Vande Bharat; ಮುಂದಿನ ತಿಂಗಳು ಬೆಂಗಳೂರು-ಧಾರವಾಡ ರೈಲು ಸಂಚಾರ
ಬೆಂಗಳೂರು, ಜೂನ್ 01; ಬೆಂಗಳೂರು ಮತ್ತು ಉತ್ತರ ಕರ್ನಾಟಕ ಭಾಗಕ್ಕೆ ಸಂಚಾರ ನಡೆಸುವ ಜನರಿಗೆ ಕೇಂದ್ರ ಸಚಿವರು ಸಿಹಿಸುದ್ದಿ ಕೊಟ್ಟಿದ್ದಾರೆ. ರಾಜಧಾನಿ ಬೆಂಗಳೂರು ಮತ್ತು ಉತ್ತರ ಕರ್ನಾಟಕ ಸಂಪರ್ಕಿಸುವ ಭಾರತೀಯ ರೈಲ್ವೆಯ ಸೆಮಿ-ಹೈ ಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್ ಮುಂದಿನ ತಿಂಗಳು ಸಂಚಾರ ಆರಂಭಿಸಲಿದೆ.
ಧಾರವಾಡದ ಬಿಜೆಪಿ ಸಂಸದ, ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್ ಜೋಶಿ ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಅವರು ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಭೇಟಿ ಮಾಡಿದ ಬಳಿಕ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರದ ಬಗ್ಗೆ ಸಿಹಿಸುದ್ದಿ ಕೊಟ್ಟಿದ್ದಾರೆ.

ಸದ್ಯ ಕರ್ನಾಟಕದಲ್ಲಿ ಒಂದೇ ಒಂದು ವಂದೇ ಭಾರತ್ ರೈಲು ಓಡುತ್ತಿದೆ. ಕೇಂದ್ರ ರೈಲ್ವೆ ಸಚಿವಾಲಯ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ಮಾರ್ಗದಲ್ಲಿ ರೈಲು ಓಡಿಸಲು ಒಪ್ಪಿಗೆ ನೀಡಿತ್ತು. ಏಪ್ರಿಲ್ ಅಥವ ಮೇ ತಿಂಗಳಿನಲ್ಲಿ ಓಡಬೇಕಿದ್ದ ರೈಲು ಸಂಚಾರ ಕೊಂಚ ತಡವಾಗಿದೆ. ಈಗ ರೈಲು ಸಂಚಾರಕ್ಕೆ ತಿಂಗಳು ನಿಗದಿಯಾಗಿದೆ.
ಪ್ರಹ್ಲಾದ್ ಜೋಶಿ ಮಾಹಿತಿ; ಸಂಸದ ಪ್ರಹ್ಲಾದ್ ಜೋಶಿ ರೈಲ್ವೆ ಸಚಿವರ ಭೇಟಿ ಬಳಿಕ, ಜುಲೈನಲ್ಲಿ ಧಾರವಾಡ-ಬೆಂಗಳೂರು ವಂದೇ ಭಾರತ್ ರೈಲಿಗೆ ಚಾಲನೆ. ಬಹು ನಿರೀಕ್ಷೆಯ ಧಾರವಾಡ-ಬೆಂಗಳೂರು ಮಧ್ಯದ ವಂದೇ ಭಾರತ್ ರೈಲಿನ ಸೇವೆ ಇನ್ನು ಕೆಲವೇ ದಿನಗಳಲ್ಲಿ ವಿದ್ಯುಕ್ತವಾಗಿ ಆರಂಭವಾಗಲಿದೆ ಎಂದು ಟ್ವೀಟ್ ಮಾಡಿದ್ದಾರೆ.

ದೆಹಲಿಯಲ್ಲಿ ಕೇಂದ್ರ ರೈಲ್ವೇ ಮಂತ್ರಿ ಶ್ರೀ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ ಈ ಕುರಿತು ಚರ್ಚೆ ನಡೆಸಿದ್ದು, ರೈಲು ಸೇವೆಯ ಆರಂಭಕ್ಕೆ ಅಗತ್ಯವಿರುವ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ಜುಲೈ ವೇಳೆಗೆ ರಾಜ್ಯದ ಎರಡನೇ ವಂದೇ ಭಾರತ್ ರೈಲಿಗೆ ಚಾಲನೆ ನೀಡುವ ಭರವಸೆಯನ್ನು ಸಚಿವರು ನೀಡಿದ್ದಾರೆ. ಅವಳಿ ನಗರದ ಜನರ ಬಹು ನಿರೀಕ್ಷಿತ ಈ ಉತ್ಕೃಷ್ಟ ರೈಲಿನ ಪ್ರಯಾಣದ ಅನುಭವವನ್ನು ಶೀಘ್ರದಲ್ಲಿಯೇ ಆಸ್ವಾದಿಸಬಹುದಾಗಿದೆ ಎಂದು ಜೋಶಿ ಹೇಳಿದ್ದಾರೆ.
8 ಬೋಗಿಯ ರೈಲು; ರಾಜಧಾನಿ ಬೆಂಗಳೂರು ಮತ್ತು ಉತ್ತರ ಕರ್ನಾಟಕ ಸಂಪರ್ಕಿಸುವ ವಂದೇ ಭಾರತ್ ರೈಲು ಸಂಚಾರ ಯಾವಾಗ? ಎಂಬುದು ಜನರ ಪ್ರಶ್ನೆಯಾಗಿತ್ತು. ಈ ರೈಲು 8 ಬೋಗಿ ಹೊಂದಿರಲಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಸದ್ಯ ಬೆಂಗಳೂರು ಹುಬ್ಬಳ್ಳಿ ನಡುವಿನ ಪ್ರಯಾಣದ ಅವಧಿ ಸುಮಾರು 7.30 ಗಂಟೆಗಳು, ವಂದೇ ಭಾರತ್ ಸಂಚಾರ ಆರಂಭವಾದ ಬಳಿಕ ಎಷ್ಟು ಹೊತ್ತು ಪ್ರಯಾಣ ಇರಲಿದೆ? ಎಂಬುದು ಅಂತಿಮವಾಗಿಲ್ಲ.
ಜುಲೈನಲ್ಲಿ ಧಾರವಾಡ - ಬೆಂಗಳೂರು ವಂದೇ ಭಾರತ್ ರೈಲಿಗೆ ಚಾಲನೆ
— Pralhad Joshi (@JoshiPralhad) May 31, 2023
ಬಹು ನಿರೀಕ್ಷೆಯ ಧಾರವಾಡ - ಬೆಂಗಳೂರು ಮಧ್ಯದ ವಂದೇ ಭಾರತ್ ರೈಲಿನ ಸೇವೆ ಇನ್ನು ಕೆಲವೇ ದಿನಗಳಲ್ಲಿ ವಿದ್ಯುಕ್ತವಾಗಿ ಆರಂಭವಾಗಲಿದೆ.#VandeBharatExpress (1/3) pic.twitter.com/IFv04VJrAY
ಹುಬ್ಬಳ್ಳಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ನೈಋತ್ಯ ರೈಲ್ವೆ ಬೆಂಗಳೂರು-ಧಾರವಾಡ ವಂದೇ ಭಾರತ್ ರೈಲಿನ ತಾತ್ಕಾಲಿಕ ವೇಳಾಪಟ್ಟಿಯನ್ನು ರೈಲ್ವೆ ಸಚಿವಾಲಯಕ್ಕೆ ಕಳಿಸಿಕೊಟ್ಟಿದೆ. ಈಗಾಗಲೇ ರೈಲು ಗಂಟೆಗೆ 130 ಕಿ. ಮೀ. ವೇಗದಲ್ಲಿ ಸಂಚಾರ ನಡೆಸಲು ಅಗತ್ಯ ಇರುವ ಮೂಲಕ ಸೌಕರ್ಯ ಅಭಿವೃದ್ಧಿಗೊಳಿಸಲಾಗಿದೆ. ತಿರುವುಗಳನ್ನು ಕಡಿಮೆ ಮಾಡಲಾಗಿದೆ.
ದೇಶದಲ್ಲಿ ವಂದೇ ಭಾರತ್ ರೈಲಿನ ಬೋಗಿ ಚೆನ್ನೈನಲ್ಲಿರುವ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಸಿದ್ಧವಾಗುತ್ತದೆ. 2023ರ ಆಗಸ್ಟ್ ವೇಳಗೆ ದೇಶದಲ್ಲಿ 75 ವಂದೇ ಭಾರತ್ ರೈಲುಗಳನ್ನು ಓಡಿಸುವುದು ಕೇಂದ್ರ ಸರ್ಕಾರದ ಘೋಷಣೆಯಾಗಿದೆ. ಇದೇ ಘೋಷಣೆಯಡಿ ಬೆಂಗಳೂರು-ಧಾರವಾಡ ರೈಲು ಸಂಚಾರ ನಡೆಸಬಹುದು ಎಂಬುದು ನಿರೀಕ್ಷೆಯಾಗಿದೆ.
ಬೆಂಗಳೂರು-ಧಾರವಾಡ ನಡುವೆ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರಕ್ಕೆ ಬೋಗಿಗಳು ಸಿಕ್ಕಿ, ಪ್ರಾಯೋಗಿಕ ಸಂಚಾರ ಪೂರ್ಣಗೊಂಡ ಬಳಿಕ ವಾಣಿಜ್ಯ ಸಂಚಾರಕ್ಕೆ ಒಪ್ಪಿಗೆ ದೊರೆಯಲಿದೆ. ಬಳಿಕ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದ ವೇಳಾಪಟ್ಟಿ ಅನ್ವಯ ವಂದೇ ಭಾರತ್ ರೈಲು ಸಂಚಾರದ ದಿನಾಂಕ ನಿಗದಿಯಾಗುವ ನಿರೀಕ್ಷೆ ಇದೆ.
2022ರ ನವೆಂಬರ್‌ನಲ್ಲಿ ನರೇಂದ್ರ ಮೋದಿ ಬೆಂಗಳೂರಿನ ಕೆಎಸ್ಆರ್ ರೈಲು ನಿಲ್ದಾಣದಲ್ಲಿ ಮೈಸೂರು ಮತ್ತು ಪುರಚಿ ತಲೈವರ್ ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಗೆ ಚಾಲನೆ ನೀಡಿದ್ದರು. ಇದು ಬೆಂಗಳೂರು ಮೂಲಕ ಸಂಚಾರ ನಡೆಸುತ್ತದೆ. ಕರ್ನಾಟಕದಲ್ಲಿ ಸಂಚಾರ ನಡೆಸುತ್ತಿರುವ ಒಂದೇ ಒಂದು ವಂದೇ ಭಾರತ್ ರೈಲು ಇದು.












Click it and Unblock the Notifications