ಉದಯನಿಧಿ ಸ್ಟಾಲಿನ್ ಖುದ್ದು ಹಾಜರಿಗೆ ಬೆಂಗಳೂರು ಕೋರ್ಟ್ ಸಮನ್ಸ್
ಬೆಂಗಳೂರು, ಮಾರ್ಚ್ 05: ಸನಾತನ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎನ್ನಲಾದ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯ ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಪುತ್ರ ಹಾಗೂ ಸಚಿವ ಉದಯನಿಧಿ ಸ್ಟಾಲಿನ್‌ಗೆ ಏಪ್ರಿಲ್ 24 ರಂದು ಖುದ್ದು ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿದೆ.
ಉದಯನಿಧಿ ಸ್ಟಾಲಿನ್ ಮುಂದಿನ ವಿಚಾರಣೆ ವೇಳೆ ಹಾಜರಾಗಲೇಬೇಕಾಗಿದೆ. ಇಲ್ಲವಾದರೆ ಕೋರ್ಟ್ ಜಾಮೀನು ರಹಿತ ಬಂಧನ ವಾರಂಟ್ ಜಾರಿಗೊಳಿಸುವ ಸಾಧ್ಯತೆ ಇದೆ. ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನ ನ್ಯಾಯಾಧೀಶರಾದ ಜೆ. ಪ್ರೀತ್ ಸೋಮವಾರ ಈ ಸಮನ್ಸ್ ಜಾರಿ ಮಾಡಿದ್ದಾರೆ.

ಗೈರು ಹಾಜರಿಗೆ ಆಕ್ಷೇಪ: ಕಳೆದ ಬಾರಿ ನೀಡಿದ್ದ ಸಮನ್ಸ್‌ನಂತೆ ಉದಯನಿಧಿ ಸ್ಟಾಲಿನ್ ಸೋಮವಾರ ಹಾಜರಾಗಬೇಕಿತ್ತು. ಇಲ್ಲವೇ ವಕೀಲರ ಮೂಲಕ ಹಾಜರಾತಿಗೆ ವಿನಾಯಿತಿ ಪಡೆಯಬೇಕಿತ್ತು. ಆದರೆ, ಎರಡನ್ನೂ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ತೀವ್ರ ಆಕ್ಷೇಪ ಎತ್ತಿದೆ.
ಅಲ್ಲದೆ, ಮುಂದಿನ ವಿಚಾರಣೆ ವೇಳೆ ಖುದ್ದು ಹಾಜರಾಗಬೇಕೆಂದು ನಿರ್ದೇಶನ ನೀಡಿ ಸಮನ್ಸ್ ಜಾರಿಗೊಳಿಸಿ ವಿಚಾರಣೆಯನ್ನು ಮುಂದೂಡಿತು. ಈ ಮಧ್ಯೆ, ಇತರೆ ಮೂವರು ಆರೋಪಿಗಳಾದ ವೆಂಕಟೇಶ್, ಮಧುಕರ್ ರಾಮಲಿಂಗಂ, ಅಡವನ್ ದಿಚನ್ಯ ವಕೀಲರ ಮೂಲಕ ನ್ಯಾಯಾಲಯಕ್ಕೆ ಹಾಜರಾದರು.
ಏನಿದು ಪ್ರಕರಣ?: ವಿ. ಪರಮೇಶ್ ಎಂಬುವರು ಖಾಸಗಿ ದೂರು ನೀಡಿ ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಹಾಗಾಗಿ, ಅವರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 153 (ಪ್ರಚೋದನೆ) ಮತ್ತು ಸೆಕ್ಷನ್ 298 (ಧಾರ್ಮಿಕ ಭಾವನೆ ಘಾಸಿಗೊಳಿಸುವುದು) ಮತ್ತು ಸೆಕ್ಷನ್ 500ರಧಿಡಿ (ಮಾನಹಾನಿ) ಕ್ರಮ ಜರುಗಿಸಬೇಕು ಎಂದು ಕೋರಿದ್ದರು.
ಆ ದೂರನ್ನು ಪರಿಗಣಿಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿವಾದಾತ್ಮಕ ಹೇಳಿಕೆ ಸಂಬಂಧ ಉದಯನಿಧಿ ಸ್ಟಾಲಿನ್ ಸೇರಿ 4 ಆರೋಪಿಗಳಿಗೂ ಸಮನ್ಸ್ ಜಾರಿಗೊಳಿಸಿತ್ತು.
2023ರ ಸೆಪ್ಟೆಂಬರ್‌ನಲ್ಲಿ ಉದಯನಿಧಿ ಸ್ಟಾಲಿನ್, "ಸನಾತನ ಧರ್ಮವು ಸಾಮಾಜಿಕ ನ್ಯಾಯದ ಕಲ್ಪನೆಗೆ ವಿರುದ್ಧವಾಗಿದೆ ಮತ್ತು ಅದನ್ನು ನಿರ್ಮೂಲನೆ ಮಾಡಬೇಕು" ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿರುದ್ಧ ದೇಶದ ವಿವಿಧ ಕಡೆ ದೂರು ದಾಖಲಾಗಿದೆ.












Click it and Unblock the Notifications