ದುಡ್ಡು ಮಾಡೋದು ಹೇಗೆ ಅಂತ ಒಂದು ಯೂನಿವರ್ಸಿಟಿ ಮಾಡಿ ಡಿ ಕೆ ಶಿವಕುಮಾರ್ ಅವರೇ: ಅಶ್ವಥ್ ನಾರಾಯಣ್
ಬೆಂಗಳೂರು, ಅಕ್ಟೋಬರ್ 14: : ಕಾಂಗ್ರೆಸ್ ನ ಮಾಜಿ ಕಾರ್ಪೋರೇಟರ್ ಅಶ್ವಥಮ್ಮ ಮತ್ತು ಗುತ್ತಿಗೆದಾರ ಅಂಬಿಕಾಪತಿ ಮನೆ ಮೇಲೆ ಐಟಿ ದಾಳಿ ನಡೆದು ಬರೋಬ್ಬರಿ 42 ಕೋಟಿ ಹಣ ಪತ್ತೆಯಾಗಿದ್ದು, ರಾಜ್ಯ ಬಿಜೆಪಿ ನಾಯಕರು ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ.
42 ಕೋಟಿ ಹಣ ಪತ್ತೆಯಾದ ವಿಚಾರವಾಗಿ ಬೆಂಗಳೂರಿನಲ್ಲಿ ಮಾಜಿ ಸಚಿವ ಡಾ. ಸಿ ಎನ್ ಅಶ್ವಥ್ ನಾರಾಯಣ್ ಮಾಧ್ಯಮಗಳ ಜೊತೆಗೆ ಮಾತನಾಡಿ, ದುಡ್ಡು ಮಾಡೋದು ಹೇಗೆ ಅಂತ ಒಂದು ಯೂನಿವರ್ಸಿಟಿ ಮಾಡಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರೇ ಎಂದು ಕುಟುಕಿದ್ದಾರೆ.
ಡಿ ಕೆ ಶಿವಕುಮಾರ್ ಯೂನಿವರ್ಸಿಟಿ, ಅಂಬಿಕಾಪತಿ ಯೂನಿವರ್ಸಿಟಿ, ಸಿದ್ದರಾಮಯ್ಯ ಯೂನಿವರ್ಸಿಟಿ, ಪ್ರಿಯಾಂಕ್ ಖರ್ಗೆ ಯೂನಿವರ್ಸಿಟಿ, ಜಮೀರ್ ಯೂನಿವರ್ಸಿಟಿ ಅಂತ ಮಾಡಿ. ಎಲ್ಲರಿಗೂ ದುಡ್ಡು ಮಾಡುವುದನ್ನ ಕಲಿಸಿಕೊಡಿ ಎಂದು ಕಿಡಿಕಾರಿದ್ದಾರೆ.

ಐಟಿ ದಾಳಿ ವಿಚಾರವಾಗಿ ಹಾದಿ ಬೀದೀಲ್ಲಿ ಹೋಗೋರಿಗೆಲ್ಲಾ ಹೇಳಕ್ಕಾಗಲ್ಲ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಮಾತನಾಡಿ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು, ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಯಾಕೆ ಮುಟ್ಟಿ ನೋಡಿಕೊಳುತ್ತಾರೆ. ಹಾದಿ ಬೀದಿಯಲ್ಲಿ ಇರೋರಿಗೆ ಉತ್ತರ ಕೊಡೋದು ಬೇಡಪ್ಪ, ಜನರಿಗೆ ಉತ್ತರ ಕೊಡಪ್ಪ ಎಂದು ಹೇಳಿದರು.
40% ಕಮೀಷನ್ ಅಂತ ಹೇಳಿ ಆರೋಪ ಮಾಡಿದವನ ಮನೆಯಲ್ಲೇ 42 ಕೋಟಿ ಹಣ ಸಿಕ್ಕಿದೆ. 40% ಕಮಿಷನ್ ತನಿಖೆ ಮಾಡೋದಕ್ಕೆ ಕಮೀಷನ್ ನೇಮಕ ಮಾಡಿದವರು ಇವರು. ರಾಜಕೀಯ ಮಾಡ್ತಿದ್ದಾರೆ ಅಂತ ಹೇಳುವ ನೀವು ಇನ್ನೆಂತವರು.? ಜವಾಬ್ದಾರಿ ಇದ್ದವರು ಹೇಳುವ ಮಾತಾ ಇದು.? ಎಂದು ಪ್ರಶ್ನಿಸಿದ ಅವರು, ಇವರ ಆಲೋಚನೆ ಹೇಗಿದೆ ನೋಡಿ. ಅನ್ ಅಕೌಂಟ್ ಆಗಿ ಸಿಕ್ಕಿರೋದನ್ನ ಇವರು ವಿರೋಧಿಸಬೇಕು. ಅದನ್ನ ಬಿಟ್ಟು ರಾಜಕೀಯ ಪ್ರೇರಿತ ಅಂತ ಹೇಳೋದು ಎಷ್ಟು ಸರಿ.? ಎಂದು ಕುಟುಕಿದರು.
ಅಂಬಿಕಾಪತಿ ಆದಾಯ ಏನು, ಹೇಗೆ ಬಂತು ಅಂತ ತನಿಖೆ ಮಾಡಬೇಕು. ಈತನ ಆದಾಯ ಗುಟ್ಟು ಕೇಳಬೇಕು. ಡಿಕೆ ಶಿವಕುಮಾರ್ ಅವರಿಗೆ ಅದಕ್ಕೆ ಹೇಳಿದ್ದು ಒಂದು ಯೂನಿವರ್ಸಿಟಿ ಮಾಡಿ ಅಂತ. ದುಡ್ಡು ಮಾಡೋದು ಹೇಗೆ ಅಂತ ಯೂನಿವರ್ಸಿಟಿ ಮಾಡಿ ಡಿ ಕೆ ಶಿವಕುಮಾರ್ ಅವರೇ ಎಂದು ಕಿಡಿಕಾರಿದರು.

ಮಹಿಷ ದಸರದಲ್ಲಿ ಒಕ್ಕಲಿಗರು ಸಂಸ್ಕೃತಿ ಹೀನರು ಎಂದ ಭಗವಾನ್ ಹೇಳಿಕೆ ವಿಚಾರವಾಗಿ ಮಾತನಾಡಿ, ಸನ್ಮಾನ್ಯ ವಿಚಾರವಾದಿಗಳಾದ ಭಗವಾನ್ ಅವರು ಏನೆಲ್ಲಾ ಪ್ರಯತ್ನ ಮಾಡ್ತಿದ್ದಾರೆ ಅವರೇ ಹೇಳಬೇಕು. ಹಿಂದೂ ಧರ್ಮದ ವಿರುದ್ಧ ಏನೆಲ್ಲಾ ಪ್ರಚಾರ ಮಾಡ್ತಿದ್ದೇನೆ ಅಂತ ಅವರೇ ಹೇಳಬೇಕು. ಮಹಿಷ ಏನು ಬೇರೆ ಸಂಸ್ಕೃತಿ ಅವರ, ಹಿಂದೂ ಧರ್ಮದ ಭಾಗ. ಮಹಿಷ ದುಷ್ಟ ಶಕ್ತಿಯಿಂದ ಬಂದವರು. ದೈವಶಕ್ತಿಯನ್ನ ವಿರೋಧಿಸಿ, ದುಷ್ಟ ಶಕ್ತಿ ಪೂಜಿಸ್ತೀನಿ ಅಂತ ಹೊರಟಿದ್ದಾರೆ. ಜನ ವಿರೋಧಿ ನೀತಿ ಅನುಭವಿಸುತ್ತಿದ್ದಾರೆ ಎಂದರು.
ಸರ್ಕಾರ ಮಹಿಷ ದಸರಾ ಮಾಡಲು ಅವಕಾಶ ನೀಡಿದೆ. ಇಂತಹ ಹೇಳಿಕೆ ನೀಡಿದ ಅವರನ್ನ ಕೂಡಲೇ ಸರ್ಕಾರ ಬಂಧಿಸಬೇಕು. ಕುವೆಂಪು ಹೆಸರೇಳಿದ್ದು ಎಷ್ಟು ಸರಿ. ಕುವೆಂಪು ರಾಮಾಯಣ ದರ್ಶನಂ ಬರೆದಿದ್ದಾರೆ. ರಾಮನಗರದಲ್ಲಿ ರಾಮಮಂದಿರ ನಿರ್ಮಾಣ ಈ ಸರ್ಕಾರ ಕೈ ಬಿಟ್ಟಿದೆ, ಭಗವಾನ್ ಅಂತವರಿಗೆ ಮಹಿಷಾಸುರನ ಪೂಜಿಸಲು ಅವಕಾಶ ಕೊಟ್ಟಿದೆ. ಇಂತ ಗೊಂದಲ ಇರೋ ಸರ್ಕಾರ ಮೈಸೂರು ದಸರ ಯಾಕೆ ಮಾಡ್ತಾರೆ.? ಎಂದು ಪ್ರಶ್ನಿಸಿದ್ದಾರೆ.
ಮಹಿಷ ದಸರ ಮಾಡುವ ಮನಸ್ಥಿತಿ ಪರವಾಗಿರೋ ಸರ್ಕಾರ ಇದೆ. ಚಾಮುಂಡಿ ಪೂಜಿಸುತ್ತಾರಾ ಅಥವಾ ಮಹಿಷ ದಸರಾ ಆರಾಧನೆ ಮಾಡ್ತಾರಾ ಸ್ಪಷ್ಟವಾಗಿ ಹೇಳಬೇಕು.? ಒಕ್ಕಲಿಗರಂತ ಸಂಸ್ಕೃತಿ ಇರೋರು ಯಾರೂ ಇಲ್ಲ. ಪ್ರಕೃತಿಯನ್ನ ದಿನನಿತ್ಯ ಪೂಜಿಸುವವರು, ಆರಾಧಿಸುವವರು, ದಿನನಿತ್ಯ ಪೂಜೆ ಪುರಸ್ಕಾರ ಮಾಡ್ತಾರೆ.
ಭಗವಾನ್ ಅಂತವರ ಹೀನ ಮನಸ್ಸಿನವರಿಗೆ ಒಕ್ಕಲಿಗರ ಸಂಸ್ಕೃತಿ ತಿಳಿಸೋ ಅವಶ್ಯಕತೆ ಇಲ್ಲ. ನಿನಗೆ ತಾಕತ್ ಇದ್ರೆ ಮಾತಾಡು. ಭಗವಂತ ಕೊಟ್ಟ ನರ ಇದ್ರೆ ಮಾತಾಡು.? ನೀನು ಮುಂದೆ ಅನುಭವಿಸ್ತೀಯಾ ಎಂದು ಮಾಜಿ ಸಚಿವ ಅಶ್ವಥ್ ನಾರಾಯಣ್ ಎಚ್ಚರಿಕೆ ನೀಡಿದರು.












Click it and Unblock the Notifications