ಜೆಡಿಎಸ್-ಬಿಜೆಪಿ ಮೈತ್ರಿ; ಮತ್ತೊಂದು ಹೊಸ ಅಧ್ಯಾಯ ಆರಂಭ?
ಬೆಂಗಳೂರು, ಮೇ 03: ಲೋಕಸಭೆ ಚುನಾವಣೆ 2024ರಲ್ಲಿ ಕರ್ನಾಟಕ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ರಾಜ್ಯದ ಆಡಳಿತ ಪಕ್ಷ ಕಾಂಗ್ರೆಸ್ ವಿರುದ್ಧ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿವೆ. ಆದರೆ ಈ ಮೈತ್ರಿ ಲೋಕಸಭೆ ಚುನಾವಣೆಗೆ ಮಾತ್ರ ಸೀಮಿತವಲ್ಲ.
ವಿಧಾನ ಪರಿಷತ್ ಉಪ ಚುನಾವಣೆಯಲ್ಲಿಯೂ ಬಿಜೆಪಿ-ಜೆಡಿಎಸ್ ಸೀಟು ಹಂಚಿಕೆ ಮಾಡಿಕೊಂಡಿದ್ದವು. ಈಗ 6 ಕ್ಷೇತ್ರಗಳಿಗೆ ನಡೆಯಲಿರುವ ಪರಿಷತ್ ಚುನಾವಣೆಯಲ್ಲಿಯೂ ಮೈತ್ರಿ ಮುಂದುವರೆಸುವ ತೀರ್ಮಾನವನ್ನು ಮಾಡಿವೆ.

ಕೇಂದ್ರ ಚುನಾವಣಾ ಆಯೋಗ ಕರ್ನಾಟಕ ವಿಧಾನ ಪರಿಷತ್‌ನ 3 ಪದವೀಧರ ಮತ್ತು 3 ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳಾಪಟ್ಟಿ ಘೋಷಣೆ ಮಾಡಿದೆ. ಜೂನ್ 3ರಂದು ಮತದಾನ ನಡೆಯಲಿದ್ದು, ಜೂನ್ 6ರಂದು ಮತ ಎಣಿಕೆ ನಡೆಯಲಿದೆ. ಈ ಚುನಾವಣೆಯಲ್ಲಿಯೂ ಬಿಜೆಪಿ-ಜೆಡಿಎಸ್ ಒಂದಾಗಿ ಇರಲಿವೆ.
ಏನಿದು ಹೊಸ ಅಧ್ಯಾಯದ ಲೆಕ್ಕಾಚಾರ?: 75 ಸದಸ್ಯ ಬಲದ ಕರ್ನಾಟಕ ವಿಧಾನ ಪರಿಷತ್‌ನಲ್ಲಿ ಸದ್ಯ ಬಿಜೆಪಿ 32, ಕಾಂಗ್ರೆಸ್ 29 ಮತ್ತು ಜೆಡಿಎಸ್‌ನ 7 ಸದಸ್ಯರು ಇದ್ದಾರೆ. ಉಳಿದ ಸ್ಥಾನಗಳು ಖಾಲಿ ಇವೆ. ಬಿಜೆಪಿ-ಜೆಡಿಎಸ್ ಸೇರಿದರೆ ಸಾಮಾನ್ಯ ಬಹುಮತ 39 ಸದಸ್ಯರು ಇದ್ದಾರೆ.
2018ರಲ್ಲಿ ನಡೆದ 6 ಕ್ಷೇತ್ರಗಳ ಚುನಾವಣೆಯಲ್ಲಿ ಕಾಂಗ್ರೆಸ್ 1, ಜೆಡಿಎಸ್ 2 ಮತ್ತು ಬಿಜೆಪಿ 3 ಸೀಟುಗಳನ್ನು ಗೆದ್ದಿತ್ತು. ಜೂನ್ 21ರಂದು ಈ ಸ್ಥಾನಗಳು ತೆರವಾಗಲಿದ್ದು, ಅದಕ್ಕೆ ಈಗ ಚುನಾವಣೆ ಘೋಷಣೆಯಾಗಿದೆ.
ಸದ್ಯದ ಮೈತ್ರಿಕೂಟದ ಮಾಹಿತಿಯಂತೆ ಜೆಡಿಎಸ್ 2 ಸೀಟುಗಳಲ್ಲಿ ಕಣಕ್ಕಿಳಿಯಲಿದೆ. "ಮೌಖಿಕವಾಗಿ ಮೈತ್ರಿ, ಸೀಟು ಹಂಚಿಕೆ ಮಾತುಕತೆ ನಡೆದಿದೆ. ಹಾಲಿ ಸದಸ್ಯರು ಇರುವ ಎರಡು ಕ್ಷೇತ್ರದಲ್ಲಿ ಪಕ್ಷ ಕಣಕ್ಕಿಳಿಯಲಿದೆ. ಉಳಿದ ಸೀಟುಗಳಲ್ಲಿ ಬಿಜೆಪಿ ಬೆಂಬಲಿಸಲಿದೆ" ಎಂದು ಜೆಡಿಎಸ್ ನಾಯಕರೊಬ್ಬರು ಹೇಳಿದ್ದಾರೆ.
ಬಿಜೆಪಿ-ಜೆಡಿಎಸ್ ಮೈತ್ರಿ ವಿಧಾನ ಪರಿಷತ್ ಚುನಾವಣೆಯಲ್ಲಿಯೂ ಮುಂದುವರೆಯಲಿದೆ. ಆದರೆ ಸೀಟುಗಳ ಹಂಚಿಕೆ ಕುರಿತು ಇನ್ನೂ ತೀರ್ಮಾನ ಕೈಗೊಂಡಿಲ್ಲ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ. ವಿಧಾನ ಪರಿಷತ್ ಚುನಾವಣೆ ಅಧಿಸೂಚನೆ ಮೇ 9ರಂದು ಪ್ರಕಟವಾಗಲಿದ್ದು, ನಾಮಪತ್ರ ಸಲ್ಲಿಕೆ ಮಾಡಲು ಮೇ 16 ಕೊನೆಯ ದಿನವಾಗಿದೆ.
ಈ ಚುನಾವಣೆಗೆ ರಾಜ್ಯದ ಆಡಳಿತ ಪಕ್ಷ ಕಾಂಗ್ರೆಸ್ ಈಗಾಗಲೇ ತಯಾರಾಗಿದೆ. ಈಶಾನ್ಯ ಪದವೀಧರ, ನೈಋತ್ಯ ಪದವೀಧರ, ಬೆಂಗಳೂರು ಪದವೀಧರ ಮತ್ತು ಆಗ್ನೇಯ ಶಿಕ್ಷಕ, ನೈಋತ್ಯ ಶಿಕ್ಷಕ ಹಾಗೂ ದಕ್ಷಿಣ ಶಿಕ್ಷಕ ಸೇರಿ 6 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ.
ಈಗಾಗಲೇ ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ತಮ್ಮ ಅದೃಷ್ಟ ಪರೀಕ್ಷೆ ಮಾಡಿವೆ. ಈ ವರ್ಷದ ಫೆಬ್ರವರಿಯಲ್ಲಿ ನಡೆದ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಯಲ್ಲಿ ಮೈತ್ರಿಕೂಟಕ್ಕೆ ಸೋಲಾಗಿತ್ತು. ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಗೆಲುವು ಸಾಧಿಸಿದ್ದರು.
ಈಗ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಮಾಡಿಕೊಂಡು ಸೀಟು ಹಂಚಿಕೆ ಮಾಡಿಕೊಂಡಿವೆ. ಮಂಡ್ಯ, ಕೋಲಾರ ಮತ್ತು ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಏಪ್ರಿಲ್ 26ರಂದು ಚುನಾವಣೆ ನಡೆದು, ಮತಯಂತ್ರದಲ್ಲಿ ಅಭ್ಯರ್ಥಿ ಭವಿಷ್ಯ ಭದ್ರವಾಗಿದೆ.
ತೆರವಾಗುವ ಸ್ಥಾನಗಳು: ಈಶಾನ್ಯ ಪದವೀಧರ ಕ್ಷೇತ್ರದ ಡಾ. ಚಂದ್ರಶೇಖರ ಪಾಟೀಲ, ನೈಋತ್ಯ ಪದವೀಧರ ಕ್ಷೇತ್ರದ ಆಯನೂರು ಮಂಜುನಾಥ, ಬೆಂಗಳೂರು ಪದವೀಧರ ಕ್ಷೇತ್ರದ ಎ. ದೇವೇಗೌಡ ಜೂನ್ 21ರಂದು ನಿವೃತ್ತರಾಗಲಿದ್ದಾರೆ.
ಅಲ್ಲದೇ ಆಗ್ನೇಯ ಶಿಕ್ಷಕರ ಕ್ಷೇತ್ರದ ಡಾ. ವೈ. ಎ. ನಾರಾಯಣ ಸ್ವಾಮಿ, ನೈಋತ್ಯ ಶಿಕ್ಷಕರ ಕ್ಷೇತ್ರದ ಎಸ್. ಎಲ್. ಭೋಜೇಗೌಡ ಮತ್ತು ದಕ್ಷಿಣ ಶಿಕ್ಷಕರ ಕ್ಷೇತ್ರದ ಮರಿತಿಬ್ಬೇ ಗೌಡ ಸಹ ನಿವೃತ್ತರಾಗಲಿದ್ದು, ಈ 6 ಸ್ಥಾನಗಳಿಗೆ ಚುನಾವಣೆ ನಡೆಸಲು ದಿನಾಂಕ ಘೋಷಣೆ ಮಾಡಲಾಗಿದೆ.
ಬಿಜೆಪಿ-ಜೆಡಿಎಸ್ ಮೈತ್ರಿ ಲೋಕಸಭೆ ಚುನಾವಣೆಗೆ ಮಾತ್ರ ಸೀಮಿತವಲ್ಲ. ಕಾಂಗ್ರೆಸ್ ವಿರುದ್ಧ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದ್ದರು. ಈಗ ವಿಧಾನ ಪರಿಷತ್ ಚುನಾವಣೆಯಲ್ಲಿಯೂ ಮೈತ್ರಿ ಮುಂದುವರೆಯಲಿದೆ.












Click it and Unblock the Notifications