ಬಸವರಾಜ ಬೊಮ್ಮಾಯಿಗೆ ಹೈಕಮಾಂಡ್ ಬುಲಾವ್; ಫೈನಲ್ ಆಗುತ್ತಾ ವಿಪಕ್ಷ ನಾಯಕ ಸ್ಥಾನ?
ಬೆಂಗಳೂರು, ಆಗಸ್ಟ್ 07: ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಬಂದು ಬರೋಬ್ಬರಿ ಮೂರು ತಿಂಗಳಾದರೂ ವಿಪಕ್ಷ ನಾಯಕ ಆಯ್ಕೆ ಕಗ್ಗಂಟಾಗಿದ್ದು, ಕೊನೆಗೂ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಮುಹೂರ್ತ ಕೂಡಿ ಬಂದಂತಿದೆ.
ಹೌದು, ರಾಜ್ಯದಲ್ಲಿ ಕಾಂಗ್ರೆಸ್ 135 ಸ್ಥಾನಗಳನ್ನ ಗೆಲ್ಲುವ ಮೂಲಕ ಸರ್ಕಾರ ರಚಿಸಿ, ಆಡಳಿತ ಪಕ್ಷದ ಸ್ಥಾನದಲ್ಲಿದೆ. ರಾಜ್ಯದಲ್ಲಿ ಅಧಿಕೃತವಾಗಿ ಬಿಜೆಪಿ ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿದೆ. ಆದರೆ, ಇಲ್ಲೀವರೆಗೂ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಯಾರೊಬ್ಬರನ್ನೂ ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ಈ ಕುರಿತು ಬಿಜೆಪಿ ನಾಯಕರ ವಿರುದ್ದ ಆಡಳಿತ ಪಕ್ಷದ ನಾಯಕರು ಸಾಕಷ್ಟು ಮುಜುಗರವನ್ನ ಅನುಭವಿಸಿದೆ.

ಇನ್ನೂ ರಾಜ್ಯ ಬಿಜೆಪಿಯಲ್ಲಿ ವಿಪಕ್ಷ ನಾಯಕನ ಆಯ್ಕೆ ಕುರಿತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹೈಕಮಾಂಡ್ ಬುಲಾವ್ ನೀಡಿದ ಹಿನ್ನೆಲೆ ದೆಹಲಿಗೆ ತೆರಳಿದ್ದಾರೆ. ವಿಪಕ್ಷ ನಾಯಕನ ಆಯ್ಕೆ ಕುರಿತು ದೆಹಲಿಯಲ್ಲಿ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಜೆ ಪಿ ನಡ್ಡಾ ಅವರನ್ನ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದು, ಸಾಕಷ್ಟು ಮಹತ್ವ ಪಡೆದುಕೊಂಡಿದೆ.
ಇನ್ನೂ ವಿಪಕ್ಷ ನಾಯಕ ಆಯ್ಕೆ ಕುರಿತು ಬಿಜೆಪಿ ಪಾಳಯದಲ್ಲಿ ಹಲವು ನಾಯಕರು ರೇಸ್ ನಲ್ಲಿದ್ದು, ಬಹಿರಂಗವಾಗಿ ವಿಪಕ್ಷ ಸ್ಥಾನದ ಆಯ್ಕೆ ಕುರಿತು ಹೇಳಿಕೆಯನ್ನ ನೀಡಿದ್ದು, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ , ಆರ್. ಅಶೋಕ್, ಅಶ್ವತ್ಥ ನಾರಾಯಣ, ಸುನೀಲ್ ಕುಮಾರ್ ಹೆಸರು ಕೂಡ ಕೇಳಿ ಬಂದಿದ್ದು, ಇದೀಗ ಬಸವರಾಜ ಬೊಮ್ಮಾಯಿ ಅವರಿಗೆ ಬುಲಾವ್ ನೀಡಿದ್ದು, ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಈ ಹಿಂದೆ ಬಸವರಾಜ ಬೊಮ್ಮಾಯಿ ಹೆಸರು ಮುಂಚೂಣಿಯಲ್ಲಿ ಇದ್ದರೂ ಹೊಂದಾಣಿಕೆ ರಾಜಕಾರಣದ ಆರೋಪ ಅವರ ಮೇಲಿದೆ. ಈ ನಿಟ್ಟಿನಲ್ಲಿ ವಿಪಕ್ಷವಾಗಿ ಸಮರ್ಥ ನಾಯಕತ್ವ ನೀಡುವ ನಿಟ್ಟಿನಲ್ಲಿ ಯಾರನ್ನು ಆಯ್ಕೆ ಮಾಡಬೇಕು ಎನ್ನುವ ಚರ್ಚೆ ಹೆಚ್ಚಾಗಿತ್ತು. ಅದು ಅಲ್ಲದೇ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ವಿಪಕ್ಷ ಸ್ಥಾನದ ಮೇಲೆ ಕಣ್ಣೀಟ್ಟಿದ್ದಾರೆ.
ಈ ಬಾರಿ ಬಜೆಟ್ ಮಂಡನೆಯಲ್ಲಿಯೂ ಸಹ ವಿರೋಧ ಪಕ್ಷದ ನಾಯಕರಿಲ್ಲದೆ ಅಧಿವೇಶನ ಮುಗಿದಿದ್ದು, ಸದನದ ಒಳಗೆ ಮತ್ತು ಹೊರಗೆ ಆಡಳಿತ ಪಕ್ಷದ ವಿರುದ್ಧ ಸಂಘಟಿತ ಹೋರಾಟ ರೂಪಿಸುವ ನಿಟ್ಟಿನಲ್ಲಿ ವಿಪಕ್ಷ ನಾಯಕ ಸ್ಥಾನ ಆಯ್ಕೆ ಮಾಡಬೇಕಿದೆ. ಇನ್ನೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಯ್ಕೆ ಹೈಕಮಾಂಡ್ ನಾಯಕರಿಗೆ ಅನಿವಾರ್ಯವಾಗಿದೆ.
ಬಿಜೆಪಿ ಹೈಕಮಾಂಡ್ ನಾಯಕರ ಬುಲಾವ್ ಮೇರೆಗೆ ದೆಹಲಿಗೆ ತೆರಳಿರುವ ಬಸವರಾಜ ಬೊಮ್ಮಾಯಿ ಅವರು, ದೆಹಲಿಯಲ್ಲಿ ಅಮಿತ್ ಶಾ ಜೊತೆಗೆ ಮಾತುಕತೆ ನಡೆಸಲಿದ್ದಾರೆ. ಈ ಭೇಟಿಯ ಬಳಿಕ ವಿಪಕ್ಷ ನಾಯಕ ಸ್ಥಾನದ ಆಯ್ಕೆಯ ಕುರಿತಾಗಿ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆ ಎಂದು ಹೇಳಲಾಗಿದೆ.












Click it and Unblock the Notifications