Bengaluru-Mysuru Expressway Toll fee: ಏಪ್ರಿಲ್ 1ರಿಂದ ಹೆದ್ದಾರಿ ಟೋಲ್ ಶುಲ್ಕ ಹೆಚ್ಚಳ.!-ಯಾವ್ಯಾವ ವಾಹನಗಳಿಗೆ ಎಷ್ಟು?
Bengaluru-Mysuru Expressway: ಆರಂಭವಾದಾಗಿನಿಂದಲೂ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಾಗುತ್ತಲೇ ಇದೆ. ಇದೀಗ ಈ ಹೆದ್ದಾರಿಯ ಟೋಲ್ ಶುಲ್ಕ ಏಪ್ರಿಲ್ 1ರಿಂದ ಹೆಚ್ಚಳ ಆಗಲಿದೆ. ಹಾಗಾದರೆ ಯಾವ್ಯಾವ ವಾಹನಗಳಿಗೆ ಎಷ್ಟು ದರ ನಿಗದಿಪಡಿಸಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಕಣಮಿಣಕಿ ಮತ್ತು ಶೇಷಗಿರಿಹಳ್ಳಿ ಟೋಲ್ ಪ್ಲಾಜಾವರೆಗಿನ 56 ಕಿಲೋ ಮೀಟರ್ ಉದ್ದದ ಹೆದ್ದಾರಿಗೆ ಈ ಪರಿಷ್ಕರಣೆ ದರ ಅನ್ವಯ ಆಗಲಿದೆ. ಈ ಮೂಲಕ ಒಂದು ವರ್ಷದ ಅವಧಿಯಲ್ಲಿ ಎರಡು ಬಾರಿ ಟೋಲ್ ದರ ಪರಿಷ್ಕರಣೆ ಆಗಿದೆ.

ಕಳೆದ 2023ರ ಏಪ್ರಿಲ್‌ನಲ್ಲಿ ಹೆದ್ದಾರಿ ಪ್ರಾಧಿಕಾರ ಟೋಲ್ ಶುಲ್ಕವನ್ನು ಹೆಚ್ಚಿಗೆ ಮಾಡಿದ್ದು, ಇದಕ್ಕೆ ವಾಹನ ಸವಾರರು, ಸಾರ್ವಜನಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಈ ನಿರ್ಧಾರದಿಂದ ಪ್ರಾಧಿಕಾರ ಹಿಂದೆ ಸರಿದಿತ್ತು. ಆದರೆ ಜೂನ್‌ನಲ್ಲಿ ಮತ್ತೆ ಶೇಕಡಾ 22ರಷ್ಟು ಹೆಚ್ಚಳ ಆಗಿತ್ತು. ಇದಾದ 9 ತಿಂಗಳ ನಂತರ ಮತ್ತೆ ಟೋಲ್ ದರವನ್ನು ಮತ್ತೆ ಏರಿಕೆ ಮಾಡಿದ್ದು, ಇದಕ್ಕೆ ಸಾರ್ವಜನಿಕರ ಪ್ರತಿಕ್ರಿಯೆ ಹೇಗಿರಲಿದೆ ಎಂದು ಕಾದುನೋಡಬೇಕಿದೆ.
ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮ-2008ರ ಪ್ರಕಾರವೇ ಟೋಲ್ ಶುಲ್ಕವನ್ನು ಪರಿಷ್ಕರಣೆ ಮಾಡಲಾಗಿದೆ. ಟೋಲ್ ಪ್ಲಾಜಾದ 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ವಾಸಿಸುವ ವಾಹನಗಳ ಸವಾರರಿಗೆ ಮಾಸಿಕ ಪಾಸ್ ಶುಲ್ಕವನ್ನು 300 ರೂಪಾಯಿ ನಿಗದಿಪಡಿಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಬೆಂಗಳೂರು-ಮೈಸೂರು ಹೆದ್ದಾರಿ ವಿಭಾಗದ ಯೋಜನಾ ನಿರ್ದೇಶಕ ತಿಳಿಸಿದ್ದಾರೆ.
ಎಲ್ಲಾ ರೀತಿಯ ವಾಹನಗಳು 24 ಗಂಟೆಯೊಳಗೆ ಹಿಂದಿರುಗಿ ಬಂದರೆ ಪಾವತಿಸಬೇಕಾದ ಟೋಲ್‌ನಲ್ಲಿ ಶೇಕಡಾ 25ರಷ್ಟು ರಿಯಾಯಿತಿ ಇರಲಿದೆ. ಅದೇ ರೀತಿ ಎಲ್ಲಾ ವಾಹನಗಳು ಟೋಲ್ ಪಾವತಿ ದಿನದಿಂದ ಒಂದು ತಿಂಗಳೊಳಗೆ 50 ಬಾರಿ ಪ್ರಯಾಣಿಸಿದರೆ ಶೇಕಡಾ 35ರಷ್ಟು ರಿಯಾಯಿತಿ ಪಡೆಯಬಹುದಾಗಿದೆ. ಯಾವುದೇ ವಾಹನ ಅನುಮತಿ ಪಡೆದಿದ್ದಕ್ಕಿಂತ ಹೆಚ್ಚು ಭಾರ ಹೊಂದಿದ್ದರೆ ನಿಗದಿತ ಶುಲ್ಕದ 10 ಪಟ್ಟು ಶುಲ್ಕ ಪಾವತಿಸಿಕೊಂಡು ಭಾರ ಖಾಲಿ ಮಾಡಲಾಗುತ್ತದೆ ಎಂದು ತಿಳಿದಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯ ಕಣಮಿಣಕಿ, ರಾಮನಗರ ಜಿಲ್ಲೆಯ ಶೇಷಗಿರಿಹಳ್ಳಿ ಬಳಿ ಹೆದ್ದಾರಿ ಪ್ರಾಧಿಕಾರ ಎರಡು ಟೋಲ್ ಪ್ಲಾಜಾಗಳನ್ನು ನಿರ್ಮಿಸಿದೆ. ಬೆಂಗಳೂರಿನಿಂದ ಮೈಸೂರಿಗೆ ಹೋಗುವವರು ಕಣಮಿಣಕಿ ಬಳಿ ಹಾಗೂ ಮೈಸೂರು-ರಾಮನಗರ ಕಡೆಯಿಂದ ಬೆಂಗಳೂರಿನ ಕಡೆ ಪ್ರಯಾಣ ಮಾಡುವವರು ಶೇಷಗಿರಿಹಳ್ಳಿ ಬಳಿ ಟೋಲ್ ಪಾವತಿಸಬೇಕಿದೆ.
ಯಾವ್ಯಾವ ವಾಹನಗಳಿಗೆ ಎಷ್ಟು ಶುಲ್ಕ?
1. ಕಾರು, ಜೀಪು, ವ್ಯಾನ್-ಏಕಮುಖ ಸಂಚಾರಕ್ಕೆ 170 ರೂಪಾಯಿ, ಮತ್ತೆ ವಾಪಾಸಾಗಲು 255 ರೂಪಾಯಿ, ತಿಂಗಳ 50 ಏಕಮುಖ ಸಂಚಾರ ಪಾಸ್‌ಗೆ 5,715 ರೂಪಾಯಿ ಪಾವತಿಸಬೇಕಾಗುತ್ತದೆ.
2. ಲಘು ವಾಹನ, ಮಿನಿ ಬಸ್- ಏಕಮುಖ ಸಂಚಾರಕ್ಕೆ 275 ರೂಪಾಯಿ, ಮತ್ತೆ ವಾಪಾಸಾಗಲು 415 ರೂಪಾಯಿ, ತಿಂಗಳ 50 ಏಕಮುಖ ಸಂಚಾರ ಪಾಸ್‌ಗೆ 9,230 ರೂಪಾಯಿ ಪಾವತಿಸಬೇಕಾಗುತ್ತದೆ.
3. 2 ಆಕ್ಸಲ್ ಟ್ರಕ್ ಅಥವಾ ಬಸ್ - ಏಕಮುಖ ಸಂಚಾರಕ್ಕೆ 580 ರೂಪಾಯಿ, ಮತ್ತೆ ವಾಪಾಸಾಗಲು 570 ರೂಪಾಯಿ, ತಿಂಗಳ 50 ಏಕಮುಖ ಸಂಚಾರ ಪಾಸ್‌ಗೆ 19,345 ರೂಪಾಯಿ ಪಾವತಿಸಬೇಕಾಗುತ್ತದೆ.
4. 3 ಆಕ್ಸಲ್ ವಾಣಿಜ್ಯ ವಾಹನ - ಏಕಮುಖ ಸಂಚಾರಕ್ಕೆ 635 ರೂಪಾಯಿ, ಮತ್ತೆ ವಾಪಾಸಾಗಲು 950 ರೂಪಾಯಿ, ತಿಂಗಳ 50 ಏಕಮುಖ ಸಂಚಾರ ಪಾಸ್‌ಗೆ 21,100 ರೂಪಾಯಿ ಪಾವತಿಸಬೇಕಾಗುತ್ತದೆ.
5. ಭಾರಿ ವಾಹನ (4-6 ಆಕ್ಸಲ್) - ಏಕಮುಖ ಸಂಚಾರಕ್ಕೆ 910 ರೂಪಾಯಿ, ಮತ್ತೆ ವಾಪಾಸಾಗಲು 1,365 ರೂಪಾಯಿ, ತಿಂಗಳ 50 ಏಕಮುಖ ಸಂಚಾರ ಪಾಸ್‌ಗೆ 30,335 ರೂಪಾಯಿ ಪಾವತಿಸಬೇಕಾಗುತ್ತದೆ.
6. ದೊಡ್ಡ ವಾಹನ (7ಕ್ಕಿಂತ ಹೆಚ್ಚು ಆಕ್ಸಲ್) - ಏಕಮುಖ ಸಂಚಾರಕ್ಕೆ 1,110 ರೂಪಾಯಿ, ಮತ್ತೆ ವಾಪಾಸಾಗಲು 1,660 ರೂಪಾಯಿ, ತಿಂಗಳ 50 ಏಕಮುಖ ಸಂಚಾರ ಪಾಸ್‌ಗೆ 36,930 ರೂಪಾಯಿ ಪಾವತಿಸಬೇಕಾಗುತ್ತದೆ.
ಹೊಸ ಹಾಗೂ ಹಳೆ ದರಗಳ ವಿವರ
1. ಕಾರು, ಜೀಪು, ವ್ಯಾನ್- ಏಕಮುಖ ಸಂಚಾರಕ್ಕೆ ಹಳೆಯ ದರ 165 ರೂಪಾಯಿ, ಹೊಸ ದರ 170 ರೂಪಾಯಿ ಆಗಿದ್ದು, 15 ರೂಪಾಯಿ ಹೆಚ್ಚಳ ಆಗಿದೆ.
2. ಲಘು ವಾಹನ, ಮಿನಿ ಬಸ್- ಏಕಮುಖ ಸಂಚಾರಕ್ಕೆ ಹಳೆಯ ದರ 270 ರೂಪಾಯಿ, ಹೊಸ ದರ 275 ರೂಪಾಯಿ ಪಾವತಿಸಬೇಕಾಗುತ್ತದೆ.
3. 2 ಆಕ್ಸಲ್ ಟ್ರಕ್ ಅಥವಾ ಬಸ್- ಏಪ್ರಿಲ್ 1ರಿಂದ ಹೊಸ ದರ 580 ರೂಪಾಯಿ ಪಾವತಿಸಬೇಕಾಗುತ್ತದೆ.
4. 3 ಆಕ್ಸಲ್ ವಾಣಿಜ್ಯ ವಾಹನ - ಏಕಮುಖ ಸಂಚಾರಕ್ಕೆ ಏಪ್ರಿಲ್ 1ರಿಂದ ಹೊಸ ದರ 635 ರೂಪಾಯಿ ಪಾವತಿಸಬೇಕಾಗುತ್ತದೆ.
5. ಭಾರಿ ವಾಹನ (4-6 ಆಕ್ಸಲ್) - ಏಪ್ರಿಲ್ 1ರಿಂದ ಹೊಸ ದರ 910 ರೂಪಾಯಿ ಪಾವತಿಸಬೇಕಾಗುತ್ತದೆ.












Click it and Unblock the Notifications