Bengaluru-Pune Highway: ಬೆಳಗಾವಿ ಬಳಿ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ 48ರ ತಡೆಗೋಡೆ ಕುಸಿತ
Bengaluru-Pune National Highway: ಈಗಾಗಲೇ ಭಾರಿ ಮಳೆಯಿಂದಾಗಿ ಕೆಲವೆಡೆ ರಸ್ತೆಗಳ ಮೇಲೆ ಗುಡ್ಡದ ಮಣ್ಣು ಕುಸಿದು ವಾಹನ ಸವಾರರು ಪರದಾಡಿದ ಘಟನೆಗಳು ನಡೆದಿವೆ. ಹಾಗೆಯೇ ಇದೀಗ ಬೆಳಗಾವಿ ಜಿಲ್ಲೆ ಬಳಿ ಬೆಂಗಳೂರು-ಪುಣೆರಾಷ್ಟ್ರೀಯ ಹೆದ್ದಾರಿ 48ರ ತಡೆಗೋಡೆ ಕುಸಿದು ಬಿದ್ದು, ವಾಹನ ಸಾವಾರರು ಆತಂಕಕ್ಕೆ ಒಳಗಾಗಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಎನ್‌ಎಚ್‌ಎಐ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಸಮೀಪ ನಿರ್ಮಾಣ ಹಂತದಲ್ಲಿದ್ದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ 48ರ ತಡೆಗೋಡೆ ಕುಸಿದಿದ್ದು, ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಮೂವರು ಹಿರಿಯ ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ.

ಕಳೆದ ಎರಡು ವರ್ಷಗಳಿಂದ ಕಾಮಗಾರಿ
ಸಂಕೇಶ್ವರ ಬೈಪಾಸ್‌ನಿಂದ ಮಹಾರಾಷ್ಟ್ರ ಗಡಿಯವರೆಗಿನ 6 ಪಥಗಳ ಹೆದ್ದಾರಿ ವಿಸ್ತರಣೆ ಕಾಮಗಾರಿ ಕಳೆದ ಎರಡು ವರ್ಷಗಳಿಂದ ನಡೆಯುತ್ತಿತ್ತು. ಜುಲೈ 29ರಂದು ಬೆಳಗಿನ ವೇಳೆ ನಿಪ್ಪಾಣಿ ಬಳಿಯ ಅಂಡರ್‌ಪಾಸ್‌ವೊಂದರ ಸಮೀಪ ಸುಮಾರು 12 ಮೀಟರ್ ಉದ್ದದ ಮಣ್ಣಿನ ತಡೆಗೋಡೆ ಹಾಗೂ ರಸ್ತೆಯ ಒಂದು ಬದಿ ಕಿತ್ತು ಪಕ್ಕದ ಸರ್ವಿಸ್ ರಸ್ತೆಗೆ ಬಿದ್ದಿದೆ.
ಹೆದ್ದಾರಿ ತಡೆಗೋಡೆ ಕುಸಿಯಲು ಕಾರಣ ಏನು?
ಈ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮಣ್ಣಿನ ಅಡಿಯಲ್ಲಿ ನೀರು ಸೋರಿಕೆಯಾಗಿ ಸವೆತ ಉಂಟಾಗಿದ್ದೇ ತಡೆಗೋಡೆ ಕುಸಿಯಲು ಮುಖ್ಯ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಕಾಮಗಾರಿ ಇನ್ನೂ ಪೂರ್ಣಗೊಂಡಿರಲಿಲ್ಲ, ಕಾಂಕ್ರೀಟ್ ಹಾಕುವುದು ಬಾಕಿ ಇತ್ತು. ಅಲ್ಲದೆ ಮುಖ್ಯ ರಸ್ತೆಯ ಕಾಮಗಾರಿ ನಡೆಯುತ್ತಿದ್ದ ಕಾರಣ ಈಗಾಗಲೇ ವಾಹನಗಳ ಸಂಚಾರವನ್ನು ಪಕ್ಕದ ಸರ್ವಿಸ್ ರಸ್ತೆಗೆ ಬದಲಾಯಿಸಲಾಗಿದೆ. ಸದ್ಯ ಈ ಘಟನೆಯಿಂದ ಯಾವುದೇ ಅಡಚಣೆ ಹಾಗೂ ಯಾರಿಗೂ ಅಪಾಯ ಸಂಭವಿಸಿಲ್ಲ ಎಂದು ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸ್ಪಷ್ಟಪಡಿಸಿದೆ.
ಅಧಿಕಾರಿಗಳ ಅಮಾನತು, ಸ್ಥಳೀಯರ ಆಕ್ರೋಶ
ಇನ್ನೂ ಕಾಮಗಾರಿಯ ಕಳಪೆ ಗುಣಮಟ್ಟದ ಬಗ್ಗೆ ಸಾರ್ವಜನಿಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಶಾಸಕಿ ಶಶಿಕಲಾ ಜೊಲ್ಲೆ ಅವರು, ಈ ಕುರಿತು ತನಿಖೆ ನಡೆಸುವಂತೆ ಮತ್ತು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಗಮನಕ್ಕೆ ತಂದು ರಸ್ತೆಯನ್ನು ಮರುನಿರ್ಮಾಣ ಮಾಡುವಂತೆ ಆಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.
ಕಳಪೆ ಕಾಮಗಾರಿ ಸಂಬಂಧ ಪ್ರಾಧಿಕಾರವು ಯೋಜನಾ ನಿರ್ದೇಶಕ, ಬ್ರಿಡ್ಜ್ ಇಂಜಿನಿಯರ್ ಮತ್ತು ರೆಸಿಡೆಂಟ್ ಇಂಜಿನಿಯರ್ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತು ಮಾಡಿ ಆದೇಶ ಹೊರಡಿಸಿದೆ. ಕಾಮಗಾರಿ ಗುತ್ತಿಗೆದಾರ ಸಂಸ್ಥೆಗೆ ಶೋಕಾಸ್ ನೋಟಿಸ್ ನೀಡಲಾಗಿದ್ದು, ಹೆದ್ದಾರಿಯ ದುರಸ್ತಿ ಕಾರ್ಯಕ್ಕೆ ವೇಗ ನೀಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.


Click it and Unblock the Notifications
