ಬಿಜೆಪಿ ಶಾಸಕ ನೆಹರು ಓಲೇಕರ್‌ಗೆ ಹೈಕೋರ್ಟ್‌ನಿಂದ ರಿಲೀಫ್
ಬೆಂಗಳೂರು, ಏಪ್ರಿಲ್ 05; ನಕಲಿ ಬಿಲ್ ಪ್ರಕರಣದಲ್ಲಿ ಹಾವೇರಿಯ ಬಿಜೆಪಿ ಶಾಸಕ ನೆಹರು ಸಿ. ಓಲೇಕರ್‌ಗೆ ಕರ್ನಾಟಕ ಹೈಕೋರ್ಟ್ ರಿಲೀಫ್ ನೀಡಿದೆ. ಕರ್ನಾಟಕದಲ್ಲಿ ಚುನಾವಣಾ ದಿನಾಂಕ ಘೋಷಣೆಯಾಗಿರುವಾಗಲೇ ಹೈಕೋರ್ಟ್ ತೀರ್ಪು ಶಾಸಕರಿಗೆ ನೆಮ್ಮದಿ ತಂದಿದೆ. ರಾಜ್ಯದಲ್ಲಿ ಮೇ 10ರಂದು ಚುನಾವಣೆ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ.
ಶಾಸಕ ನೆಹರು ಓಲೇಕಾರ್ ದೋಷಿ ಎಂದು ತೀರ್ಮಾನಿಸಿ ಮತ್ತು ಅವರಿಗೆ ಎರಡು ವರ್ಷ ಸಾಧಾರಣಾ ಜೈಲು ಶಿಕ್ಷೆ ವಿಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ (91ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ) 2023ರ ಫೆಬ್ರವರಿ 13ರಂದು ಹೊರಡಿಸಿದ್ದ ಆದೇಶದಕ್ಕೆ ಹೈಕೋರ್ಟ್ ತಡೆ ನೀಡಿದೆ.

ನೆಹರು ಓಲೇಕಾರ್‌ರನ್ನು ದೋಷಿಯಾಗಿರುವ ತಿರ್ಮಾನಿಸಿರುವ ವಿಶೇಷ ನ್ಯಾಯಾಲಯದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ತಡೆ ನೀಡದೆ ಹೋಗಿದ್ದರೆ, ಅವರು ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಕಾನೂನಾತ್ಮಕ ತೊಡಕು ಉಂಟಾಗುತ್ತಿತ್ತು. ಆದರೆ ಬುಧವಾರ ನೀಡಿರುವ ಆದೇಶದಿಂದ ಚುನಾವಣೆಗೆ ಸ್ಪರ್ಧಿಸುವ ಹಾದಿ ಸುಗಮವಾಗಿದೆ.
ಹಾವೇರಿ ನಗರಸಭೆ ಕಾಮಗಾರಿಯಲ್ಲಿ ನಕಲಿ ಬಿಲ್ ಸೃಷ್ಟಿಸಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ಹಣ ನಷ್ಟ ಉಂಟುಮಾಡಿದ ಪ್ರಕರಣದಲ್ಲಿ ತಮ್ಮನ್ನು ದೋಷಿಯಾಗಿ ತೀರ್ಮಾನಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶಕ್ಕೆ ತಡೆ ನೀಡುವಂತೆ ಕೋರಿ ಶಾಸಕರು ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್ ತೀರ್ಪನ್ನು ಕಾಯ್ದಿರಿಸಿತ್ತು.
ಬುಧವಾರ ಶಾಸಕ ನೆಹರೂ ಓಲೇಕಾರ್ ಸಲ್ಲಿಸಿದ ಮಧ್ಯಂತರ ಅರ್ಜಿ ಸಂಬಂಧ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಏಕಸದಸ್ಯಪೀಠ ತೀರ್ಪು ಪ್ರಕಟಿಸಿದೆ. 2 ವರ್ಷಗಳ ಜೈಲು ಶಿಕ್ಷೆ ವಿಧಿಸಿ ವಿಶೇಷ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ಕೋರ್ಟ್ ತಡೆಯಾಜ್ಞೆ ನೀಡಿದೆ.
ಅನರ್ಹಗೊಂಡಿಲ್ಲವೇಕೆ?; ಮಾರ್ಚ್ 30ರಂದು ಶಾಸಕರು ಸಲ್ಲಿಕೆ ಮಾಡಿದ್ದ ಅರ್ಜಿಯ ವಿಚಾರಣೆ ವೇಳೆ ಕರ್ನಾಟಕ ಹೈಕೋರ್ಟ್ ಭಷ್ಟಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಶಾಸಕ ನೆಹರೂ ಓಲೇಕಾರ್ ಇನ್ನೂ ಅನರ್ಹಗೊಂಡಿಲ್ಲವೇಕೆ?. ಬೇರೆ ಪ್ರಕರಣಗಳಲ್ಲಿ ಬಹುಬೇಗ ಅನರ್ಹ ಆದೇಶಗಳು ಹೊರಬಿದ್ದಿವೆಯಲ್ಲಾ? ಎಂದು ಕೇಳಿತ್ತು. ಆಗ ಶಾಸಕರ ಪರ ವಕೀಲರು ಅನರ್ಹಗೊಳಿಸುವ ವಿಚಾರ ಸ್ಪೀಕರ್ ಅವರ ಅಧಿಕಾರ ವ್ಯಾಪ್ತಿಗೆ ಒಳಪಡುತ್ತದೆ. ಅವರು ವಿವೇಚನೆ ಬಳಸಿ ತಿರ್ಮಾನ ಕೈಗೊಳ್ಳತ್ತಾರೆ. ಆದರೆ, ದೋಷಿಯಾಗಿ ತೀರ್ಮಾನಿಸಿದ ವಿಶೇಷ ನ್ಯಾಯಾಲಯದ ಆದೇಶಕ್ಕೆ ತಡೆ ನೀಡುವ ವಿಚಾರಕ್ಕೂ, ಶಾಸಕ ಸ್ಥಾನದಿಂದ ಅನರ್ಹಗೊಳಿಸುವ ವಿಚಾರಕ್ಕೆ ಸಂಬಂಧ ಇಲ್ಲವಾಗಿದೆ ಎಂದು ಹೇಳಿದ್ದರು.
ಶಾಸಕ ನೇಹರು ಓಲೇಕಾರ್ ಮತ್ತು ಅವರ ಇಬ್ಬರು ಪುತ್ರರು, ಕೆಲವು ನಿವೃತ್ತ ಸರ್ಕಾರಿ ನೌಕರರನ್ನು ನಕಲಿ ಬಿಲ್ ಹಗರಣಲ್ಲಿ ದೋಷಿ ಎಂದು ತೀರ್ಮಾನಿಸಲಾಗಿತ್ತು. ಎರಡು ವರ್ಷಗಳ ಸಾಧಾರಣಾ ಜೈಲು ಶಿಕ್ಷೆ ವಿಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿತ್ತು. ಈ ತೀರ್ಪು ಪ್ರಶ್ನಿಸಿ ಓಲೇಕರ್‌ಗೆ ಹೈಕೊರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು. ಮಾರ್ಚ್ 3ರಂದು ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್, ಓಲೇಕಾರ್‌ಗೆ ವಿಧಿಸಿದ್ದ ಎರಡು ವರ್ಷದ ಶಿಕ್ಷೆಯನ್ನು ಅಮಾನತ್ತಿನಲ್ಲಿರಿಸಿ, ಜಾಮೀನು ಮಂಜೂರು ಮಾಡಿತ್ತು. ಬುಧವಾರ ವಿಶೇಷ ನ್ಯಾಯಾಲಯದ ಆದೇಶಕ್ಕೆ ಕೋರ್ಟ್ ತಡೆ ನೀಡಿದೆ.
ಏನಿದು ಪ್ರಕರಣ?; ಹಾವೇರಿ ನಗರಸಭೆಯಲ್ಲಿ ಕಾಮಗಾರಿ ನಡೆಯದಿದ್ದರೂ ಕಾಮಗಾರಿ ಆಗಿದೆ ಎಂದು ನಕಲಿ ಬಿಲ್ ಸೃಷ್ಟಿ ಮಾಡಿ 5 ಕೋಟಿ ರೂ.ಗೂ ಅಧಿಕ ಮೊತ್ತದ ಭ್ರಷ್ಟಾಚಾರ ನಡೆಸಿದ ಪ್ರಕರಣವಿದಾಗಿದೆ. ಶಾಸಕ ನೆಹರು ಸಿ. ಓಲೇಕಾರ್ ಈ ಕಾಮಗಾರಿಯ ಟೆಂಡರ್ ಅನ್ನು ತನ್ನ ಇಬ್ಬರು ಪುತ್ರರಿಗೆ ನೀಡಿದ್ದಾಗಿ ದಾಖಲೆ ತೋರಿಸಿದ್ದು ಸಜ್ಜನಪಕ್ಷಪಾತವಾಗಿದೆ. ಈ ಕುರಿತು ಲೋಕಾಯುಕ್ತಕ್ಕೆ ಸಾಮಾಜಿಕ ಕಾರ್ಯಕರ್ತರೊಬ್ಬರು ದೂರು ನೀಡಿದ್ದರು. ತನಿಖೆಯಲ್ಲಿ ಶಾಸಕರು ಭ್ರಷ್ಟಾಚಾರ ನಡೆಸಿದ್ದು, ಸಾಬೀತಾಗಿತ್ತು.












Click it and Unblock the Notifications