Karnataka Budget 2023: ಸಿಎಂ ಬೊಮ್ಮಾಯಿ ಬಜೆಟ್ ಕುರಿತು ಬಿ ಎಸ್ ಯಡಿಯೂರಪ್ಪ ಹೇಳಿದ್ದೇನು.?
ರಾಜ್ಯದ ಬಡವರು, ದುರ್ಬಲ ವರ್ಗದವರ, ಮಹಿಳೆಯರ, ಶೋಷಿತರ ಹಾಗೂ ಯುವ ಜನರ ಶ್ರೇಯೋಭಿವೃದ್ಧಿಗೆ ಹಲವಾರು ಉಪ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಬಿಎಸ್ ಯಡಿಯೂರಪ್ಪ ಹೇಳಿದರು.
ಬೆಂಗಳೂರು,ಫೆಬ್ರವರಿ17: ಬಸವರಾಜ ಬೊಮ್ಮಾಯಿ ರವರು ಅತ್ಯುತ್ತಮವಾದ ಆಯವ್ಯಯವನ್ನು ಮಂಡಿಸಿದ್ದಾರೆ. ಈ ಆಯವ್ಯಯದಲ್ಲಿ ನಮ್ಮ ಪಕ್ಷದ ಆಶಯದಂತೆ ರೈತರ ಆದಾಯವನ್ನು ದ್ವಿಗುಣಗೊಳಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯದ ಬಡವರು, ದುರ್ಬಲ ವರ್ಗದವರ, ಮಹಿಳೆಯರ, ಶೋಷಿತರ ಹಾಗೂ ಯುವ ಜನರ ಶ್ರೇಯೋಭಿವೃದ್ಧಿಗೆ ಹಲವಾರು ಉಪ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮೂಲಸೌಕರ್ಯಗಳಿಗೆ ಒತ್ತು ನೀಡುವುದನ್ನು ಈ ಆಯವ್ಯಯದಲ್ಲಿ ಮುಂದುವರೆಸಿದ್ದು, ಇದರಿಂದ ರಾಜ್ಯವು ದೇಶದಲ್ಲಿಯೇ ಹೂಡಿಕೆದಾರರ ನೆಚ್ಚಿನ ತಾಣವಾಗಿ ಮುಂದುವರೆಯಲಿದೆ ಎಂದು ಹೇಳಿದ್ದಾರೆ.

ಬೆಂಗಳೂರು ನಗರ ಅಭಿವೃದ್ಧಿಗೆ ನಮ್ಮ ಪಕ್ಷದ ಆದ್ಯತೆಯಾಗಿದ್ದು, ಅದರಂತೆ 2023-24 ನೇ ಸಾಲಿಗೆ ರೂ.9,698 ಕೋಟಿ ಅನುದಾನವನ್ನು ಒದಗಿಸಲು ಉದ್ದೇಶಿಸಿರುವುದು ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಕೋವಿಡ್-19 ಸಾಂಕ್ರಾಮಿಕದ ನಂತರ ಮೊದಲ ಬಾರಿಗೆ ರಾಜ್ಯದಲ್ಲಿ ರಾಜಸ್ವ ಹೆಚ್ಚುವರಿ (Revenue Surplus) ಆಯವ್ಯಯವನ್ನು ಮಂಡಿಸಿದ್ದು, ಬಿ.ಜೆ.ಪಿ. ನೇತೃತ್ವದಲ್ಲಿ ರಾಜ್ಯವು ಆರ್ಥಿಕವಾಗಿ ಸದೃಢವಾಗಿರುತ್ತದೆ ಎಂಬುದು ಸಾಬೀತಾಗಿದೆ.
ರೂ.3,09,182 ಕೋಟಿಗಳ ಮೊತ್ತದ ಆಯವ್ಯಯ ಮಂಡಿಸಿದ್ದು, ವಿತ್ತೀಯ ಹೊಣೆಗಾರಿಕೆ ಅಧಿನಿಯಂದ ಇತಿಮಿತಿಯೊಳಗೆ ಜನಪರವಾದ ದೀರ್ಘಕಾಲಿನ ಅಭಿವೃದ್ಧಿಯ ದೂರದೃಷ್ಟಿಯೊಂದಿಗೆ ಅತ್ಯುತ್ತಮವಾದ ಆಯವ್ಯಯವನ್ನು ನೀಡಿರುವುದನ್ನು ನಾನು ಮುಖ್ಯಮಂತ್ರಿಯವರನ್ನು ಅಭಿನಂದಿಸುತ್ತೇನೆ ಎಂದು ಹೇಳಿದ್ದಾರೆ.

ರೈತರ ಬದುಕಿಗೆ ಭದ್ರತೆ ಒದಗಿಸಲು ರೂ.180 ಕೋಟಿ ವೆಚ್ಚದಲ್ಲಿ "ಜೀವನ ಜ್ಯೋತಿ" ವಿಮಾ ಯೋಜನೆ ಜಾರಿಗೆ ತರಲಾಗಿದೆ. ರೈತರ ಕೃಷಿ ಉತ್ಪನ್ನಗಳನ್ನು ಪ್ರೋತ್ಸಾಹಿಸಿ ಬೆಲೆ ಬರುವಂತಾಗಲು ಕೊಯ್ಲೋತ್ತರ ತಂತ್ರಜ್ಞಾನಕ್ಕೆ ರೂ.100 ಕೋಟಿ ರೂಪಾಯಿ ಯೋಜನೆ ರೂಪಿಸಿದೆ. ಬೆಂಬಲ ಬೆಲೆ ಯೋಜನೆ ಅಡಿ ಆವರ್ತ ನಿಧಿಯಡಿ ರೂ.5,೦೦೦ ಕೋಟಿ ಅನುದಾನ ಹೆಚ್ಚಿಸಿರುವ ಐತಿಹಾಸಿಕ ನಿರ್ಧಾರದಿಂದ ಕೃಷಿ ಉತ್ಪನ್ನಗಳ ಬೆಲೆ ಕುಸಿತಕ್ಕೆ ಸಹಕಾರಿಯಾಗಲಿದೆ ಎಂದರು.












Click it and Unblock the Notifications