ಬಿಟ್ ಕಾಯಿನ್ ಕೇಸ್ ರದ್ದು ಕೋರಿ ಅರ್ಜಿ ವಿಚಾರಣೆ ಮುಂದೂಡಿಕೆ
ಬೆಂಗಳೂರು, ಜುಲೈ 07; ಕರ್ನಾಟಕ ಸರ್ಕಾರ ಬಿಟ್ ಕಾಯಿನ್ ಹಗರಣದ ಬಗ್ಗೆ ತನಿಖೆಗೆ ವಿಶೇಷ ತನಿಖಾ ತಂಡ ನೇಮಕ ಮಾಡಿದೆ. ಇತ್ತ ಹಗರಣದ ಪ್ರಮುಖ ಆರೋಪಿ ಎನ್ನಲಾದ ಶ್ರೀನಿ ಸೇರಿ ನಾಲ್ವರು ಪ್ರಕರಣ ರದ್ದು ಕೋರಿದ್ದ ಅರ್ಜಿಗಳು ಗುರುವಾರ ಕರ್ನಾಟಕ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಂದವು.
ಪ್ರಕರಣದ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಹಾಗೂ ಆ ಕುರಿತ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಸೇರಿದಂತೆ ನಾಲ್ವರು ಆರೋಪಿಗಳು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ಜುಲೈ 19ಕ್ಕೆ ಮುಂದೂಡಿದೆ.

ಹಗರಣದ ಆರೋಪಿಗಳಾಗಿರುವ ಬೆಂಗಳೂರಿನ ಶ್ರೀಕಿ, ಸುನೀಶ್ ಹೆಗ್ಡೆ, ಪ್ರಸಿದ್ ಶೆಟ್ಟಿ ಹಾಗೂ ಹೇಮಂತ್ ಮುದ್ದಪ್ಪ ಎಂಬುವರು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ಗುರುವಾರ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ವಿಚಾರಣೆ ನಡೆಸಿತು.
ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, 2022ರ ಸೆ.7ರಂದು ಸುನೀಶ್ ಹೆಗ್ಡೆ ಮತ್ತು ಪ್ರಸಿದ್ ಶೆಟ್ಟಿ ಅವರ ಅರ್ಜಿ ಹೈಕೋರ್ಟ್ ಮುಂದೆ ವಿಚಾರಣೆಗೆ ಬಂದಿತ್ತು. ಅಂದು ಸಿಬಿಐ ಪರ ವಕೀಲರು ಮಾಡಿದ ಮನವಿ ಮೇರೆಗೆ ಅರ್ಜಿಯನ್ನು ಸೆ.19ಕ್ಕೆ ಮುಂದೂಡಿ ಆದೇಶಿಸಿತ್ತು. ಅದರಲ್ಲಿ ಅರ್ಜಿ ಸಂಬಂಧ ಹಿಂದೆ ನೀಡಿರುವ ಮಧ್ಯಂತರ ಆದೇಶವನ್ನು ಮುಂದಿನ ವಿಚಾರಣೆಗೆ ವಿಸ್ತರಿಸಲಾಗಿದೆ ಎಂಬ ಸಾಲು ಉಲ್ಲೇಖಿಸಲಾಗಿದೆ.
ಆದರೆ, ಅದಕ್ಕೂ ಹಿಂದೆ ಯಾವುದೇ ಮಧ್ಯಂತರ ಆದೇಶ ಮಾಡಿರಲಿಲ್ಲ. ತಪ್ಪಾಗಿ ಮಧ್ಯಂತರ ಆದೇಶ ವಿಸ್ತರಣೆ ಸಾಲು ನಮೂದಿಸಿದ್ದು, ಅದನ್ನು ತೆಗೆದುಹಾಕಬೇಕು ಎಂದು ಕೋರಿದರು. ಆ ಮನವಿ ಪುರಸ್ಕರಿಸಿದ ನ್ಯಾಯಪೀಠ, ಎಲ್ಲಾ ಅರ್ಜಿಗಳ ವಿಚಾರಣೆಯನ್ನು ಜುಲೈ 19ರಂದು ಮಧ್ಯಾಹ್ನಕ್ಕೆ ಮುಂದೂಡಿತು.
ದೂರು ದಾಖಲಿಸುವ ಹಕ್ಕಿಲ್ಲ: ಪ್ರಕರಣವನ್ನು ಏಕೆ ದಾಖಲಿಸಲಾಗಿದೆ? ಎಂಬ ಬಗ್ಗೆ ದೂರಿನಲ್ಲಿ ವಿವರಿಸಿಲ್ಲ. ಅಪರಾಧ ಕೃತ್ಯ ನಡೆದು ಎರಡು ವರ್ಷಗಳ ಬಳಿಕ ದೂರು ದಾಖಲಾಗಿದೆ. ದೂರು ದಾಖಲಿಸಿದ್ದ ಸಿಸಿಬಿ ಇನ್ಸ್‌ಪೆಕ್ಟರ್ ಪ್ರಕರಣದಲ್ಲಿ ಬಾಧಿತರಲ್ಲ. ಹಾಗಾಗಿ, ಅವರಿಗೆ ದೂರು ದಾಖಲಿಸಲು ಯಾವ ಹಕ್ಕಿಲ್ಲ. ಸಿಸಿಬಿಗೆ ಸೇರಿದ ಅಧೀನ ಪೊಲೀಸ್ ಅಧಿಕಾರಿಗೆ ತನಿಖೆ ವರ್ಗಾಯಿಸಲಾಗಿದೆ. ಸಿಸಿಬಿ ಕಚೇರಿಯನ್ನು ಪೊಲೀಸ್ ಠಾಣೆಯೆಂದು ಘೋಷಿಸಲಾಗದು ಹಾಗೂ ಸಿಸಿಬಿ ತನಿಖಾಧಿಕಾರಿ ದೋಷಾರೋಪ ಪಟ್ಟಿ ಸಲ್ಲಿಸಲಾಗದು.
ಸದ್ಯ ಇರುವ ಆರೋಪಿಸಲಾಗಿರುವ ಹ್ಯಾಕಿಂಗ್ ಕೃತ್ಯವು ಅಪರಾಧ ಎಂಬುದಾಗಿ ಸದ್ಯ ಇರುವ ಯಾವುದೇ ಕಾನೂನಿನಲ್ಲಿ ಉಲ್ಲೇಖಿಸಿಲ್ಲ. ಆದ್ದರಿಂದ ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸಬೇಕು ಎಂದು ಶ್ರೀಕಿ ಹಾಗೂ ಇತರೆ ಆರೋಪಿಗಳು ಹೈಕೋರ್ಟ್‌ಗೆ ಸಲ್ಲಿಕೆ ಮಾಡಿರುವ ಅರ್ಜಿಯಲ್ಲಿ ಕೋರಿದ್ದಾರೆ.
ಏನಿದು ಪ್ರಕರಣ?; ಬಿಟ್ ಕಾಯಿನ್ ಹಗರಣದ ಸಂಬಂಧ 2020ರ ನ.27ರಂದು ಸಿಸಿಬಿ ಇನ್ಸ್‌ಪೆಕ್ಟರ್ ನೀಡಿದ್ದ ದೂರಿನ ಮೇರೆಗೆ ಬೆಂಗಳೂರಿನ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ವಂಚನೆ, ಅಪರಾಧಿಕ ಒಳಸಂಚು, ಪೋರ್ಜರಿ, ವಂಚನೆ, ವಸೂಲಿ ಮತ್ತು ಎಲೆಕ್ಟ್ರಾನಿಕ್ ಡಿವೈಸ್ ಬಳಸಿ ಆಕ್ಷೇಪಾರ್ಹ ಮಾಹಿತಿ ರವಾನಿಸಿರುವುದು ಸೇರಿದಂತೆ ಇನ್ನಿತರ ಆರೋಪಗಳ ಸಂಬಂಧ ದೂರು ದಾಖಲಿಸಿದ್ದರು.
ನಂತರ ತನಿಖೆಯನ್ನು ಸಿಸಿಬಿಗೆ ವರ್ಗಾಯಿಸಲಾಗಿತ್ತು. 2021ರ ಫೆ.22ರಂದು ಸಿಸಿಬಿ ಪೊಲೀಸರು ಆರು ಆರೋಪಿಗಳ ವಿರುದ್ಧ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಆರೋಪ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಶ್ರೀಕಿ ಮೊದಲನೇ ಆರೋಪಿಯಾದರೆ, ಸುನೀಶ್ ಹೆಗ್ಡೆ ಮತ್ತು ಪ್ರಸಿದ್ ಶೆಟ್ಟಿ ಹಾಗೂ ಹೇಮಂತ್ ಮುದ್ದಪ್ಪ ಇತರೆ ಆರೋಪಿಗಳಾಗಿದ್ದಾರೆ.
ಪ್ರಕರಣವು ಅಧೀನ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಇದರಿಂದ ತಮ್ಮ ವಿರುದ್ಧದ ಎಫ್‌ಐಆರ್, ಅಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಅರ್ಜಿದಾರ ಆರೋಪಿಗಳು ಹೈಕೋರ್ಟ್ ಮೊರೆ ಹೋಗಿದ್ದಾರೆ.












Click it and Unblock the Notifications