ಸಚಿವರ ಎದುರೇ ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್‌ಸಿ
ಬೀದರ್: ಬೀದರ್ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲಾ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಹಾಗೂ ವಿಧಾನ ಪರಿಷತ್ ಸದಸ್ಯ ಪರಸ್ಪರ ನಿಂದಿಸಿಕೊಂಡು ಕೈ ಕೈ ಮಿಲಾಯಿಸಿರುವ ಘಟನೆ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹುಮನಾಬಾದ್ ಶಾಸಕ ಸಿದ್ದು ಪಾಟೀಲ್ ಹಾಗೂ ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್ ಕಿತ್ತಾಡಿಕೊಂಡಿದ್ದಾರೆ.
ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಆರಂಭದಲ್ಲೇ ಬಡಾವಣೆಯೊಂದರ ವಿಚಾರ ಪ್ರಸ್ತಾಪಿಸುತ್ತಿದ್ದಂತೆ ಶಾಸಕ ಸಿದ್ದು ಪಾಟೀಲ್ ಹಾಗೂ ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್ ನಡುವೆ ಮಾತಿನ ವಾಗ್ವಾದ ಶುರುವಾಗಿ ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡಿದ್ದಾರೆ. ಬಳಿಕ ಮಾತಿಗೆ ಮಾತು ಬೆಳೆದು, ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದಾರೆ.

ಒತ್ತುವರಿ ವಿಚಾರವಾಗಿ ಗಲಾಟೆ
ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಹಾಗೂ ಎಂಎಲ್‌ಸಿ ನಡುವಿನ ಗಲಾಟೆ ತಾರಕಕ್ಕೇರಿದೆ. ಭೀಮರಾವ್ ಪಾಟೀಲ್ ಅರಣ್ಯ ಇಲಾಖೆಯ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಶಾಸಕ ಸಿದ್ದು ಪಾಟೀಲ್ ಆರೋಪ ಮಾಡಿದರು. ಈ ವಿಚಾರವನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆಗೆ ತಿಳಿಸಿದರು. ಇದರಿಂದ ಕೋಪಗೊಂಡ ಭೀಮರಾವ್ ಪಾಟೀಲ್ ಏಕವಚನದಲ್ಲೇ ನಿಂದಿಸಿದರು ಎಂದು ತಿಳಿದುಬಂದಿದೆ.
ಬಳಿಕ ವಾಗ್ವಾದವು ಬಳಿಕ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದರು. ನಂತರ ಸಚಿವ ಈಶ್ವರ ಖಂಡ್ರೆ ಮಧ್ಯಸ್ಥಿಕೆ ವಹಿಸಿ, ಗಲಾಟೆಯನ್ನು ತಿಳಿಗೊಳಿಸಿದರು. ಇದೇ ಸಭೆಯಲ್ಲಿ ಸಚಿವ ರಹೀಂ ಖಾನ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿರೀಶ್ ಬೋಧಲೆ, ಎಸ್ಪಿ ಪ್ರದೀಪ್ ಗುಂಟಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು. ಈ ಗಲಾಟೆಯಿಂದಾಗಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಸಭೆಯನ್ನು ಮುಂದೂಡಿದರು.
ಹುಮ್ನಾಬಾದ್‌ನಲ್ಲಿ ನಿಷೇಧಾಜ್ಞೆ
ಸಭೆ ನಡೆಯುತ್ತಿರುವ ವೇಳೆ ಮಾತನಾಡಿದ ಶಾಸಕ ಸಿದ್ದು ಪಾಟೀಲ್, ಹುಮ್ನಾಬಾದ್‌ನಲ್ಲಿ ಅರಣ್ಯ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಸಚಿವ ಈಶ್ವರ್ ಖಂಡ್ರೆಗೆ ಹೇಳಿದ್ದಾರೆ. ಇದರಿಂದ ಕೋಪಗೊಂಡ ಭೀಮರಾವ್ ಪಾಟೀಲ್, ಅದನ್ನ ಕೇಳೋಕೆ ನೀನ್ಯಾರು? ಎಂದು ಏಕವಚನದಲ್ಲೇ ಹರಿಹಾಯ್ದಿದ್ದಾರೆ. ಬಳಿಕ ಇಬ್ಬರು ನಾಯಕರ ಮಾತಿಗೆ ಮಾತು ಬೆಳೆಸಿ, ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದಾರೆ. ಈ ಘಟನೆಯಿಂದ ಹುಮನಾಬಾದ್ ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಹುಮ್ನಾಬಾದ್ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ತಹಶೀಲ್ದಾರ್ ಅಂಜುಮ್ ತಬಸ್ಸುಮ ಆದೇಶ ಹೊರಡಿಸಿದ್ದಾರೆ. ಯಾವುದೇ ಅಹಿತಕರ ಘಟನೆಗಳು, ಘರ್ಷಣೆಗಳು ನಡೆಯದಂತೆ ಪೊಲೀಸರ್ ಅಲರ್ಟ್ ಆಗಿದ್ದಾರೆ.












Click it and Unblock the Notifications