ಶಿವಮೊಗ್ಗ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ಮೇಲೆ 'ಭರ್ಜರಿ ಸಬ್ಸಿಡಿ' ಘೋಷಿಸಿದ ಸರ್ಕಾರ
ಶಿವಮೊಗ್ಗ, ಆಗಸ್ಟ್ 31: ಶಿವಮೊಗ್ಗ ನಗರದಿಂದ 15 ಕಿ.ಮೀ. ದೂರದ ಸೋಗಾನೆಯಲ್ಲಿ 450 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಸುಸಜ್ಜಿತ ನೂತನ 'ಕುವೆಂಪು ವಿಮಾನ ನಿಲ್ದಾಣ'ಕ್ಕೆ ಇಂಡಿಗೋ ಸಂಸ್ಥೆಯ ವಿಮಾನವು ಗುರುವಾರ ಬಂದಿಳಿಯಿತು. ವಿಮಾನಯಾನ ಕಾರ್ಯಾಚರಣೆಗಳು ಇಂದಿನಿಂದ ಆರಂಭವಾಗಿದ್ದು, ಪ್ರಯಾಣಿಕರಿಗೆ ಸರ್ಕಾರ ಭರ್ಜರಿ ಸಬ್ಸಿಡಿ ಗಿಫ್ಟ್ ಅನ್ನು ಘೋಷಿಸಿದೆ.
ಬೆಂಗಳೂರಿನಿಂದ ಶಿಮವೊಗ್ಗಕ್ಕೆ ಹಾರಿದ ಮೊದಲ ವಿಮಾನ ಆಗಮಿಸಿದ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು. ಮುಂದಿನ ಒಂದು ವರ್ಷ ಕಾಲ ಶಿವಮೊಗ್ಗ- ಬೆಂಗಳೂರು ನಡುವೆ ಪ್ರಯಾಣಿಸುವ ಪ್ರತಿಯೊಬ್ಬರ ಟಿಕೆಟ್ ಮೇಲೆ ₹500 ಹಣವನ್ನು ರಾಜ್ಯ ಸರ್ಕಾರ ಸಬ್ಸಿಡಿ ನೀಡಲಿದೆ ಎಂದು ಅವರು ಘೋಷಿಸಿದರು. ಈ ಮೂಲಕ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬರುವವರ ಟಿಕೆಟ್ ಹಣದ ಮೇಲೆ ಸರ್ಕಾರದಿಂದ 500 ರೂ.ಸಹಾಯಧನ ಸಿಗಲಿದೆ ಎಂದರು.

ಕರ್ನಾಟಕದ ಅಭಿವೃದ್ಧಿಯ ಯಶೋಗಾಥೆಯಲ್ಲಿ ಇದೊಂದು ವಿನೂತನ ಅಧ್ಯಾಯವಾಗಿದೆ. ರಸಋಷಿ ಕುವೆಂಪು ಅವರ ಹೆಸರನ್ನು ಹೊರಲಿರುವ ಈ ವಿಮಾನ ನಿಲ್ದಾಣದಿಂದ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಚಿತ್ರದುರ್ಗ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ.
ವಿಮಾನ ನಿಲ್ದಾಣ ಆರಂಭ ಮೂಲಕ ಮಲೆನಾಡು ಮತ್ತು ಮಧ್ಯಮ ಕರ್ನಾಟಕದ ಆರ್ಥಿಕ, ಕೈಗಾರಿಕಾ ಮತ್ತು ಶೈಕ್ಷಣಿಕ ಬೆಳವಣಿಗೆ ಹೊಸ ಮಜಲನ್ನು ಮುಟ್ಟಲಿದೆ ಎಂದು ಅವರು ಬಣ್ಣಿಸಿದರು. ಅಲ್ಲದೇ ಯೋಜನೆಯ ಸಾಕಾರಕ್ಕೆ ಕನಸು ಕಂಡು, ಅದರ ಅನುಷ್ಠಾನಕ್ಕೆ ಶ್ರಮಿಸಿದ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಇತರ ನಾಯಕರ ಶ್ರಮ ಉಲ್ಲೇಖಿಸಿದರು.

ಏರ್‌ಬಸ್-ನೈಟ್ ಲ್ಯಾಂಡಿಂಗ್ ಕಾಮಗಾರಿ
ಸೋಗಾನೆಯಲ್ಲಿ 779 ಎಕರೆ ವಿಸ್ತಾರದಲ್ಲಿ ನಿರ್ಮಿಸಿರುವ ವಿಮಾನ ನಿಲ್ದಾಣದಲ್ಲಿ ಮೂಲಯೋಜನೆಯ ವಿನ್ಯಾಸವನ್ನು ಪರಿಷ್ಕರಿಸಲಾಯಗಿದೆ. ಏರ್‍ಬಸ್-320 ಮಾದರಿಯ ವಿಮಾನಗಳು ಕೂಡ ಬಂದಿಳಿಯುವ ಮತ್ತು ನೈಟ್ ಲ್ಯಾಂಡಿಂಗ್‌ಗೂ ಸೌಲಭ್ಯ ಕಲ್ಪಿಸಲಾಗುತ್ತಿದೆ. ಕಾಮಗಾರಿ ಪ್ರಗತಿಯಲ್ಲಿದೆ.
ಕಾಮಗಾರಿ ಮುಗಿಯುತ್ತಿದ್ದಂತೆಯೇ ಶಿವಮೊಗ್ಗವನ್ನು ಭಾರತದ ಅಭಿವೃದ್ಧಿ ಕಾರಿಡಾರ್ ಜತೆ ಜೋಡಿಸಲಾಗುವುದು. ಇದಕ್ಕೆ ತಕ್ಕಂತೆ 3,050 ಮೀಟರ್ ಉದ್ದದ ರನ್‌ವೇ ನಿರ್ಮಿಸಲಾಗಿದೆ. 4,340 ಚದರ ಮೀಟರ್ ವಿಸ್ತೀರ್ಣದ ಪ್ರಯಾಣಿಕರ ಟರ್ಮಿನಲ್ ಹೊಂದಿದೆ ಎಂದು ತಿಳಿಸಿದರು.
60 ನಿಮಿಷಗಳಲ್ಲಿ ರಾಜಧಾನಿ-ಮಲೆನಾಡು ಸಂಪರ್ಕ
ಸದ್ಯಕ್ಕೆ ಇಲ್ಲಿಂದ ಬೆಂಗಳೂರಿಗೆ ಕನೆಕ್ಟಿಂಗ್ ವಿಮಾನಯಾನ ಸೇವೆ ಲಭ್ಯವಾಗಲಿದೆ. ಬೆಂಗಳೂರನ್ನು ಕೇವಲ 60 ನಿಮಿಷಗಳಲ್ಲಿ ತಲುಪಿ, ಅಲ್ಲಿಂದ ಚೆನ್ನೈ, ಮುಂಬೈ ಮತ್ತು ದೆಹಲಿಗೆ ತೆರಳಲಿರುವ ಇಂಡಿಗೋ ಸಂಸ್ಥೆಯ ವಿಮಾನಗಳ ಮೂಲಕ ಪ್ರಯಾಣವನ್ನು ಮುಂದುವರಿಸಬಹುದು.

ಉಡಾನ್ ಯೋಜನೆಯಡಿ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಸದ್ಯದಲ್ಲೇ ಅಧಿಕೃತ ವಾಗಿ ಪ್ರಕಟಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ದೆಹಲಿ, ಹೈದರಾಬಾದ್ ಸೇರಿದಂತೆ ದೇಶದ ನಾನಾ ನಗರಗಳಿಗೆ ಇಲ್ಲಿಂದ ನೇರ ವಿಮಾನಯಾನ ಆರಂಭಿಸಲಾಗುವುದು ಎಂದು ಸಚಿವರು ವಿವರಿಸಿದರು.
ಮಲೆನಾಡಿನ ಕೇಂದ್ರಸ್ಥಾನವಾದ ಶಿವಮೊಗ್ಗದಲ್ಲಿ ವಿಮಾನಯಾನ ಸೇವೆ ಲಭ್ಯವಾಗಬೇಕೆಂಬುದು ದಶಕಗಳ ಕನಸಾಗಿತ್ತು. ವಿಮಾನಸೇವೆಗೆ ಜನರಿಂದ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮುಂದಿನ ಮೂರು ವಾರಗಳ ಟಿಕೆಟ್ ಈಗಾಗಲೇ ಬುಕಿಂಗ್ ಆಗಿದೆ. ಇಲ್ಲಿಂದ ಮುಂದಿನ ದಿನಗಳಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯನ್ನು ಕೇವಲ ಐದು ಗಂಟೆಗಳಲ್ಲಿ ತಲುಪಬಹುದು. ಆರ್ಥಿಕತೆಯ ಬೆಳವಣಿಗೆಗೆ ತಕ್ಕಂತೆ ನಮ್ಮ ಮೂಲಸೌಕರ್ಯ ಮತ್ತು ಅಭಿವೃದ್ಧಿ ಪರಿಕಲ್ಪನೆಗಳು ಕೂಡ ಬದಲಾಗುತ್ತಿರುತ್ತವೆ ಎಂದರು.
ಸ್ಥಳದಲ್ಲೇ ಟಿಕೆಟ್ ಖರೀದಿಗೆ ಅವಕಾಶ
ವಿಮಾನಯಾನ ಕೂಡ ಸುಲಭವಾಗಿ ಲಭ್ಯವಾಗಬೇಕು ಎನ್ನುವುದು ರಾಜ್ಯ ಸರ್ಕಾರ ಚಿಂತನೆ ಆಗಿದೆ. ಹೀಗಾಗಿ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಸ್ಥಳದಲ್ಲೇ ಟಿಕೆಟ್ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಇನ್ನೂ ಪ್ರಯಾಣಿಕರಿಗೂ ಸರ್ಕಾರ ವತಿಯಿಂದ ಮುಂದಿನ ಒಂದು ವರ್ಷ ಕಾಲ 500 ರೂ. ಸಬ್ಸಿಡಿ ನೀಡುವುದರಿಂದ ಸಾಮಾನ್ಯರು ವಿಮಾನದಲ್ಲಿ ಪ್ರಯಾಣಿಸಲು ಉತ್ತೇಜನ ನೀಡಿದಂತಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಶಿವಮೊಗ್ಗ ವಿಮಾ ನಿಲ್ದಾಣದಲ್ಲಿ ವಿಮಾನ ಸೇವೆ ಗುರುವಾರ ಆರಂಭವಾಯಿತು. ಮೊದಲ ಇಂಡಿಗೋ ವಿಮಾನ ಬೆಂಗಳೂರಿನಿಂದ ಶಿವವೊಗ್ಗಕ್ಕೆ ಹಾರಿತು. ಇದರಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ, ಮಾಜಿ ಸಚಿವ ಕೆ ಎಸ್ ಈಶ್ವರಪ್ಪ, ಶಾಸಕ ಆರಗ ಜ್ಞಾನೇಂದ್ರ, ಸಚಿವ ಎಂಬಿ ಪಾಟೀಲ್ ಮತ್ತಿತರರು ಸಂಚರಿಸಿದರು.
ಬೆಂಗಳೂರು-ಶಿವಮೊಗ್ಗಕ್ಕೆ ಗಣ್ಯರ ಮೊದಲ ಸಂಚಾರ
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ 9.50ಕ್ಕೆ ಹೊರಟ ಚೊಚ್ಚಲ ವಿಮಾನವು 11.05ಕ್ಕೆ ಶಿವಮೊಗ್ಗಕ್ಕೆ ತಲುಪಿತು. ಶಿವಮೊಗ್ಗದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ವಾಟರ್ ಸೆಲ್ಯೂಟ್ ಮೂಲಕ ಸಂಭ್ರಮಾಚರಣೆ ಮಾಡಲಾಯಿತು. ಜೊತೆಗೆ ಬಂದಿಳಿದ ಎಲ್ಲ ಪ್ರಯಾಣಿಕರಿಗೂ ಸಚಿವ ಮಧು ಬಂಗಾರಪ್ಪ ಅವರಲ್ಲದೆ ವಿಮಾನ ನಿಲ್ದಾಣದ ಸಿಬ್ಬಂದಿ ಗುಲಾಬಿ ಹೂವು ಮತ್ತು ಸಿಹಿ ನೀಡಿ ಸ್ವಾಗತಿಸಿದರು.
ವಾಪಸ್ ಬೆಂಗಳೂರಿಗೆ ಹೊರಟ ವಿಮಾನದಲ್ಲಿ ಸಚಿವ ಎಂ.ಬಿ.ಪಾಟೀಲ ಜತೆ ಸಚಿವ ಮಧು ಬಂಗಾರಪ್ಪ ಕೂಡ ಪ್ರಯಾಣಿಸಿದರು.
ವಿಮಾನಸೇವೆ ವೇಳಾಪಟ್ಟಿ ಹೀಗಿದೆ
ಇಂಡಿಗೋ ವಿಮಾನವು ಶಿವಮೊಗ್ಗ ವಿಮಾನ ನಿಲ್ದಾಣದಿಂದ ಪ್ರತಿದಿನ ಬೆಳಗ್ಗೆ 11.25ಕ್ಕೆ ಹೊರಟು 12.25ಕ್ಕೆ ಬೆಂಗಳೂರನ್ನು ತಲುಪಲಿದೆ. ಅಲ್ಲಿಂದ ಚೆನ್ನೈ, ಮುಂಬೈ ಮತ್ತು ದೆಹಲಿಗೆ ಹೊರಡಲಿರುವ ಇಂಡಿಗೋ ವಿಮಾನಗಳನ್ನು ಹಿಡಿಯಬಹುದು. ಈ ಸೇವೆಯು ಸೆಪ್ಟಂಬರ್ 10ರಿಂದ ಲಭ್ಯವಾಗಲಿದೆ. ಇದೇ ರೀತಿಯಲ್ಲಿ ಬೆಂಗಳೂರಿನ ಕಡೆಯಿಂದ ಇದೇ ವಿಮಾನವು ಪ್ರತಿದಿನ ಬೆಳಗ್ಗೆ 9.55ಕ್ಕೆ ಹೊರಟು 11.05ಕ್ಕೆ ಶಿವಮೊಗ್ಗದಲ್ಲಿ ಇಳಿಯಲಿದೆ.t












Click it and Unblock the Notifications