ಬಿಜೆಪಿ ಜೊತೆ ಮೈತ್ರಿ: ಜೆಡಿಎಸ್ ತೊರೆದ ಮುಸ್ಲಿಂ ನಾಯಕರು-ಸಿಎಂ ಇಬ್ರಾಹಿಂ ನಡೆ ಬಗ್ಗೆ ಹೆಚ್ಚಿದ ಕುತೂಹಲ
ಬೆಂಗಳೂರು, ಸೆಪ್ಟೆಂಬರ್ 24: ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ)ಗೆ ಸೇರ್ಪಡೆಗೊಳ್ಳುವ ನಿರ್ಧಾರವನ್ನು ವಿರೋಧಿಸಿ ಮಾಜಿ ಸಚಿವ ಎನ್‌ಎಂ ನಬಿ ಸೇರಿದಂತೆ ಜೆಡಿಎಸ್ ಪಕ್ಷದ ಹಿರಿಯ ಮುಸ್ಲಿಂ ನಾಯಕರು ರಾಜೀನಾಮೆ ನೀಡಲು ನಿರ್ಧರಿಸುವುದರೊಂದಿಗೆ ಬಂಡಾಯ ಭುಗಿಲೆದ್ದಿದೆ ಎನ್ನಲಾಗಿದೆ.
ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಶುಕ್ರವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಬಗ್ಗೆ ಸುದ್ದಿ ಹೊರಬಿದ್ದ ತಕ್ಷಣ, ಪ್ರಾದೇಶಿಕ ಪಕ್ಷದ ಮುಸ್ಲಿಂ ಮುಖಂಡರ ಗುಂಪು ಕುಮಾರ ಕೃಪಾ ಅತಿಥಿ ಗೃಹಕ್ಕೆ ಮುತ್ತಿಗೆ ಹಾಕಿ ಮೈತ್ರಿ ಮುರಿಯಲು ನಿರ್ಧರಿಸಿತು ಎಂದು ತಿಳಿದು ಬಂದಿದೆ.

ನಬಿ ಅವರೊಂದಿಗೆ ಜೆಡಿಎಸ್ ಹಿರಿಯ ಉಪಾಧ್ಯಕ್ಷ ಸೈಯದ್ ಶಫಿವುಲ್ಲಾ, ನವದೆಹಲಿಯ ಮಾಜಿ ಪ್ರತಿನಿಧಿ ಮೊಹಿದ್ ಅಲ್ತಾಫ್, ಯುವ ಘಟಕದ ಅಧ್ಯಕ್ಷ ಎನ್‌ಎಂ ನೂರ್ ಮತ್ತು ಅಲ್ಪಸಂಖ್ಯಾತ ವಿಭಾಗದ ಮಾಜಿ ಮುಖ್ಯಸ್ಥ ನಾಸಿರ್ ಹುಸೇನ್ ಉಸ್ತಾದ್ ಅವರು ಪ್ರಾದೇಶಿಕ ಪಕ್ಷವನ್ನು ತೊರೆಯುತ್ತಿದ್ದಾರೆ ಎಂಬ ಮಾತುಗಳು ಈಗ ಕೇಳಿ ಬರುತ್ತಿದೆ.
ಈ ಬೆಳವಣಿಗೆಯು ಕಾಂಗ್ರೆಸ್‌ಗೆ ಪರ್ಯಾಯವಾಗಿ ತನ್ನನ್ನು ತಾನು ಬಿಂಬಿಸುವ ಮೂಲಕ ವರ್ಷಗಳಿಂದ ಮುಸ್ಲಿಮರನ್ನು ಓಲೈಸುವ ಪಕ್ಷವಾದ ಜೆಡಿಎಸ್ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಏಕೆಂದರೆ 2018 ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಜೆಡಿಎಸ್ ಬಿಜೆಪಿಯ 'ಬಿ' ಟೀಮ್ ಎಂಬ ಕಾಂಗ್ರೆಸ್‌ನ ನಿರೂಪಣೆಯಿಂದಾಗಿ ಮುಸ್ಲಿಂ ಮತಗಳು ಜೆಡಿಎಸ್ ಬುಟ್ಟಿಯಿಂದ ಹೊರಗೆ ಚದುರಿದ್ದವು.
ಈಗ ಎಚ್‌ಡಿ ಕುಮಾರಸ್ವಾಮಿ ಅವರು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಅವರೊಂದಿಗೆ ಭೇಟಿ ಮಾಡಿರುವುದರಿಂದ ಸಾಕಷ್ಟು ಮುಸ್ಲಿಂ ನಾಯಕರು ಅಸಮಾಧಾನ ವ್ಯಕ್ತಪಡಿಸುವದರಲ್ಲಿ ಆಶ್ಚರ್ಯವೇನಿಲ್ಲ. ಈ ಭೇಟಿಯು ರಾಮನಗರದಲ್ಲಿ ಹೆಚ್ಚಾಗಿರುವ ಮುಸ್ಲಿಂ ಜೆಡಿಎಸ್ ನಾಯಕರೂ ಬೇಸರಕ್ಕೆ ಕಾರಣವಾಗುತ್ತದೆ. ಇದರಿಂದ ನಿಖಿಲ್ ರಾಜಕೀಯ ಭವಿಷ್ಯಕ್ಕೂ ಹೊಡೆತ ಬೀಳಲಿದೆ ಎಂದು ಹೇಳಲಾಗುತ್ತಿದೆ.
ಕಳೆದ ವರ್ಷ ಜೆಡಿಎಸ್ ಚುನಾವಣಾ ಲಾಭಾಂಶದ ನಿರೀಕ್ಷೆಯಲ್ಲಿ ಹಿರಿಯ ನಾಯಕ ಸಿಎಂ ಇಬ್ರಾಹಿಂ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿತು. ಆದರೆ 2023 ರ ಚುನಾವಣೆಯಲ್ಲಿ ಮುಸ್ಲಿಂ ಮತಗಳು ಕಾಂಗ್ರೆಸ್ ಪರವಾಗಿ ಮತ್ತಷ್ಟು ಹೆಚ್ಚಾದವು ಎಂದು ಕೆಲವು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಜಾತ್ಯತೀತ ತತ್ವದಲ್ಲಿ ನಂಬಿಕೆ ಇರಿಸಿದ್ದ ಕುಮಾರಸ್ವಾಮಿ ಅವರು ಹೊಸದಿಲ್ಲಿ ಪ್ರವಾಸ ಕೈಗೊಂಡಿದ್ದು, ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದು ಗೊತ್ತಾದ ಕೂಡಲೇ ರಾಜೀನಾಮೆ ನೀಡಿದ್ದೇನೆ ಎಂದು ಶಫಿವುಲ್ಲಾ ತಿಳಿಸಿದ್ದಾರೆ. ಹಲವಾರು ಜೆಡಿಎಸ್‌ನ ಮುಸ್ಲಿಂ ನಾಯಕರು ಪಕ್ಷ ತೊರೆಯಲು ಬಯಸುತ್ತಿದ್ದಾರೆ. ಎಚ್‌ಡಿಕೆ ನಡೆಯಿಂದ ಮುಸ್ಲಿಂ ಮುಖಂಡರು ಅಸಮಾಧಾನಗೊಂಡಿದ್ದಾರೆ. ಜೆಡಿಎಸ್ ಜಾತ್ಯತೀತ ಪಕ್ಷವಾಗಿದ್ದು, ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಹಲವು ಕೋಮು ಸಮಸ್ಯೆಗಳನ್ನು ಸೃಷ್ಟಿಸಿದ ಬಿಜೆಪಿಗೆ ಸೇರಲು ನಿರ್ಧರಿಸಿರುವುದರಿಂದ ನಮಗೆ ಬೇಸರವಾಗಿದೆ ಎಂದು ಅವರು ಹೇಳಿದ್ದಾರೆ.
ಎಚ್‌ಡಿಕೆ ನಡೆಯಿಂದ ಕೇವಲ ಮುಸ್ಲಿಂ ನಾಯಕರು ಮಾತ್ರವಲ್ಲ, ಕೆಲವು ಜಾತ್ಯತೀತ ಹಿಂದೂಗಳು ಕೂಡ ನಿರಾಶೆಗೊಂಡಿದ್ದಾರೆ. ಆಂತರಿಕ ಸಭೆಯಲ್ಲಿ ಜೆಡಿಎಸ್‌ನ ಮುಸ್ಲಿಂ ಮುಖಂಡರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಪಕ್ಷದ ನಿರ್ಧಾರಕ್ಕೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ಮತ್ತು ಕುಮಾರಸ್ವಾಮಿ ಅವರಿಗೆ ಈ ವಿಷಯ ತಿಳಿದಿದೆ ಎಂದು ಶಫಿವುಲ್ಲಾ ಹೇಳಿದರು.
ಸದ್ಯ ಈಗ ಜೆಡಿಎಸ್ ತೊರೆಯುತ್ತಿರುವ ಮುಸ್ಲಿಂ ಮುಖಂಡರು ಕಾಂಗ್ರೆಸ್‌ನತ್ತ ಮುಖ ಮಾಡಬಹುದು ಎಂಬ ಸುದ್ದಿ ಇದೆ. ಆದರೆ, ಸಮಾಜಮುಖಿ ಕೆಲಸ ಮಾಡಲು ಪಕ್ಷ ಬೇಕಾಗಿಲ್ಲ. ಸಮಾಜ ಸೇವೆ ಮಾಡಲು ಎಲ್ಲಿ ಅವಕಾಶ ಸಿಕ್ಕರೂ ಹೋಗುತ್ತೇವೆ ಎಂದು ಶಫಿವುಲ್ಲಾ ಹೇಳಿದ್ದಾರೆ.












Click it and Unblock the Notifications