೇರಿದಂತೆ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲು ಮಾಡಿತ್ತು. ಈಗ ಕೋರ್ಟ್ ವಿಚಾರಣೆ ನಡೆಸಿ ನಾಲ್ವರು ದೋಷಿ ಎಂದು ತೀರ್ಪು ನೀಡಿದೆ.
ಒಂದು ಕಾಲದಲ್ಲಿ ಮಾಲೂರು ಕೃಷ್ಣಯ್ಯ ಶೆಟ್ಟಿ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಆಪ್ತರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಜರಾಯಿ ಖಾತೆ ಸಚಿವರಾಗಿದ್ದ ಅವರು ಗಂಗಾಜಲ ಹಂಚುವ ಮೂಲಕ ಸುದ್ದಿ ಮಾಡಿದ್ದರು. ಬಿ. ಎಸ್. ಯಡಿಯೂರಪ್ಪ ಜೊತೆ 24 ದಿನಗಳ ಕಾಲ ಜೈಲುವಾಸವನ್ನು ಸಹ ಅವರು ಅನುಭವಿಸಿದ್ದರು.
ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದ ಅವರು 2017ರಲ್ಲಿ ಬಿಜೆಪಿಗೆ ವಾಪಸ್ ಆಗಿದ್ದರು. 2023ರ ವಿಧಾನಸಭೆ ಚುನಾವಣೆಯಲ್ಲಿ ಅವರು ಬೆಂಗಳೂರಿನ ಗಾಂಧಿ ನಗರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಪಕ್ಷ ಸಪ್ತಗಿರಿ ಗೌಡ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತು.
ಕಾಂಗ್ರೆಸ್ ಮತ್ತು ಬಿಜೆಪಿಯ ಒಳಒಪ್ಪಂದದಿಂದ ನನಗೆ ಬಿಜೆಪಿ ಟಿಕೆಟ್ ಕೈ ತಪ್ಪಿದೆ ಎಂದು ಆರೋಪಿಸಿದ್ದ ಕೃಷ್ಣಯ್ಯ ಶೆಟ್ಟಿ ಗಾಂಧಿನಗರ ವಿಧಾನಸಭೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದರು. 6781 ಮತಗಳನ್ನು ಪಡೆದು ಚುನಾವಣೆಯಲ್ಲಿ ಸೋತಿದ್ದರು.












Click it and Unblock the Notifications