Prajwal Revanna: ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ವಜಾ
ಬೆಂಗಳೂರು, ಜೂನ್ 26: ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಕಾನೂನು ಹೋರಾಟದಲ್ಲಿ ಹಿನ್ನಡೆಯಾಗಿದೆ. ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿದ್ದು, ಸದ್ಯ ಪ್ರಜ್ವಲ್ ರೇವಣ್ಣ ಎಸ್‌ಐಟಿ ವಶದಲ್ಲಿದ್ದಾರೆ.
ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಗಜಾನನ ಭಟ್ ಬುಧವಾರ ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದಾರೆ. ಅವರ ವಿರುದ್ಧ ಒಟ್ಟು 4 ಪ್ರಕರಣ ದಾಖಲಾಗಿದ್ದು, 1 ಪ್ರಕರಣದಲ್ಲಿ ಜಾಮೀನು ಸಿಕ್ಕಿದೆ.

ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾದ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪ್ರಜ್ವಲ್ ಜಾಮೀನು ಕೋರಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದರು.
ಕೆ. ಆರ್. ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮಹಿಳೆ ಅಪಹರಣ ಪ್ರಕರಣದಲ್ಲಿ ಮೊದಲು ಪ್ರಜ್ವಲ್ ರೇವಣ್ಣ ಬಂಧಿಸಲಾಗಿತ್ತು. ಕರ್ನಾಟಕ ಸರ್ಕಾರ ಅವರ ವಿರುದ್ಧದ ಎಲ್ಲಾ ಪ್ರಕರಣಗಳ ತನಿಖೆಗೆ ಎಸ್‌ಐಟಿ ರಚನೆ ಮಾಡಿದೆ. ಒಟ್ಟು 4 ಪ್ರಕರಣಗಳ ತನಿಖೆ ನಡೆಸುತ್ತಿರುವ ಎಸ್‌ಐಟಿ ಅವರನ್ನು ವಶಕ್ಕೆ ಪಡೆದುಕೊಂಡು ವೈದ್ಯಕೀಯ ಪರೀಕ್ಷೆ, ಸ್ಥಳ ಮಹಜರು ನಡೆಸುತ್ತಿದೆ.
ಹಾಸನದ ಸಂಸದರಾಗಿದ್ದ ಪ್ರಜ್ವಲ್ ರೇವಣ್ಣ ಏಪ್ರಿಲ್ 26ರಂದು ಲೋಕಸಭೆ ಚುನಾವಣೆ 2024ರ ಮತದಾನ ಮಾಡಿ ವಿದೇಶಕ್ಕೆ ಪರಾರಿಯಾಗಿದ್ದರು. ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಅವರು ಮೇ 31ರಂದು ರಾಜ್ಯಕ್ಕೆ ವಾಪಸ್ ಆಗಿದ್ದರು. ಆಗ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅವರನ್ನು ಬಂಧಿಸಲಾಗಿತ್ತು.
ಪ್ರಜ್ವಲ್ ರೇವಣ್ಣ 2024ರ ಲೋಕಸಭಾ ಚುನಾವಣೆಗೂ ಹಾಸನದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿದ್ದರು. ಜೂನ್ 4ರಂದು ಚುನಾವಣೆ ಫಲಿತಾಂಶ ಘೋಷಣೆಯಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಎಂ. ಪಟೇಲ್ 6,72,988 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಪ್ರಜ್ವಲ್ ರೇವಣ್ಣ 6,30,339 ಮತಗಳನ್ನು ಪಡೆದು ಸೋತಿದ್ದಾರೆ.
ಸಂಸದರಾಗಿದ್ದಾಗಲೇ ಪ್ರಜ್ವಲ್ ರೇವಣ್ಣ ಹಾಸನದ ಸರ್ಕಾರಿ ಅತಿಥಿ ಗೃಹ, ಹೊಳೆನರಸೀಪುರದ ನಿವಾಸದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿ, ಅದರ ವಿಡಿಯೋ ಮಾಡಿಕೊಂಡಿದ್ದಾರೆ ಎಂಬುದು ಆರೋಪ. ಈ ಆರೋಪದ ಕುರಿತು ಎಸ್‌ಐಟಿ ತನಿಖೆ ನಡೆಯುತ್ತಿದೆ.
ಎಸ್‌ಐಟಿ ಒಂದು ಬಾರಿ ಪ್ರಜ್ವಲ್ ರೇವಣ್ಣ ವಿಚಾರಣೆ ಮಗಿಸಿತ್ತು. ಬಳಿಕ ಕೋರ್ಟ್‌ಗೆ ಹಾಜರುಪಡಿಸಿದಾಗ ಅವರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಮತ್ತೊಂದು ಪ್ರಕರಣದ ವಿಚಾರಣೆಗಾಗಿ ಮತ್ತೆ ಅವರನ್ನು ಬಾಡಿ ವಾರೆಂಟ್ ಮೂಲಕ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡರು.
ಕೆ. ಆರ್ ನಗರದಲ್ಲಿ ದಾಖಲಾದ ಮಹಿಳೆ ಅಪಹರಣ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ, ಎಚ್. ಡಿ. ರೇವಣ್ಣ, ಭವಾನಿ ರೇವಣ್ಣ ಸಹ ಆರೋಪಿಗಳು. ಭವಾನಿ ರೇವಣ್ಣ ಬಂಧಿಸದಂತೆ ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ. ಎಚ್. ಡಿ. ರೇವಣ್ಣ ಇದೇ ಪ್ರಕರಣದಲ್ಲಿ ಬಂಧನಗೊಂಡು ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಸದ್ಯ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ.
ಪ್ರಜ್ವಲ್ ರೇವಣ್ಣಗೆ ಮನೆಯ ಊಟ ಮಾಡಲು ಅವಕಾಶ ನೀಡಬೇಕು ಎಂದು ಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಮಂಗಳವಾರ ಈ ಅರ್ಜಿ ವಿಚಾರಣೆ ನಡೆದಿದ್ದು, ಸಿಐಡಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು. ಸಿಐಡಿ ಅಧಿಕಾರಿಗಳಿಗೆ ನೀಡುವ ಊಟವನ್ನೇ ಅವರಿಗೆ ನೀಡಲಾಗುತ್ತದೆ ಎಂದು ಹೇಳಿತ್ತು.
ಕೋರ್ಟ್ ಪ್ರಜ್ವಲ್ ರೇವಣ್ಣಗೆ ಮನೆಯ ಊಟ ಕೊಡಲು ಅವಕಾಶ ನೀಡಿರಲಿಲ್ಲ. ಬುಧವಾರ ಅವರ ಜಾಮೀನು ಅರ್ಜಿ ವಜಾಗೊಳಿಸಲಾಗಿದ್ದು, ಪ್ರಜ್ವಲ್ ಎಸ್‌ಐಟಿ ಕಸ್ಟಡಿಯಲ್ಲಿ ವಿಚಾರಣೆ ಎದುರಿಸುವುದು ಅನಿವಾರ್ಯವಾಗಿದೆ.












Click it and Unblock the Notifications