'ಎಸ್‌ಪಿ ಕಪಾಳಕ್ಕೆ ಹೊಡೆಯಲು ಮುಂದಾದ ಸಿಎಂ ಕೂಡಲೇ ಕ್ಷಮೆ ಕೇಳಬೇಕು'
ಸಿಎಂ ಸಿದ್ದರಾಮಯ್ಯ ಅವರು ಬೆಳಗಾವಿ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಮೇಲೆ ವೇದಿಕೆಯಲ್ಲೇ ಗರಂ ಆಗಿ ಕಪಾಳಕ್ಕೆ ಬಾರಿಸಲು ಯತ್ನಿಸಿರುವ ವಿಚಾರಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಬಿಜೆಪಿ ನಾಯಕರು ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಕಾರಣಕ್ಕೆ ಸಿಎಂ ಕೋಪಗೊಂಡು ಈ ರೀತಿ ವರ್ತಿಸಿದ್ದಾರೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕೂಡ ಆಕ್ರೋಶ ಹೊರಹಾಕಿದ್ದಾರೆ. ಸಮವಸ್ತ್ರದಲ್ಲಿದ್ದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಏಕವಚನದಲ್ಲಿ ಸಂಬೋಧಿಸಿ, ಹತಾಶೆಯಿಂದ ಆರ್ಭಟಿಸಿ ಕೈ ಮಾಡಲು ಮುಂದಾಗಿರುವ ಕ್ರಮ ಮುಖ್ಯಮಂತ್ರಿ ಸ್ಥಾನದ ಘನತೆಗೆ ಧಕ್ಕೆ ತಂದ ಗೂಂಡಾ ವರ್ತನೆ ಎಂದು ಆರೋಪಿಸಿದ್ದಾರೆ.
ಪಾಕಿಸ್ತಾನದ ಪರ ಸಹಾನುಭೂತಿ ಮಾತನಾಡಿ ಅಖಂಡ ಭಾರತದ ಏಕತೆಯ ನಡುವೆ ಬಿರುಕು ಮೂಡಿಸುವ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಇಂದು ಬೆಳಗಾವಿಯ ಕಾಂಗ್ರೆಸ್ ಸಮಾವೇಶದಲ್ಲಿ ರಾಷ್ಟ್ರಭಕ್ತ ಮಹಿಳೆಯರು ದಿಟ್ಟತನದಿಂದ ಘೋಷಣೆ ಕೂಗುವ ಮೂಲಕ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಇದರಿಂದ ವಿಚಲಿತಗೊಂಡ ಮುಖ್ಯಮಂತ್ರಿಗಳು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಏಕವಚನದಲ್ಲಿ ಸಂಬೋಧಿಸಿ ಕೈ ಮಾಡಲು ಮುಂದಾಗಿದ್ದಾರೆ. ಅಧಿಕಾರ ಮದದಲ್ಲಿ ತೇಲುತ್ತಿರುವ ಸಿದ್ದರಾಮಯ್ಯನವರ ನಡೆ, ನುಡಿಗಳು ಇತ್ತೀಚಿನ ದಿನಗಳಲ್ಲಿ ವಿಪರೀತಕ್ಕೆ ಹೋಗುತ್ತಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕೆಲ ತಿಂಗಳ ಹಿಂದೆ ಸಭೆಯೊಂದರಲ್ಲಿ ದಕ್ಷ ಜಿಲ್ಲಾಧಿಕಾರಿಯೊಬ್ಬರನ್ನು ಕೇವಲವಾಗಿ ಅವಮಾನಿಸಿ, ತಮ್ಮ ಸಂಸ್ಕೃತಿ ಹೀನ ನಡುವಳಿಕೆಯನ್ನು ಸಿದ್ದರಾಮಯ್ಯನವರು ಅನಾವರಣ ಮಾಡಿದ್ದರು. ಅವರ ವರ್ತನೆ ಇಂದು ನಿನ್ನೆಯದಲ್ಲ, ತಮ್ಮ ಸ್ವಕ್ಷೇತ್ರದಲ್ಲಿ ಮಹಿಳೆಯೊಬ್ಬರ ಸೆರಗೆಳೆದು ರೌದ್ರಾವತಾರ ಪ್ರದರ್ಶಿಸಿದ ಘಟನೆ ಇನ್ನೂ ಹಸಿಯಾಗಿಯೇ ಇದೆ. ಅದೇ ರೀತಿ ಮೈಸೂರು ಭಾಗದ ಹಿರಿಯ ರಾಜಕಾರಿಣಿಯಾಗಿದ್ದ ನಂಜನಗೂಡಿನ ದಿವಂಗತ ಎಂ.ಮಹದೇವು ಅವರ ಮೇಲೂ ಹಲ್ಲೆ ನಡೆಸಿದ ಪ್ರಕರಣ ಕೂಡ ಇತ್ತು.
ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತವರಿಗೆ ಅನುಭವದ ಹಿರಿತನ, ನಡುವಳಿಕೆ ಹಾಗೂ ಮಾತುಗಳನ್ನು ಮಾಗಿಸಬೇಕು. ಆದರೆ ಸಿದ್ದರಾಮಯ್ಯನವರ ವಿಷಯದಲ್ಲಿ ಇದು ತಿರುಗು ಮುರುಗಾಗಿದೆ. ದಿನೇ ದಿನೇ ಅವರು ತಮ್ಮ ನಾಲಿಗೆಯ ಮೇಲೆ ಹಿಡಿತ ಕಳೆದುಕೊಳ್ಳುತ್ತಿದ್ದಾರೆ. ಹತಾಶೆಯಿಂದ ಜನರು ಹಾಗೂ ಅಧಿಕಾರಿಗಳ ಮೇಲೆ ಅಹಂಕಾರ ಹಾಗೂ ತೋಳ್ಬಲ ಪ್ರದರ್ಶಿಸುತ್ತಿದ್ದಾರೆ. ಇದು ಅತ್ಯಂತ ದುರ್ದೈವದ ಹಾಗೂ ಖಂಡನೀಯ ವರ್ತನೆ. ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ಬಹುದೊಡ್ಡ ಹಿನ್ನೆಲೆಯಿದ್ದು, ಆ ಸ್ಥಾನದಲ್ಲಿ ಕುಳಿತ ಅನೇಕ ಮಹನೀಯರು ಮುಖ್ಯಮಂತ್ರಿ ಸ್ಥಾನದ ಘನತೆಯನ್ನು ಮೇರುಮಟ್ಟಕ್ಕೆ ಕೊಂಡೊಯ್ದಿದ್ದಾರೆ, ವಿಶ್ವಮಟ್ಟದಲ್ಲಿ ಛಾಪು ಮೂಡಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಕರ್ನಾಟಕ ಎಂದರೆ ಸಜ್ಜನಿಕೆಯ ರಾಜಕಾರಣ, ಸಂಸ್ಕೃತಿ-ಸಂಸ್ಕಾರದ ನೆಲೆಬೀಡು ಎಂಬ ಮಾತಿದೆ, ಆದರೆ ಸಿದ್ದರಾಮಯ್ಯನವರ ವರ್ತನೆಯಿಂದಾಗಿ ಇತಿಹಾಸದ ಪರಂಪರೆಗೆ ಕಪ್ಪು ಮಸಿ ಬಳಿಯುತ್ತಿದೆ. ಕರ್ನಾಟಕದ ಗೌರವ ಹಾಗೂ ಮುಖ್ಯ ಮಂತ್ರಿ ಸ್ಥಾನದ ಘನತೆ ಸಂಪೂರ್ಣ ಕುಗ್ಗುತ್ತಿದೆ. ರಾಷ್ಟ್ರ ಭಕ್ತರೆಂದರೆ ಕೆಂಡಕಾರುವ, ದೇಶ ಸುರಕ್ಷತೆಯ ಬಗ್ಗೆ ಉಡಾಫೆಯ ಮಾತನಾಡುವ ಸಿದ್ದರಾಮಯ್ಯನವರಿಂದಾಗಿ ಇಡೀ ರಾಷ್ಟ್ರ "ಭಾರತದ ಸುಭದ್ರತೆಗೆ" ಒಕ್ಕೊರಲ ದನಿಯಾಗಿ ನಿಂತಿದ್ದರೆ, ಅದಕ್ಕೆ ವ್ಯತಿರಿಕ್ತವಾಗಿ ಕರ್ನಾಟಕದ ಮುಖ್ಯಮಂತ್ರಿ ವರ್ತಿಸುತ್ತಿದ್ದಾರೆ ಎಂದು ವಿಜಯೇಂದ್ರ ದೂರಿದ್ದಾರೆ.
ಸಿಎಂ ಕೂಡಲೇ ಕ್ಷಮೆ ಕೇಳಬೇಕು
ಕರ್ನಾಟಕದ ಜನತೆಯ ದೇಶಾಭಿಮಾನವನ್ನು ಮೆಟ್ಟಿ ನಿಲ್ಲುವ ವರ್ತನೆ ಸಿದ್ದರಾಮಯ್ಯನವರು ತೋರುತ್ತಿದ್ದಾರೆ, ಅದರ ಮುಂದುವರೆದ ಭಾಗ ಬೆಳಗಾವಿಯ ಘಟನೆ ಎಂದಿದ್ದಾರೆ. ಸಿದ್ದರಾಮಯ್ಯನವರ ವಿರುದ್ಧ ಘೋಷಣೆ ಕೂಗುವ ಮೂಲಕ ರಾಷ್ಟ್ರ ಭಕ್ತಿ ಮೆರೆದ ದಿಟ್ಟ ಮಹಿಳೆಯರೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಕರ್ತವ್ಯ ನಿರತ ಪೊಲೀಸ್ ವರಿಷ್ಠಾಧಿಕಾರಿಯ ಮೇಲೆ ದರ್ಪ ತೋರಿ ಅವರ ಮೇಲೆ ಹಲ್ಲೆಗೆ ಮುಂದಾದ ಸಿದ್ದರಾಮಯ್ಯನವರ ವರ್ತನೆ ಇಡೀ ಪೊಲೀಸ್ ಇಲಾಖೆಗೆ ಮಾಡಿದ ಅವಮಾನ. ಈ ಹಿನ್ನೆಲೆಯಲ್ಲಿ ಅವಮಾನಕ್ಕೊಳಗಾದ ಪೊಲೀಸ್ ಅಧಿಕಾರಿ ಹಾಗೂ ಇಡೀ ಪೊಲೀಸ್ ಇಲಾಖೆಗೆ ಸಿದ್ದರಾಮಯ್ಯನವರು ಕ್ಷಮೆಯಾಚಿಸಬೇಕು ಎಂದು ವಿಜಯೇಂದ್ರ ಒತ್ತಾಯಿಸಿದ್ದಾರೆ.

ನಿಮ್ಮ ದರ್ಪ ದೌಲತ್ತು ದುರಹಂಕಾರದಿಂದಲೇ ರಾಜ್ಯದ ಪೊಲೀಸ್ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಇನ್ನೂ ಪೊಲೀಸರ ಮೇಲಿನ ನಿಮ್ಮ ದರ್ಪ ಕಡಿಮೆ ಆಗಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದ ಪೊಲೀಸ್ ಠಾಣೆಗಳು ಕೆಪಿಸಿಸಿ ಕಚೇರಿಗಳಾಗಿ ಬದಲಾಗಿವೆ. ರಾಜ್ಯದ ದಕ್ಷ ಪೊಲೀಸರು ಕಾಂಗ್ರೆಸ್ ಸರ್ಕಾರದ ಈ ತುಘಲಕ್ ದರ್ಬಾರ್ ಅನ್ನು ಸಹಿಸುಕೊಳ್ಳುವ ಅಗತ್ಯೆ ಇಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನದ ಪ್ರಕಾರ ಕೆಲಸ ಮಾಡಿ, ಈ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕಿದೆ ಎಂದು ಬಿಜೆಪಿ ಖಂಡಿಸಿದೆ.
ಪಾಕಿಸ್ತಾನದ ಪರ, ಉಗ್ರರ ಪರ ಪ್ರೀತಿ ತೋರಿಸುವ ಸಿದ್ದರಾಮಯ್ಯ ಅವರಿಗೂ ಕಾಶ್ಮೀರದ ಸ್ಥಳೀಯ ದೇಶ ದ್ರೋಹಿಗಳಿಗೂ ಏನು ವ್ಯಾತ್ಯಾಸ? ಜನರು ಬೀದಿಗಿಳಿದು ಪಾಠ ಕಲಿಸುವ ಸಮಯ ಬಂದಿದೆ. ಬೆಳಗಾವಿಯಲ್ಲಿ ಸಿದ್ದರಾಮಯ್ಯ ಭಾಷಣ ಮಾಡುತ್ತಿರುವಾಗಲೇ ಬಿಜೆಪಿ ಮಹಿಳಾ ಕಾರ್ಯಕರ್ತರು ಕಪ್ಪು ಬಾವುಟ ತೋರಿಸಿ ಪ್ರತಿಭಟನೆ ಮಾಡಿ ಬಿಸಿ ಮುಟ್ಟಿಸಿದ್ದಾರೆ. ಜನರು ಕಾಂಗ್ರೆಸ್ ವಿರುದ್ಧ ದಂಗೆ ಏಳುವವರೆಗೂ ಪಾಠ ಕಲಿಯುವುದಿಲ್ಲ ಎಂದು ದೂರಿದೆ.

ರಾಜ್ಯದ ಗೌರವ ಹರಾಜು: ಸಿಟಿ ರವಿ
ನೀವು ಸರ್ವಾಧಿಕಾರಿಯಲ್ಲ, ನಿಮ್ಮ ನಡವಳಿಕೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ತಕ್ಕ ನಡವಳಿಕೆ ಅಲ್ಲ. ಕರ್ನಾಟಕ ರಾಜ್ಯದ ಗೌರವವನ್ನು ನೀವು ಹರಾಜು ಹಾಕಿದ್ದೀರಿ. ಬಹಳ ಹಿಂದೆ, ಯಾವಾಗಲೋ ಬಿಹಾರದಲ್ಲೊ ಉತ್ತರಪ್ರದೇಶದಲ್ಲೊ ಕೇಳುತ್ತಿದ್ದ ಸುದ್ದಿಯನ್ನು ಇಂದು ಕರ್ನಾಟಕದಲ್ಲಿ ಕೇಳುತ್ತಿದ್ದೇವೆ. ಕರ್ನಾಟಕದ ಸಭ್ಯ ಸಂಸ್ಕೃತಿಗೆ ಅಪಮಾನ ಮಾಡಿದ್ದೀರಿ. ನಿಮ್ಮ ವರ್ತನೆ ಗೂಂಡಾಗಳ ವರ್ತನೆಯಂತೆ ಇತ್ತು. ನಿಮ್ಮ ಸಂವಿಧಾನ ವಿರೋಧಿ ನಡವಳಿಕೆಗೆ ಧಿಕ್ಕಾರವಿರಲಿ, ನಿಮ್ಮ ಪ್ರಜಾಪ್ರಭುತ್ವ ವಿರೋಧಿ ನಡವಳಿಕೆಗೆ ಧಿಕ್ಕಾರವಿರಲಿ, ಈ ಅಧಿಕಾರ ಮದದ ಅಹಂಕಾರ ಒಂದು ದಿನ ಕೊನೆಯಾಗಲೇಬೇಕು ಎಂದು ಬಿಜೆಪಿ ನಾಯಕ ಸಿ.ಟಿ.ರವಿ ಎಚ್ಚರಿಸಿದ್ದಾರೆ.
ಕರ್ತವ್ಯ ನಿರತ ಹೆಚ್ಚುವರಿ ಎಸ್.ಪಿ ಮೇಲೆ ಕೈಕೈ ಮಿಲಾಯಿಸುವ ಹಂತಕ್ಕೆ ಮುಖ್ಯಮಂತ್ರಿಗಳು ಹೋಗಿದ್ದು ಅಕ್ಷಮ್ಯ. ಅಧಿಕಾರಿಗಳೊಂದಿಗೆ ಸೌಜನ್ಯತೆಯಿಂದ ವರ್ತಿಸಬೇಕಾಗಿದ್ದ ಮುಖ್ಯಮಂತ್ರಿಗಳು ಆಕ್ರಮಣಕಾರಿಯಾಗಿ, ಅನುಚಿತವಾಗಿ ವರ್ತಿಸುತ್ತಿರುವುದು ತರವಲ್ಲ. ಈ ನಿರಂಕುಶ ನಡವಳಿಕೆ ನಿಜಕ್ಕೂ ಖಂಡನಾರ್ಹ. ಹಗಲಿರುಳು ಟೊಂಕ ಕಟ್ಟಿ ದುಡಿಯುವ ಪೊಲೀಸರ ಮನೋಸ್ಥೈರ್ಯವನ್ನು ಹೆಚ್ಚಿಸುವ ಪ್ರಯತ್ನ ಮಾಡಬೇಕೆ ಹೊರತು, ಸಾರ್ವಜನಿಕವಾಗಿ ಅವರಿಗೆ ಅವಮಾನಿಸುವ ಕೆಲಸ ಆಗಬಾರದು. ಸಿದ್ದರಾಮಯ್ಯನವರು ಕೂಡಲೇ ಅಧಿಕಾರಿಗೆ ಕ್ಷಮೆಯಾಚಿಸಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಆಗ್ರಹಿಸಿದ್ದಾರೆ.












Click it and Unblock the Notifications