ಬೆಂಗಳೂರು-ವಿಜಯಪುರ-ಬಾಗಲಕೋಟೆ ರೈಲು ಸಂಚಾರ ಇನ್ನಷ್ಟು ಸರಳ: ಸಚಿವರ ಅಪ್ಡೇಟ್ ಮಾಹಿತಿ
ಬೆಂಗಳೂರು, ಮಾರ್ಚ್ 15: ರಾಜ್ಯ ರಾಜಧಾನಿ ಬೆಂಗಳೂರಿನಿಂದ ಉತ್ತರ ಕರ್ನಾಟಕದ ವಿಜಯಪುರ ಮತ್ತು ಬಾಗಲಕೋಟೆಗಳಿಗೆ ರೈಲು ಪ್ರಯಾಣವು ಮುಂದಿನ ಕೆಲವೇ ದಿನಗಳಲ್ಲಿ ಸರಳವಾಗಲಿದೆ ಎಂದು ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರು ಸಿಹಿ ಸುದ್ದಿ ನೀಡಿದ್ದಾರೆ.
ಪ್ರಸ್ತುತದಲ್ಲಿ ಬೆಂಗಳೂರಿನಿಂದ ವಿಜಯಪುರ ಮತ್ತು ಬಾಗಲಕೋಟೆವರೆಗೆ ಕ್ರಮಿಸಲು ರೈಲಿಗೆ ಸುಮಾರು 14 ಗಂಟೆಗಳ ಸಮಯ ಬೇಕಾಗುತ್ತಿದೆ. ಇದನ್ನು 10 ಗಂಟೆಗಳಿಗೆ ಇಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ರೈಲ್ವೆ ಅಧಿಕಾರಿಗಳಿಗೆ ಮನವರಿಕೆ ಮಾಡಲಾಗಿದೆ. ಇದು ಸಾಧ್ಯವಾದರೆ ವಾಯವ್ಯ ಕರ್ನಾಟಕದ ಜನರು ಬೆಂಗಳೂರಿಗೆ ಬಂದುಹೋಗಲು ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.

ರೈಲು ಪ್ರಯಾಣ, ವಿದ್ಯುದೀಕರಣ ಕಾಮಗಾರಿ, ವೆಚ್ಚ ಹಂಚಿಕೆಯ 9 ರೈಲು ಯೋಜನೆಗಳ ಸ್ಥಿತಿಗತಿ ಬಗ್ಗೆ ಬೆಂಗಳೂರಿನಲ್ಲಿ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಮತ್ತು ನೈರುತ್ಯ ರೈಲ್ವೆ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಸಚಿವರು ಮಾತನಾಡಿದರು.
ವಿವಿಧ ನಿಲ್ದಾಣಗಳಲ್ಲಿ ಸಮಯ ವ್ಯರ್ಥ
ಬೆಂಗಳೂರು- ವಿಜಯಪುರ ನಡುವಿನ 660 ಕಿ.ಮೀ ರೈಲು ಪ್ರಯಾಣಕ್ಕೆ ಈಗ ಸುಮಾರು 14 ಗಂಟೆ ಸಮಯ ಹಿಡಿಸುತ್ತಿದೆ. ಬೆಂಗಳೂರಿನಿಂದ ಹೊರಡುವ ರೈಲುಗಳು ಈಗ ಹುಬ್ಬಳ್ಳಿ ನಿಲ್ದಾಣಕ್ಕೆ ಹೋಗುತ್ತಿವೆ. ಅಲ್ಲಿ ಎಂಜಿನ್ ಬದಲಿಸಲು 45 ನಿಮಿಷ ನಿಲ್ಲುತ್ತವೆ.
ನಂತರ ಗದಗದಲ್ಲೂ ಹೀಗೆಯೇ ಪ್ರಯಾಣದ ಸಮಯ ವ್ಯರ್ಥವಾಗುತ್ತಿದೆ. ಆದ್ದರಿಂದ, ರೈಲುಗಳು ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಹೋಗುವ ಬದಲು ಹುಬ್ಬಳ್ಳಿ (ದಕ್ಷಿಣ) ನಿಲ್ದಾಣ ಬೈಪಾಸ್ ಮತ್ತು ಗದಗ ಬೈಪಾಸ್ ಮೂಲಕ ಸಾಗುವ ವ್ಯವಸ್ಥೆ ಮಾಡಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕು ಎಂದು ಅವರು ಸೂಚಿಸಿದರು.

ಅಂತಿಮ ಹಂತದಲ್ಲಿ ದ್ವಿಪಥ ಕಾಮಗಾರಿ
ಈಗಾಗಲೇ ಬೆಂಗಳೂರು-ಹುಬ್ಬಳ್ಳಿ-ಬಾಗಲಕೋಟೆ ನಡುವೆ ಜೋಡಿ ಹಳಿ ಇದೆ. ಬಾಗಲಕೋಟೆ-ವಿಜಯಪುರ ಮಧ್ಯೆ ಆಲಮಟ್ಟಿಯವರೆಗೂ ದ್ವಿಪಥ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದ್ದು, ಈ ವರ್ಷದ ಸೆಪ್ಟೆಂಬರ್ ಹೊತ್ತಿಗೆ ಮುಗಿಯಲಿದೆ.
ಇಲ್ಲಿ ಆಲಮಟ್ಟಿ-ವಂಡಾಳ್ ಮಧ್ಯೆ 9 ಕಿ.ಮೀ. ಮಾತ್ರ ಕಾಮಗಾರಿ ಬಾಕಿ ಉಳಿದಿದ್ದು, ಇಲ್ಲಿ ಸೇತುವೆ ಕಾಮಗಾರಿ ನಡೆಯಬೇಕಿದೆ. ಇದನ್ನು 2025ರ ಆಗಸ್ಟ್ ವೇಳೆಗೆ ಪೂರ್ಣಗೊಳಿಸಲಾಗುವುದು. ಜೊತೆಗೆ, ಇನ್ನು ಎರಡು ತಿಂಗಳಲ್ಲಿ ಈ ಮಾರ್ಗದಲ್ಲಿ ಬಾಕಿ ಇರುವ ವಿದ್ಯುದೀಕರಣ ಕೂಡ ಮುಗಿಯಲಿದೆ ಎಂದು ಅವರು ವಿವರಿಸಿದರು.
ಈ ಕ್ರಮಗಳ ಜೊತೆಗೆ ಬೆಂಗಳೂರಿನಿಂದ ವಿಜಯಪುರ, ಬಾಗಲಕೋಟೆಗಳಿಗೆ ವಿಶೇಷ ರೈಲುಗಳನ್ನು ಓಡಿಸಬೇಕಾದ ಅಗತ್ಯವಿದೆ. ಮಿಗಿಲಾಗಿ, ವಿದ್ಯುದೀಕರಣ ಕಾಮಗಾರಿ ಮುಗಿದರೆ ವಿಜಯಪುರ, ಬಾಗಲಕೋಟೆಗಳಿಗೆ 'ವಂದೇ ಭಾರತ್' ಎಕ್ಸಪ್ರೆಸ್ ರೈಲು ಸೇವೆ ಆರಂಭಿಸುವಂತೆ ರೈಲ್ವೆ ಮಂಡಳಿಯನ್ನು ಕೋರಲಾಗುವುದು ಎಂದು ಪಾಟೀಲ್ ಹೇಳಿದರು.
ರೈಲ ಯೋಜನೆಗಳಿಗೆ ಸಚಿವರ ಗಡುವು
ರಾಜ್ಯದಲ್ಲಿ ರೈಲ್ವೆಯೊಂದಿಗೆ ವೆಚ್ಚ ಹಂಚಿಕೆ ಆಧಾರದ ಮೇಲೆ 9 ರೈಲ್ವೆ ಯೋಜನೆಗಳು ಪ್ರಗತಿಯಲ್ಲಿವೆ. ಆದರೆ, ಇವು ಕಾಲಮಿತಿಯಲ್ಲಿ ಪೂರ್ಣಗೊಳ್ಳದೆ ಇರುವುದರಿಂದ ವೆಚ್ಚ ಮಿತಿ ಮೀರುತ್ತಿದೆ. ಆದ್ದರಿಂದ ಇವುಗಳ ವೆಚ್ಚ ಹೆಚ್ಚಾಗದಂತೆ ನೋಡಿಕೊಂಡು, ತ್ವರಿತ ಗತಿಯಲ್ಲಿ ಮುಗಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಹೇಳಿದರು.
ಈ ಪೈಕಿ ಮುನಿರಾಬಾದ್- ಮೆಹಬೂಬ್ ನಗರ ಯೋಜನೆಯನ್ನು 2026ರ ಮಾರ್ಚ್ ವೇಳೆಗೆ, ತುಮಕೂರು- ರಾಯದುರ್ಗ ಯೋಜನೆಯನ್ನು 2027ರ ಡಿಸೆಂಬರ್ ಹೊತ್ತಿಗೆ, ಚಿಕ್ಕಮಗಳೂರು-ಬೇಲೂರು ಯೋಜನೆಯನ್ನು 2026ರ ಹೊತ್ತಿಗೆ, ಬಾಗಲಕೋಟೆ-ಕುಡಚಿ ಯೋಜನೆಯನ್ನು 2027ರ ವೇಳೆಗೆ ಮುಗಿಸಬೇಕು. ತುಮಕೂರು- ದಾವಣಗೆರೆ ಯೋಜನೆಗೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದರು.
ಬಾಗಲಕೋಟೆ-ವಿಜಯಪು ಮಧ್ಯೆ ನೇರ ಸಂಪರ್ಕ
ಕರ್ನಾಟಕ ಸರ್ಕಾರ ಒಂದು ಪಥದ ಅಭಿವೃದ್ಧಿಗೆ ಮಾತ್ರ ವೆಚ್ಚ ಭರಿಸುತ್ತಿದೆ. ಆದರೆ, ರೈಲ್ವೆ ಇಲಾಖೆಯು ಈಗಾಗಲೇ ಜೋಡಿ ಹಳಿ ಹಾಕಲು ತೀರ್ಮಾನಿಸಿದ್ದು, ಈ ಅಭಿವೃದ್ಧಿ ಕಾರ್ಯ 2027ಕ್ಕೆ ಪೂರ್ಣಗೊಳ್ಳಲಿದೆ. ಇದರಿಂದ ಬಾಗಲಕೋಟೆ ಮತ್ತು ವಿಜಯಪುರಗಳ ನಡುವಿನ ನೇರ ಸಂಚಾರಕ್ಕೆ ಅನುಕೂಲವಾಗಲಿದೆ.
ಗದಗ-ವಾಡಿ ಮಾರ್ಗದಲ್ಲಿ ಬರುವ ಹಳಕಟ್ಟೆ ಎಂಬಲ್ಲಿ ಭೂಸ್ವಾಧೀನದ ಸಮಸ್ಯೆ ಎದುರಾಗಿದೆ. ಆರ್ ಟಿಸಿಯಲ್ಲಿ ಒಬ್ಬರ ಹೆಸರು ಇದ್ದರೆ, ವಾಸ್ತವದಲ್ಲಿ ಆ ಜಾಗದಲ್ಲಿ ಬೇರೆಯವರಾರೋ ಇರುವುದು ಗಮನಕ್ಕೆ ಬಂದಿದೆ. ಪ್ರಕರಣದ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಶೀಘ್ರ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.
ಸಭೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ.ಎನ್ ಮಂಜುಳಾ, ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸತೀಶ, ನೈರುತ್ಯ ರೈಲ್ವೆಯ ಮುಖ್ಯ ಆಡಳಿತಾಧಿಕಾರಿ ರಾಮಗೋಪಾಲ್, ರೈಲ್ವೆಯ ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್ ಮೂರ್ತಿ ರಾಜು, ಕೈಗಾರಿಕಾ ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ ಮತ್ತಿತರರು ಉಪಸ್ಥಿತರಿದ್ದರು.











Click it and Unblock the Notifications