ಕುಮಾರಣ್ಣ, ನಿಮಗೆ ರಾಹುಲ್ ಗಾಂಧಿ ಹೆದರುತ್ತಿದ್ದಾರೆ: ಬಿಜೆಪಿ ವ್ಯಂಗ್ಯ
ಬೆಂಗಳೂರು, ಜೂನ್ 11: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಅವಹೇಳನಾಕಾರಿ ಟ್ವೀಟ್ ಮಾಡಿದ ಆರೋಪದಲ್ಲಿ ಪತ್ರಕರ್ತರನ್ನು ಬಂಧಿಸಿರುವ ಪ್ರಕರಣ ತೀವ್ರ ವಿವಾದ ಕೆರಳಿಸಿದೆ. ಈ ಬಗ್ಗೆ ದೇಶದಾದ್ಯಂತ ಪರ-ವಿರೋಧದ ಚರ್ಚೆಗಳು ನಡೆದಿವೆ.
ಈ ಪ್ರಕರಣದ ಕುರಿತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಾಡಿರುವ ಟ್ವೀಟ್, ರಾಜ್ಯ ಬಿಜೆಪಿಗೆ ವ್ಯಂಗ್ಯದ ಅಸ್ತ್ರವಾಗಿ ದೊರೆತಿದೆ. ಈ ಅಸ್ತ್ರವನ್ನು ಬಿಜೆಪಿ ರಾಹುಲ್ ಗಾಂಧಿ ಹೆಸರಿನಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರತ್ತ ತೂರಿದೆ.
ಪತ್ರಕರ್ತರನ್ನು ಬಂಧಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕ್ರಮವನ್ನು ರಾಹುಲ್ ಗಾಂಧಿ ಖಂಡಿಸಿದ್ದರು. ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದರು. ಅಲ್ಲದೆ, ಹೀಗೆ ತಮ್ಮ ವಿಚಾರದಲ್ಲಿ ಸುಳ್ಳು ಸುದ್ದಿ, ಪ್ರಾಯೋಜಿತ ಪ್ರಚಾರಗಳನ್ನು ನಡೆಸುವ ಪತ್ರಕರ್ತರನ್ನು ಬಂಧಿಸುತ್ತಿದ್ದರೆ ಹೆಚ್ಚಿನ ಪತ್ರಿಕೆಗಳು, ಸುದ್ದಿವಾಹಿನಿಗಳಲ್ಲಿ ಸಿಬ್ಬಂದಿಯ ಕೊರತೆಯೇ ಉಂಟಾಗುವಷ್ಟು ಮಂದಿ ಜೈಲಿನಲ್ಲಿ ಇರುತ್ತಿದ್ದರು ಎಂದು ರಾಹುಲ್ ಗಾಂಧಿ ಹೇಳಿದ್ದರು.
ರಾಹುಲ್ ಗಾಂಧಿ ಹೇಳಿಕೆಯನ್ನು ಮುಂದಿಟ್ಟುಕೊಂಡು ರಾಜ್ಯ ಬಿಜೆಪಿ ಐಟಿ ಘಟಕ ಎಚ್ ಡಿ ಕುಮಾರಸ್ವಾಮಿ ಅವರನ್ನು ಲೇವಡಿ ಮಾಡಿದೆ. ಇದು ಕುಮಾರಸ್ವಾಮಿ ಅವರಿಗೇ ಹೇಳಿದ ಮಾತು ಎಂದು ಅಣಕಿಸಿದೆ.

ಪತ್ರಿಕಾ ಕಚೇರಿಯೇ ಖಾಲಿ
'ನನ್ನ ವಿರುದ್ಧ ಸುಳ್ಳು ಸುದ್ದಿ ಅಥವಾ ಹುಸಿ ಸಂಗತಿ ಬಿತ್ತುವವರು, ನನ್ನ ಕುರಿತು ಆರೆಸ್ಸೆಸ್/ಬಿಜೆಪಿ ಪ್ರಾಯೋಜಿತ ಪ್ರಚಾರ ಮಾಡುವ ಪ್ರತಿಯೊಬ್ಬ ಪತ್ರಕರ್ತರನ್ನೂ ಜೈಲಿಗೆ ಹಾಕಿದರೆ, ಹೆಚ್ಚಿನ ಸುದ್ದಿವಾಹಿನಿಗಳು/ಪತ್ರಿಕೆಗಳು ತೀವ್ರ ಸಿಬ್ಬಂದಿ ಕೊರತೆ ಎದುರಿಸುವಂತಾಗುತ್ತದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಮೂರ್ಖತನದಿಂದ ವರ್ತಿಸುತ್ತಿದ್ದಾರೆ. ಬಂಧಿತ ಪತ್ರಕರ್ತರನ್ನು ಬಿಡುಗಡೆ ಮಾಡಬೇಕಿದೆ' ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು.

ನಿಮ್ಮ ಹೆಸರು ಹೇಳಲು ಭಯ
ಎಚ್ ಡಿ ಕುಮಾರಸ್ವಾಮಿ ಅಣ್ಣ, ನಿಮ್ಮ ಸ್ನೇಹಿತ ರಾಹುಲ್ ಗಾಂಧಿ ಅವರು ನಿಮ್ಮ ವಿರುದ್ಧ ಮೀಮ್‌ಗಳು ಮತ್ತು ಬ್ಲಾಗ್‌ಗಳನ್ನು ಬರೆಯುವ ಜನರನ್ನು ಬಂಧಿಸುವ ಮೂಲಕ ನೀವು ಮೂರ್ಖತನದಿಂದ ವರ್ತಿಸುತ್ತಿದ್ದೀರಿ ಎಂದು ಯೋಚಿಸುತ್ತಿದ್ದಾರೆ. ಆದರೆ, ಅವರಿಗೆ ನಿಮ್ಮ ಹೆಸರು ಹೇಳಲು ಭಯ. ನೀವೆಲ್ಲಿ ಪ್ಲಗ್‌ಅನ್ನು ಕಿತ್ತು ಹಾಕಿ ಕರ್ನಾಟಕದಲ್ಲಿ ತಮ್ಮ ಪಕ್ಷದ 'ಪವರ್' ಎಲ್ಲಿ ಕಳೆದುಹೋಗುತ್ತದೆಯೋ ಎಂಬ ಭಯ! ಅವರ ಮಾತನ್ನು ಕೇಳಿ ಎಂದು ಬಿಜೆಪಿ ವ್ಯಂಗ್ಯಭರಿತ ಟ್ವೀಟ್ ಮಾಡಿದೆ.

ಎಚ್‌ಡಿಕೆ ಬಹಿರಂಗವಾಗಿಯೇ ಬೆದರಿಸುತ್ತಾರೆ
ನಿಮ್ಮ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಬಹಿರಂಗವಾಗಿಯೇ ಪತ್ರಕರ್ತರನ್ನು ಬೆದರಿಸುತ್ತಾರೆ ಮತ್ತು ನಿಂದಿಸುತ್ತಾರೆ. ಪತ್ರಕರ್ತ ಸಂತೋಷ್ ತಿಮ್ಮಯ್ಯ ಅವರನ್ನು ಟಿಪ್ಪುವಿನ ದಾಳಿಗಳ ಕುರಿತು ಮಾತನಾಡಿದ್ದಕ್ಕೆ ಬಂಧಿಸಲಾಯಿತು. ಸಿಎಂ ಮಗನ ವರ್ತನೆ ಕುರಿತು ವರದಿ ಮಾಡಿದ್ದಕ್ಕೆ ವಿಶ್ವೇಶ್ವರ ಭಟ್ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಯಿತು. ನೀವು ಬೂಟಾಟಿಕೆಯ ಯಥಾವತ್ ಮನುಷ್ಯ ರೂಪ ಎಂದು ಮತ್ತೊಂದು ಟ್ವೀಟ್‌ನಲ್ಲಿ ಲೇವಡಿ ಮಾಡಿದೆ.

ಪತ್ರಕರ್ತನ ಬಿಡುಗಡೆಗೆ ಆದೇಶ
ಯೋಗಿ ಆದಿತ್ಯನಾಥ್ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಹಂಚಿಕೊಂಡಿರುವುದಕ್ಕೆ ಬಂಧಿಸಿರುವ ಹವ್ಯಾಸಿ ಪತ್ರಕರ್ತ ಪ್ರಶಾಂತ್ ಕನೋಜಿಯಾ ಅವರನ್ನು ಬಿಡುಗಡೆ ಮಾಡುವಂತೆ ಮಂಗಳವಾರ ಸುಪ್ರೀಂಕೋರ್ಟ್ ಆದೇಶಿಸಿದೆ. ಪ್ರಶಾಂತ್ ಅವರು ಆಕ್ಷೇಪಾರ್ಹ ಪೋಸ್ಟ್ ಹಂಚಿಕೊಂಡಿದ್ದಾರೆಯೇ ಹೊರತು ಅವರೇನೂ ಕೊಲೆ ಮಾಡಿಲ್ಲ ಎಂದು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು.












Click it and Unblock the Notifications