ಒಂದು ಫೋನ್ ಕರೆ: ದಾವಣಗೆರೆಗೆ ಹೊರಟಿದ್ದ ಬಿವೈ ವಿಜಯೇಂದ್ರ ದೆಹಲಿಗೆ, ಬಿಜೆಪಿಯಲ್ಲಿ ಕುತೂಹಲ
ಬೆಂಗಳೂರು, ಫೆಬ್ರವರಿ 09: ಕರ್ನಾಟಕ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ. ಬಲ ಪ್ರದರ್ಶನ, ಉಚ್ಛಾಟನೆಗೆ ಒತ್ತಾಯ, ಅಧ್ಯಕ್ಷರ ಬದಲಾವಣೆ ಹೀಗೆ ವಿವಿಧ ವಿಚಾರಕ್ಕಾಗಿ ಆಡಳಿತ ಪಕ್ಷಕ್ಕಿಂತ ರಾಜ್ಯದಲ್ಲಿ ಪ್ರತಿಪಕ್ಷವೇ ಸುದ್ದಿಯಲ್ಲಿದೆ. ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಬದಲಾವಣೆ ಆಗುತ್ತದೆಯೇ? ಎಂಬುದು ಸದ್ಯದ ಕುತೂಹಲವಾಗಿದೆ. ದೆಹಲಿ ಚುನಾವಣೆ ಮುಗಿಯುತ್ತಿದ್ದಂತೆಯೇ ಬಿಜೆಪಿ ಹೈಕಮಾಂಡ್ ಬಿ. ವೈ. ವಿಜಯೇಂದ್ರಗೆ ದೆಹಲಿಗೆ ಬರುವಂತೆ ಬುಲಾವ್ ನೀಡಿದೆ.
ಭಾನುವಾರ ಬಿ. ವೈ. ವಿಜಯೇಂದ್ರ ದಿಢೀರ್ ಆಗಿ ದೆಹಲಿ ವಿಮಾನವೇರಿದ್ದಾರೆ. ಇದಕ್ಕೆ ಕಾರಣ ಒಂದೇ ಒಂದು ಫೋನ್ ಕರೆ. ದಾವಣಗೆರೆಗೆ ಹೋಗುತ್ತಿದ್ದ ಬಿ. ವೈ. ವಿಜಯೇಂದ್ರಗೆ ನೆಲಮಂಗಲದಿಂದ ಬೆಂಗಳೂರಿಗೆ ವಾಪಸ್ ಆಗಿ, ದೆಹಲಿಗೆ ತೆರಳಿದರು.

ಪೂರ್ವ ನಿಗದಿತ ಕಾರ್ಯಕ್ರಮದಂತೆ ಬಿ. ವೈ. ವಿಜಯೇಂದ್ರ ಭಾನುವಾರ ಹರಿಹರ ತಾಲೂಕಿನ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಆವರಣದಲ್ಲಿ ನಡೆಯುತ್ತಿರುವ 7ನೇ ವರ್ಷದ ವಾಲ್ಮೀಕಿ ಜಾತ್ರೆಯಲ್ಲಿ ಪಾಲ್ಗೊಳ್ಳಬೇಕಿತ್ತು. ಅದಕ್ಕಾಗಿ ಅವರು ದಾವಣಗೆರೆಗೆ ಹೊರಟಿದ್ದರು.
ಒಂದು ಫೋನ್ ಕರೆ: ಬಿ. ವೈ. ವಿಜಯೇಂದ್ರ ನೆಲಮಂಗಲ ಸಮೀಪದಲ್ಲಿರುವಾಗ ದೆಹಲಿಯಿಂದ ಹೈಕಮಾಂಡ್ ನಾಯಕರ ಕರೆ ಬಂದಿದೆ. ತಕ್ಷಣ ದೆಹಲಿಗೆ ಬರುವಂತೆ ಸೂಚನೆ ನೀಡಲಾಗಿದ್ದು, ಬಿ. ವೈ. ವಿಜಯೇಂದ್ರ ಬೆಂಗಳೂರಿಗೆ ವಾಪಸ್ ಆಗಿ, ದೆಹಲಿಗೆ ಪ್ರಯಾಣಿಸಿದ್ದಾರೆ. ಈ ದಿಢೀರ್ ದೆಹಲಿ ಭೇಟಿ ಕುತೂಹಲಕ್ಕೆ ಕಾರಣವಾಗಿದೆ.
ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಅರವಿಂದ ಲಿಂಬಾವಳಿ ಮುಂತಾದ ನಾಯಕರು ಕಳೆದ ವಾರ ದೆಹಲಿ ಭೇಟಿ ಕೈಗೊಂಡಿದ್ದರು. ಹೈಕಮಾಂಡ್ ನಾಯಕನ್ನು ಭೇಟಿ ಮಾಡಿ ಬಿ. ವೈ. ವಿಜಯೇಂದ್ರ ವಿರುದ್ಧ ದೂರು ನೀಡಿದ್ದರು.
ದೆಹಲಿ ಭೇಟಿ ಬಳಿಕ ಮಾತನಾಡಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಫೆಬ್ರವರಿ 10ರಂದು ಒಳ್ಳೆಯ ಸುದ್ದಿ ತಿಳಿಯಲಿದೆ ಎಂದು ಹೇಳಿದ್ದರು. ಆದ್ದರಿಂದ ಬಿ. ವೈ. ವಿಜಯೇಂದ್ರ ದೆಹಲಿ ಭೇಟಿ ಬಗ್ಗೆ ಭಾರೀ ಚರ್ಚೆಗಳು ಆರಂಭವಾಗಿದೆ.
ಮತ್ತೊಂದು ಕಡೆ ಮಾಜಿ ಸಚಿವ ಬಿ. ಶ್ರೀರಾಮುಲು ಕರ್ನಾಟಕದಲ್ಲಿ ಬಿಜೆಪಿ ಬಲಪಡಿಸಲು ಮತ್ತು ಒಡೆದ ಮನಸ್ಸುಗಳನ್ನು ಒಂದುಗೂಡಿಸಲು ರಾಜ್ಯಾದ್ಯಂತ ಯಾತ್ರೆ ಕೈಗೊಳ್ಳುವುದಾಗಿ ಘೋಷಣೆ ಮಾಡಿದ್ದಾರೆ. ಬಿ. ಶ್ರೀರಾಮುಲು ಪಕ್ಷದ ನಾಯಕರು, ಹೈಕಮಾಂಡ್ ವಿರುದ್ಧ ಅಸಮಾಧಾನಗೊಂಡಿದ್ದಾರೆ.
ಬಿ. ಶ್ರೀರಾಮುಲು ಸೋಮವಾರ ದೆಹಲಿಗೆ ಭೇಟಿ ನೀಡಲಿದ್ದಾರೆ. ಬಿಜೆಪಿ ಅಧ್ಯಕ್ಷ ಜೆ. ಪಿ. ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ಮಾಡಿದರೂ ಸಹ ದೆಹಲಿಗೆ ಭೇಟಿ ನೀಡದ ಬಿ. ಶ್ರೀರಾಮುಲು ಈಗ ಸೋಮವಾರ ದೆಹಲಿಗೆ ತೆರಳುತ್ತೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಬಳಿ ಹೇಳಿಕೊಂಡಿದ್ದಾರೆ. ಆದ್ದರಿಂದ ಇದೇ ಸಮಯದಲ್ಲಿ ಬಿ. ವೈ. ವಿಜಯೇಂದ್ರರನ್ನು ಸಹ ದೆಹಲಿಗೆ ಬರುವಂತೆ ಸೂಚನೆ ನೀಡಲಾಗಿದೆ.
ದೆಹಲಿ ಚುನಾವಣೆ ಮುಗಿಯುತ್ತಿದ್ದಂತೆಯೇ ಬಿಜೆಪಿ ನಾಯಕರು ಕರ್ನಾಟಕ ಬಿಜೆಪಿ ಬಿಕ್ಕಟ್ಟಿನತ್ತ ಗಮನಹರಿಸಿದ್ದಾರೆ. ಬಿ. ವೈ. ವಿಜಯೇಂದ್ರ ಜೆ. ಪಿ. ನಡ್ಡಾ ಸೇರಿದಂತೆ ಹಿರಿಯ ನಾಯಕರನ್ನು ಭೇಟಿ ಮಾಡಲಿದ್ದು, ಮುಂದಿನ ಬೆಳವಣಿಗೆ ಏನು? ಎಂಬುದು ಇನ್ನೂ ನಿಗೂಢವಾಗಿದೆ.












Click it and Unblock the Notifications