ನಾಡಿನ ಅಭಿವೃದ್ಧಿಗೆ ಪೂರಕವಾದ ಎಲ್ಲ ಅಂಶಗಳ ಅನುಷ್ಠಾನಕ್ಕೆ ಬದ್ಧ: ಸಿಎಂ
ಹಾವೇರಿ, ಜನವರಿ 08: ಸಮ್ಮೇಳನದಲ್ಲಿಯ ವಿಚಾರಗಳನ್ನು ಸಮ್ಮೇಳನದ ಅಧ್ಯಕ್ಷರ ಮೂಲಕ ಪಡೆದು ಕನ್ನಡ ಸಾಹಿತ್ಯ ಹಾಗೂ ಕನ್ನಡ ನಾಡಿನ ಅಭಿವೃದ್ಧಿಗೆ ಪೂರಕವಾಗಿರುವ ಎಲ್ಲಾ ಅಂಶಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಬದ್ಧವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಭಾನುವಾರ ಹಾವೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯಮಂತ್ರಿಗಳು, ಹಾವೇರಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇಂದು ಸಮಾರೋಪಗೊಳ್ಳುತ್ತಿದೆ. ಕಳೆದ ಎರಡು ದಿನಗಳಿಂದ ಸಾಹಿತ್ಯದ ಕಂಪು ಇಡೀ ಕರ್ನಾಟಕಕ್ಕೆ ಪಸರಿಸಿದೆ. ಎರಡು ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸಿದ್ದಾರೆ. ವಿವಿಧ ಗೋಷ್ಠಿಗಳು ನಡೆದಿದ್ದು, ಸಾಕಷ್ಟು ಸಾಹಿತಿಗಳು ಪಾಲ್ಗೊಂಡಿದ್ದಾರೆ.
ಇಲ್ಲಿ ಸಮ್ಮೇಳನ ಯಶಸ್ವಿಗೆ ಶ್ರಮಿಸಿದ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಂ ಹೆಬ್ಬಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್, ಜಿಲ್ಲಾಧಿಕಾರಿ ಸೇರಿದಂತೆ ಎಲ್ಲಾ ಅಧಿಕಾರಿಗಳಿಗೆ ಹಾಗೂ ಹಾವೇರಿ ಜನತೆಗೆ ಅವರು ಅಭಿನಂದನೆ ತಿಳಿಸಿದರು.

ಪರಿಶಿಷ್ಟರ ಆಶೋತ್ತರಗಳಿಗೆ ಸ್ಪಂದನೆ
ಚುನಾವಣಾ ಅಖಾಡಕ್ಕೆ ಧುಮುಕಿ ಬಹಳ ದಿನಗಳಾಗಿವೆ. ಯಾರ ಆಡಳಿತದಲ್ಲಿ ಯಾರು ಪರಿಶಿಷ್ಟ ಸಮುದಾಯ ಅಭಿವೃದ್ಧಿಗೆ ಕಾರ್ಯಕ್ರಮ ನೀಡಿದ್ದಾರೆ. ಏನು ಅನುಷ್ಠಾನವಾಗಿದೆ. ಪರಿಶಿಷ್ಟರ ಬದುಕು ಯಾರ ಕಾಲದಲ್ಲಿ ಎಷ್ಟು ಉತ್ತಮಗೊಂಡಿದೆ. ಅವರ ಹಕ್ಕುಗಳನ್ನು ಯಾರು ರಕ್ಷಿಸಿದ್ದಾರೆ ಎಂದು ಎಲ್ಲರಿಗೂ ತಿಳಿದಿದೆ.
ಜಾಗತೀಕರಣದ ನಂತರ ದುರ್ಬಲ ವರ್ಗದ ಆಶೋತ್ತರಗಳು ಹೆಚ್ಚಾಗಿದೆ. ಅದಕ್ಕೆ ತಕ್ಕ ಹಾಗೆ ನಮ್ಮ ಸರ್ಕಾರ ಸ್ಪಂದಿಸುವ ಕೆಲಸ ಮಾಡಿದ್ದೇವೆ. ವಿರೋಧ ಪಕ್ಷದವರು ಸಹಜವಾಗಿ ವಿರೋಧಿಸುತ್ತಾರೆ. ಇನ್ನು ಮುಂದೆ ವೋಟ್ ಬ್ಯಾಂಕ್ ರಾಜಕಾರಣ ನಡೆಯುವುದಿಲ್ಲ ಎಂದು ಕಾಂಗ್ರೆಸ್‌ಗೆ ಟಾಂಗ್ ನೀಡಿದರು.
ಗುಂಡಿನ ದಾಳಿ: ಬಂಧನಕ್ಕೆ ಸೂಚನೆ
ಬೆಳಗಾವಿಯಲ್ಲಿ ಶ್ರೀರಾಮ ಸೇನೆಯ ಅಧ್ಯಕ್ಷರ ಮೇಲೆ ಗುಂಡಿನ ದಾಳಿಯಾಗಿರುವ ಬಗ್ಗೆ ಪ್ರತಿಕ್ರೆಯಿಸಿದ ಅವರು, ಪೊಲೀಸರಿಗೆ ಈಗಾಗಲೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲು ಹಾಗೂ ಕಾರ್ಯಾಚರಣೆ ನಡಸಿ ತಪ್ಪಿತಸ್ಥರನ್ನು ಬಂಧಿಸುವಂತೆ ತಿಳಿಸಲಾಗಿದೆ. ಭಿನ್ನ ಅಭಿಪ್ರಾಯ ಇದ್ದ ಮಾತ್ರಕ್ಕೆ ಹಿಂಸೆಗೆ ಅವಕಾಶ ನೀಡಬಾರದು. ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಚಿಕಿತ್ಸೆ ಯ ವೇತನ ಭರಿಸಲಾಗುವುದು ಎಂದರು.

ಸ್ವಾಮೀಜಿಗಳಿಗೆ ಟಿಕೆಟ್ ನೀಡುವ ಪ್ರಸ್ತಾಪವಿಲ್ಲ
ಸ್ವಾಮೀಜಿಗಳು ಟಿಕೆಟ್ ಆಕಾಂಕ್ಷಿಗಳಾಗಿ ವಿಧಾನಸಭೆಗೆ ಧುಮುಕುವ ಸಾಧ್ಯತೆಗಳಿವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ, ಈ ಬಗ್ಗೆ ನನಗೆ ಏನು ಗೊತ್ತಿಲ್ಲ. ವಿರೋಧ ಪಕ್ಷಗಳ ಏನು ಹೇಳಿವೆ ಎನ್ನುವ ಮಾಹಿತಿ ನನಗಿಲ್ಲ. ಸ್ವಾಮೀಜಿಗಳಿಗೆ ಟಿಕೆಟ್ ನೀಡುವ ಪ್ರಸ್ತಾಪ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಎಲ್ಲಾ ಕ್ಷೇತ್ರಗಳನ್ನು ತಲುಪಲು ಸಿದ್ಧತೆ
ಬಿಜೆಪಿ ಪಕ್ಷ ವಿವಿಧ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ರಾಜ್ಯದ ಅಧ್ಯಕ್ಷರು ಕಾರ್ಯಕಾರಿ ಸಮಿತಿಯಲ್ಲಿ ಮಾತನಾಡಿದಂತೆ ಬೂತ್ ವಿಜಯ ಕಾರ್ಯಕ್ರಮ ಪ್ರಾರಂಭವಾಗಿದೆ. 21 ರಿಂದ 29 ರವರೆಗೆ ಮನೆ ಮನೆಗೆ ಮಾಹಿತಿ ನೀಡುವ ಮತ್ತೊಂದು ಅಭಿಯಾನ ಪ್ರಾರಂಭವಾಗಲಿದೆ. ಜನಸಂಕಲ್ಪ ಯಾತ್ರೆಯೂ ಮುಂದುವರೆಯಲಿದೆ. ಎಲ್ಲಾ ಕ್ಷೇತ್ರಗಳನ್ನು ತಲುಪಲು ರಥ ಯಾತ್ರೆಗೆ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ ಎಂದು ವಿವರಿಸಿದರು.












Click it and Unblock the Notifications