ಡಿಕೆಶಿ ಭೇಟಿ ಬಳಿಕ ಸಿದ್ದರಾಮಯ್ಯ ಮನೆಯಲ್ಲಿ ಪ್ರತ್ಯಕ್ಷರಾದ ಮಾಜಿ ಸಚಿವ ಶ್ರೀರಾಮುಲು
ಬೆಂಗಳೂರು, ನವೆಂಬರ್ 20: ಲೋಕಸಭಾ ಚುನಾವಣೆಗೆ ಎಲ್ಲ ರಾಜಕೀಯ ಪಕ್ಷಗಳು ತಯಾರಿ ನಡೆಸುತ್ತಿವೆ. ಪರಸ್ಪರ ಪಕ್ಷಗಳು ಅಸಮಾಧಾನಿತರನ್ನು ಪಕ್ಷಕ್ಕೆ ಕರೆತರಲು ತೆರೆಮರೆಯ ಕಸರತ್ತು ನಡೆಸಿವೆ. ಈ ಮಧ್ಯೆ ಮಾಜಿ ಸಚಿವ, ಬಿಜೆಪಿ ನಾಯಕ ಬಿ.ಶ್ರೀರಾಮುಲು ಅವರು ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಯಲ್ಲಿ ಪ್ರತ್ಯಕ್ಷವಾಗಿದ್ದಾರೆ. ಆಡಳಿತ ಪಕ್ಷ-ವಿರೋಧ ಪಕ್ಷದ ನಾಯಕರು ಒಂದೆಡೆ ಸೇರಿರುವ ಬಗ್ಗೆ ವ್ಯಾಪಕ ಚರ್ಚೆ ಆಗುತ್ತಿದೆ.
ಲೋಕಸಭಾ ಚುನಾವಣೆ ಕೆಲವೇ ತಿಂಗಳು ಬಾಕಿ ಇರುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಮವಾರ ಬಿ.ಶ್ರೀರಾಮುಲು ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿದ್ದಾರೆ. ಕೆಲವು ವಿಷಯಗಳು ಕುರಿತು ಮಾತನಾಡಿದ್ದು, ಇದು ಕುತೂಹಲ ಉಂಟಾಗಲು ಕಾರಣವಾಯಿತು.

ಭೇಟಿಗೂ ಮೊದಲೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸದಾಶಿವ ನಗರದ ನಿವಾಸಕ್ಕೂ ತೆರಳಿದ್ದರು. ಸಿಎಂ ಭೇಟಿಗೂ ಮೊದಲು ಸುದ್ದಿಗಾರರ ಜೊತೆ ಮಾತನಾಡಿದ ಶ್ರಿರಾಮುಲು ಅವರು, ಈ ಭೇಟಿ ಯಾವುದೇ ರಾಜಕೀಯ ಕಾರಣಕ್ಕಲ್ಲ. ಮಗಳ ಮದುವೆ ಸಮಾರಂಭ ನಿಮಿತ್ತ ಮುಖ್ಯಮಂತ್ರಿಗಳನ್ನು ಆಹ್ವಾನಿಸಲು ಬಂದಿದ್ದೇನೆ. ಇದು ಖಾಸಗಿ ಭೇಟಿ ಎಂದು ಸ್ಪಷ್ಟಪಡಿಸಿದರು.
ಮಗಳ ಮದುಗೆ ಶ್ರೀರಾಮುಲುನಿಂದ ಸಿಎಂ ಆಹ್ವಾನ
ಮುಂದಿನ ತಿಂಗಳು ಡಿಸೆಂಬರ್ 7ರಂದು ಮಗಳ ಮದುವೆ ಇದೆ. ಬೆಂಗಳೂರು ಅರಮನೆ ಮೈದಾನದಲ್ಲಿ ಮದುವೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಈ ಸಂಬಂಧ ಲಗ್ನ ಪತ್ರಿಕೆಯನ್ನು ಉಪಮುಖ್ಯಮಂತ್ರಿ, ಮುಖ್ಯಮಂತ್ರಿ ಅವರಿಗೆ ನೀಡಿ ಆಹ್ವಾನಿಸಲು ಇಲ್ಲಿಗೆ ಬಂದಿದ್ದೇನೆ. ಯಾವುದೇ ರಾಜಕೀಯ ಕಾರಣವಾಗಲಿ ಇಲ್ಲ, ಅಂತಹ ಚರ್ಚೆಗಳು ನಡೆದಿಲ್ಲ ಎಂದರು.
ಜನಾರ್ಧನ ರೆಡ್ಡಿ ಸೆಳೆಯಲು ಬಿಜೆಪಿ ಯತ್ನ
ಸದ್ಯ ಲೋಕಸಭಾ ಚುನಾವಣೆ ಎದುರು ನೋಡುತ್ತಿರುವ ಬಿಜೆಪಿಯು ರಾಜ್ಯದಲ್ಲಿ ಸೋಲು ಕಂಡಿದೆ. ಇದರಿಂದ ಪಾಠ ಕಲಿತಿರುವ ಬಿಜೆಪಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ) ಸಂಸ್ಥಾಪಕ ಗಾಲಿ ಜನಾರ್ಧನ ರೆಡ್ಡಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಹಾತೊರೆಯುತ್ತಿದೆ. ಈ ಸಂಬಂಧ ತೆರೆಮರೆಯಲ್ಲಿ ಬಿಜೆಪಿ ನಾಯಕರು ಕಸರತ್ತು ಆರಂಭಿಸಿದ್ದಾರೆ.
ಕಲ್ಯಾಣ ಕರ್ನಾಟಕ ಸೇರಿದಂತೆ ಕೆಲವು ಕ್ಷೇತ್ರಗಳಲ್ಲಿ 2023ರ ವಿಧಾನಸಭೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಜನಾರ್ಧನ್ ರೆಡ್ಡಿ ಅವರು ಬಿಜೆಪಿಗೆ ತಲೆನೋವಾಗಿದ್ದರು. ಮತಗಳು, ಕ್ಷೇತ್ರಗಳು ಒಡೆದು ಹೋಗುವ ಭೀತಿ ಕೇಸರಿ ಪಡೆಗೆ ಎದುರಾಗಿತ್ತು.
ಇದೀಗ ಎಚ್ಚರಿಕೆ ಹೆಜ್ಜೆ ಇಡುತ್ತಿರುವ ಬಿಜೆಪಿಯು ರೆಡ್ಡಿಯನ್ನು ಪಕ್ಷದೊಂದಿಗೆ ಸೇರಿಸಿಕೊಳ್ಳಲು ಕೇಂದ್ರ ನಾಯಕರ ಜೊತೆಗೆ ಮಾತುಕತೆ ನಡೆಸಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಬಹಿರಂಗವಾಗಬೇಕಿದೆ.












Click it and Unblock the Notifications