KSRTC: ಬೆಂಗಳೂರಿನಿಂದ 2 ಜಿಲ್ಲೆಗಳಿಗೆ ಹೊಸದಾಗಿ ಎಸಿ, ನಾನ್ ಎಸಿ ಸ್ಲೀಪರ್ ಬಸ್ ಸೇವೆ: ಟಿಕೆಟ್ ದರ, ವೇಳಾಪಟ್ಟಿ
ಬೆಂಗಳೂರು, ಡಿಸೆಂಬರ್ 04: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ವತಿಯಿಂದ ಎರಡು ಜಿಲ್ಲೆಗಳಿಗೆ ಹೊಸದಾಗಿ ಬಸ್ ಸೇವೆ ಆರಂಭವಾಗಿದೆ. ಒಂದು ಎಸಿ ಸ್ಲೀಪರ್ ಬಸ್ ಸೇವೆ ಮತ್ತೊಂದು ನಾನ್ ಎಸಿ ಬಸ್ ಸೇವೆ ಆಗಿದೆ. ಬೆಂಗಳೂರಿನಿಂದ ತೆರಳುವವರಿಗೆ ಅನುಕೂಲವಾಗಲೆಂದು ಹೊಸ ಮಾರ್ಗದಲ್ಲಿ ಬಸ್ ಸೇವೆ ಆರಂಭಿಸಲಾಗಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.
ರಾಜಧಾನಿ ಬೆಂಗಳೂರಿನಿಂದ ರಾಯಚೂರು ಜಿಲ್ಲೆಯ ಮಾನವಿಗೆ ವಿವಿಧ ಜಿಲ್ಲಾ ಪ್ರದೇಶಗಳ ಮೂಲಕ ನಾನ್ ಎಸಿ ಸ್ಲೀಪರ್ KSRTC ಬಸ್ ಸೇವೆ ಆರಂಭಿಸಲಾಗಿದೆ. ಮತ್ತೊಂದು ಬೆಂಗಳೂರಿನಿಂದ ಬಾಗಲಕೋಟೆಗೆ ಎಸಿ ಸ್ಲೀಪರ್ ಬಸ್ ಸೇವೆ ಶುರುವಾಗಿದೆ. ಇದರಿಂದ ದೈನಂದಿನ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ನೇರ ಬಸ್ ಸೇವೆ ಸಿಕ್ಕಂತಾಗುತ್ತದೆ. ಪ್ರಯಾಣಿಕರ ದೀರ್ಘ ಕಾಲದ ಬೇಡಿಕೆ ಹಾಗೂ ಈ ಮಾರ್ಗದ ಪ್ರಯಾಣಿಕರ ಸಂಖ್ಯೆಯ ಹೆಚ್ಚಳದ ಹಿನ್ನೆಲೆ ನಿಗಮವು ಹೊಸ ಸೇವೆ ಒದಗಿಸಿದೆ.

ಬೆಂಗಳೂರು-ಮಾನವಿ ನಾನ್ ಎಸಿ ಬಸ್ (ಸಂಖ್ಯೆ 457) ವೇಳಾಪಟ್ಟಿ
ಬೆಂಗಳೂರು ನಿಲ್ದಾಣದಿಂದ ರಾತ್ರಿ 09:30 ಕ್ಕೆ ಹೊರಡುವ ನಾನ್ ಎಸಿ ಬಸ್ ಮರುದಿನ ಬೆಳಗ್ಗೆ 05:45ಕ್ಕೆ ಮಾನವಿ ನಿಲ್ದಾಣ ತಲುಪುತ್ತದೆ. ಅಲ್ಲಿಂದ ಮರಳಿ ಅದೇ ಬಸ್ ರಾತ್ರಿ 08:00 ಗಂಟೆಗೆ ಬಿಡುತ್ತದೆ. ಮರುದಿನ ಬೆಳಗ್ಗೆ 04:15 ಬೆಂಗಳೂರು ನಿಲ್ದಾಣಕ್ಕೆ ಬಂದು ಸೇರುತ್ತದೆ.
ಮಾರ್ಗ ಮಧ್ಯ ಈ ಬಸ್ ಬೆಂಗಳೂರಿನಿಂದ ಹೊರಟು, ತುಮಕೂರು, ಶಿರಾ, ಸಿರಗಪ್ಪ, ಬಳ್ಳಾರಿ, ಸಿಂಧನೂರು ಮೂಲಕ ಮಾನವಿಗೆ ತಲುಪಲಿದೆ. ಈ ಎಲ್ಲ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.
ಟಿಕೆಟ್ ದರ ಎಷ್ಟು?
ಬೆಂಗಳೂರು - ಬಳ್ಳಾರಿ ಟಿಕೆಟ್ ದರ 767 ರೂಪಾಯಿ, ಬೆಂಗಳೂರು- ಸಿರಗುಪ್ಪಕ್ಕೆ 889 ರೂಪಾಯಿ, ಬೆಂಗಳೂರು-ಸಿಂಧನೂರಿಗೆ 924 ರೂಪಾಯಿ, ಬೆಂಗಳೂರು- ಮಾನವಿಗೆ ತಲಾ ಒಬ್ಬರಿಗೆ 990 ರೂಪಾಯಿ ಟಿಕೆಟ್ ದರ ನಿಗದಿ ಮಾಡಲಾಗಿದೆ. ಆನ್‌ಲೈನ್ ಬುಕ್ಕಿಂಗ್‌ಗೆ ಅಧಿಕೃತ ವೆಬ್‌ಸೈಟ್ https://ksrtc.in ಗೆ ಭೇಟಿ ನೀಡಬೇಕು. KSRTC ಮೊಬೈಲ್ ಆಪ್‌ಗಳ QR ಕೋಡ್‌ಗಳನ್ನು ಒದಗಿಸಲಾಗಿದೆ.
ಸ್ಥಳೀಯರಿಗೆ ಪ್ರಮುಖ ಸಾರಿಗೆ ನೆರವು
ಮಾನವಿ, ಸಿಂಧನೂರು ಹಾಗೂ ಬಳ್ಳಾರಿ, ರಾಯಚೂರು ಭಾಗಗಳ ಜನರಿಗೆ ಬೆಂಗಳೂರಿಗೆ ನೇರ ಮತ್ತು ಆರಾಮದಾಯಕ ಪ್ರಯಾಣದ ಅನುಕೂಲ ಸಿಗುವುದರಿಂದ ಈ ಹೊಸ ಸೇವೆ ಸ್ಥಳೀಯರಿಂದ ಉತ್ತಮ ಸ್ವಾಗತ ಪಡೆದಿದೆ. ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ವ್ಯಾಪಾರಿಗಳಿಗೆ ಈ ಬಸ್ ಸೇವೆ ಸಹಾಯಕಾರಿ ಆಗಲಿದೆ.
ಬೆಂಗಳೂರು-ಬಾಗಲಕೋಟೆಗೆ ಎಸಿ ಸ್ಲೀಪರ್ ಬಸ್ ಸೇವೆ
ಬೆಂಗಳೂರು-ಬಾಗಲಕೋಟೆವರೆಗೆ ಪ್ರಯಾಣಿಕರಿಗೆ ಎಸಿ ಸ್ಲೀಪರ್ ಬಸ್ ಸೇವೆ ಆರಂಭಿಸಲಾಗಿದೆ. ಬೆಂಗಳೂರು ಕೇಂದ್ರೀಯ ವಿಭಾಗದಿಂದ ಬಾಗಲಕೋಟೆಗೆ ನಿತ್ಯ ಬಸ್ ಸೇವೆ ಲಭ್ಯವಾಗಲಿದೆ. ಬೆಂಗಳೂರಿನಿಂದ ರಾತ್ರಿ 9 ಗಂಟೆಗೆ ಪ್ರಯಾಣ ಆರಂಭಿಸಿ ಮಾರನೇ ದಿನ 5.15ಕ್ಕೆ ಬಾಗಲಕೋಟೆ ತಲುಪಲಿದೆ.
ಬಸ್ ಮಾರ್ಗಗಳು, ಟಿಕೆಟ್ ದರ
ಒಟ್ಟು 489 ಕಿಲೋ ಮೀಟರ್ ದೂರದ ಪ್ರಯಾಣ ಇದಾಗಿದೆ. ಬೆಂಗಳೂರಿನಿಂದ ಹೊಸಪೇಟೆ, ಕುಷ್ಟಗಿ, ಹುನಗುಂದ, ಬಾಗಲಕೋಟೆ ಮಾರ್ಗವಾಗಿ ಪ್ರಯಾಣಿಸಲಿದೆ. ಬೆಂಗಳೂರಿನಿಂದ ಹೊಸಕೋಟೆಗೆ 900 ರೂಪಾಯಿ, ಕುಷ್ಟಗಿಗೆ 1033 ರೂಪಾಯಿ, ಹುನಗುಂದ 1152 ರೂಪಾಯಿ ಮತ್ತು ಬಾಗಲಕೋಟೆಗೆ 1246 ರೂಪಾಯಿ ಟಿಕೆಟ್ ದರ ಇದೆ. ಟಿಕೆಟ್ ಬುಕ್ಕಿಂಗ್‌ಗೆ https://ksrtc.in/ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.












Click it and Unblock the Notifications