ಉಚಿತ ಭರವಸೆ ವಿರೋಧಿಸಿ, ಉಚಿತ ಕೊಡುಗೆ ನೀಡಿದ ಬಿಜೆಪಿ!
ಬೆಂಗಳೂರು: ಬಿಜೆಪಿ ನಾಯಕರು ಯಾವುದನ್ನ ಉಗ್ರವಾಗಿ ವಿರೋಧ ಮಾಡಿದ್ದರೋ ಅದನ್ನೇ ಈಗ ಅನುಸರಿಸಿದ್ದಾರೆ. ಬಿಜೆಪಿ ನಾಯಕರು ಯಾವುದರಿಂದ 'ದೇಶ ಹಾಳಾಗುತ್ತೆ..' ಅಂತಾ ಘೋಷಣೆ ಹೊರಡಿಸಿದ್ರೋ ಅದನ್ನೇ ಮಾಡಿದ್ದಾರೆ. ಇಷ್ಟುದಿನ ಉಚಿತ ಯೋಜನೆಗಳ ವಿರುದ್ಧ ಮಾತನಾಡಿದ್ದ ಕೇಸರಿ ಪಡೆ ನಾಯಕರು, ತಮ್ಮ ಪ್ರಣಾಳಿಕೆಯಲ್ಲಿ ಉಚಿತ ಉಡುಗೊರೆಗಳ ದೊಡ್ಡ ಪಟ್ಟಿಯನ್ನೇ ನೀಡಿದ್ದಾರೆ.
ಬಹುನಿರೀಕ್ಷಿತ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಆಗಿದೆ. ಬೆಂಗಳೂರಿನ ಶಾಂಗ್ರಿ ಲಾ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದರೆ ಬಿಜೆಪಿ ಏನೆಲ್ಲಾ ಕೆಲಸ ಮಾಡಲಿದೆ ಎಂಬುದರ ಪಟ್ಟಿ ಸಿಕ್ಕಿದೆ. ಇಲ್ಲಿ ಸಂಪೂರ್ಣವಾಗಿ ಹೈಲೈಟ್ ಆಗಿರೋದು ಉಚಿತ ಭರವಸೆಗಳು. ಇಷ್ಟುದಿನ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ನೀಡಿದ್ದ ಉಚಿತ ಯೋಜನೆಗಳನ್ನ ವಿರೋಧಿಸಿದ್ದ ಬಿಜೆಪಿ ನಾಯಕರು ಈಗ ಅದೇ ಉಚಿತ ಉಡುಗೊರೆಗಳ ಅಸ್ತ್ರವನ್ನೇ ಚುನಾವಣೆಗೆ ಬಳಸಿಕೊಂಡಿದ್ಧಾರೆ.

BJPಯಿಂದ ಏನೆಲ್ಲಾ ಉಚಿತ ಯೋಜನೆ?
ಈ ಬಾರಿ ಪ್ರಣಾಳಿಕೆಯಲ್ಲಿ ಬಿಜೆಪಿ, ಬಿಪಿಎಲ್ ಕುಟುಂಬಕ್ಕೆ ವರ್ಷಕ್ಕೆ 3 ಉಚಿತ ಅಡುಗೆ ಅನಿಲ ಸಿಲಿಂಡರ್ ನೀಡುವ ಭರವಸೆ ನೀಡಿದೆ. ಜೊತೆಗೆ BPL ಪಡಿತರ ಚೀಟಿ ಹೊಂದಿರುವವರಿಗೆ ಪ್ರತಿ ದಿನ ಅರ್ಧ ಲೀಟರ್ ನಂದಿನಿ ಹಾಲು ಉಚಿತ, 5 ಕೆಜಿ ತಿಂಗಳಿಗೆ ಸಿರಿಧಾನ್ ನೀಡುವುದಾಗಿ ಘೋಷಣೆ ಮಾಡಿದೆ. ಅಲ್ಲದೆ ಪ್ರತಿ ವಾರ್ಡ್‌ನಲ್ಲಿ ಅಟಲ್ ಆಹಾರ ಕೇಂದ್ರಗಳನ್ನು ಸ್ಥಾಪನೆ ಮಾಡುವುದಾಗಿ ತಿಳಿಸಿದ್ದು, ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಊಟ ನೀಡುವುದಾಗಿ ತಿಳಿಸಿದೆ ಬಿಜೆಪಿ ಪಕ್ಷ. ಹಾಗೇ ಸರ್ವರಿಗೂ ಸೂರು ಯೋಜನೆಯಡಿ ಮನೆ ಇಲ್ಲದ ಎಲ್ಲರಿಗೂ ಮನೆ ಕಟ್ಟಿಕೊಡುವ ಭರವಸೆ ನೀಡಲಾಗಿದೆ.
ಮಹಿಳೆಯರಿಗೆ 10,000 ರೂಪಾಯಿ ಡೆಪಾಸಿಟ್!
ಇಷ್ಟಕ್ಕೇ ಬಿಜೆಪಿಯ ಉಚಿತ ಉಡುಗೊರೆಗಳ ಪಟ್ಟಿ ನಿಂತಿಲ್ಲ, ಇದರ ಜೊತೆಗೆ ಒನಕೆ ಓಬವ್ವ ಸಾಮಾಜಿಕ ನ್ಯಾಯ ನಿಧಿ ಯೋಜನೆಯಡಿ ಎಸ್‌ಸಿ, ಎಸ್‌ಟಿ ಮಹಿಳೆಯರಿಗೆ 10000 ರೂಪಾಯಿ ಫಿಕ್ಸೆಡ್ ಡೆಪಾಸಿಟ್ ಮಾಡುವುದಾಗಿ ಬಿಜೆಪಿ ಪಕ್ಷ ಆಶ್ವಾಸನೆ ನೀಡಿದೆ. ಹಿರಿಯ ನಾಗರೀಕರಿಗೆ ಪ್ರತಿ ವರ್ಷ ಉಚಿತ ವೈದ್ಯಕೀಯ ತಪಾಸಣೆಯನ್ನು ಒದಗಿಸುವುದಾಗಿ ಹೇಳಿದೆ. ತಿರುಪತಿ, ಅಯೋಧ್ಯೆ, ಕಾಶಿ, ರಾಮೇಶ್ವರ, ಕೊಲ್ಹಾಪುರ, ಶಬರಿಮಲೆ ಮತ್ತು ಕೇದಾರನಾಥದಂತಹ ಪುಣ್ಯಕ್ಷೇತ್ರಗಳಿಗೆ ಪ್ರವಾಸ ಕೈಗೊಳ್ಳುವ ಬಡ ಕುಟುಂಬಗಳಿಗೆ 25 ಸಾವಿರ ರೂಪಾಯಿ ನೀಡುವ ಭರವಸೆ ನೀಡಿದೆ ಬಿಜೆಪಿ.
ಪಿಎಂ ಮೋದಿ ಮಾತಿಗೆ ವಿರುದ್ಧವಾಗಿದೆ ಪ್ರಣಾಳಿಕೆ!
ಇತ್ತೀಚೆಗಷ್ಟೇ ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರ ಜೊತೆ ಪ್ರಧಾನಿ ಮೋದಿ ಸಭೆ ನಡೆಸಿದ್ದರು. ಈ ವರ್ಚುವಲ್ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ವಿರೋಧ ಪಕ್ಷಗಳ ಉಚಿತ ಉಡುಗೊರೆ ಬಗ್ಗೆ ಆಕ್ರೋಶ ವ್ಯಕ್ತಡಿಸಿದ್ದರು. ಅಲ್ಲದೆ ಉಚಿತ ಕೊಡುಗೆಗಳಿಂದ ರಾಜ್ಯಗಳು ಸಾಲದ ಸುಳಿಯಲ್ಲಿ ಮುಳುಗುತ್ತಿವೆ ಎಂದು ಪ್ರಧಾನಿ ಮೋದಿ ಬೇಸರ ವ್ಯಕ್ತಪಡಿಸಿದ್ದರು. ದೇಶ ಮತ್ತು ಸರ್ಕಾರಗಳನ್ನ ಹೀಗೆ ನಡೆಸಲು ಆಗಲ್ಲ ಎಂದು ಒತ್ತಿ ಹೇಳಿದ್ದರು ಪ್ರಧಾನಿ. ಆದರೆ ಈಗ ನೋಡಿದರೆ ಬಿಜೆಪಿ ಪ್ರಣಾಳಿಕೆ ಪಿಎಂ ಮೋದಿ ಅವರ ಆಶಯಕ್ಕೆ ವಿರುದ್ಧವಾಗಿದೆಯೇ? ಎಂಬ ಅನುಮಾನ ಮೂಡಿದೆ.
ಗುಜರಾತ್ ಚುನಾವಣೆಯಲ್ಲೂ ವಾಗ್ದಾಳಿ
ಕರ್ನಾಟಕ ಚುನಾವಣೆ ಮಾತ್ರವಲ್ಲ ಗುಜರಾತ್ ಚುನಾವಣೆಯಲ್ಲಿ ಕೂಡ ಉಚಿತ ಉಡುಗೊರೆಗಳ ವಿರುದ್ಧ ಬಿಜೆಪಿ ಭಾರಿ ಪ್ರಹಾರ ನಡೆಸಿತ್ತು. ಆದರೆ ಕರ್ನಾಟಕ ಚುನಾವಣೆಯಲ್ಲಿ ಫ್ರೀ-ಗಿಫ್ಟ್ ಕೊಟ್ಟಿರೋದು ಯಾಕೆ? ಎಂಬ ಪ್ರಶ್ನೆಯನ್ನ ಈಗ ವಿರೋಧ ಪಕ್ಷದ ನಾಯಕರು ಕೇಳುತ್ತಿದ್ದಾರೆ. ಈ ಮೂಲಕ ಕರ್ನಾಟಕ ಚುನಾವಣೆಯಲ್ಲಿ ವಿರೋಧ ಪಕ್ಷಗಳಿಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ. ಇದೇ ಅಸ್ತ್ರ ಹಿಡಿದುಕೊಂಡು ಬಿಜೆಪಿ ವಿರುದ್ಧ ವಾಗ್ದಾಳಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಸಿದ್ಧತೆ ನಡೆಸಿದ್ದಾರೆ.
ಅಟಲ್ ಆಹಾರ ಕೇಂದ್ರಗಳ ಸ್ಥಾಪನೆ!
ಈಗಾಗಲೇ ರಾಜ್ಯದ ಬಹುತೇಕ ಪ್ರದೇಶದಲ್ಲಿ ಇಂದಿರಾ ಕ್ಯಾಂಟಿನ್ ಕಾರ್ಯನಿರ್ವಹಿಸುತ್ತಿವೆ. ಈ ನಡುವೆ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಬಹುತೇಕ ಇದೇ ರೀತಿ ಯೋಜನೆಯನ್ನ ಪ್ರಕಟಿಸಿದೆ. ಪ್ರತಿ ವಾರ್ಡ್‌ನಲ್ಲಿ ಅಟಲ್ ಆಹಾರ ಕೇಂದ್ರಗಳನ್ನ ಸ್ಥಾಪನೆ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಆಶ್ವಾಸನೆ ನೀಡಿದೆ ಬಿಜೆಪಿ. ಹೀಗೆ ಉಚಿತ ಯೋಜನೆಗಳನ್ನು ವಿರೋಧಿಸುತ್ತಾ, ಅದನ್ನೇ ತಮ್ಮ ಚುನಾವಣಾ ಅಸ್ತ್ರ ಮಾಡಿಕೊಂಡಿದ್ದ ಬಿಜೆಪಿ ದಿಢೀರ್ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಉಚಿತ ಕೊಡುಗೆಗಳ ಭಾರಿ ಸಮೂಹವನ್ನೇ ಘೋಷಿಸಿದ್ದು ಯಾಕೆ? ಎಂಬ ಪ್ರಶ್ನೆ ಜನರನ್ನ ಬಿಟ್ಟೂ ಬಿಡದೆ ಕಾಡ್ತಿದೆ.
ಬೆಲೆ ಏರಿಕೆ ಜೊತೆ ಮತ್ತೊಂದು ಅಸ್ತ್ರ?
ಇನ್ನು ಇದೀಗ ಬಿಜೆಪಿ ಉಚಿತ ಉಡುಗೊರೆಗಳನ್ನ ತನ್ನ ಪ್ರಣಾಳಿಕೆಯಲ್ಲಿ ಪ್ರಕಟ ಮಾಡಿರುವ ಹಿನ್ನೆಲೆಯಲ್ಲಿ ವಿಪಕ್ಷ ನಾಯಕರಿಗೆ ಎರಡೆರಡು ಅಸ್ತ್ರ ಸಿಕ್ಕಂತಾಗಿದೆ. ಈಗಾಗಲೇ ಬಿಜೆಪಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಬೆಲೆ ಏರಿಕೆ ವಿಚಾರದಲ್ಲಿ ಭಾರಿ ಪ್ರತಿಭಟನೆ ನಡಿಸಿದ್ದವು ವಿರೋಧ ಪಕ್ಷಗಳು. ಮತ್ತೊಂದು ಕಡೆ ತಮ್ಮ ಫ್ರೀ ಗಿಫ್ಟ್ ಬಗ್ಗೆ ಬಿಜೆಪಿ ನಾಯಕರು ನಡೆಸುತ್ತಿದ್ದ ಆರೋಪಕ್ಕೂ ಆಕ್ರೋಶಗೊಂಡಿದ್ದರು ವಿಪಕ್ಷ ನಾಯಕರು. ಈಗ ಬೆಲೆ ಏರಿಕೆ ಜೊತೆಗೆ ಬಿಜೆಪಿ ಕೂಡ ಉಚಿತ ಉಡುಗೊರೆ ಘೋಷಣೆ ಹೊರಡಿಸಿರುವುದು ವಿಪಕ್ಷಗಳಿಗೆ ಡಬಲ್ ಅಸ್ತ್ರ ನೀಡಿದಂತಾಗಿದೆ.
ಜಾಹೀರಾತು ಮೂಲಕ ವಿಪಕ್ಷಗಳ ಶಾಕ್!
ಬಿಜೆಪಿ ವರಿಷ್ಠರು, ಕೇಂದ್ರ ನಾಯಕರು ಪ್ರಚಾರಕ್ಕೆ ಬಂದ ತಕ್ಷಣ ಬದಲಾಗಿದೆ ಅಂತಾ ಏನು ಇಲ್ಲ. ಯಾಕಂದ್ರೆ ಈಗಲೂ ಜನರ ಮನಸ್ಸಿನಲ್ಲಿ ಬೆಲೆ ಏರಿಕೆ ಆಕ್ರೋಶ ಇದೆ. ಅದರಲ್ಲೂ ಕಾಂಗ್ರೆಸ್ ಜನರ ಆಕ್ರೋವನ್ನು ಜಾಹೀರಾತು ಮೂಲಕ ಡಬಲ್ ಮಾಡುತ್ತಿದೆ. 2014ರಲ್ಲಿ ಇದ್ದ ಗ್ಯಾಸ್ ಬೆಲೆ 400, ಆದರೆ ಈಗ ಅದು 1000ದ ಗಡಿ ದಾಟಿದೆ ಎಂಬ ಅಂಕಿ-ಅಂಶ ಹಿಡಿದು ಜನರಿಗೆ ತೋರಿಸುತ್ತಿದೆ. ಹೀಗಾಗಿ ಜನರ ಮನಸ್ಸಲ್ಲೂ ಈ ವಿಚಾರ ಮರೆಯಾಗದು. ಮತ್ತೊಂದು ಕಡೆ ಉಚಿತ ಉಡುಗೊರೆ ಟೀಕಿಸಿ ನಂತರ ತಾವೇ ಫ್ರೀ ಗಿಫ್ಟ್ ಕೊಟ್ಟಿದ್ದೇಕೆ ಎಂಬ ಪ್ರಶ್ನೆಯನ್ನೂ ಮುಂದಿಟ್ಟು ಚರ್ಚೆ ನಡೆಸುತ್ತಿವೆ ವಿಪಕ್ಷಗಳು.
ಒಟ್ನಲ್ಲಿ ರಣಕಣವಾಗಿ ಮಾರ್ಪಟ್ಟಿರುವ ಕರ್ನಾಟಕ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ. ಒಂದೆಡೆ ಬೆಲೆ ಏರಿಕೆ ಸಂಕಷ್ಟ ಜನರನ್ನ ಕಾಡುತ್ತಿದೆ, ಮತ್ತೊಂದು ಕಡೆ ಉಚಿತ ಉಡುಗೊರೆ ಪಟ್ಟಿಗೆ ಬಿಜೆಪಿ ಕೂಡ ಸೇರ್ಪಡೆಗೊಂಡಿದೆ. ಅನಿರೀಕ್ಷಿತವಾಗಿ ಬಿಜೆಪಿ ಕೂಡ ಕನ್ನಡ ನಾಡಿನ ಜನತೆಗೆ ಉಚಿತ ಉಡುಗೊರೆಯ ಆಶ್ವಾಸನೆ ನೀಡಿದೆ. ಆದರೆ ಇದೆಲ್ಲಾ ಗೆಲುವಿನ ಮೇಲೆ ಹೇಗೆ ಎಫೆಕ್ಟ್ ಬೀರುತ್ತೆ? ಎಂಬುದನ್ನ ಕಾದು ನೋಡಬೇಕು. ಮೇ 10ರಂದು ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಅಂದೇ ಬೆಲೆ ಏರಿಕೆಯ ಬಡಿದಾಟ ಹಾಗೂ ಕರ್ನಾಟಕದ ರಾಜಕೀಯ ಪಕ್ಷಗಳ ಉಚಿತ ಉಡುಗೊರೆಯ ಆಶ್ವಾಸನೆ ಬಗ್ಗೆಯೂ ರಿಸಲ್ಟ್ ಹೊರಬೀಳಲಿದೆ.












Click it and Unblock the Notifications