ಬೀದರ್ ರೇಪ್-ಮರ್ಡರ್: ಆಟೋ ಚಾಲಕನಿಗೆ ಗಲ್ಲು ಶಿಕ್ಷೆ

ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಮನ್ನಾಎಖ್ಖೆಳ್ಳಿ ಅರಣ್ಯ ಪ್ರದೇಶದಲ್ಲಿ ಯುವತಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಗ್ರಾಮದ ಆಟೋ ಚಾಲಕ ಮೊಹಮದ್ ಸುಲ್ತಾನ್ ಜಾಫರ್ ಅಲಿ (32)ಗೆ ಗಲ್ಲು ಶಿಕ್ಷೆ ಪ್ರಾಪ್ತಿಯಾಗಿದೆ.
ಬೀದರ್ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದ ಜಸ್ಟೀಸ್ ಶಶಿಕಾಲ ಉರುಣಕರ್ ಅವರು ಮರಣದಂಡನೆ ವಿಧಿಸಿ, ತೀರ್ಪು ನೀಡಿದ್ದಾರೆ. IPC 302, 394 ಮತ್ತು 201 ಸೆಕ್ಷನ್ನುಗಳಡಿ ಆರೋಪಿಯನ್ನು ತಪ್ಪಿತಸ್ಥ ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ರಾಮಚಂದ್ರ ಲಮಾಣಿ ಅವರು ಸರಕಾರಿ ನ್ಯಾಯವಾದಿಗಳಾಗಿದ್ದರು.
ಬಾಧಿತಳು ಆಂಧ್ರ ಪ್ರದೇಶದ ಅಪರಿಚಿತ ಯುವತಿ. 2011ರ ಆಗಸ್ಟ್ 14ರಂದು ಜಾಫರ್ ತನ್ನ ಸಹಚರರೊಂದಿಗೆ ಆಟೋದಲ್ಲಿ ಆ ಅಪರಿಚಿತ ಯುವತಿಯನ್ನು ಗ್ರಾಮದ ಹೊರವಲಯದ ಅರಣ್ಯ ಪ್ರದೇಶದಲ್ಲಿ ಎಳೆದೊಯ್ದು ಅತ್ಯಾಚಾರವೆಸಗಿ ಕೊಲೆ ಮಾಡಿದ್ದ.
ಗಲ್ಲು ಶಿಕ್ಷೆಗೆ ಗುರಿಯಾಗಿರುವ ಆರೋಪಿ ಜಾಫರ್ ಮೇಲೆ ಹುಮ್ನಾಬಾದ್ ಸುತ್ತಮುತ್ತ ನಡೆದಿರುವ ಮಹಿಳೆಯರ ಹತ್ಯೆ ಆರೋಪವನ್ನೂ ಹೊರಿಸಲಾಗಿದೆ. ಆರೋಪಿಗೆ ದಂಡವನ್ನೂ ವಿಧಿಸಲಾಗಿದೆ. ಆದರೆ ಆರೋಪಿ ಜಾಫರ್, ದಂಡ ಕಟ್ಟುವಷ್ಟು ಶಕ್ತನಾಗಿಲ್ಲದ ಕಾರಣ ಎರಡು ವರ್ಷ ಕಠಿಣ ಶಿಕ್ಷೆ ಅನುಭವಿಸಬೇಕಿದೆ.
ಈ ಹಿಂದೆ ಬೀದರ್ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಸತೀಶ್ ಕುಮಾರ್ ಮಾರ್ಗದರ್ಶನದಲ್ಲಿ ಮನ್ನಾಎಖ್ಖೆಳ್ಳಿ ಠಾಣೆಯ ಪೊಲೀಸರು ಜಾಫರ್ ಜತೆ ಮತ್ತಿಬ್ಬರು ಆರೋಪಿಗಳಾದ ಸೈಯದ್ ತೈಯಾಬ್ ಹಾಗೂ ಮೊಹಮದ್ ಕಲೀಂನನ್ನು ಬಂಧಿಸಿ, 2012 ಜನವರಿಯಲ್ಲಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು.
ಎರಡೂ ಕಡೆಯ ವಾದ ಆಲಿಸಿದ ಕೋರ್ಟ್ ಅಕ್ಟೋಬರ್ 23ರಂದು ಮಹ್ಮದ್ ಸುಲ್ತಾನ್ ಜಾಫರ್ ತಪ್ಪಿತಸ್ಥನೆಂದು ತೀರ್ಪು ನೀಡಿತ್ತು. ನಿನ್ನೆ 29ರಂದು ಕೋರ್ಟ್ ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ.
ಇನ್ನಿಬ್ಬರು ಆರೋಪಿಗಳ ವಿರುದ್ಧ ಸಾಕ್ಷ್ಯಗಳ ಕೊರತೆಯ ಹಿನ್ನೆಲೆಯಲ್ಲಿ ಅವರನ್ನು ಕೋರ್ಟ್ ಖುಲಾಸೆಗೊಳಿಸಿದೆ.












Click it and Unblock the Notifications