ಬಿಜೆಪಿ ನೀಡಿದ್ದರ ಪೈಕಿ ಯಾರ ಮೀಸಲಾತಿ ವಾಪಸ್ ಪಡೆಯುತ್ತೀರಿ?: ಕಾಂಗ್ರೆಸ್‌ಗೆ ಜೆಪಿ ನಡ್ಡಾ ಪ್ರಶ್ನೆ
ದಾವಣಗೆರೆ, ಏಪ್ರಿಲ್ 30: ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯ ನೀಡುವ ವಿಚಾರದಲ್ಲಿ ಮಹತ್ವದ ಹೆಜ್ಜೆ ಇಟ್ಟ ಬಿಜೆಪಿ ಸರ್ಕಾರ ದಲಿತರಿಗೆ ಮೀಸಲಾತಿ ಹೆಚ್ಚಳ ಮಾಡಲಾಗಿದೆ. ಆದರೆ ಕಾಂಗ್ರೆಸ್ ನಾಯಕರು ಪಕ್ಷ ಅಧಿಕಾರಕ್ಕೆ ಬಂದರೆ ನೀಡಿದ ಮೀಸಲಾತಿ ವಾಪಸ್ ಪಡೆಯುತ್ತೇವೆ ಎಂದಿದ್ದಾರೆ. ಹಾಗಾದರೆ ಯಾರ ಮೀಸಲಾತಿ ವಾಪಸ್ ಪಡೆಯುತ್ತೀರಿ, ಏಕೆ ಪಡೆಯುತ್ತೀರಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಪ್ರಶ್ನಿಸಿದ್ದಾರೆ.
ಭಾನುವಾರ ಶಿವಮೊಗ್ಗ ಜಿಲ್ಲೆಯ ಹೊನ್ನಾಳಿಯಲ್ಲಿ ಚುನಾವಣಾ ಪ್ರಚಾರ ಪ್ರಯುಕ್ತ ನಡೆದ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ನ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರು ಪಕ್ಷ ಅಧಿಕಾರಕ್ಕೆ ಬಂದರೆ ಮೀಸಲಾತಿ ವಾಪಸ್ ಪಡೆಯುವುದಾಗಿ ಹೇಳಿದ್ದಾರೆ. ಬಿಜೆಪಿ ನೀಡಿದ ಮೀಸಲಾತಿಯಲ್ಲಿ ಯಾರ ಮೀಸಲಾತಿಯನ್ನು ವಾಪಸ್ ಪಡೆಯುತ್ತೀರಿ ಎಂದು ನಡ್ಡಾ ಖಾರವಾಗಿ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಲೆಲ್ಲಾ ಗುಂಪು, ಸಮಾಜಗಳ ನಡುವೆ ಅಶಾಂತಿ ಉಂಟಾಗಿದೆ. ಸಮುದಾಯಗಳ ನಡುವೆ ಬೆಂಕಿ ಹಚ್ಚಲಾಗಿದೆ. ಬೆಂಗಳೂರು, ಮಂಗಳೂರಿನಲ್ಲಿ ಬಾಂಬ್ ಬ್ಲಾಸ್ಟ್ ಆಗಿತ್ತು. ಶಿವಮೊಗ್ಗದಲ್ಲಿ ಹರ್ಷ, ಮಂಗಳೂರಿನಲ್ಲಿ ಪ್ರವೀಣ್ ಹತ್ಯೆಯಾಗಿದ್ದು ಎಲ್ಲರಿಗೂ ನೆನಪಿದೆ. ಇದರ ಹಿಂದಿರುವ ಪಿಎಫ್ಐ ಸಂಘಟನೆ ನಿಷೇಧಿಸಿದ್ದೇವೆ ಎಂದರು.
ಅಶಾಂತಿಗೆ ಸಿದ್ದರಾಮಯ್ಯ ಸರ್ಕಾರ ಕುಮ್ಮಕ್ಕು
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಧಾನಿ ಅವರೊಂದಿಗೆ ಚರ್ಚಿಸಿ, ಸಂಪೂರ್ಣವಾಗಿ ಪಿಎಫ್ಐ ಅನ್ನು ಬ್ಯಾನ್ ಮಾಡಿದ್ದಾರೆ. ಆದರೆ ಸಿದ್ದರಾಮಯ್ಯ ಸರ್ಕಾರ ಇದ್ದಾಗ ಪಿಎಫ್ಐ ಸಂಘಟನೆಯ ಆರೋಪಿಗಳನ್ನು ಜೈಲಿನಿಂದ ಬಿಡಿಸಿತ್ತು. ಅಶಾಂತಿ ಸೃಷ್ಟಿಸುವವರನ್ನು ಜೈಲಿಗೆ ನಾವು ಕಳುಹಿಸಿದರೆ ಅಂಥವರ ರಕ್ಷಣೆಗೆ ಸಿದ್ದರಾಮಯ್ಯ ನಿಂತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಡಿ. ಕೆ. ಶಿವಕುಮಾರ್ ಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ. ಸಿದ್ದರಾಮಯ್ಯ ಸರ್ಕಾರ ಇದ್ದಾಗ ಮಲಪ್ರಭಾ ನಾಲಾ ಯೋಜನೆಯಲ್ಲಿ 400 ಕೋಟಿ ರೂ.ಹಗರಣ ಆಗಿದೆ. ಬಿಬಿಎಂಪಿಯ ಬೋರ್ ವೆಲ್ ಗಳಲ್ಲಿ ಹಗರಣ, ಪಿಎಸ್ಐ ನೇಮಕಾತಿ, ಶಿಕ್ಷಕರ ನೇಮಕಾತಿ, ಸ್ಟೀಲ್ ಬ್ರಿಡ್ಜ್ ನಲ್ಲಿ ಹಗರಣವಾಗಿದೆ. ಹೇಳುತ್ತಾ ಹೋದರೆ ಸಿದ್ದರಾಮಯ್ಯ ಸರ್ಕಾರ ಇದ್ದಾಗ ಪ್ರತಿವರ್ಷವೂ ಹಗರಣ ನಡೆದಿದೆ ಎಂದು ಅವರು ವಾಗ್ದಾಳಿ ನಡೆಸಿದರು.

ಜಾಮೀನು ಸಿಗದಿದ್ದರೆ ನೀವೆಲ್ಲ ಜೈಲಿನಲ್ಲಿರಬೇಕಿತ್ತು
ಹೀಗೆ ಸಾಲು ಸಾಲು ಭ್ರಷ್ಟಾಚಾರ ಮಾಡಿದ ಕಾಂಗ್ರೆಸ್ಸನವರಿಗೆ ಆರೋಪ ಮಾಡುವ ನೈತಿಕತೆ ಇಲ್ಲ. ಅಕ್ರಮ ಆಸ್ತಿ ಗಳಿಕೆ, ಹಣ ವರ್ಗಾವಣೆ ಪ್ರಕರಣದಲ್ಲಿ ಡಿ. ಕೆ. ಶಿವಕುಮಾರ್ ಜಾಮೀನಿನ ಮೇಲೆ ಹೊರಗಡೆ ಇಲ್ಲವೇ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಶಿವಕುಮಾರ್ ಸೇರಿದಂತೆ ಹಲವರಿಗೆ ಜಾಮೀನು ಸಿಗದಿದ್ದರೆ ಜೈಲಿನಲ್ಲಿರುತ್ತಿದ್ದರು ಎಂದರು.
ಭಾರತ್ ಆಯುಷ್ಮಾನ್ ಯೋಜನೆಯನ್ನು ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ನಿಲ್ಲಿಸಿದರು. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಕೃಷಿ ಸಮ್ಮಾನ್ ನಿಧಿ ಯೋಜನೆಯಡಿ ಕೇವಲ 17 ರೈತರ ಹೆಸರು ಕಳುಹಿಸಿದ್ದರು. ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಫಲಾನುಭವಿಗಳ ಪಟ್ಟಿ ಕಳುಹಿಸುತ್ತಿರಲಿಲ್ಲ. 5 ಲಕ್ಷ ರೂಪಾಯಿ ಉಚಿತ ಚಿಕಿತ್ಸೆ ನೀಡುವಂಥ ಆಯುಷ್ಮಾನ್ ಯೋಜನೆಯನ್ನು ಸಿದ್ದರಾಮಯ್ಯ ನಿಲ್ಲಿಸಿದರು. ಕೇಂದ್ರ ಸರ್ಕಾರದ ಅನೇಕ ಯೋಜನೆಗಳು ಫಲಾನುಭವಿಗಳಿಗೆ ತಲುಪಿಸಲು ಬಿಟ್ಟಿಲ್ಲ. ಡಬಲ್ ಎಂಜಿನ್ ಸರ್ಕಾರ ಈ ಕೆಲಸ ಮಾಡಿದೆ.
ಬಿಜೆಪಿ ಹಿಂದುಳಿದ ವರ್ಗದವರ ಸರ್ಕಾರ
ಬಿಜೆಪಿಯು ಬಡವರು, ದಲಿತರು, ಹಿಂದುಳಿದವರು ಸೇರಿದಂತೆ ಎಲ್ಲಾ ವರ್ಗದವರ ಸರ್ಕಾರ. ಯಡಿಯೂರಪ್ಪ ಹಾಗೂ ಬೊಮ್ಮಾಯಿ ಸರ್ಕಾರ 54 ಲಕ್ಷ ರೈತರಿಗೆ ಪಿಎಂ ಕಿಸಾನ್ ಸಮ್ಮಾನ್ ಹಣ ಸಿಗುವಂತಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 9 ಲಕ್ಷ ಜನರಿಗೆ ಮನೆ ನೀಡುವ ಕೆಲಸ ಮಾಡಿದ್ದೇವೆ. ಕರ್ನಾಟಕದಲ್ಲಿ 62 ಲಕ್ಷ ಜನರಿಗೆ ಆಯುಷ್ಮಾನ್ ಕಾರ್ಡ್ ನೀಡಲು ಕ್ರಮ ಕೈಗೊಂಡಿದ್ದೇವೆ. ಸಾಮಾಜಿಕ ನ್ಯಾಯದಡಿ ಎಸ್ಸಿ, ಎಸ್ಟಿ ಸಮುದಾಯದವರಿಗೆ ಮೀಸಲಾತಿ ಹೆಚ್ಚಿಸಿದ್ದೇವೆ ಎಂದು ಹೇಳಿದರು.
ಈ ವೇಳೆ ರೇಣುಕಾಚಾರ್ಯರ ಮನೆಗೆ ನಡ್ಡಾ ಅವರು ಭೇಟಿ ನೀಡಿ ಮಾತುಕತೆ ನಡೆಸಿದರು. ಬಳಿಕ ಟ್ವೀಟ್ ಮಾಡಿರುವ ನಡ್ಡಾ ಅವರು ಬಿಜೆಪಿ ಮೇಲೆ ಹೊನ್ನಾಳಿ ಜನತೆಯ ಅಭಿಮಾನವನ್ನು ಕಂಡು ಸಂತಸವಾಯಿತು. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಸವರಾಜ್ ಬೊಮ್ಮಾಯಿ ಡಬಲ್ ಇಂಜಿನ್ ಸರ್ಕಾರದ ಅಭಿವೃದ್ಧಿ ಆಧಾರಿತ ನೀತಿಗಳ ಬಗ್ಗೆ ಜನರಿಗಿರುವ ನಂಬಿಕೆಯನ್ನು ಈ ಜನೋತ್ಸಾಹ ಸಾಬೀತುಪಡಿಸುತ್ತದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.












Click it and Unblock the Notifications