ರಾಹುಲ್ ಗಾಂಧಿ ಪಾದಯಾತ್ರೆ ಮಾಡಿದ ಸ್ಥಳದಲ್ಲಿ ಬಿಜೆಪಿ ಜಯಭೇರಿ: ಬಿ.ಎಸ್.ಯಡಿಯೂರಪ್ಪ
ವಿಜಯ ಸಂಕಲ್ಪಯಾತ್ರೆಯಲ್ಲಿ ರಾಹುಲ್ ಗಾಂಧಿ ಪಾದಯಾತ್ರೆ ಕುರಿತು ಬಿ ಎಸ್ ಯಡಿಯೂರಪ್ಪ ವಾಗ್ದಾಳಿ ನಡೆಸಿದರು.
ಬೆಳಗಾವಿ,ಮಾರ್ಚ್ 8: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪಾದಯಾತ್ರೆ ಮಾಡಿದ ಸ್ಥಳದಲ್ಲಿ ಬಿಜೆಪಿ ಜಯಭೇರಿ ದಾಖಲಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಮುಖಂಡ ಬಿ.ಎಸ್.ಯಡಿಯೂರಪ್ಪ ಅವರು ವಿಶ್ವಾಸ ವ್ಯಕ್ತಪಡಿಸಿದರು.
ರಾಯಭಾಗದಲ್ಲಿ ಇಂದು ವಿಜಯ ಸಂಕಲ್ಪಯಾತ್ರೆಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಪಾದಯಾತ್ರೆ ಬಳಿಕ ಬಿಜೆಪಿ ಮೂರು ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿದೆ. ನರೇಂದ್ರ ಮೋದಿ ಎಲ್ಲಾ ಧರ್ಮದವರನ್ನ ಸಮಾನವಾಗಿ ನೋಡಿದ್ದಾರೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರನ್ನೂ ಸಮಾನವಾಗಿ ನೋಡಿದ್ದಾರೆ. ಒಂದು ದಿನವೂ ಅವರು ವಿಶ್ರಾಂತಿ ಪಡೆದಿಲ್ಲ ಎಂದು ತಿಳಿಸಿದರು.

ಇನ್ನೂ ಈ ವೇಳೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಮಾತನಾಡಿ, ಬಿಜೆಪಿ ಸರಕಾರಗಳು ಕಿಸಾನ್ ಸಮ್ಮಾನ್ ಯೋಜನೆ, ಜನೌಷಧಿ ಮತ್ತಿತರ ಹಲವು ಯೋಜನೆಗಳನ್ನು ಜನಹಿತಕ್ಕಾಗಿ ಜಾರಿಗೊಳಿಸಿವೆ. ರಾಜ್ಯದಲ್ಲೂ ವಿದ್ಯಾನಿಧಿ ಯೋಜನೆ ಅನುಷ್ಠಾನಕ್ಕೆ ತರಲಾಗಿದೆ.
ಕಾಂಗ್ರೆಸ್ಸಿಗರು ಸುಳ್ಳಿನ ಸರದಾರರು ಎಂದು ಟೀಕಿಸಿದ ಅವರು, ಡಾ. ಅಂಬೇಡ್ಕರರಿಗೆ ಜೀವಂತ ಇದ್ದಾಗ ಮತ್ತು ಸತ್ತ ಬಳಿಕವೂ ಕಾಂಗ್ರೆಸ್ ಅವಮಾನ ಮಾಡಿತ್ತು. ಆದರೆ, ಬಿಜೆಪಿ, ಬಾಬಾ ಸಾಹೇಬರಿಗೆ ಗೌರವ ನೀಡಲು ಪಂಚತೀರ್ಥಗಳನ್ನು ಅಭಿವೃದ್ಧಿ ಪಡಿಸಿದೆ. ರಾಜ್ಯದಲ್ಲೂ ಅವರು ಭೇಟಿ ಕೊಟ್ಟ ಸ್ಥಳಗಳನ್ನು ಅಭಿವೃದ್ಧಿ ಪಡಿಸಲಿದೆ ಎಂದು ತಿಳಿಸಿದರು.

ಮೀಸಲಾತಿ ವಿಚಾರದಲ್ಲೂ ಕಾಂಗ್ರೆಸ್ ಸುಳ್ಳು ಹೇಳುತ್ತ ಬಂದಿದೆ. ಆದರೆ, ನಾನು ನುಡಿದಂತೆ ನಡೆದಿದ್ದೇವೆ ಎಂದು ತಿಳಿಸಿದರು. ಬಿಜೆಪಿ ಸರಕಾರಗಳ ಜನಪರ ಕಾರ್ಯಗಳನ್ನು ಜನರಿಗೆ ತಿಳಿಸಿ ಬಿಜೆಪಿ ಸರಕಾರ ಮತ್ತೊಮ್ಮೆ ಬರುವಂತೆ ಶ್ರಮಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು. ಬಳಿಕ ವಿವಿಧೆಡೆ ರೋಡ್ ಷೋ ನಡೆಯಿತು.ಕೇಂದ್ರದಲ್ಲಿ ಮೋದಿಯವರ ಸಾಧನೆಯ ಹಾದಿಯಲ್ಲಿ ರಾಜ್ಯದ ಸಾಧನೆ ನೊಡಿದ ಜನತೆ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರಲು ರಾಜ್ಯದ ಜನತೆ ಸಂಕಲ್ಪ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಬೆಳಗಾವಿ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ತಾಯಿ ಮಗನ ಕಾಂಗ್ರೆಸ್ ಪಕ್ಷ ಸುಳ್ಳು ಹೇಳುವುದನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿದೆ. ಬಾಯಿ ಚಪಲಕ್ಕೆ ರಾಷ್ಟ್ರವನ್ನೇ ಅವಮಾನ ಮಾಡುವದನ್ನು ಕಲಿತಿರುವ ಕಾಂಗ್ರೆಸ್ ಪಕ್ಷಕ್ಕೆ ಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸಲು ಕರೆ ನೀಡಿದರು. ದೇಶದ ಜನತೆ ಒಗ್ಗಟ್ಟಿನಿಂದ ಬ್ರಿಟಿಷ್ ರನ್ನು ದೇಶ ಬಿಟ್ಟ ಓಡಿಸಿದರೆ ರಾಹುಲ್ ಗಾಂಧಿ ಲಂಡನ್ ನಲ್ಲಿ ಮಾತನಾಡಿ ಭಾರತದ ಪ್ರಜಾಪ್ರಭುತ್ವ ಉಳಿವಿಗಾಗಿ ನಮ್ಮ ದೇಶಕ್ಕೆ ಬನ್ನಿ ಎಂದಿದ್ದಾರೆ. ಈ ಮೂಲಕ ತನ್ನ ಅಪ್ರಬುದ್ದತೆ ತೋರಿಸಿರುವ ರಾಹುಲ್ ಗಾಂಧಿಗೆ ನಾಚಿಕೆ ಆಗಬೇಕೆಂದು ಕಿಡಿಕಾರಿದರು.












Click it and Unblock the Notifications