Vande Bharat Express: ಬೆಂಗಳೂರು-ಧಾರವಾಡ ವಂದೇ ಭಾರತ್ ರೈಲು: ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ
ಕಳೆದ ವಾರ ಆರಂಭಗೊಂಡ ಬೆಂಗಳೂರು-ಧಾರವಾಡ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಐದು ದಿನದಲ್ಲಿ ಶೇ.70ಕ್ಕೂ ಅಧಿಕ ಸೀಟುಗಳು ಭರ್ತಿಯಾಗಿವೆ. ಬೆಂಗಳೂರು-ಧಾರವಾಡ ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ ಬಳಿಕ ಈ ಭಾಗದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಹೆಚ್ಚಿನ ಜನರು ಪ್ರಯಾಣ ಮಾಡುವ ಮೂಲಕ ಈ ರೈಲು ಆರಂಭಿಕ ಯಶಸ್ಸನ್ನು ಪಡೆದಿದೆ.
ಬೆಂಗಳೂರು- ಧಾರವಾಡ ನಡುವೆ ಸಂಚರಿಸಲಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಜೂನ್ 28ರಿಂದ (ಬುಧವಾರ) ಸಂಚಾರ ಆರಂಭಿಸಿದೆ. ಬೆಂಗಳೂರು- ಧಾರವಾಡದ ನಡುವೆ ಸಂಚರಿಸುವ ರಾಜ್ಯದ ಎರಡನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಆನ್‌ಲೈನ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿಸಿದ್ದಾರೆ. ರೈಲು ಕೇವಲ 5 ಗಂಟೆ 45 ನಿಮಿಷಗಳಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿ ತಲುಪಲಿದೆ. ಈ ಮೂಲಕ ಶತಾಬ್ದಿ ರೈಲಿಗೆ ಹೋಲಿಸಿದರೆ ಒಂದು ಗಂಟೆ 15 ನಿಮಿಷ ಸಮಯ ಉಳಿತಾಯವಾಗಲಿದೆ.

ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ಎಕ್ಸಿಕ್ಯೂಟಿವ್ ಚೇರ್ (EC) ಮತ್ತು AC ಚೇರ್ ಕಾರ್ (CC) ಎಂಬ ಎರಡು ವಿಭಾಗಗಳನ್ನು ಒಳಗೊಂಡಿದೆ. ಬೆಂಗಳೂರಿನಿಂದ ಧಾರವಾಡಕ್ಕೆ ಎಕ್ಸಿಕ್ಯೂಟಿವ್ ಚೇರ್ ಟಿಕೆಟ್ ದರ ರೂ. 2010 ಆದರೆ ಚೇರ್ ಕಾರ್ ಟಿಕೆಟ್ ಬೆಲೆ ರೂ. 1165. ಆಗಿದೆ. ಧಾರವಾಡದಿಂದ ಬೆಂಗಳೂರಿಗೆ ಎಕ್ಸಿಕ್ಯೂಟಿವ್ ಚೇರ್ ಟಿಕೆಟ್ ದರ ರೂ. 2440 ಆದರೆ AC ಚೇರ್ ಕಾರ್ ಟಿಕೆಟ್ ದರ ರೂ. 1330. ಆಗಿದೆ.
ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ರೈಲು ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣದಿಂದ ಹೊರಡಲಿದೆ. ಸದ್ಯ ಈ ರೈಲಿಗೆ ಯಶವಂತಪುರ, ದಾವಣಗೆರೆ ಮತ್ತು ಎಸ್ಎಸ್ಎಸ್ ಹುಬ್ಬಳ್ಳಿ ಮೂರು ನಿಲುಗಡೆ ಇದೆ. ರೈಲು ಪ್ರಯಾಣಿಕರು ಈ ರೈಲಿಗೆ ಹೆಚ್ಚಿನ ನಿಲುಗಡೆ ಬೇಕು ಎಂದು ಮನವಿ ಮಾಡಿದ್ದಾರೆ.
6 ನಿಲುಗಡೆಗೆ ಕೋರಿಕೆ; ಬೆಂಗಳೂರು-ಧಾರವಾಡ ನಡುವಿನ ರೈಲು ಯಶವಂತಪುರ, ದಾವಣಗೆರೆಯಲ್ಲಿ 2 ನಿಮಿಷ ಮತ್ತು ಹುಬ್ಬಳ್ಳಿಯಲ್ಲಿ 5 ನಿಮಿಷ ನಿಲುಗಡೆ ಹೊಂದಿದೆ. ಮೂರು ನಿಲುಗಡೆ ಮಾತ್ರ ಇರುವುದರಿಂದ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಲಿದೆ ಎಂದು ರೈಲು ಪ್ರಯಾಣಿಕರು ಹೇಳಿದ್ದಾರೆ.

ತುಮಕೂರು, ಬೀರೂರು ಮತ್ತು ಹಾವೇರಿಯಲ್ಲಿ ತಲಾ 2 ನಿಮಿಷ ರೈಲು ನಿಲುಗಡೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಲಾಗಿದೆ. ಬೆಂಗಳೂರು೦-ತುಮಕೂರು ನಡುವಿನ ಹೆಚ್ಚಿನ ಪ್ರಯಾಣಿಕರು ವಂದೇ ಭಾರತ್ ದರ ಹೆಚ್ಚಾದ ಕಾರಣ ಪ್ರಯಾಣಿಸುವುದಿಲ್ಲ. ಆದರೆ ತುಮಕೂರಿನಿಂದ ಹುಬ್ಬಳ್ಳಿ-ಧಾರವಾಡಕ್ಕೆ ಹೋಗುವ ಜನರಿಗೆ ಅನುಕೂಲವಾಗಲಿದೆ ಎಂದು ಪ್ರಯಾಣಿಕರು ಇಲಾಖೆ ಗಮನ ಸೆಳೆದಿದ್ದಾರೆ.
ಇನ್ನೂ ಪ್ರಯಾಣಿಕರ ಬೇಡಿಕೆಯಂತೆ ರೈಲು ನಿಲ್ದಾಣಗಳನ್ನು ಅಧಿಕಗೊಳಿಸಿದರೆ ಇನ್ನೂ ಹೆಚ್ಚು ಜನ ಪ್ರಯಾಣಿಕರು ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುವುದರಲ್ಲಿ ಅನುಮಾನವೇ ಇಲ್ಲ.
ಈಗಾಗಲೇ ಈ ರೈಲಿನಲ್ಲಿ ಒಂದೇ ದಿನ ಬೆಂಗಳೂರಿನಿಂದ ಧಾರವಾಡಕ್ಕೆ ಮತ್ತೆ ಧಾರವಾಡದಿಂದ ಬೆಂಗಳೂರಿಗೆ ತಲುಪಬಹುದು. ಹೀಗಾಗಿ ಪ್ರಯಾಣಿಕರ ಸ್ಪಂದನೆ ಅಧಿಕವಾಗಿದೆ. ಸುಖ ಹಾಗೂ ಸಮಯದ ಉಳಿತಾಯಕ್ಕಾಗಿ ಪ್ರಯಾಣಿಕರು ಒಂದೇ ಭಾರತ್ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾರೆ.ಎಂಟು ಕೋಚ್‌ಗಳ ಈ ರೈಲಿನಲ್ಲಿ 52ಸೀಟುಗಳು ಎಕ್ಸಿಕ್ಯುಟಿವ್ ಕ್ಲಾಸ್‌ದ್ದಾಗಿವೆ. 478 ಸೀಟುಗಳು ಎಸಿ ಚೇರ್ ಕಾರ್ ಆಗಿವೆ.












Click it and Unblock the Notifications