ರಾಜೀನಾಮೆಗೆ ಸಜ್ಜಾದ 60 ಕ್ಕೂ ಹೆಚ್ಚು ಜೆಡಿಎಸ್ ಪದಾಧಿಕಾರಿಗಳು- ಮುಂದಿನ ದಿನಗಳಲ್ಲಿ 30 ಸಾವಿರ ತಲುಪುವ ಸಾಧ್ಯತೆ- ಕಾರಣವೇನು?
ಬಿಜೆಪಿ ಜೊತೆಗಿನ ಮೈತ್ರಿ ಹಿನ್ನೆಲೆಯಲ್ಲಿ ಜೆಡಿಎಸ್ ಪದಾಧಿಕಾರಿಗಳು ಅಸಮಾಧಾನಗೊಂಡಿದ್ದಾರೆ. ಜೆಡಿಎಸ್ ರಾಜ್ಯ ಕಾರ್ಯದರ್ಶಿ ಅಬ್ದುಲ್ ಖಾದರ್ ಶಾಹಿದ್ ನೇತೃತ್ವದ ಅಲ್ಪಸಂಖ್ಯಾತರ ವಿಭಾಗ ಸೇರಿದಂತೆ ಮೈಸೂರು ನಗರದ 60 ಕ್ಕೂ ಹೆಚ್ಚು ಜೆಡಿಎಸ್ ಘಟಕದ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ಸಲ್ಲಿಸಲು ಸಜ್ಜಾಗಿದ್ದಾರೆ.
ಇಂದು ಸಂಜೆ ಎನ್‌ಆರ್ ಮೊಹಲ್ಲಾದ ಶಿವಾಜಿ ರಸ್ತೆಯಲ್ಲಿರುವ ಎನ್‌ಎಸ್ ಫಂಕ್ಷನ್ ಹಾಲ್‌ನಲ್ಲಿ ಸಭೆ ನಡೆಯದೆ. ಆ ಬಳಿಕ ರಾಜೀನಾಮೆ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

'ನಾವು ಈ ರಾಜೀನಾಮೆ ಪ್ರಕ್ರಿಯೆಯನ್ನು ಮೈಸೂರಿನಿಂದ ಪ್ರಾರಂಭಿಸುತ್ತಿದ್ದೇವೆ' ಎಂದು ಅಬ್ದುಲ್ ಖಾದರ್ ಶಾಹಿದ್ 'ಡೆಕ್ಕನ್ ಹೆರಾಲ್ಡ್' ಪತ್ರಿಕೆಗೆ ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಮೈಸೂರಿನ 3,000 ಜೆಡಿಎಸ್ ಕಾರ್ಯಕರ್ತರು ಸೇರಿದಂತೆ ರಾಜ್ಯದಾದ್ಯಂತ 30 ಸಾವಿರಕ್ಕೂ ಹೆಚ್ಚು ಜೆಡಿಎಸ್ ಮುಖಂಡರು ಪಕ್ಷಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
'ಜೆಡಿಎಸ್ ಜಾತ್ಯತೀತ ಪಕ್ಷವಾಗಿದೆ. ನಮಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮತ್ತು ಹೆಚ್ ಡಿ ಕುಮಾರಸ್ವಾಮಿ ಅವರ ಮೇಲೆ ಅಪಾರ ಗೌರವವಿದೆ. ಆದರೆ, ಪಕ್ಷದ ಎಲ್ಲಾ ನಾಯಕರನ್ನು ಸಂಪರ್ಕಿಸದೆ ಹೆಚ್ ಡಿ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರು ಬಿಜೆಪಿ ನಾಯಕರಾದ ಅಮಿತ್ ಶಾ ಮತ್ತು ಜೆಪಿ ನಡ್ಡಾ ಅವರನ್ನು ಭೇಟಿಯಾಗಿದ್ದಾರೆ. ಎನ್‌ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಗೊಂಡಿದ್ದಾರೆ. ಇದು ಜಾತ್ಯತೀತ ತತ್ವಗಳಿಗೆ ವಿರುದ್ಧವಾಗಿದೆ. ಇದು ಪಕ್ಷ ವಿರೋಧಿ ಚಟುವಟಿಕೆ ಎಂಬುದಾಗಿ ನಾವು ಭಾವಿಸಿದ್ದೇವೆ' ಎಂದು ಆರೋಪಿಸಿದ್ದಾರೆ.

ಎರಡು ದಿನಗಳ ಹಿಂದೆ ಅವರಿಬ್ಬರನ್ನೂ ಪಕ್ಷದಿಂದ ಕೈಬಿಡುವಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಒತ್ತಾಯಿಸಿದ್ದೆವು. ಸೆಪ್ಟೆಂಬರ್ 27ರ ವರೆಗೆ ಕಾಲಾವಕಾಶ ನೀಡಿದ್ದೆವು. ಸಿಎಂ ಇಬ್ರಾಹಿಂ ಅವರು ಮೌನವಾಗಿರುವುದರಿಂದ ರಾಜೀನಾಮೆ ನೀಡುತ್ತಿದ್ದೇವೆ ಎಂದು ಅಬ್ದುಲ್ ಖಾದರ್ ಶಾಹಿದ್ ತಿಳಿಸಿದ್ದಾರೆ.
'ಮುಸ್ಲಿಮರು ಮತ್ತು ದಲಿತರ ವಿರುದ್ಧ ಬಿಜೆಪಿ ಮುಖಂಡರು ಪ್ರತಿ ದಿನವೂ ದ್ವೇಷದ ಮಾತುಗಳನ್ನು ಆಡುತ್ತಾರೆ. ಇಂತಹ ಸಮಯದಲ್ಲಿ ನಾವು ಮುಂದುವರಿಯಲು ಸಾಧ್ಯವಿಲ್ಲ. ಜೆಡಿಎಸ್-ಬಿಜೆಪಿ ಮೈತ್ರಿ ಹಿನ್ನೆಲೆಯಲ್ಲಿ ನಾವು ರಾಜೀನಾಮೆ ನೀಡುತ್ತಿದ್ದೇವೆ' ಎಂದು ಅವರು ಹೇಳಿದ್ದಾರೆ.

ಎನ್‌ಆರ್ ವಿಧಾನಸಭೆ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಅಬ್ದುಲ್ ಖಾದರ್ ಶಾಹಿದ್ ಸ್ಪರ್ಧಿಸಿದ್ದರು.
ಜೆಡಿಎಸ್ ವಕ್ತಾರ ಗಫೂರ್ ಅಜಾರ್, ಜೆಡಿಎಸ್ ನಗರ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಮ್ರಾನ್, ಉಪಾಧ್ಯಕ್ಷ ತನ್ವೀರ್ ಅಹಮದ್, ಕಾರ್ಯದರ್ಶಿ ಮುಜಾಹಿದ್, ಜೆಡಿಎಸ್ ಎನ್‌ಆರ್ ಕ್ಷೇತ್ರದ ಕಾರ್ಯಕಾರಿ ಸಮಿತಿ ಅಧ್ಯಕ್ಷ ಅಫ್ತಾಬ್ ಅಹಮದ್, ಮುಖಂಡರಾದ ಅಫ್ರೋಜ್ ಪಾಷಾ, ಅರುಣಾ, ಖಯೂಮ್ ಪಾಷಾ, ಮುದಸ್ಸಿರ್, ಇಸಾಕ್, ಅಶ್ವಾಕ್, ಸಲೀಂ ಮತ್ತಿತರರು ಸಂಜೆ ರಾಜೀನಾಮೆ ನೀಡಲು ಸಜ್ಜಾಗಿದ್ದಾರೆ.












Click it and Unblock the Notifications