ನಮಸ್ಕಾರ ಕರ್ನಾಟಕ! ನಾವೀಗ ಸುಂದರ ಬೆಂಗಳೂರಿನಲ್ಲಿದ್ದೇವೆ: ಕನ್ನಡದಲ್ಲಿ ಟ್ವೀಟ್ ಮಾಡಿದ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್
ಬೆಂಗಳೂರು, ಜುಲೈ 17: ಬೆಂಗಳೂರಿನಲ್ಲಿ ವಿಪಕ್ಷಗಳ ಸಭೆ ಆರಂಭವಾಗಿದೆ. ಕಾಂಗ್ರೆಸ್ ನೇತೃತ್ವದ ಸಭೆಗೆ ದೇಶದ ಪ್ರಮುಖ ನಾಯಕರು ಆಗಮಿಸಿದ್ದಾರೆ. ತಮಿಳುನಾಡಿನ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಇಂದು ಮಧ್ಯಾಹ್ನ ಬೆಂಗಳೂರಿಗೆ ಆಗಮಿಸಿದರು. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸ್ಟಾಲಿನ್ ಅವರನ್ನು ಬರಮಾಡಿಕೊಂಡರು.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಎಂಕೆ ಸ್ಟಾಲಿನ್, 'ನಮಸ್ಕಾರ ಕರ್ನಾಟಕ' ಎನ್ನುವ ಮೂಲಕ ಕನ್ನಡದಲ್ಲಿ ಟ್ವೀಟ್ ಆರಂಭಿಸಿದ್ದಾರೆ.

'ನಮಸ್ಕಾರ ಕರ್ನಾಟಕ! ಬಿಹಾರದ ಪಾಟ್ನಾದ ನಂತರ, ನಾವು ಅಂದರೆ ಸೆಕ್ಯುಲರ್ ಮತ್ತು ಡೆಮಾಕ್ರಟಿಕ್ ಶಕ್ತಿಗಳು ಸುಂದರ ಬೆಂಗಳೂರಿನಲ್ಲಿ ಇದ್ದೇವೆ. #United ForDemocracy' ಎಂದು ಟ್ವೀಟ್ ಮಾಡಿದ್ದಾರೆ.
'ಬಿಜೆಪಿಯ ಪ್ರಜಾಪ್ರಭುತ್ವ ವಿರೋಧಿ ತಂತ್ರಗಳ ವಿರುದ್ಧ ಈ ನಿರ್ಣಾಯಕ ಘಟ್ಟದಲ್ಲಿ ನಾವು ಒಗ್ಗಟ್ಟಾಗಿ ನಿಲ್ಲುವುದು ಅತ್ಯಗತ್ಯ. ಬಿಜೆಪಿಯ ಪ್ರತಿಗಾಮಿ ರಾಜಕಾರಣವನ್ನು ಜನರು ತಿರಸ್ಕರಿಸಿದ್ದಾರೆ. ಇದು ಕರ್ನಾಟಕದ ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಸಾಬೀತಾಗಿದೆ. ಇದೊಂದು ಪ್ರಬಲ ಉದಾಹರಣೆಯಾಗಿದೆ. ಇದನ್ನು ರಾಷ್ಟ್ರಮಟ್ಟದಲ್ಲಿ ಪುನರಾವರ್ತಿಸೋಣ' ಎಂದು ಸ್ಟಾಲಿನ್ ತಿಳಿಸಿದ್ದಾರೆ.
ನಾವು ಒಟ್ಟಾಗಿ ಪ್ರಜಾಪ್ರಭುತ್ವವನ್ನು ರಕ್ಷಿಸುತ್ತೇವೆ ಮತ್ತು ನಮ್ಮ ಮಹಾನ್ ರಾಷ್ಟ್ರಕ್ಕೆ ಉಜ್ವಲ ಭವಿಷ್ಯವನ್ನು ನೀಡುತ್ತೇವೆ ಎಂದು ಟ್ವೀಟ್ ಮೂಲಕ ಭರವಸೆ ನೀಡಿದ್ದಾರೆ.

ಡಿಕೆ ಶಿವಕುಮಾರ್ ಟ್ವೀಟ್
ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಇಂದಿನಿಂದ ಆರಂಭವಾದ ಕೇಂದ್ರದ ವಿರೋಧ ಪಕ್ಷಗಳ ನಾಯಕರ ಸಭೆಯಲ್ಲಿ ಪಾಲ್ಗೊಳ್ಳಲು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ ತಮಿಳುನಾಡಿನ ಮುಖ್ಯಮಂತ್ರಿ ಶ್ರೀ ಎಂಕೆ ಸ್ಟಾಲಿನ್ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡು ಅವರ ಕುಶಲೋಪರಿ ವಿಚಾರಿಸಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.
ಸಂವಿಧಾನದ ಉಳಿವೇ, ಈ ದೇಶದ ಉಳಿವು ಎಂದ ದಿನೇಶ್ ಗುಂಡೂರಾವ್
ಬೆಂಗಳೂರಿನಲ್ಲಿ ನಡೆಯುತ್ತಿರುವ ವಿರೋಧ ಪಕ್ಷಗಳ ಸಭೆ ಕುರಿತು ಸರಣಿ ಟ್ವೀಟ್ ಮಾಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, 'ಸಂವಿಧಾನದ ಉಳಿವೇ, ಈ ದೇಶದ ಉಳಿವು' ಎಂದು ತಿಳಿಸಿದ್ದಾರೆ.
'ತಾಜ್ ವೆಸ್ಟ್‌ಎಂಡ್‌ನಲ್ಲಿ ನಡೆಯುತ್ತಿರುವ ದೇಶದ ಪ್ರಮುಖ ವಿರೋಧ ಪಕ್ಷಗಳ ಸಭೆ, ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ರಕ್ಷಣೆಗೆ ಅತಿ ಅಗತ್ಯ ಮತ್ತು ಅನಿವಾರ್ಯ' ಎಂದು ಅವರು ಹೇಳಿದ್ದಾರೆ.
'ಫ್ಯಾಸಿಸ್ಟ್ ಧೋರಣೆಯಿಂದ ಸರ್ವಾಧಿಕಾರಿ ಮನೋಭಾವ ಪ್ರದರ್ಶಿಸುತ್ತಿರುವ ಕೇಂದ್ರ ಸಂವಿಧಾನವನ್ನೇ ಅಪಾಯದಲ್ಲಿಟ್ಟಿದೆ. ಸಂವಿಧಾನದ ಉಳಿವೇ, ಈ ದೇಶದ ಉಳಿವು. ಇದೇ ಈ ಸಭೆಯ ಉದ್ದೇಶ' ಎಂದು ತಿಳಿಸಿದ್ದಾರೆ.

'ಈ ದೇಶದ ಪ್ರತಿಯೊಬ್ಬ ನಾಗರಿಕನ ಬದುಕಿಗೆ ರಕ್ಷಣೆ ಒದಗಿಸಿರುವುದೇ ಸಂವಿಧಾನ. ಆದರೆ BJPಯವರು ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲು ಎಂದು ಹೇಳುತ್ತಾರೆ. ಸಂವಿಧಾನ ಬದಲಾಯಿಸುವುದೆಂದರೆ ನಾಗರಿಕರ ಬದುಕಿನ ಹಕ್ಕು ಕಸಿದುಕೊಂಡಂತೆ. ಕೇಂದ್ರದ ಈ ಧೋರಣೆ ವಿರುದ್ಧ ಪ್ರಮುಖ ವಿರೋಧ ಪಕ್ಷಗಳೆಲ್ಲಾ ಒಗ್ಗಟ್ಟಾಗಿ ಹೋರಾಡಲೇಬೇಕಿದೆ' ಎಂದು ದಿನೇಶ್ ಗುಂಡೂವಾರ್ ತಿಳಿಸಿದ್ದಾರೆ.
'ಅಧಿಕಾರದಲ್ಲಿರುವ ಕೇಂದ್ರದ ಎನ್‌ಡಿಎ ಮೈತ್ರಿಕೂಟ ವಿಭಜಿಸುವುದರಲ್ಲಿ ನಂಬಿಕೆಯಿಟ್ಟಿದೆ. ಆದರೆ ನಾವು ಒಗ್ಗೂಡಿಸುವುದರಲ್ಲಿ ನಂಬಿಕೆಯಿಟ್ಟಿದ್ದೇವೆ. ದ್ವೇಷ ಅವರ ದೇವರು, ಪ್ರೀತಿ ನಮ್ಮ ದೇವರು. ಅವರ ಹೃದಯದಲ್ಲಿ ಧರ್ಮಾಂಧತೆಯಿದೆ. ನಮ್ಮಲ್ಲಿ ಕೂಡಿ ಬಾಳುವ ಸೌಹಾರ್ದತೆಯಿದೆ. ಸಾಮರಸ್ಯದ ದೇಶ ಕಟ್ಟುವ ಸಲುವಾಗಿಯೇ ಸಮಾನಮನಸ್ಕರ ಈ ಸಭೆ ನಡೆಯುತ್ತಿದೆ' ಎಂದು ತಿಳಿಸಿದ್ದಾರೆ.












Click it and Unblock the Notifications