Railway News: ಡಿ.10ರಿಂದ ಜ.29ರವರೆಗೆ ಬೆಂಗಳೂರು-ಮುರುಡೇಶ್ವರಕ್ಕೆ ವಿಶೇಷ ರೈಲು ಸಂಚಾರ
ಬೆಂಗಳೂರು, ಡಿಸೆಂಬರ್ 08: ರಾಜ್ಯ ರಾಜಧಾನಿ ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಿಂದ ಕರಾವಳಿಯ ಮುರುಡೇಶ್ವರಕ್ಕೆ ಮತ್ತು ಮುರುಡೇಶ್ವರ- ಯಶವಂತಪುರಕ್ಕೆ ವಾರಕ್ಕೆ ಒಂದು ಬಾರಿ ವಿಶೇಷ ರೈಲುಗಳು ಸಂಚರಿಸಲಿದೆ ಎಂದು ನೈರುತ್ಯ ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.
ಪ್ರಯಾಣಿಕರ ಒತ್ತಾಯದ ಮೇರೆಗೆ ನೈರುತ್ಯ ರೈಲ್ವೆ ಇಲಾಖೆ ವಾರದಲ್ಲಿ ಒಮ್ಮೆಯಂತೆ ಇದೇ ಡಿಸೆಂಬರ್ 10ರಿಂದ ಜನೇವರಿ 29ರವರೆಗೆ ಬೆಂಗಳೂರು-ಮುರುಡೇಶ್ವರ ಸಾಪ್ತಾಹಿಕ ರೈಲು (ರೈಲು ಸಂಖ್ಯೆ - 06563) ಓಡಿಸಲು ನಿರ್ಧರಿಸಿದೆ. ಅದರ ವೇಳಾಪಟ್ಟಿ, ಮಾರ್ಗಗಳು, ನಿಲುಗಡೆ ಕುರಿತು ಇಲ್ಲಿ ತಿಳಿದುಕೊಳ್ಳಬಹುದು.
ಈ ರೈಲು ನಿಗದಿತ ಅವಧಿಯಲ್ಲಿ ಬರುವ ಪ್ರತಿ ಶನಿವಾರ ರಾತ್ರಿ 11.55 ಗಂಟೆಗೆ ಯಶವಂತಪುರ ರೈಲು ನಿಲ್ದಾಣದಿಂದ ಹೊರಡಲಿದೆ. ಮರುದಿನ ಭಾನುವಾರ ಮಧ್ಯಾಹ್ನ ಸುಮಾರು 12.55ಕ್ಕೆ ಮುರುಡೇಶ್ವರ ತಲುಪುತ್ತದೆ. ಈ ರೀತಿ ಸಾಪ್ತಾಹಿಕ ರೈಲು ಜನವರಿ 29ರವರೆಗೆ ಒಟ್ಟು ಎಂಟು ಭಾರಿ ಸಂಚರಿಸಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಯಶವಂತಪುರದಿಂದ ಹೊರಡುವ ಈ ರೈಲು ಚಿಕ್ಕಬಾಣಾವರ, ನೆಲಮಂಗಲ, ಕುಣಿಗಲ್, ಶ್ರವಣಬೆಳಗೊಳ, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕ ಪುತ್ತೂರು, ಬಂಟ್ವಾಳ, ಸುರತ್ಕಲ್, ಮೂಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಬೈಂದೂರು, ಭಟ್ಕಳ ಮಾರ್ಗವಾಗಿ ಸಾಗಿ ಮುರುಡೇಶ್ವರ ತಲುಪಲಿದೆ. ಈ ಪ್ರತಿ ನಿಲ್ದಾಣಗಳಲ್ಲಿಯೂ ನಿಲುಗಡೆ ರೈಲಿಗೆ ಇರಲಿದೆ.
ಮರಳಿ ಮುರುಡೇಶ್ವರದಿಂದ ಇದೇ ಮಾರ್ಗವಾಗಿ ರೈಲು (ರೈಲು ಸಂಖ್ಯೆ -06564) ಡಿಸೆಂಬರ್ 11ರಿಂದ ಜನವರಿ 29ರವರೆಗೆ ಪ್ರತಿ ಭಾನುವಾರ ಮಧ್ಯಾಹ್ನ 1.30ಕ್ಕೆ ಹೊರಡಲಿದೆ. ಮರುದಿನ ಸೋಮವಾರ ಬೆಳಗ್ಗೆ 4 ಗಂಟೆಗೆ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ಆಗಮಿಸಲಿದೆ.
ರೈಲಿನ ವಿಶೇಷತೆ ಏನು?
ಹವಾನಿಯಂತ್ರಿತ ಎರಡನೇ ದರ್ಜೆಯ ಒಂದು ಬೋಗಿ, ಹವಾನಿಯಂತ್ರಿತ ಮೂರನೇ ದರ್ಜೆಯ ಎರಡು ಬೋಗಿಗಳು, ಏಳು ಸ್ಲೀಪರ್ ಕ್ಲಾಸ್, ನಾಲ್ಕು ದ್ವಿತೀಯ ದರ್ಜೆ ಸಾಮಾನ್ಯ ಬೋಗಿಗಳು ಸೇರಿದಂತೆ ಒಟ್ಟು 16 ಬೋಗಿಗಳನ್ನು ಈ ರೈಲು ಹೊಂದಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications