7th pay ಬಿಜೆಪಿ ಸರ್ಕಾರದಲ್ಲಿ ಆಗದಿದ್ದರೆ ನಾವು ಮಾಡುತ್ತೇವೆ: ಸಿದ್ದರಾಮಯ್ಯ
7ನೇ ವೇತನ ಆಯೋಗದ ಶಿಫಾರಸು ಜಾರಿ, ಹಳೆಯ ಪಿಂಚಣಿ ವ್ಯವಸ್ಥೆ ಅನುಷ್ಠಾನ ಸೇರಿ ಹಲವು ಬೇಡಿಕೆಗಳ ಈಡೇರಿಕೆ ಮಾಡುವಂತೆ ಮುಷ್ಕರ ಆರಂಭಿಸಿರುವ ರಾಜ್ಯ ಸರ್ಕಾರಿ ನೌಕರರು ಲಿಖಿತ ಆದೇಶ ಬರುವವರೆಗೂ ಪ್ರತಿಭಟನೆ ಹಿಂತೆಗೆದುಕೊಳ್ಳುವುದಿಲ್ಲ ಎಂದು ಪ್ರತಿಭಟನೆ ಮುಂದುವರೆಸಿದ್ದಾರೆ.
ಬೆಂಗಳೂರು, ಫೆಬ್ರವರಿ 28: ರಾಜ್ಯ ಬಿಜೆಪಿ ಸರ್ಕಾರ 7ನೇ ವೇತನ ಆಯೋಗದ ಮಧ್ಯಂತರ ವರದಿಯನ್ನು ಪಡೆದುಕೊಂಡು, ತಕ್ಷಣ ಅದರ ಶಿಫಾರಸುಗಳನ್ನು ಜಾರಿಗೆ ಕೊಡುವ ಕೆಲಸ ಮಾಡಬೇಕು. ಬಿಜೆಪಿ ಸರ್ಕಾರದಿಂದ ಇದು ಸಾಧ್ಯವಾಗದಿದ್ದರೆ ನಾವು ಅಧಿಕಾರಕ್ಕೆ ಬಂದ ಕೂಡಲೆ ಜಾರಿ ಮಾಡುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
7ನೇ ವೇತನ ಆಯೋಗದ ಶಿಫಾರಸು ಜಾರಿ, ಹಳೆಯ ಪಿಂಚಣಿ ವ್ಯವಸ್ಥೆ ಅನುಷ್ಠಾನ ಸೇರಿ ಹಲವು ಬೇಡಿಕೆಗಳ ಈಡೇರಿಕೆ ಮಾಡುವಂತೆ ಮುಷ್ಕರ ಆರಂಭಿಸಿರುವ ರಾಜ್ಯ ಸರ್ಕಾರಿ ನೌಕರರು ಲಿಖಿತ ಆದೇಶ ಬರುವವರೆಗೂ ಪ್ರತಿಭಟನೆ ಹಿಂತೆಗೆದುಕೊಳ್ಳುವುದಿಲ್ಲ ಎಂದು ಪ್ರತಿಭಟನೆ ಮುಂದುವರೆಸಿದ್ದಾರೆ.

ರಾಜ್ಯ ಸರ್ಕಾರಿ ನೌಕರರ ಪರವಾಗಿ ಮಾತನಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಈ ಹಿಂದೆ 6ನೇ ವೇತನ ಆಯೋಗ ರಚನೆ ಮಾಡಿ, ರಾಜ್ಯದ ಬೊಕ್ಕಸದಿಂದ ರೂ.10,600 ಕೋಟಿ ಹೆಚ್ಚುವರಿಯಾಗಿ ನೀಡಿ ಜಾರಿಗೆ ಕೊಟ್ಟಿದ್ದು ನಮ್ಮ ಸರ್ಕಾರ. ಬಿಜೆಪಿ ಅವರಂತೆ ಸರ್ಕಾರಿ ನೌಕರರ ಮೂಗಿಗೆ ತುಪ್ಪ ಸವರುವ ಕೆಲಸ ನಾವು ಮಾಡಿದವರಲ್ಲ.
ಚುನಾವಣೆಗೆ ಮುಂಚಿತವಾಗಿ 6ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ಕೊಟ್ಟು ನಮ್ಮ ಬದ್ಧತೆಯನ್ನು ತೋರಿಸಿದ್ದೆವು. ರಾಜ್ಯ ಬಿಜೆಪಿ ಸರ್ಕಾರಕ್ಕೆ ಸರ್ಕಾರಿ ನೌಕರರ ಬಗ್ಗೆ ಕಾಳಜಿ, ಆಡಿದ ಮಾತಿನಂತೆ ನಡೆದುಕೊಳ್ಳುವ ಇಚ್ಛಾಶಕ್ತಿ ಎರಡೂ ಇಲ್ಲ. ಈ ಸರ್ಕಾರ ನೀತಿ ಸಂಹಿತೆ ಜಾರಿಯಾಗಲೆಂದು ದಿನ ದೂಡುತ್ತಿದೆ ಎಂದು ಸಿದ್ದರಾಮ್ಯ ಆರೋಪಿಸಿದ್ದಾರೆ.
ಹಲವೆಡೆ ಪರೀಕ್ಷೆ ನಡೆಯದೆ ವಿದ್ಯಾರ್ಥಿಗಳ ಭವಿಷ್ಯ ಆತಂಕದಲ್ಲಿದೆ, ಹೊರರೋಗಿ ವಿಭಾಗಗಳು ಬಂದ್ ಆಗಿ ರೋಗಿಗಳ ಜೀವ ಅಪಾಯದಲ್ಲಿದೆ, ಸರ್ಕಾರಿ ಸೇವೆಗಳು ಲಭ್ಯವಿಲ್ಲದ ಜನ ಕಂಗಾಲಾಗಿದ್ದಾರೆ. ಮುಂದೆ ಸಂಭವಿಸುವ ಎಲ್ಲ ಅವಘಡಗಳಿಗೂ ರಾಜ್ಯ ಬಿಜೆಪಿ ಸರ್ಕಾರವೇ ಹೊಣೆ ಹೊರಬೇಕು ಎಂದು ಅವರು ತಿಳಿಸಿದ್ದಾರೆ.

ತಮ್ಮ ಬೇಡಿಕೆಗಳು ಈಡೇರಿಸುವ ಲಿಖಿತ ಆದೇಶ ಬರುವವರೆಗೂ ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಪಟ್ಟು ಹಿಡಿದಿರುವ ಸರ್ಕಾರಿ ನೌಕರರಿಗೆ ರಾಜ್ಯ ಬಿಜೆಪಿ ಸರ್ಕಾರ ಶೇಕಡ 17ರಷ್ಟು ವೇತನ ಹೆಚ್ಚಿಸುವ ಭರವಸೆ ನೀಡಿದೆ. ಆದರೆ ಇದುವರೆಗೂ ಇದಕ್ಕೆ ರಾಜ್ಯ ಸರ್ಕಾರಿ ನೌಕರರು ಸ್ಪಂದಿಸಿದ್ದು, ತಮ್ಮ ಮುಷ್ಕರವನ್ನು ಹಿಂಪಡೆದಿದ್ದಾರೆ ಎಂದು ಟಿವಿ 9 ಮಾಧ್ಯಮ ವರದಿ ತಿಳಿಸಿದೆ.












Click it and Unblock the Notifications