ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನ ‘ಹಿಟ್ಲರ್’ ಸರ್ಕಾರವೆಂದ ಬಿಜೆಪಿ?
ಬೆಂಗಳೂರು: ಗ್ಯಾರಂಟಿ ವಾರ್ ದೊಡ್ಡದಾಗುತ್ತಿದೆ. ಇಷ್ಟುದಿನ ರಾಜಕಾರಣಿಗಳ ಕಿತ್ತಾಟಕ್ಕೆ ಸೀಮಿತವಾಗಿದ್ದ ಗ್ಯಾರಂಟಿ ಕಚ್ಚಾಟ ಇದೀಗ ಶಿಕ್ಷಕರನ್ನೂ ತಲುಪಿದೆ. ಗ್ಯಾರಂಟಿ ಯೋಜನೆ ವಿರುದ್ಧ ಸುಖಾಸುಮ್ಮನೆ ಕಮೆಂಟ್ ಮಾಡಿದ್ದ ಶಿಕ್ಷಕರಿಗೆ ನೋಟಿಸ್ ನೀಡಲಾಗಿದೆ ಅನ್ನೋ ಆರೋಪ ಕೇಳಿಬಂದ ಬೆನ್ನಲ್ಲೇ, ಬಿಜೆಪಿ ದಾಳವಾಗಿಸಿಕೊಂಡು ಅಸ್ತ್ರ ಪ್ರಯೋಗಿಸಿದೆ!
ರಾಜ್ಯದಲ್ಲಿ ಚುನಾವಣೆ ಮುಗಿದ ಮರುಕ್ಷಣದಿಂದ ಬರೀ ಗ್ಯಾರಂಟಿ ಅನ್ನೋ ಪದವೇ ಕಿವಿಗೆ ಬೀಳುತ್ತಿದೆ. ಅತ್ತ ಕಾಂಗ್ರೆಸ್ ಲೀಡರ್ಸ್ ತಮ್ಮ ಸರ್ಕಾರ ಬಡವರಿಗೆ ಉಚಿತ ಕೊಡುಗೆಗಳನ್ನು ತಲುಪಿಸಲಿದೆ ಅಂತಾ ಪ್ರಚಾರ ಮಾಡುತ್ತಿದ್ದಾರೆ. ಆದ್ರೆ ಇತ್ತ ಬಿಜೆಪಿ ನಾಯಕರು ಕಾಂಗ್ರೆಸ್ ಗ್ಯಾರಂಟಿಗಳನ್ನ ಟೀಕಿಸುವ ಮೂಲಕ ಪರೋಕ್ಷವಾಗಿ ಪ್ರಮೋಷನ್ ಕೊಡುತ್ತಿದ್ದಾರೆ. ಎಲ್ಲಾ ಗೊಂದಲಗಳ ನಡುವೆ ಸುಖಾಸುಮ್ಮನೆ ಸರ್ಕಾರಿ ನೌಕರರು ಗ್ಯಾರಂಟಿ ವಿಚಾರದ ಕುರಿತಾಗಿ ಕಮೆಂಟ್ ಮಾಡಿ ಸಮಸ್ಯೆಗೆ ಸಿಲುಕುತ್ತಿರುವ ಆರೋಪ ಕೇಳಿಬಂದಿದೆ. ಇಲ್ಲಿ ಪ್ರಮುಖವಾಗಿ ಶಿಕ್ಷಕರು ಪಾಠ ಬಿಟ್ಟು ರಾಜಕೀಯ ಮಾಡ್ತಿರೋದು ಯಾಕೆ? ಅನ್ನೋ ಪ್ರಶ್ನೆ ಕೇಳಿಬಂದಿದೆ.

ಶಿಕ್ಷಕರಿಗೂ ಗ್ಯಾರಂಟಿ ಬಿಸಿ?
ಕೊಪ್ಪಳದಲ್ಲಿ ಇಬ್ಬರು ಶಿಕ್ಷಕರು ಗ್ಯಾರಂಟಿ ಯೋಜನೆ ಬಗ್ಗೆ ವಾಟ್ಸಾಪ್ ಸ್ಟೇಟಸ್ ಹಾಕಿದ್ರು ಅನ್ನೋ ಕಾರಣಕ್ಕೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಈ ನಡುವೆ ಇದೇ ವಿಚಾರವನ್ನ ಹಿಡಿದು, ಟ್ವೀಟ್ ವಾರ್ ಶುರು ಮಾಡಿದೆ ಬಿಜೆಪಿ. ಇದೀಗ ಬಿಜೆಪಿ ಟ್ವೀಟ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಕೆಲವರು ಶಿಕ್ಷಕರು ಪಾಠ ಮಾಡೋದು ಬಿಟ್ಟು ರಾಜಕೀಯ ಯಾಕ್ ಮಾಡಬೇಕು ಅಂತಿದ್ರೆ. ಇನ್ನೂ ಕೆಲವರು ಕೇಂದ್ರದ ಮೋದಿ ಸರ್ಕಾರದ ವಿರುದ್ಧ ಮಾತನಾಡಿದ್ರೆ ಈ ಶಿಕ್ಷಕರನ್ನು ಬಿಜೆಪಿ ಸರ್ಕಾರ ಸುಮ್ಮನೆ ಬಿಡ್ತಿತ್ತಾ? ಅಂತಾ ಪ್ರಶ್ನೆ ಮಾಡ್ತಿದ್ದಾರೆ. ಹಾಗಾದ್ರೆ ಬಿಜೆಪಿ ಮಾಡಿರುವ ಟ್ವೀಟ್‌ನಲ್ಲಿ ಏನಿದೆ? ಮುಂದೆ ಓದಿ.
ರಾಜ್ಯಾದ್ಯಂತ ಬಿಜೆಪಿ ಉಗ್ರ ಹೋರಾಟ!
ಬಿಜೆಪಿ ಟ್ವೀಟ್ ಪ್ರಕಾರ, 'ಸರ್ವಾಧಿಕಾರಿ ಧೋರಣೆ, ತುರ್ತುಪರಿಸ್ಥಿತಿ ಹೇರಿಕೆ - ಇವೆಲ್ಲಾ ಕಾಂಗ್ರೆಸಿನ ಪಾರಂಪರಿಕ ಗುಣಗಳು. ಸರ್ಕಾರಿ ನೌಕರರೆಂದ ಮಾತ್ರಕ್ಕೆ ಅವರು ಸರ್ಕಾರದ ಗುಲಾಮರಲ್ಲ. @siddaramaiahರವರ ಸರ್ಕಾರ ಇನ್ನೂ ಸರಿಯಾಗಿ ಕೆಲಸವೇ ಶುರು ಮಾಡಿಲ್ಲ, ಆದರೆ ದರ್ಪ-ದಬ್ಬಾಳಿಕೆಯ ಪ್ರದರ್ಶನ ಮಾತ್ರ ಹೇರಳವಾಗಿ ಆಗುತ್ತಿದೆ. ಈ ರೀತಿಯ ನಿದರ್ಶನಗಳು ಈ #HitlerSarkara ದಡಿಯಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಸರಕಾರ ತನ್ನ ಈ ಸರ್ವಾಧಿಕಾರಿ ಧೋರಣೆಯಿಂದ ಹೊರಬಾರದಿದ್ದರೆ ರಾಜ್ಯದಾದ್ಯಂತ ಉಗ್ರ ಹೋರಾಟವನ್ನು ಎದುರಿಸಲು ಸಿದ್ದವಾಗಲಿ.' ಎಂದು ಸವಾಲು ಹಾಕಿದೆ ಬಿಜೆಪಿ.
ಸರ್ವಾಧಿಕಾರಿ ಧೋರಣೆ, ತುರ್ತುಪರಿಸ್ಥಿತಿ ಹೇರಿಕೆ - ಇವೆಲ್ಲಾ ಕಾಂಗ್ರೆಸಿನ ಪಾರಂಪರಿಕ ಗುಣಗಳು.
— BJP Karnataka (@BJP4Karnataka) June 11, 2023
ಸರ್ಕಾರಿ ನೌಕರರೆಂದ ಮಾತ್ರಕ್ಕೆ ಅವರು ಸರ್ಕಾರದ ಗುಲಾಮರಲ್ಲ. @siddaramaiah ರವರ ಸರ್ಕಾರ ಇನ್ನೂ ಸರಿಯಾಗಿ ಕೆಲಸವೇ ಶುರು ಮಾಡಿಲ್ಲ, ಆದರೆ ದರ್ಪ-ದಬ್ಬಾಳಿಕೆಯ ಪ್ರದರ್ಶನ ಮಾತ್ರ ಹೇರಳವಾಗಿ ಆಗುತ್ತಿದೆ.
ಈ ರೀತಿಯ ನಿದರ್ಶನಗಳು ಈ… pic.twitter.com/SeFd4A3DPR
ಫ್ರೀ ಬಸ್ ವಿಚಾರಕ್ಕೂ ಫೈಟಿಂಗ್!
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭೀಕರ ಸೋಲು ಕಂಡಿತ್ತು. ಕಾಂಗ್ರೆಸ್ 135 ಸ್ಥಾನಗಳಲ್ಲಿ ಗೆದ್ದು ಸರ್ಕಾರ ರಚಿಸಿದೆ. ಹೀಗಾಗಿ ಎರಡೂ ಪಕ್ಷಗಳ ನಡುವೆ ಗ್ಯಾರಂಟಿ ವಾರ್ ಬಲು ಜೋರಾಗಿದೆ. ಅದ್ರಲ್ಲೂ ಇಂದಿನಿಂದ ಜಾರಿಗೆ ಬಂದಿರುವ ಫ್ರೀ ಬಸ್ ವಿಚಾರ ಬಿಜೆಪಿ ನಾಯಕರಿಗೆ ಅಸ್ತ್ರವಾಗಿ ಬದಲಾಗಿದೆ. ಈ ಮಧ್ಯೆ ಗ್ಯಾರಂಟಿ ವಿಚಾರದ ಕುರಿತಾಗಿ ಸ್ಟೇಟಸ್ ಹಾಕಿದ ಹಾಗೂ ವಾಗ್ದಾಳಿ ನಡೆಸಿದ ಶಿಕ್ಷಕರು ಹಾಗೂ ಸರ್ಕಾರಿ ನೌಕರರಿಗೂ ಬಿಸಿ ಮುಟ್ಟಿಸಲಾಗುತ್ತಿದೆ ಅನ್ನೋ ಆರೋಪ ಕೇಳಿಬಂದಿದೆ. ಹಾಗೇ ಈ ಮಧ್ಯೆ ಬಿಜೆಪಿ ಸರ್ಕಾರ ಇದ್ದರೆ ಅವರ ವಿರುದ್ಧ ಶಿಕ್ಷಕರು ಮಾತನಾಡಿದ್ರೆ, ಬಿಜೆಪಿ ಸುಮ್ಮನೆ ಇರುತ್ತಿತ್ತಾ? ಅನ್ನೋ ಪ್ರಶ್ನೆಯನ್ನೂ ನೆಟ್ಟಿಗರು ಕೇಳ್ತಿದ್ದಾರೆ!

ಒಟ್ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ರಾಜಕೀಯದ ನಡುವೆ ಹೋದವರು ಕೂಡ ಸಮಸ್ಯೆಗೆ ಸಿಲುಕುತ್ತಿರೋದು ಪಕ್ಕಾ. ಹೀಗಾಗಿ ಮೊದಲು ಈ ರಾಜಕೀಯ ಬಿಟ್ಟು, ಕೊರೊನಾ ಬಳಿಕ ಎದುರಾಗಿರುವ ಆರ್ಥಿಕ ಸಮಸ್ಯೆ ಬಗೆಹರಿಸಿ. ರಾಜ್ಯದ ಅಭಿವೃದ್ಧಿಗೆ ಮುಂದಾಗಿ ಅಂತಾ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರಿಗೆ ಮತದಾರರು, ನೆಟ್ಟಿಗರು ಕಿವಿಮಾತು ಹೇಳ್ತಿದ್ದಾರೆ. ಆದರೆ ಏನೇನೋ ವಿಚಾರಗಳು ಪ್ರಸ್ತಾಪವಾಗಿ, ಸೋಷಿಯಲ್ ಮೀಡಿಯಾ ಕೂಡ ರಣರಂಗ ಆಗ್ತಿರೋದು ಮಾತ್ರ ಆಧುನಿಕ ಕಾಲದ ವಿಪರ್ಯಾಸವೇ ಸರಿ.












Click it and Unblock the Notifications