ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್ ಕೊಟ್ಟ ವಿ.ಸೋಮಣ್ಣ
ಮೈಸೂರು: ಬೆಂಗಳೂರು ಮತ್ತು ಮೈಸೂರು ಭಾಗದಲ್ಲಿ ರೈಲು ಪ್ರಯಾಣಿಕರ ದಟ್ಟಣೆ ಹೆಚ್ಚಾಗುತ್ತಿದೆ. ಹೀಗಾಗಿ ಮೈಸೂರು ಮತ್ತು ತುಮಕೂರು ಮುಂತಾದ ಇನ್ನಿತರ ನಗರಗಳನ್ನು ಬೆಂಗಳೂರಿಗೆ ಪರ್ಯಾಯ ಬೆಳವಣಿಗೆಯ ಕೇಂದ್ರಗಳಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಒತ್ತು ನೀಡುತ್ತಿದೆ. ಜೊತೆಗೆ ಪ್ರಾದೇಶಿಕ ರೈಲುಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದಿರುವ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಬೆಂಗಳೂರು-ಮೈಸೂರು ಮಹಾನಗರಗಳ ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್ ನೀಡಿದ್ದಾರೆ.
ಇತ್ತೀಚೆಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾದೇಶಿಕ ರೈಲು ಸಂಪರ್ಕಕ್ಕೆ ಪ್ರಮುಖ ಉತ್ತೇಜನ ನೀಡಲಾಗುತ್ತಿದೆ. ಈ ಸಲುವಾಗಿ ಬೆಂಗಳೂರು ಮತ್ತು ಮೈಸೂರು ನಡುವೆ ನಿತ್ಯ ಸಂಚಾರ ಮಾಡುವ ರೈಲುಗಳ ಗರಿಷ್ಠ ವೇಗವನ್ನು ಹೆಚ್ಚಿಸಲಾಗುತ್ತದೆ. ಬೆಂಗಳೂರು-ಮೈಸೂರು-ಬೆಂಗಳೂರು ರೈಲಿನ ವೇಗ ಪ್ರತಿ ಗಂಟೆಗೆ 110 ಕಿ.ಮೀ ನಿಂದ 135 ಕಿ.ಮೀ ಗೆ ಏರಿಕೆ ಮಾಡುವುದಾಗಿ ಸಚಿವರು ಘೋಷಿಸಿದ್ದಾರೆ. ಇದರಿಂದ ಈ ಎರಡು ಮಹಾನಗರಗಳ ಸಂಪರ್ಕ ಮತ್ತಷ್ಟು ಸುಧಾರಿಸುತ್ತದೆ. ಜನರ ರೈಲು ಸಾರಿಗೆ ಮೇಲಿನ ಅವಲಂಬನೆ ಇನ್ನಷ್ಟು ಹೆಚ್ಚಾಗಬಹುದೆಂದು ಅಂದಾಜಿಸಲಾಗಿದೆ.

ರೈಲು ಸಂಚಾರ, ಪ್ರಯಾಣದಲ್ಲಿ 1 ಗಂಟೆ ಉಳಿತಾಯ
ರೈಲುಗಳ ವೇಗ ಹೆಚ್ಚಿಸುವುದರಿಂದ ಎರಡು ನಗರಗಳ ನಡುವಿನ ಪ್ರಯಾಣದ ಸಮಯ ಸುಮಾರು ಒಂದು ಗಂಟೆಗೆ ಉಳಿತಾಯವಾಗಲಿದೆ. ಪ್ರಯಾಣಿಕರಿಗೆ ತ್ವರಿತ ಸೇವೆ ಸಿಗಲಿದೆ. ನಿತ್ಯ ಒಡಾಡುವವರಿಗೆ ಇದರಿಂದ ಅನುಕೂಲವಾಗಲಿದೆ. ಬೆಂಗಳೂರು-ಮೈಸೂರು ರೈಲು ಕಾರಿಡಾರ್‌ನಲ್ಲಿ ಆರ್ಥಿಕ ಚಟುವಟಿಕೆ ಏರಿಕೆ ಆಗುವ ನಿರೀಕ್ಷೆ ಇದೆ ಎಂದರು.
ಹೆಚ್ಚುವರಿ MEMU ರೈಲು, ಇತರ ನಗರ ಅಭಿವೃದ್ಧಿ
ಬೆಳೆದಿರುವ ರಾಜಧಾನಿ ಬೆಂಗಳೂರಿಗೆ ಪರ್ಯಾಯ ಬೆಳವಣಿಗೆಯ ಕೇಂದ್ರಗಳಾಗಿ ಮೈಸೂರು ಮತ್ತು ತುಮಕೂರು ಇನ್ನಿತರ ನಗರಗಳ ಅಭಿವೃದ್ಧಿಪಡಿಗೆ ಕೇಂದ್ರ ಮುಂದಾಗಿದೆ. ಈ ಎರಡು ಮಹಾನಗರಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಬೇಡಿಕೆಗೆ ಅನುಗುಣವಾಗಿ ಬೆಂಗಳೂರು-ಮೈಸೂರು ಮಾರ್ಗದಲ್ಲಿ ಎರಡು ಹೆಚ್ಚುವರಿ MEMU ರೈಲುಗಳನ್ನು ಶೀಘ್ರದಲ್ಲೇ ಪರಿಚಯಿಸಲಾಗುವುದು ಎಂದು ಮತ್ತೊಂದು ಶುಭ ಸುದ್ದಿ ಕೊಟ್ಟರು.
ರೈಲು ಯೋಜನೆಗಳಿಗೆ ತೊಡಕು: ರಾಜ್ಯ ಸರ್ಕಾರ ವಿಫಲ
ಕರ್ನಾಟಕದಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ರೈಲ್ವೆ ಯೋಜನೆಗಳಿಗೆ ಭೂಸ್ವಾಧೀನ ವಿಚಾರದಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಅಗತ್ಯ ಭೂಮಿ ಒದಗಿಸಿ ಕೊಡಲು ಸರ್ಕಾರವು ಸಹಕಾರ ನೀಡುತ್ತಿಲ್ಲ ಎಂದು ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಆಡಳಿತದ ಬೆಂಬಲದ ಕೊರತೆಯಿಂದಾಗಿ ಹಲವಾರು ಪ್ರಮುಖ ಮೂಲಸೌಕರ್ಯ ಯೋಜನೆಗಳ ಸಾಕಾರ ತಡವಾಗುತ್ತಿದೆ ಎಂದು ವಿ.ಸೋಮಣ್ಣ ಆರೋಪಿಸಿದರು.
ಈ ಹಿಂದೆ ಬೆಂಗಳೂರಿನಿಂದ ಕನಕಪುರ ಮೂಲಕ ಚಾಮರಾಜನಗರದವರೆಗೆ 142 ಕಿ.ಮೀ. ಉದ್ದದ 1,200 ಕೋಟಿ ರೈಲ್ವೆ ಯೋಜನೆ ಕೈಗೊಳ್ಳಲಾಗಿತ್ತು. ಇದಕ್ಕೆ ರಾಜ್ಯ ಸರ್ಕಾರ 2024 ರ ಡಿಸೆಂಬರ್ ನಲ್ಲಿ ಬೆಂಬಲ ನೀಡಲಾಗದೆಂದು ತಿಳಿಸಿತ್ತು. ರಾಜ್ಯದ ಸಹಕಾರ ಸ್ಥಗಿತ ಹಿನ್ನೆಲೆಯಲ್ಲಿ ಯೋಜನೆ ನಿಂತಿತು. ಮೈಸೂರು-ಕುಶಾಲನಗರ ರೈಲು ಮಾರ್ಗ ಯೋಜನೆಗೆ ಇಂಥದ್ದೆ ತೊಂದರೆ ಎದುರಾಗಿದೆ ಎಂದು ಅವರು ರಾಜ್ಯ ಸರ್ಕಾರವನ್ನು ದೂರಿದರು.
ಕರ್ನಾಟಕ ರೈಲು ಯೋಜನೆಗಳ ಲೆಕ್ಕ ಕೊಟ್ಟ ಸೋಮಣ್ಣ
ರಾಜ್ಯದಲ್ಲಿ ಸದ್ಯ ಒಟ್ಟು 52,000 ಕೋಟಿ ಅಂದಾಜು ವೆಚ್ಚದಲ್ಲಿ ವಿವಿಧೆಡೆ ರೈಲ್ವೆ ಯೋಜನೆಗಳು ಪ್ರಗತಿಯಲ್ಲಿವೆ. ಕಳೆದ ಹತ್ತು ವರ್ಷಗಳಲ್ಲಿ 1,750 ರೂ. ವೆಚ್ಚದಲ್ಲಿ ಹೊಸ ರೈಲ್ವೆ ಮಾರ್ಗ ನಿರ್ಮಿಸಲಾಗಿದೆ. 1,900 ಕೋಟಿ ರೂಪಾಯಿ ವೆಚ್ಚದಲ್ಲಿ ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿಯಲ್ಲಿ 61 ನಿಲ್ದಾಣಗಳು ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದು ಅವರು ವಿವರಿಸಿದರು.
ಮಂಗಳೂರು-ಕುಕ್ಕೆ ಸುಬ್ರಹ್ಮಣ್ಯ ಮಾರ್ಗದಲ್ಲಿ 51 ಕಿ.ಮೀ. ವಿದ್ಯುದೀಕರಣ ಮಾಡಲಾಗಿದೆ. 6,000 ಕೋಟಿ ರೂ.ಹೂಡಿಕೆಯಲ್ಲಿ ಮೆಗಾ ಕೋಚಿಂಗ್ ಟರ್ಮಿನಲ್ ಸ್ಥಾಪಿಸುವ ಯೋಜನೆಗಳು ಇವೆ. ಕೇಂದ್ರದ ಅನುದಾನದೊಂದಿಗೆ ರಾಜ್ಯಾದ್ಯಂತ ಸುಮಾರು 707 ಹೊಸ ರೈಲ್ವೆ ಬ್ರಿಡ್ಜ್ ನಿರ್ಮಿಸಲಾಗಿದೆ ಎಂದು ತಿಳಿಸಿದರು.












Click it and Unblock the Notifications