ಕಾಂಗ್ರೆಸ್ ಪಟ್ಟಿ; ಇತ್ತೀಚೆಗೆ ಕಾಂಗ್ರೆಸ್ ಸೇರಿದವರಿಗೆ ಟಿಕೆಟ್ ಘೋಷಣೆ
ದಾವಣಗೆರೆ, ಮಾರ್ಚ್ 25; ಕಾಂಗ್ರೆಸ್ 2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. 61 ಹಾಲಿ ಶಾಸಕರು ಸೇರಿದಂತೆ ಒಟ್ಟು 124 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಸೇರಿದಂತೆ ಹಲವು ನಾಯಕರು ಕಣಕ್ಕಿಳಿಯುವ ಕ್ಷೇತ್ರಗಳು ಅಂತಿಮಗೊಂಡಿವೆ. ವರುಣ ಕ್ಷೇತ್ರದಲ್ಲಿ ತಂದೆಗಾಗಿ ಹಾಲಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಕ್ಷೇತ್ರ ತ್ಯಾಗ ಮಾಡಿದ್ದಾರೆ.
ಶನಿವಾರ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಅಚ್ಚರಿ ಎಂದರೆ ಜೆಡಿಎಸ್, ಬಿಜೆಪಿ ತೊರೆದು ಇತ್ತೀಚಿಗೆ ಕಾಂಗ್ರೆಸ್ ಪಕ್ಷ ಸೇರಿದ ಅಭ್ಯರ್ಥಿಗಳಿಗೆ ಸಹ ಟಿಕೆಟ್ ಘೋಷಣೆ ಮಾಡಲಾಗಿದೆ. ಈ ಮೂಲಕ ಪಕ್ಷ ನಂಬಿ ಬಂದವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. 70 ಹಾಲಿ ಶಾಸಕರ ಪೈಕಿ 61 ಶಾಸಕರು ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕೆಲವು ಪ್ರಮುಖ ಕ್ಷೇತ್ರಗಳಿಗೆ ಇನ್ನೂ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ.

ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಸೇರಿದ ಸೊರಬದ ಮಾಜಿ ಶಾಸಕ ಮಧು ಬಂಗಾರಪ್ಪ, ಬಿಜೆಪಿ ತೊರೆದು ಬಂದ ಪುಟ್ಟಣ್ಣ, ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ, ಜೆಡಿಎಸ್ ತೊರೆದು ಬಂದ ಬಿ. ಎಂ. ಕಾಂತರಾಜ್, ಬಿಜೆಪಿ ಬಿಟ್ಟು ಬಂದ ಮಾಜಿ ಶಾಸಕ ಕಿರಣ್ ಕುಮಾರ್‌ಗೆ ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಟಿಕೆಟ್ ಘೋಷಣೆ ಮಾಡಲಾಗಿದೆ. ತೀರ್ಥಹಳ್ಳಿ ಕ್ಷೇತ್ರದಲ್ಲಿ ಕಿಮ್ಮನೆ ರತ್ನಾಕರ ಹಾಗೂ ಇತ್ತೀಚೆಗೆ ಪಕ್ಷ ಸೇರಿದ ಆರ್. ಎಂ. ಮಂಜುನಾಥ ಗೌಡ ಇಬ್ಬರಲ್ಲಿ ಯಾರಿಗೆ ಟಿಕೆಟ್? ಎಂಬುದು ಅಂತಿಮಗೊಂಡಿಲ್ಲ.
ಸೊರಬ ಕ್ಷೇತ್ರ; ಸೊರಬ ಕ್ಷೇತ್ರದ ಮಾಜಿ ಶಾಸಕ ಮಧು ಬಂಗಾರಪ್ಪಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ. 2013ರಲ್ಲಿ ಜೆಡಿಎಸ್‌ನಿಂದ ಕಣಕ್ಕಿಳಿದು ಗೆದ್ದಿದ್ದ ಅವರು 2018ರ ಚುನಾವಣೆಯಲ್ಲಿ ಸಹೋದರ ಬಿಜೆಪಿ ಅಭ್ಯರ್ಥಿ ಕುಮಾರ್ ಬಂಗಾರಪ್ಪ ವಿರುದ್ಧ ಸೋಲು ಕಂಡಿದ್ದರು. 2019ರ ಲೋಕಸಭೆ ಚುನಾವಣೆಯಲ್ಲಿಯೂ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋಲು ಕಂಡಿದ್ದರು.
ಬಳಿಕ ಜೆಡಿಎಸ್ ಪಕ್ಷದ ಚಟುವಟಿಕೆಗಳಿಂದ ದೂರವಾಗಿದ್ದ ಮಧು ಬಂಗಾರಪ್ಪ ಕಾಂಗ್ರೆಸ್ ಸೇರುವುದಾಗಿ ಘೋಷಣೆ ಮಾಡಿದ್ದರು. 2021ರ ಜುಲೈನಲ್ಲಿ ಅವರು ಹುಬ್ಬಳ್ಳಿಯಲ್ಲಿ ಪಕ್ಷ ಸೇರಿದ್ದರು. ಕಾಂಗ್ರೆಸ್ ಕರ್ನಾಟಕ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ (ಒಬಿಸಿ) ಕಾರ್ಯಾಧ್ಯಕ್ಷರಾಗಿ ಅವರನ್ನು ನೇಮಕ ಮಾಡಿತ್ತು.
ಪುಟ್ಟಣ್ಣಗೆ ಟಿಕೆಟ್; ಬೆಂಗಳೂರು ನಗರದ ರಾಜಾಜಿನಗರ ಕ್ಷೇತ್ರದಲ್ಲಿ ಪುಟ್ಟಣ್ಣಗೆ ಟಿಕೆಟ್ ನೀಡಲಾಗಿದೆ. ಮಾರ್ಚ್ 9ರಂದು ಅವರು ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು. ಭವ್ಯ ನರಸಿಂಹಮೂರ್ತಿ ಸಹ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಪುಟ್ಟಣ್ಣಗೆ ಪಕ್ಷ ಸೇರ್ಪಡೆಗೆ ವಿರೋಧ ವ್ಯಕ್ತವಾಗಿತ್ತು. ಆದರೆ ಈಗ ಅವರಿಗೆ ಟಿಕೆಟ್ ನೀಡುವ ಮೂಲಕ ಕಾಂಗ್ರೆಸ್ ಪಕ್ಷ ವಿರೋಧಿಗಳ ಬಾಯಿ ಮುಚ್ಚಿಸಿದೆ.
ಬೆಮಲ್ ಕಾಂತರಾಜ್; 2022ರ ಜನವರಿಯಲ್ಲಿ ತುಮಕೂರು ಜಿಲ್ಲೆಯ ಪ್ರಭಾವಿ ಜೆಡಿಎಸ್ ನಾಯಕ ಬೆಮಲ್ ಕಾಂತರಾಜ್ ಕಾಂಗ್ರೆಸ್ ಸೇರಿದ್ದರು. ವಿಧಾನ ಪರಿಷತ್‌ನ ಮಾಜಿ ಸದಸ್ಯರಾಗಿದ್ದ ಅವರು ಪರಿಷತ್ ಚುನಾವಣೆಯಲ್ಲಿ ಟಿಕೆಟ್ ತ್ಯಾಗ ಮಾಡಿದ್ದರು. ಒಕ್ಕಲಿಗ ಸಮುದಾಯಕ್ಕೆ ಸೇರಿದ ಬೆಮಲ್ ಕಾಂತರಾಜ್ 2021ರ ಸೆಪ್ಟೆಂಬರ್‌ನಲ್ಲಿಯೇ ಜೆಡಿಎಸ್ ಪಕ್ಷ ತೊರೆಯುವುದಾಗಿ ಘೋಷಣೆ ಮಾಡಿದ್ದರು. ಅವರು ತುರುವೇಕೆರೆ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಬಯಸಿದ್ದರು. ಈಗ ಪಕ್ಷ ಟಿಕೆಟ್ ಘೋಷಣೆ ಮಾಡಿದೆ.
ಕಿರಣ್ ಕುಮಾರ್‌ಗೆ ಟಿಕೆಟ್; ಮಾಜಿ ಶಾಸಕ, ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿದ್ದ ಕೆ. ಎಸ್. ಕಿರಣ್ ಕುಮಾರ್ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದರು. 2023ರ ಚುನಾವಣೆಗೆ ಅವರು ಚಿಕ್ಕನಾಯಕನಹಳ್ಳಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಸಚಿವ ಜೆ. ಸಿ. ಮಾಧುಸ್ವಾಮಿಗೆ ಟಿಕೆಟ್ ಖಚಿತವಾದ ಹಿನ್ನಲೆಯಲ್ಲಿ ಪಕ್ಷ ತೊರೆದಿದ್ದರು. ಈಗ ಕಾಂಗ್ರೆಸ್ ಅವರಿಗೆ ಕ್ಷೇತ್ರದ ಟಿಕೆಟ್ ಘೋಷಣೆ ಮಾಡಿದೆ.
ಶರತ್ ಬಚ್ಚೇಗೌಡ; ಹೊಸಕೋಟೆ ಕ್ಷೇತ್ರದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ 2021ರಲ್ಲಿ ಕಾಂಗ್ರೆಸ್ ಬೆಂಬಲಿಸಿದ್ದರು. ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯಲ್ಲಿ ಅವರು ಸಕ್ರಿಯರಾಗಿ ತೊಡಗಿದ್ದರು. ಕರ್ನಾಟಕ ಕಾಂಗ್ರೆಸ್ 2023ರ ಚುನಾವಣೆಗೆ ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ.











Click it and Unblock the Notifications