ಡಾಕ್ಟರ್, ಎಂಜಿನಿಯರ್ ಎಂದು ಹೇಳಿ 15 ಮಹಿಳೆಯರನ್ನು ಮದುವೆಯಾದ ಬೆಂಗಳೂರಿನ ವ್ಯಕ್ತಿಯ ಬಂಧನ
ಮೈಸೂರು, ಜುಲೈ. 10: ತಾನು ವೈದ್ಯ ಅಥವಾ ಎಂಜಿನಿಯರ್ ಎಂದು ಹೇಳಿಕೊಂಡು ಹಲವು ಮಹಿಳೆಯರಿಗೆ ವಂಚನೆ ಮಾಡಿ ಮದುವೆಯಾಗಿದ್ದ ಬೆಂಗಳೂರಿನ ವ್ಯಕ್ತಿಯನ್ನು ಮೈಸೂರು ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಈ ವ್ಯಕ್ತಿ ಕನಿಷ್ಠ 15 ಮಹಿಳೆಯರನ್ನು ವಂಚಿಸಿದ್ದಾರೆ. ಆತ ಸಿಕ್ಕಿಬೀಳುವ ಮೊದಲು ಇಷ್ಟು ಮಹಿಳೆಯರನ್ನು ಮದುವೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ವರದಿಯ ಪ್ರಕಾರ, ಬೆಂಗಳೂರಿನ ಬನಶಂಕರಿ ನಿವಾಸಿ ಮಹೇಶ್ ನಾಯಕ್ ಅವರು ತಾನು ಡಾಕ್ಟರ್, ಎಂಜಿನಿಯರ್ ಮತ್ತು ಸಿವಿಲ್ ಗುತ್ತಿಗೆದಾರ ಎಂದು ಹೇಳಿಕೊಂಡು ಮ್ಯಾಟ್ರಿಮೋನಿಯಲ್ ಪ್ರೊಫೈಲ್ ಅನ್ನು ರಚಿಸಿದ್ದಾರೆ. 35 ವರ್ಷದ ಆರೋಪಿ 2014 ರಿಂದ ಕನಿಷ್ಠ 15 ಮಹಿಳೆಯರನ್ನು ಮದುವೆಯಾಗಿದ್ದು, ನಾಲ್ಕು ಮಕ್ಕಳ ತಂದೆಯಾಗಿದ್ದಾನೆ.

ಇದಲ್ಲದೆ ತುಮಕೂರಿನಲ್ಲಿ ನಕಲಿ ಚಿಕಿತ್ಸಾಲಯ ಸ್ಥಾಪಿಸಿ ನರ್ಸ್ ಒಬ್ಬರನ್ನು ನೇಮಿಸಿಕೊಂಡು ಅಭ್ಯಾಸ ವೈದ್ಯನೆಂದು ಬಿಂಬಿಸಿಕೊಂಡಿದ್ದರು ಎಂದು ವರದಿಯಾಗಿದೆ. ಆತನನ್ನು ಮದುವೆಯಾಗಿದ್ದ ಸಾಫ್ಟ್‌ವೇರ್ ಎಂಜಿನಿಯರ್ ದೂರು ದಾಖಲಿಸಿದ್ದು, ಭಾನುವಾರ ಮೈಸೂರಿನಲ್ಲಿ ಸಿಕ್ಕಿಬಿದ್ದಿದ್ದಾರೆ. ಬಳಿಕ ಆತನಿಂದ ವಂಚನೆಗೆ ಒಳಗಾಗಿದ್ದೇವೆ ಎಂದು ಅನೇಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ತನ್ನನ್ನು ತಾನು ಕೆಲವರಿಗೆ ವೈದ್ಯ ಎಂದು ಪರಿಚಯಿಸಿಕೊಂಡಿದ್ದಾರೆ. ಮತ್ತೆ ಕೆಲವರಿಗೆ ಎಂಜಿನಿಯರ್ ಎಂದು ಮೋಸ ಮಾಡಿದ್ದಾನೆ ಎಂದು ಸಂತ್ರಸ್ತ ಮಹಿಳೆಯರು ದೂರು ದಾಖಲಿಸಿದ್ದಾರೆ. ಕ್ಲಿನಿಕ್ ಸ್ಥಾಪಿಸಲು ಹಣಕ್ಕಾಗಿ ಕಿರುಕುಳ ನೀಡುತ್ತಿದ್ದರು ಎಂದು ಸಂತ್ರಸ್ತರೊಬ್ಬರು ಹೇಳಿದ್ದಾರೆ. ಹಣ ಕೊಡಲು ನಿರಾಕರಿಸಿದ ನಂತರ ಆತ ತನ್ನ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾನೆ ಎಂದು ಆರೋಪಿಸಿದ್ದಾರೆ.
ಈ ಹಿಂದೆ ಮಹೇಶ್ ನಾಯಕ್ ಮೇಲೆ ಅವರ ತಂದೆ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದರು ಎಂದು ವರದಿ ತಿಳಿಸಿದೆ. ಇನ್ನು, ಈತನ ಮೋಸಕ್ಕೆ ಬಲಿಯಾದ ಸಂತ್ರಸ್ತರ ಹೆಚ್ಚಿನ ವಿವರಗಳನ್ನು ಪತ್ತೆ ಹಚ್ಚಲು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.












Click it and Unblock the Notifications