ಎಚ್.ಆಂಜನೇಯ ರಾಜೀನಾಮೆಗೆ ಪಟ್ಟು ಹಿಡಿದ ಬಿಜೆಪಿ
ಬೆಂಗಳೂರು, ನವೆಂಬರ್ 26 : ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರು ರಾಜೀನಾಮೆ ನೀಡಬೇಕು ಎಂದು ವಿಧಾನಸಭೆಯಲ್ಲಿ ಇಂದು ಪ್ರತಿಪಕ್ಷ ಬಿಜೆಪಿ ಒತ್ತಾಯಿಸಿತು. ಈ ವಿಚಾರದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಕೆಲವು ಹೊತ್ತು ಮಾತಿನ ಚಕಮಕಿ ನಡೆಯಿತು.
ಸದನದಲ್ಲಿ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು, 'ಸಮಾಜ ಕಲ್ಯಾಣ ಸಚಿವರ ಮನೆಯಲ್ಲಿ ಅಧಿಕಾರಿಯೊಬ್ಬರು ಹಣ ನೀಡುವ ವಿಚಾರ ಸುದ್ದಿ ವಾಹಿನಿಯ ರಹಸ್ಯ ಕಾರ್ಯಾಚರಣೆಯಲ್ಲಿ ಬಹಿರಂಗಗೊಂಡಿದೆ. ಸಚಿವರ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಇದು ನಡೆದಿದ್ದು, ನೈತಿಕ ಹೊಣೆ ಹೊತ್ತು ಆಂಜನೇಯ ಅವರು ರಾಜೀನಾಮೆ ನೀಡಬೇಕು' ಎಂದು ಒತ್ತಾಯಿಸಿದರು. [ಸಚಿವ ಆಂಜನೇಯ ಪ್ರಕರಣ : ಯಾರು, ಏನು ಹೇಳಿದರು?]

ಈ ಚರ್ಚೆಯ ವೇಳೆ ಮಧ್ಯಪ್ರವೇಶಿಸಿದ ಪ್ರವಾಸೋದ್ಯಮ ಮತ್ತು ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಅವರು, 'ಈ ಪ್ರಕರಣದ ಕುರಿತು ಸಿಐಡಿ ತನಿಖೆಗೆ ಆದೇಶ ನೀಡಲಾಗಿದೆ. ಆದ್ದರಿಂದ, ಚರ್ಚೆ ಮಾಡುವ ಅಗತ್ಯವಿಲ್ಲ' ಎಂದು ಹೇಳಿದರು. [ಸಿದ್ದ'ರಾಮ'ಗೆ ಮುಜುಗರ ತಂದ ಕರ್ನಾಟಕದ ಆಂಜನೇಯ]
ಮಾತುಮುಂದುರೆಸಿದ ಶೆಟ್ಟರ್, 'ಸಚಿವ ಆಂಜನೇಯ ಅವರ ಮುಖಕ್ಕೆ ಮಸಿ ಬಳಿಯುವ ಕೆಲಸವನ್ನು ನಾವು ಮಾಡುತ್ತಿಲ್ಲ. ಪರಿಷತ್ತಿನಲ್ಲಿ ಪ್ರಸ್ತಾಪವಾದ ಹಾಸಿಗೆ-ದಿಂಬು ಖರೀದಿ ಹಗರಣದ ಬಗ್ಗೆ ಇಲ್ಲಿ ಚರ್ಚಿಸುತ್ತಿಲ್ಲ. ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಆರೋಪ ಬಂದ ತಕ್ಷಣ ರಾಜೀನಾಮೆ ನೀಡಲಾಗಿತ್ತು. ಈಗಲೂ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ' ಎಂದರು. [ಸಚಿವ ಆಂಜನೇಯ ಪತ್ನಿಯಿಂದಲೇ ಅಕ್ಕಿ ಕಮಿಷನ್ ಡೀಲ್?]
ವಿಷಯದ ಕುರಿತು ಮಾತನಾಡಿದ ಶಾಸಕ ಸಿ.ಟಿ.ರವಿ ಮತ್ತು ಸುನೀಲ್ ಕುಮಾರ್ ಅವರು, 'ಪಾದರ್ಶಕ ಆಡಳಿತ ನಡೆಸುವ ನೀವು ಸಚಿವರ ರಾಜೀನಾಮೆ ಪಡೆಯಲು ಏಕೆ ವಿಳಂಬ ಮಾಡುತ್ತಿದ್ದೀರಿ?' ಎಂದು ಪ್ರಶ್ನಿಸಿದರು. ಇದಕ್ಕೆ ಕಾಂಗ್ರೆಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಸದನದಲ್ಲಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಕೆಲವು ಹೊತ್ತು ಮಾತಿನ ಚಕಮಕಿ ನಡೆಯಿತು.
ಸಚಿವ ಆಂಜನೇಯ ಅವರ ಮನೆಯಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣದ ತನಿಖೆಯನ್ನು ಸರ್ಕಾರ ನವೆಂಬರ್ 13ರಂದು ಸಿಐಡಿಗೆ ವಹಿಸಿದೆ. ಆದ್ದರಿಂದ ಚರ್ಚೆಗೆ ಅವಕಾಶವಿಲ್ಲ. ತನಿಖೆಯ ಹಂತದಲ್ಲಿ ಚರ್ಚೆ ನಡೆಸಬಾರದು ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಹೇಳಿದರು.












Click it and Unblock the Notifications