Jagdish Shettar: ಟಿಕೆಟ್ ಸಿಗದಿದ್ದಕ್ಕೆ ಶೆಟ್ಟರ್ ಅಸಮಾಧಾನ, ಪಕ್ಷೇತರ ಸ್ಪರ್ಧೆ ಬಗ್ಗೆ ಎಚ್ಚರಿಕೆ: ಇಂದು ದೆಹಲಿಗೆ ಭೇಟಿ
ಬೆಂಗಳೂರು, ಏಪ್ರಿಲ್ 12: ವಿಧಾನಸಭಾ ಚುನಾವಣೆ 2023ರ ಹಿನ್ನೆಲೆಯಲ್ಲಿ ಆಡಳಿತ ಪಕ್ಷ ಬಿಜೆಪಿಯು ಮೊದಲ ಹಂತದಲ್ಲಿ 189 ಅಭ್ಯರ್ಥಿಗಳ ಹೆಸರುವುಳ್ಳ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ. ಇದರಿಂದ ಹುಬ್ಬಳ್ಳಿ-ಧಾರವಾಡ ಮತ್ತು ರಾಮದುರ್ಗ ವಿಧಾನಸಭಾ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳ ಪ್ರಬಲ ಟಿಕೆಟ್ ಆಕಾಂಕ್ಷಿಗಳು ಅಸಮಧಾನಗೊಂಡಿದ್ದಾರೆ.
ಬಿಜೆಪಿಯ ಮೊದಲ ಪಟ್ಟಿಯಲ್ಲಿ ಹುಬ್ಬಳ್ಳಿ ಧಾರವಾಡ ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ಘೋಷಣೆಯಾಗಿಲ್ಲ. ಈ ಕ್ಷೇತ್ರವನ್ನು ಮಾಜಿ ಮುಖ್ಯಮಂತ್ರಿಗಳು ಆಗಿರುವ ಕ್ಷೇತ್ರದ ಶಾಸಕ ಜಗದೀಶ್ ಶೆಟ್ಟರ್ ಪ್ರತಿನಿಧಿಸುತ್ತಾರೆ. ಅವರೇ ಈ ಬಾರಿ ಇಲ್ಲಿಂದಲೇ ಸ್ಪರ್ಧಿಸುವ ಬಯಕೆ ಹೊಂದಿದ್ದರು. ಮೊದಲಪಟ್ಟಿಯಲ್ಲಿ ಏಕೆ ತಮ್ಮ ಹೆಸರು ಘೋಷಣೆ ಆಗಿಲ್ಲ ಎಂಬುದರ ಬಗ್ಗೆ ಅವರು ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ.

ಈ ಬೆನ್ನಲ್ಲೇ ಅವರಿಗೆ ಬಿಜೆಪಿ ಜೈಕಮಾಂಡ್ ದೆಹಲಿಗೆ ಬರುವಂತೆ ಬುಲಾವ್ ನೀಡಿದೆ ಎನ್ನಲಾಗಿದೆ. ಹೀಗಾಗಿ ಅವರು ಇಂದು ಬುಧವಾರ ರಾಷ್ಟ್ರ ರಾಜಧಾನಿ ದೆಹಲಿಗೆ ತೆರಳಿ ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ಟಿಕೆಟ್ ಕುರಿತು ಮಾತುಕತೆ ನಡೆಸಲಿದ್ದಾರೆ.
ಒಂದು ವೇಳೆ ಈ ಭಾರಿ ಟಿಕೆಟ್ ನೀಡದೇ ಹೊಸ ಮುಖಗಳಿಗೆ ಮಣೆ ಹಾಕಿದ್ದೇ ಆದಲ್ಲಿ ಜಗದೀಶ್ ಶೆಟ್ಟರ್ ಬಂಡಾಯ ಏಳುವ ಮುನ್ಸೂಚನೆ ನೀಡಿದ್ದಾರೆ. ಮೊದಲ ಪಟ್ಟಿ ಘೋಷಣೆಯಾದ ಬಳಿಕ ಅವರು ಪಕ್ಷೇತರ ಸ್ಪರ್ಧೆ ಮಾಡುವ ಬಗ್ಗೆ ಹೈಕಮಾಂಡ್ ಗೆ ಎಚ್ಚರಿಕೆ ನೀಡಿದ್ದರು. ಅದರ ಬೆನ್ನಲ್ಲೆ ಹೈಕಮಾಂಡ್ ನಾಯಕರು ಅವರನ್ನು ದೆಹಲಿಗೆ ಆಹ್ವಾನಿಸಿದ್ದಾರೆ. ಬುಧವಾರ ಹುಬ್ಬಳ್ಳಿ-ಧಾರವಾಡ ವಿಧಾನಸಭಾ ಕ್ಷೇತ್ರ ವಿಚಾರವಾಗಿ ಒಂದಷ್ಟು ಬೆಳವಣಿಗೆಗಳು ನಡೆಯುವ ಸಾಧ್ಯತೆ ಇದೆ.
ಹುಬ್ಬಳ್ಳಿ-ಧಾರವಾಡ ಕ್ಷೇತ್ರದಿಂದ ಬಿಜೆಪಿ ಶಾಸಕ ಜಗದೀಶ್ ಶೆಟ್ಟರ್ (67) ಸತತವಾಗಿ ಆರು ಬಾರಿ ಗೆದ್ದಿದ್ದಾರೆ. ನಾನು 6 ಸಲ ಚುನಾವಣೆಯಲ್ಲಿ 21,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಚುನಾಯಿತನಾಗಿದ್ದೇನೆ. ನನ್ನ ವಿರುದ್ಧ ಆರೋಪಗಳಿಲ್ಲ. ಹೀಗಿದ್ದರೂ ಏಕೆ ಚುನಾವಣೆಯಿಂದ ಹೊರಗಿಡಲಾಗಿದೆ?. ಚುನಾವಣೆ ಸಂಬಂಧ ಈಗಾಗಲೇ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದೇನೆ. ಟಿಕೆಟ್ ನೀಡದಿದ್ದರೂ ನಾನು ಕ್ಷೇತ್ರದಲ್ಲಿ ಪ್ರಚಾರ ಮುಂದುವರಿಸುತ್ತೇನೆ. ಜೊತೆಗೆ ಬರಲಿರುವ ಚುನವಣೆಯಲ್ಲಿ ನಾನು ಸ್ಪರ್ಧಿಸಿಯೇ ತಿರುತ್ತೇನೆ ಎಂದು ಅವರು ಹೇಳಿದ್ದಾರೆ.

ಹೈಕಮಾಂಡ್ ಆದೇಶ ಧಿಕ್ಕರಿಸಿದ ಶೆಟ್ಟರ್
ಈ ಹಿಂದೆ ಬಿಜೆಪಿ ಹೈಕಮಾಂಡ್ ನಾಯಕರು ಮುಂಬರುವ ಚುನಾವಣೆಯಲ್ಲಿ ಹೊಸ ಮುಖಗಳಿಗೆ ಅವಕಾಶ ಮಾಡಿಕೊಡುವಂತೆ ಶೆಟ್ಟರ್ ಬಳಿಕ ಮನವಿ ಮಾಡಿತ್ತು. ಇದರಿಂದ ಬೇಸರಗೊಂಡಿದ್ದ ಬಿಜೆಪಿ ನಾಯಕ ಶೆಟ್ಟರ್ ಸುದ್ದಿಗೋಷ್ಠಿ ನಡೆಸಿ ತಮ್ಮ ಅಸಮಾಧಾನ ಹೊರ ಹಾಕಿದ್ದರು. ಟಿಕೆಟ್ ನೀಡದಿದ್ದರೂ ಸ್ಪರ್ಧೆ ಮಾಡುತ್ತೇನೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸ್ವತಂತ್ರವಾಗಿ ಆಯ್ಕೆ ಮಾಡಲು ಎಚ್ಚರಿಕೆಯ ಮತ್ತು ಬಂಡಾಯ ಗಂಟೆ ಮೊಳಗಿಸಿದ್ದರು. ಆದರೆ ದೆಹಲಿ ನಾಯಕರು ಅವರಿಗೆ ಮಣಿದಿಲ್ಲ ಎನ್ನಲಾಗಿದೆ.
ಟಿಕೆಟ್ ಕೈತಪ್ಪಿದವರಿಗೆ ಕರೆ ಮಾಡಿದ ಬಿಎಸ್‌ವೈ
ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ ಮತ್ತು ಲಕ್ಷ್ಮಣ ಸವದಿ ಅವರಿಗೆ ಟಿಕೆಟ್ ಘೋಷಣೆ ಆಗಿಲ್ಲ. ಈ ಮಧ್ಯೆ ಬುಧವಾರ ದೆಹಲಿಗೆ ಬರುವಂತೆ ಹೈಕಮಾಂಡ್ ಜಗದೀಶ್ ಶೆಟ್ಟರ್‌ಗೆ ಆಹ್ವಾನ ನೀಡಿದೆ. ಕೆ.ಎಸ್. ಈಶ್ವರಪ್ಪ ಮತ್ತು ಲಕ್ಷ್ಮಣ ಸವದಿಗೆ ಯಡಿಯೂರಪ್ಪ ಅವರು ಕರೆ ಮಾಡಿದ್ದಾರೆ. ದೆಹಲಿ ಭೇಟಿ ನಂತರವೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಶೆಟ್ಟರ್ ಭೇಟಿ ಮಾಡಲಿದ್ದಾರೆ. ಎರಡು ಪಟ್ಟಿಯಲ್ಲಿ ತಮಗೆ ಟಿಕೆಟ್ ಸಿಗುವ ಬಗ್ಗೆ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications