Mangaluru- Bidar Train: ಬೀದರ್-ಕರಾವಳಿ ನಗರಕ್ಕೆ ಹೊಸ ರೈಲ್ವೆ ಲೈನ್: ಪ್ರಯೋಜನಗಳೇನು?
ಬೆಂಗಳೂರು ಏಪ್ರಿಲ್ 24: ಕರ್ನಾಟಕದಲ್ಲಿ ರೈಲ್ವೆ ಜಾಲ ಬಲಗೊಳ್ಳುತ್ತಿದೆ. ಹಳೆಯ ಮಾರ್ಗಗಳ ಜೊತೆಗೆ ಹೊಸ ಹೊಸ ಮಾರ್ಗಗಳ ನಿರ್ಮಾಣ ಯೋಜನೆ ಚಾಲ್ತಿಯಲ್ಲಿವೆ. ಕೆಲವೆಡೆ ಕಾಮಗಾರಿ ಪ್ರಗತಿಯಲ್ಲಿದೆ. ಈ ಮಧ್ಯೆ ತೆಲಂಗಾಣಕ್ಕೆ ಹೊಂದಿರುವ ಉತ್ತರ ಕರ್ನಾಟಕದ ಗಡಿ ಜಿಲ್ಲೆ ಬೀದರ್‌ಗೂ ಹಾಗೂ ಕೇರಳ ಗಡಿ ಜಿಲ್ಲೆಗಿರುವ ರಾಜ್ಯ ಕರಾವಳಿಯ ಮಂಗಳೂರು ನಗರಕ್ಕೆ ಹೊಸದಾಗಿ ನೇರ ರೈಲ್ವೆ ಮಾರ್ಗಕ್ಕೆ ಬೇಡಿಕೆ ಹೆಚ್ಚಾಗಿದೆ. ಬೀದರ್ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಪ್ರಯಾಣಿಕರು ಹೆಚ್ಚಿದ್ದು, ರೈಲುಗಳ ಸಂಚಾರ ಕಡಿಮೆ ಇದೆ. ಹೊಸ ಮಾರ್ಗ (Bidar-Mangaluru Railway Line) ನಿರ್ಮಾಣವಾದರೆ ಅಪಾರ ಪ್ರಮಾಣದಲ್ಲಿ ಅಭಿವೃದ್ಧಿ ನಿರೀಕ್ಷೆ ಇದೆ.
ನೈಋತ್ಯ ರೈಲ್ವೆ (South Western Railway)ಅಧಿಕಾರಿಗಳು ಸೇರಿದಂತೆ ಭಾರತೀಯ ರೈಲ್ವೆ ಇಲಾಖೆ (Indian Railways) ಮುಂದೇ ಇಂಥದ್ದೊಂದು ಪ್ರಸ್ತಾವನೆ ಇದೆ. ಈ ರೈಲು ಮಾರ್ಗ ನಿರ್ಮಾಣಗೊಂಡರೆ ಕೇವಲ ಮಂಗಳೂರು ಹಾಗೂ ಬೀದರ್ ಜಿಲ್ಲೆಗಳಿಗೆ ಮಾತ್ರವೇ ಅನುಕೂಲ ಆಗದು. ಬದಲಾಗಿ ರೂಟ್ ಮ್ಯಾಪ್ ಪ್ರಕಾರ ರೈಲು ಹಾದು ಹೋಗುವ ಪ್ರತಿ ಭಾಗಗಳ ವಿವಿಧ ಕ್ಷೇತ್ರಗಳು ಅಭಿವೃದ್ಧಿಗೊಳ್ಳಲಿವೆ..

ಸದ್ಯ ಮಂಗಳೂರಿನಿಂದ ವಿಜಯಪುರಕ್ಕೆ ನೇರ ರೈಲು ಸಂಚರಿಸುತ್ತದೆ. ಇದರ ಹೊರತು ಬೇರಾವ ಮಾರ್ಗದಿಂದ ಮಂಗಳೂರಿಗೆ ನೇರ ಸಂಪರ್ಕ ಇಲ್ಲ. ಮೂಲಗಳ ಪ್ರಕಾರ ಈ ಮಂಗಳೂರು-ಬೀದರ್ ನಡುವೆ ನೇರ ರೈಲು ಸೇವೆಯು ಕಲಬುರಗಿ, ಬಳ್ಳಾರಿ, ಧಾರವಾಡ, ಮಡಗಾಂವ್, ಕಾರವಾರ ಮತ್ತು ಉಡುಪಿ ಮೂಲಕ ಬೀದರ್ ಮತ್ತು ಮಂಗಳೂರು ನಡುವೆ ನಿರ್ಮಾಣವಾಗಬೇಕು ಎಂಬ ಪ್ರಸ್ತಾವನೆ ಇದೆ. ಹೀಗಾದರೆ ಕರ್ನಾಟಕದಾದ್ಯಂತ ರೈಲು ಸಂಪರ್ಕ ಸಾರಿಗೆ ಸೇವೆ ಗಮನಾರ್ಹವಾಗಿ ವೃದ್ಧಿಯಾಗುತ್ತದೆ.
ಹೊಸ ಮಾರ್ಗವನ್ನು ಇದೇ ರೂಟ್ ಮ್ಯಾಪ್‌ನಲ್ಲಿ ಪರಿಚಯಿಸಿದರೆ, ಈಶಾನ್ಯ ನಗರವಾದ ಬೀದರ್ ಅನ್ನು ಕರಾವಳಿ ಕೇಂದ್ರವಾದ ಮಂಗಳೂರಿನೊಂದಿಗೆ ಸಂಪರ್ಕಿಸಿದಂತಾಗುತ್ತದೆ. ಜೊತೆಗೆ ಇದು ಉತ್ತರ ಕರ್ನಾಟಕದ ಕಲಬುರಗಿ, ಯಾದಗಿರಿ, ರಾಯಚೂರು, ಹೊಸಪೇಟೆ, ಗದಗ ಮತ್ತು ಬಳ್ಳಾರಿಯಂತಹ ಪ್ರಮುಖ ನಗರ ಪ್ರದೇಶಗಳ ಮೂಲಕ ಹಾದು ಹೋಗಲಿದೆ. ಇದರಿಂದ ಆಯಾ ಭಾಗಗಳು ಅಭಿವೃದ್ಧಿ ಆಗಲಿವೆ.

ಕೈಗಾರಿಕೆಗೆ ಪೂರಕ, ವ್ಯಾಪಾರ ವ್ಯವಹಾರ ವೃದ್ಧಿ
ವಿದ್ಯಾಕಾಶಿ ಧಾರವಾಡ ಮತ್ತು ಹುಬ್ಬಳ್ಳಿಯ ಶೈಕ್ಷಣಿಕ ಮತ್ತು ಕೈಗಾರಿಕಾ ಕೇಂದ್ರಗಳು ಮತ್ತು ಮಡಗಾಂವ್, ಕಾರವಾರ ಮತ್ತು ಉಡುಪಿ ಮೂಲಕ ಸುಂದರವಾದ ಕೊಂಕಣ ಕರಾವಳಿಯನ್ನು ಹಾದುಹೋಗುತ್ತದೆ. ಈ ಭಾಗದಲ್ಲಿ ವ್ಯಾಪಾರ ಹೆಚ್ಚಾಗುತ್ತದೆ. ಕಚ್ಚಾವಸ್ತುಗಳು, ವಿವಿಧ ಉತ್ಪಾಧಿತ ವಸ್ತಗಳು ಸೇರಿದಂತೆ ಸರಕು ಸಾಗಾಣೆಗೆ ಅನುಕೂಲವಾಗುತ್ತದೆ. ಕೈಗಾರಿಕೆಗಳು, ದೊಡ್ಡ ದೊಡ್ಡ ಕಂಪನಿಗಳು ಈ ಭಾಗದತ್ತ ಹೂಡಿಕೆ ಮನಸ್ಸು ಮಾಡುತ್ತವೆ. ಆರ್ಥಿಕವಾಗಿಯೂ ಭವಿಷ್ಯದಲ್ಲಿ ಈ ಪಟ್ಟಣಗಳು ಸದೃಢವಾಗುತ್ತವೆ ಎಂದು ಅಂದಾಜಿಸಲಾಗಿದೆ.
ರಾಜ್ಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ಅನುಕೂಲ..
ಹುಬ್ಬಳ್ಳಿ ಮೂಲಕ ಉಡುಪಿ, ಮುರಡೇಶ್ವರ, ಬೈಂದೂರು ಮತ್ತು ಗೋಕರ್ಣದಂತಹ ಪ್ರಮುಖ ಯಾತ್ರಾ ಕೇಂದ್ರಗಳಿಗೆ ತೆರಳುವವರಿಗೆ ಅನುಕೂಲ ಒದಗಿಸುತ್ತದೆ. ಇಂತಹ ಸೇವೆಯು ಪ್ರಯಾಣಿಕರು, ವಿದ್ಯಾರ್ಥಿಗಳು, ಯಾತ್ರಿಕರು ಮತ್ತು ಪ್ರವಾಸಿಗರು ಸೇರಿದಂತೆ ವ್ಯಾಪಕ ಶ್ರೇಣಿಯ ಪ್ರಯಾಣಿಕರನ್ನು ಪೂರೈಸುತ್ತದೆ. ಆರ್ಥಿಕ ಹಾಗೂ ಪ್ರಾದೇಶಿಕ ಅಭಿವೃದ್ಧಿಗೆ ಈ ರೈಲ್ವೆ ಮಾರ್ಗ ಸಹಕಾರಿಯಾಗಲಿದೆ.
ಕರಾವಳಿ ವಿವಿಧ ಜಿಲ್ಲೆಗಳಲ್ಲಿ ಐತಿಹಾಸಿಕ, ಧಾರ್ಮಿಕ ಕ್ಷೇತ್ರಗಳು, ಬೀಚ್‌ಗಳು, ಜಲಪಾತಗಳು ಸೇರಿದಂತೆ ಪ್ರಮುಖ ಪ್ರೇಕ್ಷಣಿಯ ಸ್ಥಳಗಳಿಗೆ. ಉತ್ತರ ಕರ್ನಾಟಕದಲ್ಲೂ ಮಹತ್ವ ಸ್ಥಳಗಳಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತವೆ. ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ತೆರಳುವ ಪ್ರವಾಸಿಗರಿಗೆ ಹೊಸ ಮಾರ್ಗವು ಅನುಕೂಲ ಸಂಚಾರಕ್ಕೆ ಅನುಕೂಲ ಒದಗಿಸುತ್ತದೆ. ಪ್ರವಾಸಿಗರ ಸಂಖ್ಯೆ ಹೆಚ್ಚಾಗಿ, ರಾಜ್ಯ ಪ್ರವಾಸೋದ್ಯಮ ಕ್ಷೇತ್ರ ಬೆಳೆಯುತ್ತದೆ. ಆದಾಯವು ಹೆಚ್ಚಾಗುತ್ತದೆ.
ಈ ಹಿಂದೆ ಚಾಮರಾಜನಗರದಿಂದ ಬೀದರ್‌ಗೆ ಹೊಸ ರೈಲು ಮಾರ್ಗ ನಿರ್ಮಿಸುವ ಪ್ರಸ್ತಾವನೆ ಕೇಳಿ ಬಂದಿತ್ತು. ಭಾರತೀಯ ರೈಲ್ವೆ ಇಂಥದ್ದೊಂದು ಉದ್ದೇಶ ಹೊಂದಿದೆ. ಮುಂದಿನ ದಿನಗಳಲ್ಲಿ ಸಾಕಾರವಾಗಲಿದೆ ಎಂದು ತಿಳಿದು ಬಂದಿದೆ. ಇದರಿಂದಲೂ ಕರ್ನಾಟಕದ ಎರಡು ಗಡಿ ಭಾಗದಿಂದ ರೈಲು ಸಂಚರಿಸುವ ಪ್ರದೇಶಗಳಲ್ಲಿ ಎಲ್ಲ ವಿಧದ ಅಭಿವೃದ್ಧಿಗಳು ಆಗುವ ನಿರೀಕ್ಷೆ ಇದೆ.












Click it and Unblock the Notifications