ದಾವಣಗೆರೆ : ಅಂಚೆ ಮತ ಎಣಿಕೆಯಲ್ಲಿ ತಪ್ಪಾಗಿದೆಯಂತೆ
ಬೆಂಗಳೂರು, ಮೇ 6 : ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿನ ಅಂಚೆಮತ ಎಣಿಕೆಯಲ್ಲಿ ಜಿಲ್ಲಾಧಿಕಾರಿ ಪ್ರವಾದವೆಸಗಿದ್ದಾರೆ ಎಂದು ಆರೋಪಿಸಿ ಬಿಜೆಪಿ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದೆ. ದಾವಣಗೆರೆ ಕ್ಷೇತ್ರದಲ್ಲಿ ಮರು ಅಂಚೆಮತದಾನಕ್ಕೆ ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಲಾಗಿದೆ.
ಮಂಗಳವಾರ ಬಿಜೆಪಿ ವಕ್ತಾರ ಸುರೇಶ್ ಕುಮಾರ್ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ಅವರನ್ನು ಭೇಟಿ ಮಾಡಿ, ಏಪ್ರಿಲ್ 17ರಂದು ನಡೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗೆ ಬಂದಿದ್ದ ಅಂಚೆ ಮತಗಳ ಎಣಿಕೆಯಲ್ಲಿ ಪ್ರಮಾದವೆಸಗಲಾಗಿದೆ ಎಂದು ದೂರು ನೀಡಿದ್ದಾರೆ.

ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಆಗಿರುವ ಅಂಜನಕುಮಾರ್ ಅವರು ಈ ತಪ್ಪು ಮಾಡಿದ್ದಾರೆ ಎಂದು ಸುರೇಶ್ ಕುಮಾರ್ ಚುನಾವಣಾಧಿಕಾರಿಗಳಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಘಟನೆ ಕುರಿತು ತನಿಖೆ ನಡೆಸಬೇಕೆಂದು ಅನಿಲ್ ಕುಮಾರ್ ಝಾ ಅವರಿಗೆ ಮನವಿ ಮಾಡಿರುವುದಾಗಿ ಸುರೇಶ್ ಕುಮಾರ್ ಹೇಳಿದರು. [ಕರ್ನಾಟಕದಲ್ಲಿ ಎಷ್ಟು ಮತದಾನವಾಗಿದೆ]
ಅಂಚೆಮತಗಳನ್ನು ಮತ್ತೊಮ್ಮೆ ಎಣಿಕೆ ಮಾಡಬೇಕು ಅದಕ್ಕಾಗಿ ಅಧಿಕಾರಿಯೊಬ್ಬರನ್ನು ನೇಮಿಸಬೇಕು. ಅಂಚೆ ಮತ ಎಣಿಕೆಯಲ್ಲಿ ಪ್ರಮಾದ ಉಂಟಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮರು ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಬೇಕು ಎಂದು ಚುನಾವನಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ ಎಂದು ಸುರೇಶ್ ಕುಮಾರ್ ಹೇಳಿದರು. [ಕಾಂಗ್ರೆಸ್ ಅಭ್ಯರ್ಥಿ ಎಸ್ಎಸ್ ಮಲ್ಲಿಕಾರ್ಜುನ್ ಪರಿಚಯ]
ಅಂದಹಾಗೆ ದಾವಣಗೆರೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಜಿಎಂ ಸಿದ್ದೇಶ್ವರ್, ಕಾಂಗ್ರೆಸ್ ನಿಂದ ಎಸ್.ಎಸ್.ಮಲ್ಲಿಕಾರ್ಜುನ್ ಮತ್ತು ಜೆಡಿಎಸ್ ನಿಂದ ಮಹಿಮಾ ಪಟೇಲ್ ಕಣಕ್ಕಿಳಿದಿದ್ದರು. ಏ. 17ರಂದು ನಡೆದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 73.20 ಮತದಾನ ನಡೆದಿತ್ತು.












Click it and Unblock the Notifications