ನಾಳೆ ದೆಹಲಿಯಲ್ಲಿ ಬಿಜೆಪಿಯ ಹೈವೋಲ್ಟೇಜ್ ಸಭೆ; ಸಿ ಟಿ ರವಿ ಗೆ ಹೈಕಮಾಂಡ್ ಬುಲಾವ್!
ಬೆಂಗಳೂರು, ಆಗಸ್ಟ್ 01: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತು ಮುಖಭಂಗಕ್ಕೀಡಾಗಿರುವ ಬಿಜೆಪಿ ಕೊನೆಗೂ ಪಕ್ಷದಲ್ಲಿ ಮೇಜರ್ ಸರ್ಜರಿಗೆ ಮುಂದಾಗಿದ್ದು, ನಾಳೆ ದೆಹಲಿಯಲ್ಲಿ ನಡೆಯುವ ಹೈವೋಲ್ಟೇಜ್ ಸಭೆಯಲ್ಲಿ ಎಲ್ಲಾ ಗೊಂದಲಕ್ಕೂ ತೆರೆ ಬೀಳಲಿದೆ ಎನ್ನಲಾಗಿದೆ.
ಹೌದು, ಲೋಕಸಭಾ ಚುನಾವಣೆ ಸೇರಿದಂತೆ ಸಾಲು ಸಾಲು ಚುನಾವಣೆ ಹಾಗೂ ಕಾಂಗ್ರೆಸ್ ಸರ್ಕಾರವನ್ನ ಎದುರಿಸುವ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ಅಳೆದು ತೂಗಿ ವಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷ ಸ್ಥಾನದ ಆಯ್ಕೆಗೆ ಮುಂದಾಗಿದ್ದು, ರಾಷ್ಟ್ರೀಯ ಹುದ್ದೆಯಿಂದ ಸಿ ಟಿ ರವಿ ಅವರನ್ನ ಕೆಳಗಿಳಿಸಿದ್ದು, ಇದೀಗ ದೆಹಲಿಗೆ ಬರುವಂತೆ ಬಿಜೆಪಿ ಹೈಕಮಾಂಡ್ ಬುಲಾವ್ ನೀಡಿದೆ.

ಕರ್ನಾಟಕ ರಾಜ್ಯ ರಾಜಕಾರಣ ಹಾಗೂ ಲೋಕಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಜಾತಿಸೂತ್ರ ಹೆಣೆಯಿತಾ ಎಂಬ ಪ್ರಶ್ನೆ ಇದೀಗ ಮೂಡಿದೆ. ಲಿಂಗಾಯತರಿಗೆ ವಿಪಕ್ಷ ನಾಯಕ ಪಟ್ಟ, ಒಕ್ಕಲಿಗರಿಗೆ ರಾಜಾಧ್ಯಕ್ಷ ಪಟ್ಟ ನೀಡುವ ಸಾಧ್ಯತೆ ಇದೆ. ಇನ್ನೂ ಜಾತಿ ಲೆಕ್ಕಾಚಾರದ ಮೇಲೆ ಒಕ್ಕಲಿಗರಿಗೆ ರಾಜ್ಯಾಧ್ಯಕ್ಷ ಸ್ಥಾನವ್ನ ನೀಡಿದರೇ, ಲಿಂಗಾಯತರಿಗೆ ವಿಪಕ್ಷ ಸ್ಥಾನವನ್ನ ನೀಡುವ ಕುರಿತು ಕಮಲಪಾಳಯದಲ್ಲಿ ಚರ್ಚೆ ನಡೆದಿದೆ ಎನ್ನಲಾಗಿದೆ.
ಕಾಂಗ್ರೆಸ್ ಸರ್ಕಾರ ಬಜೆಟ್ ಅಧಿವೇಶನವೂ ವಿಪಕ್ಷನಾಯಕರಿಲ್ಲದೇಯೇ ಮುಗಿದು ಹೋಗಿದೆ. ಇತ್ತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಸಿ.ಟಿ.ರವಿ ಅವರನ್ನ ಬಿಡುಗಡೆ ಮಾಡಿರುವುದು ಸಾಕಷ್ಟು ಚರ್ಚೆ ಹುಟ್ಟುಹಾಕಿದ್ದು, ಇದರ ಮಧ್ಯೆ ಬಿಜೆಪಿಯಲ್ಲಿ ದೊಡ್ಡ ಬೆಳವಣಿಗೆ ನಡೆದಿದೆ. ಇನ್ನೂ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಬಣದ ಆಪ್ತ ನಾಯಕ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ವಿಪಕ್ಷ ನಾಯಕ ಸ್ಥಾನ ಒಲಿಯಬಹುದು ಎಂದು ಹೇಳಲಾಗಿದ್ದು, ಬಿ ಎಸ್ ಸಂತೋಷ್ ಬಣದ . ಸಿ.ಟಿ ರವಿ ರಾಜ್ಯಾಧ್ಯಕ್ಷ ಸ್ಥಾನ ಒಲಿಯಲಿದೆ ಎಂದು ಹೇಳಲಾಗಿದೆ.
ಇನ್ನೂ ಹೈಕಮಾಂಡ್ ಬುಲಾವ್ ಮೇರೆಗೆ ಇಂದು ಸಂಜೆ ದೆಹಲಿಗೆ ತೆರಳಿದ್ದು, ಮಂಗಳವಾರ ರಾತ್ರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಜೊತೆ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಈಗಾಗಲೇ ಸಿ ಟಿ ರವಿ ಅವರಿಗೆ ರಾಜ್ಯಾಧ್ಯಕ್ಷ ಹುದ್ದೆ ಕುರಿತು ಹೈಕಮಾಂಡ್ ನಾಯಕರ ಮಟ್ಟದಲ್ಲಿ ಚರ್ಚೆಗಳು ನಡೆದಿದೆ ಎಂದು ಹೇಳಲಾಗಿದೆ.
ಇತ್ತೀಚೆಗಷ್ಟೇ ಸಿ.ಟಿ.ರವಿ. ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದರು. ಅಲ್ಲದೇ ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡ ಅವರು ಸಹ ಸಿಟಿ ರವಿ ಅವರಿಗೆ ಅಧ್ಯಕ್ಷ ಸ್ಥಾನ ಎಂದು ಬಹಿರಂಗವಾಗಿಯೇ ಹೇಳಿದ್ದರು. ಇದೆಲ್ಲರ ಮಧ್ಯೆ ಇದೀಗ ಹೈಕಮಾಂಡ್ನಿಮದ ಬುಲಾವ್ ಬಂದಿದ್ದು, ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ. ಅಲ್ಲದೇ ಬಹುತೇಕ ಸಿ ಟಿ ರವಿಯವರು ನೂತನ ಬಿಜೆಪಿ ಸಾರಥಿಯಾಗಲಿದ್ದು, ಈ ವಾರದೊಳಗೆ ಹೈಕಮಾಂಡ್ ಅಧಿಕೃತವಾಗಿ ಪ್ರಕಟಗೊಳಿಸುವ ಸಾಧ್ಯತೆ ಇದೆ.












Click it and Unblock the Notifications