ಹೈಕೋರ್ಟ್‌ನಲ್ಲಿ ಬೆಂಗಳೂರು ಹೋಟೆಲ್‌ಗಳ ಸಂಘಕ್ಕೆ ಜಯ
ಬೆಂಗಳೂರು, ಫೆಬ್ರವರಿ 15: ವಿಧಾನಪರಿಷತ್ ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ದಿನಕ್ಕೂ ಹಿಂದಿನ 48 ಗಂಟೆ ಅವಧಿಯಲ್ಲಿ ಮದ್ಯ ಮಾರಾಟ ನಿಷೇಧಿಸಿದ್ದ ಬೆಂಗಳೂರು ನಗರ ಜಿಲ್ಲಾಧಿಕಾರಿಯ ಆದೇಶವನ್ನು ನ್ಯಾಯಾಲಯ ಮಾರ್ಪಾಡು ಮಾಡಿದೆ. ನ್ಯಾಯಾಲಯದ ಆದೇಶದಂತೆ ಮತದಾನದ ದಿನ ಮತ್ತು ಮತ ಎಣಿಕೆ ದಿನಕ್ಕೆ ಮಾತ್ರ ನಿರ್ಬಂಧ ಅನ್ವಯವಾಗಲಿದೆ. ಹಾಗಾಗಿ ಪಾನಪ್ರಿಯರಿಗೆ ಇದು ಸಿಹಿ ಸುದ್ದಿಯಾಗಿದೆ.
ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಆಯುಕ್ತರು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಬೆಂಗಳೂರು ಹೋಟೆಲ್‌ಗಳ ಸಂಘ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಆರ್. ಕೃಷ್ಣಕುಮಾರ್ ಅವರ ಏಕಸದಸ್ಯಪೀಠ ಈ ಆದೇಶ ಮಾಡಿದೆ.

ಚುನಾವಣೆ ಮುಕ್ತಾಯಕ್ಕೆ ಹಿಂದಿನ 48 ಗಂಟೆ ಅವಧಿಯಲ್ಲಿ ಮದ್ಯ ಮಾರಾಟ ನಿರ್ಬಂಧಿಸಬಹುದು ಎಂಬ ಸರ್ಕಾರದ ವಾದವನ್ನು ತಿರಸ್ಕರಿಸಿತು. ಜತೆಗೆ, ಮತದಾನದ ದಿನವಾದ ಫೆಬ್ರವರಿ 16 ಮತ್ತು ಮತ ಎಣಿಕೆ ದಿನವಾದ ಫೆಬ್ರವರಿ 20ರಂದು ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12ರವರೆಗೆ ಮಾತ್ರ ನಗರದಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧಿಸಿ ಮಧ್ಯಂತರ ಆದೇಶ ಮಾಡಿತು. ಆ ಮೂಲಕ ಬೆಂಗಳೂರು ನಗರ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಆಯುಕ್ತರ ಆದೇಶವನ್ನು ಮಾರ್ಪಡಿಸಿತು.
ಆಹಾರ ಪೂರೈಕೆಗಿಲ್ಲ ನಿರ್ಬಂಧ: ಮತದಾನ ಹಾಗೂ ಮತ ಎಣಿಕೆ ದಿನದಲ್ಲಿ ಆಹಾರ ಪೂರೈಸಲು ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಿಗೆ ಯಾವುದೇ ನಿರ್ಬಂಧವಿಲ್ಲ. ಇದರಿಂದ ಮದ್ಯ ಮಾರಾಟದ ನಿಷೇಧ ಆದೇಶವನ್ನು ಪರಿಶೀಲನೆ ನಡೆಸಲಾಗಿದೆ.
ಶಿಕ್ಷಕರ ಕ್ಷೇತ್ರದ ಮತದಾರರು ಶಿಕ್ಷಕರಾಗಿದ್ದಾದ್ದು, ಮದ್ಯ ಮಾರಾಟ ನಿರ್ಬಂಧಿಸದಿದ್ದರೆ ಶಿಕ್ಷಕರು ಮದ್ಯ ಸೇವಿಸುತ್ತಾರೆ ಎಂದು ಭಾವಿಸಬೇಕಿಲ್ಲ. ಮುಕ್ತ ಹಾಗೂ ನ್ಯಾಯಸಮ್ಮತ ಮತದಾನಕ್ಕೆ ಇಷ್ಟು ದಿನದ ನಿರ್ಬಂಧ ಅಗತ್ಯವಿಲ್ಲ ಎಂದು ಆದೇಶದಲ್ಲಿ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಇದಕ್ಕೂ ಮುನ್ನ ರಾಜ್ಯ ಸರ್ಕಾರದ ಪರ ಹೆಚ್ಚುವರಿ ಅಡ್ವೋಕೇಟ್ ಜನರಲ್ ಪ್ರತಿಮಾ ಹೊನ್ನಾಪುರ ಹಾಜರಾಗಿ, ಚುನಾವಣೆ ಮುಕ್ತಾಯಕ್ಕೆ ಮುನ್ನ 48 ಗಂಟೆ ಅವಧಿಯಲ್ಲಿ ಹಾಗೂ ಮತ ಎಣಿಕೆ ದಿನದಂದು ಮದ್ಯ ಮಾರಾಟಕ್ಕೆ ನಿರ್ಬಂಧಿಸಬಹುದು ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಈ ವಾದವನ್ನು ನ್ಯಾಯಪೀಠ ಒಪ್ಪಲಿಲ್ಲ.
ಅರ್ಜಿದಾರರ ಪರ ಹಿರಿಯ ವಕೀಲರು, ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ಸಾರ್ವತ್ರಿಕ ಚುನಾವಣೆಯಲ್ಲ. ಇದರಲ್ಲಿ ಕೇವಲ 16 ಸಾವಿರ ಮತದಾರರು ಮತ ಚಲಾಯಿಸಲು ಅರ್ಹತೆ ಹೊಂದಿದ್ದಾರೆ. 48 ಗಂಟೆಗಳ ಅವಧಿಯವರೆಗೆ ಮದ್ಯ ಮಾರಾಟ ನಿಷೇಧಿಸಿದರೆ ವರ್ತಕರು, ಉದ್ದಿಮೆದಾರರು ಸಾಕಷ್ಟು ತೊಂದರೆ ಅನುಭವಿಸಲಿದ್ದಾರೆ. ಹಾಗಾಗಿ, ಈ ಪ್ರಕರಣದಲ್ಲೂ ಕೇವಲ ಮತದಾನದ ದಿನದಂದು ಮಾತ್ರವೇ ನಿಷೇಧ ಅನ್ವಯಿಸಲು ನಿರ್ದೇಶಿಸಬೇಕು ಎಂದು ಕೋರಿದ್ದರು.
ವಿಧಾನ ಪರಿಷತ್‌ನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಫೆ.14ರಂದು ಸಂಜೆ 5ರಿಂದ ಮತದಾನ ನಡೆಯುವ ಫೆ.16ರ ಮಧ್ಯರಾತ್ರಿ 12ರವರೆಗೆ ಮತ್ತು ಮತ ಎಣಿಕೆ ದಿನವಾದ ಫೆ.20ರಂದು ಬೆಳಗ್ಗೆ 6 ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಬೆಂಗಳೂರು ನಗರ ಮತ್ತು ನಗರದ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಗಟು ಮತ್ತು ಚಿಲ್ಲರೆ ಮದ್ಯ ಮಾರಾಟ ಮಳಿಗೆಗಳನ್ನು ಮುಚ್ಚಲು ಆದೇಶ ನೀಡಲಾಗಿತ್ತು. ಅದನ್ನು ಅರ್ಜಿದಾರರು ಪ್ರಶ್ನಿಸಿದ್ದರು.












Click it and Unblock the Notifications