ಪಿಂಚಣಿ ಸಾಧ್ಯವಿಲ್ಲ ಎಂದ ಸಿಎಂ: ವಿಷ ಸೇವಿಸಿ ಪ್ರಾಣ ಬಿಟ್ಟ ನಿವೃತ್ತ ಶಿಕ್ಷಕ - 4 ಪುತ್ರಿಯರನ್ನು ಹೊಂದಿರುವ ರಿಟೈರ್ಡ್ ಟೀಚರ್
ಪಿಂಚನಿ ನೀಡಬೇಕೆಂದು ಒತ್ತಾಯಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಿವೃತ್ತ ಶಿಕ್ಷಕರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷ ಸೇವಿಸಿದ್ದ ಇನ್ನೊಬ್ಬ ಶಿಕ್ಷಕರ ಪರಿಸ್ಥಿತಿಯೂ ಗಂಭೀರವಾಗಿದೆ.
ಬೆಂಗಳೂರು, ಫೆಬ್ರವರಿ 25: ಪಿಂಚನಿ ನೀಡಬೇಕೆಂದು ಒತ್ತಾಯಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಿವೃತ್ತ ಶಿಕ್ಷಕರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷ ಸೇವಿಸಿದ ನಂತರ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ಫಲಕಾರಿ ಆಗದೇ ಅವರು ಕೊನೆಯುಸಿರೆಳೆದರು. ಸಿದ್ದಯ್ಯ ಹಿರೇಮಠ (67) ಎಂಬುವವರು ಆತ್ಮಹತ್ಯೆ ಮಾಡಿಕೊಂಡಿರುವ ನಿವೃತ್ತ ಶಿಕ್ಷಕರು.
ಸಿದ್ದಯ್ಯ ಹಿರೇಮಠ ಅವರು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಪಟ್ಟದಕಲ್ಲು ನಿವಾಸಿ. ಇಲ್ಲಿನ ರಾಜ್ಯ ಅನುದಾನಿತ ಶಾಲೆಯೊಂದರಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಒಬ್ಬ ಪುತ್ರ ಹಾಗೂ ನಾಲ್ವರು ಪುತ್ರಿಯರನ್ನು ಹೊಂದಿದ್ದಾರೆ. ಪಿಂಚಣಿ ವಂಚಿತ ನೌಕರರ ಸಂಘವು ಬೆಂಗಳೂರಿನ ಪ್ರಿಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಅದರಲ್ಲಿ ಭಾಗಿಯಾಗಲಿ ಸಿದ್ದಯ್ಯ ಹಿರೇಮಠ ಬಂದಿದ್ದರು.

ಗುರುವಾರ ಪ್ರತಿಭಟನಾ ಸ್ಥಳದಲ್ಲಿ ವಿಷ ಸೇವಿಸಿದ್ದ ಸಿದ್ದಯ್ಯ ಹಿರೇಮಠ ಹಾಗೂ ವೆಂಕಟರಾಜು ಅವರನ್ನು ಪೊಲೀಸರು ಆಸ್ಪತ್ರೆಗೆ ಸಾಗಿಸಿದ್ದಾರೆ. ಸಿದ್ದಯ್ಯ ಅವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇನ್ನೊಬ್ಬ ನಿವೃತ್ತ ನೌಕರ ವೆಂಕಟರಾಜು ಅವರ ಸ್ಥಿತಿಯೂ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
141 ದಿನಗಳಿಂದ ಪ್ರತಿಭಟನೆ ನಡೆದಿತ್ತು. ಪಿಂಚಣಿ ನೀಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇರವಾಗಿ ಹೇಳಿದ್ದಾರೆಂದು ಸಂಘದ ಅಧ್ಯಕ್ಷರು ಹೇಳಿದ್ದಾರೆ. ಇತ್ತ ಪ್ರಿಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲು ಪೊಲೀಸರು ಅವಕಾಶ ನೀಡುತ್ತಿಲ್ಲವೆಂದು ಅವರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ.

ಹೃದಯಶೂನ್ಯ ಬಿಜೆಪಿ ಸರ್ಕಾರವೆಂದು ಕಾಂಗ್ರೆಸ್
ಈ ಘಟನೆ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್, 'ಹೃದಯಶೂನ್ಯ ಬಿಜೆಪಿ ಸರ್ಕಾರದ ಕ್ರೌರ್ಯಕ್ಕೆ ಇನ್ನೆಷ್ಟು ಬಲಿ ಬೇಕು? ಪ್ರತಿಭಟಿಸುತ್ತಿದ್ದ ನಿವೃತ್ತ ನೌಕರರೊಬ್ಬರು ಸಾವನ್ನಪ್ಪಿದ್ದಾರೆ. ಪಿಂಚಣಿ ನೀಡಲು ಸಾಧ್ಯವಿಲ್ಲ ಎಂದಿರುವ ಬಸವರಾಜ ಬೊಮ್ಮಾಯಿ ಅವರೇ, ಡಬಲ್ ಇಂಜಿನ್ ಯೋಗ್ಯತೆ ಇಷ್ಟೇನಾ? ಇದೇನಾ ನಿಮ್ಮ ಅಚ್ಛೆ ದಿನಗಳ ವೈಭವ. ಜನರ ಸಾವುಗಳೇ ಬಿಜೆಪಿಗೆ ಶಾಪವಾಗಿ ಪರಿಣಮಿಸಲಿವೆ' ಎಂದು ಟ್ವೀಟ್ ಮಾಡಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಫೇಸ್‌ಬುಕ್ ಪೋಸ್ಟ್
ಘಟನೆ ಕುರಿತು ವಿಷಾದ ವ್ಯಕ್ತಪಡಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಫೇಸ್‌ಬುಕ್‌ನಲ್ಲಿ ಫೋಸ್ಟ್ ಮಾಡಿದ್ದಾರೆ. ಅದು ಈ ರೀತಿಯಾಗಿದೆ.
'ಪಿಂಚಣಿಗಾಗಿ ಮುಷ್ಕರದಲ್ಲಿ ತೊಡಗಿದ್ದ ಬಾಗಲಕೋಟೆ ಜಿಲ್ಲೆ ಬಾದಾಮಿಯ ಶಿಕ್ಷಕ ಸಿದ್ದಯ್ಯ ಹಿರೇಮಠ ಮತ್ತು ರಾಯಚೂರು ಜಿಲ್ಲೆ ಸಿಂಧನೂರು ಮೂಲದ ಶಂಕರಪ್ಪ ಬೋರಡ್ಡಿ ಅವರು ಸರ್ಕಾರ ತಮ್ಮ ಹೋರಾಟಕ್ಕೆ ಸ್ಪಂದಿಸದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇದನ್ನು ಸರ್ಕಾರಿ ಕೊಲೆಗಳು ಅನ್ನದೆ ಬೇರೇನು ಹೇಳಬೇಕು ಕಳೆದ 141 ದಿನಗಳಿಂದ ಫ್ರೀಡಂ ಪಾರ್ಕ್ ನಲ್ಲಿ ಮುಷ್ಕರ ನಿರತರಾಗಿರುವ ಅನುದಾನಿತ ಶಾಲಾ ಶಿಕ್ಷಕರ ಗೋಳು ಕೇಳುವವರಿಲ್ಲ. ಶಿಕ್ಷಕರು ಕೇಳುತ್ತಿರುವುದು ತಮ್ಮ ಹಕ್ಕಿನ ಪಿಂಚಣಿಯನ್ನು ಎಂಬ ಕನಿಷ್ಠ ಜ್ಞಾನವಾದರೂ ಈ ಸರ್ಕಾರಕ್ಕೆ ಬೇಡವೇ?
ಬೊಮ್ಮಾಯಿ ಅವರು ಕಣ್ಣು ಬಿಟ್ಟು ನೋಡಲು ಇನ್ನೆಷ್ಟು ಹೆಣ ಬೀಳಬೇಕು? ಶಿಕ್ಷಕರು ಪ್ರತಿಭಟನೆ ಆರಂಭಿಸಿ 141 ದಿನಗಳು ಕಳೆದರೂ ಇನ್ನು ಈ ವಿಚಾರ ತಮ್ಮ ಗಮನಕ್ಕೆ ಬಂದಿರಲಿಲ್ಲ ಎಂದು ಹೇಳುವ ಮೂಲಕ ರಾಜ್ಯ ಸರ್ಕಾರ ಇಷ್ಟು ದಿನ ಕೋಮಾದಲ್ಲಿತ್ತು ಎಂಬುದನ್ನು ಸ್ವತಃ ಒಪ್ಪಿಕೊಂಡಿದೆ.
ಸದಾ ಕಾಲ ಕಿವಿಯಲ್ಲಿ ಕಮಿಷನ್ ಸದ್ದು ಗುಯ್ಗುಡುವಾಗ ಬಡವರ ಕೂಗು ಕೇಳುವುದಾದರೂ ಹೇಗೆ ಮುಖ್ಯಮಂತ್ರಿಗಳೇ ಕೋಮುಗಲಭೆ ನಡೆದು ಕೊಲೆಯಾದರೆ ಗಂಟೆಯೊಳಗೆ ಹೆಣದ ಸುತ್ತ ನೊಣದಂತೆ ಹೋಗಿ ಕೂರುವ ಬಿಜೆಪಿ ಸರ್ಕಾರಕ್ಕೆ, ಸಾವಿರಾರು ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರ ಜೀವಗಳು ಅಮೂಲ್ಯ ಅನ್ನಿಸುವುದಿಲ್ಲವೇ?
ಇನ್ನಷ್ಟು ಜೀವಗಳು ಬಲಿಯಾಗುವ ಮುನ್ನ ಮುಷ್ಕರದಲ್ಲಿ ತೊಡಗಿರುವ ಅನುದಾನಿತ ಶಾಲಾ ಶಿಕ್ಷಕರನ್ನು ಕರೆದು ಸರ್ಕಾರ ಮಾತುಕತೆ ನಡೆಸಿ, ಅವರ ಬೇಡಿಕೆಗಳನ್ನು ತಕ್ಷಣ ಈಡೇರಿಸುವ ಕೆಲಸ ಮಾಡಬೇಕು ಮತ್ತು ಈಗಾಗಲೇ ಪ್ರಾಣ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸುತ್ತೇನೆ'.












Click it and Unblock the Notifications