Chitra Sante 2023: ಚಿತ್ರಕಲಾ ಪರಿಷತ್ತು ರಾಷ್ಟ್ರಮಟ್ಟಕ್ಕೆ ಬೆಳೆಯಲಿ, 2 ದಿನ ಚಿತ್ರಸಂತೆ ನಡೆಸಲು ಸಿಎಂ ಸಲಹೆ
ಬೆಂಗಳೂರು ಜನವರಿ 08: ದೇಶದ ವಿಶಿಷ್ಟ ಸಂಸ್ಥೆಯಾಗಿರುವ ಬೆಂಗಳೂರಿನಲ್ಲಿರುವ ಕರ್ನಾಟಕ ಚಿತ್ರಕಲಾ ಪರಿಷತ್ತು ರಾಷ್ಟ್ರಮಟ್ಟಕ್ಕೆ ಬೆಳೆಯಬೇಕು. ಮುಂದಿನ ವರ್ಷ ಎರಡು ದಿನ ಚಿತ್ರಸಂತೆ ಆಯೋಜಿಸಿ, ಇದಕ್ಕೆ ರಾಜ್ಯ ಸರ್ಕಾರ ಅಗತ್ಯ ಸಹಕಾರ ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಭಾನುವಾರ ಕರ್ನಾಟಕ ಚಿತ್ರಕಲಾ ಪರಿಷತ್ತು ಹಾಗೂ ಉನ್ನತ ಶಿಕ್ಷಣ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ 20ನೇ 'ಚಿತ್ರಸಂತೆ' ಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೆಹಲಿ ಮಟ್ಟದಲ್ಲಿ ಮಾನ್ಯತೆ ಪಡೆದ ಚಿತ್ರಕಲಾ ಪರಿಷತ್ತು ಬೆಂಗಳೂರಿಗೆ ಸೀಮಿತವಾಗದೆ ರಾಷ್ಟ್ರಮಟ್ಟಕ್ಕೆ ಬೆಳೆಯಬೇಕು. ರಾಷ್ಟ್ರೀಯ ಮಟ್ಟದಲ್ಲಿ ಈ ಸಂಸ್ಥೆಯನ್ನು ಕಟ್ಟಲು ಅಗತ್ಯ ನೆರವು, ಸಹಕಾರ ಸರ್ಕಾರ ನೀಡಲಿದೆ. ಬ್ರಾಂಡ್ ಬೆಂಗಳೂರನ್ನು ರಾಷ್ಟಮಟ್ಟಕ್ಕೆ ಕೊಂಡೊಯ್ಯಬಲ್ಲ ಸಂಸ್ಥೆಗಳಲ್ಲಿ ಚಿತ್ರಕಲಾ ಪರಿಷತ್ ಕೂಡ ಒಂದು. ಐಐಟಿ, ಐಐಎಂ, ಎನ್ಎಸ್ಎಲ್ಯು ಮಟ್ಟಕ್ಕೆ ಬೆಳೆಯಬೇಕು ಎಂದು ಆಶಿಸಿದರು.
ಚಿತ್ರಕಲೆಯಿಂದ ಭಾರತದ ಸಂಸ್ಕೃತಿಯನ್ನು ಬಿಂಬಿಸುವ ಕೆಲಸವಾಗುತ್ತಿದೆ. ಈ ರೀತಿಯ ಕೆಲಸ ಬೇರೆಲ್ಲೂ ಆಗುತ್ತಿಲ್ಲ.
ಪರಿಷತ್ತಿಗೆ ಈಗ ರೆಕ್ಕೆಗಳು ಬಂದಿವೆ. ಸರಸ್ವತಿಯ ವಾಹನ ಪರಮಹಂಸದಂತೆ ಚಿತ್ರಸಂತೆ ಚಿತ್ರಕಲೆಯ ಪರಮಹಂಸ. ಇದು ಬೆಳೆದಿದ್ದು, ಗಟ್ಟಿಮುಟ್ಟಾದ ರೆಕ್ಕೆಗಳು ಮೂಡಿವೆ. ಇನ್ನೂ ಎತ್ತರಕ್ಕೆ ಹಾರಬೇಕು ಎನ್ನುವುದು ನನ್ನ ಉದ್ದೇಶ. ಹಿಮಾಲಯದ ಎತ್ತರಕ್ಕೆ ಹಾರಬೇಕು ಎಂದರು.

ಪ್ರಾದೇಶಿಕ ಕೇಂದ್ರಗಳಲ್ಲಿ ಚಿತ್ರಸಂತೆಗಳಾಗಬೇಕು
ಪ್ರತಿ ವರ್ಷ ನಡೆಯಲಿರುವ ಈ ಚಿತ್ರಸಂತೆ ಬೆಂಗಳೂರಿಗೆ ಸೀಮಿತವಾಗಬಾರದು. ಕಲ್ಯಾಣ ಕರ್ನಾಟಕ, ದಕ್ಷಿಣ ಕರ್ನಾಟಕದಲ್ಲಿ ಒಳ್ಳೆಯ ಕಲಾವಿದರಿದ್ದಾರೆ. ಅವರಿಗೆ ಯಾವುದೇ ವೇದಿಕೆ ಇಲ್ಲ. ಈ ವರ್ಷ ನಾಲ್ಕೈದು ಚಿತ್ರಸಂತೆಗಳನ್ನು ಪ್ರಾದೇಶಿಕ ಕೇಂದ್ರಗಳಾದ ಮಂಗಳೂರು, ಮೈಸೂರು, ಹುಬ್ಬಳ್ಳಿ ಧಾರವಾಡಗಳಲ್ಲಿ ಏರ್ಪಡಿಸಬೇಕು. ಅದಕ್ಕೆ ಸರ್ಕಾರ ಸಂಪೂರ್ಣ ಸಹಕಾರವನ್ನು ನೀಡಲಿದೆ.
ಬೆಂಗಳೂರು ನಾನಾ ರೀತಿಯಲ್ಲಿ ವಿಶಿಷ್ಟ ನಗರ. ಪ್ರಾಚೀನ, ಮಹಾರಾಜರ, ತಂತ್ರಜ್ಞಾನ, ಐ.ಟಿ ಬಿಟಿ, ಹೊಸ ವಿಜ್ಞಾನ, ಸ್ಟಾರ್ಟ್ ಅಪ್ ಗಳ ತವರು ಬೆಂಗಳೂರು. ಅದರೊಂದಿಗೆ ಉತ್ತಮವಾದ ಕಲೆ, ಸಂಸ್ಕೃತಿ, ಆಧ್ಯಾತ್ಮಿಕ ಬೀಡಾಗಿದೆ. ಇಸ್ಕಾನ್, ಆರ್ಟ್ ಆಫ್ ಲಿವಿಂಗ್, ಈಶಾ ಆಧ್ಯಾತ್ಮಿಕ ಕೇಂದ್ರಗಳು ಇಲ್ಲಿ ನೆಲೆಯಾಗಿವೆ. ಇವೆಲ್ಲವನ್ನೂ ಬಿಂಬಿಸುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.

ಎರಡು ದಿನ ಚಿತ್ರಸಂತೆ ನಡೆಸಿ
ಹೊಸ ಸರ್ಕಾರಿ ಎಲೆಕ್ಟ್ರಿಕಲ್ ಫ್ಯಾಕ್ಟರಿ (ಎನ್‌ಜಿಎಫ್)ಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಬೆಂಗಳೂರಿನಲ್ಲಿ ಬೆಳೆದ ಬಗೆಯನ್ನು ಬಿಂಬಿಸುವ ಕೆಲಸ ಮಾಡಲು ಅನುಮತಿ ನೀಡಲಾಗಿದೆ. ಅಂತೆಯೇ ವಿಭಿನ್ನವಾದ ಕಲೆಗಳು ಹೇಗೆ ಅಭಿವೃದ್ಧಿಯಾಗಿವೆ ಎಂದು ಬಿಂಬಿಸಲು ಸ್ಥಳ ಸೇರಿಸಂತೆ ಅನುಕೂಲ ನೀಡಲಾಗುವುದು. ಮುಂದಿನ ವರ್ಷ 2 ದಿನ ಚಿತ್ರ ಸಂತೆ ಹಮ್ಮಿಕೊಳ್ಳಬೇಕು. ಎಲ್ಲರೂ ಚಿತ್ರಕಲೆಯನ್ನು ಖರೀದಿಸುವ ಮೂಲಕ ಕಲೆಯನ್ನು ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.

ಚಿತ್ರಕಲೆಗೆ ತಂತ್ರಜ್ಞಾನ ಬೇಕಿಲ್ಲ
ಚಿತ್ರಕಲೆ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸುವ ಮಾಧ್ಯಮ. ಮೆದುಳಿನ ಯೋಚನೆ ಹಾಗೂ ಹೃದಯಾಂತರಾಳದ ಭಾವನೆಗಳಿವೆ. ಯೋಚನೆಗಳಿಗೆ ತಂತ್ರಜ್ಞಾನದಂಥ ಹಲವಾರು ಮಾಧ್ಯಮಗಳಿವೆ. ಆದರೆ ಚಿತ್ರಕಲೆಗೆ ಯಾವುದೇ ತಂತ್ರಜ್ಞಾನ ಬೇಕಿಲ್ಲ. ಕಲೆಯನ್ನು ಉತ್ತಮಗೊಳಿಸಲು ಬಳಕೆಯಾಗಬಹುದು. ಮನದಾಳದ ಭಾವನೆಗಳು ಚಿತ್ರಕಲೆಯ ಮೂಲಕ ತಿಳಿಯುತ್ತದೆ. ಹಾಗಾಗಿ ಚಿತ್ರಕಲೆಗೆ ವಿಶ್ವದಲ್ಲಿ ಬಹಳಷ್ಟು ಬೆಲೆಯಿದೆ. ಚಿತ್ರಕಲೆ ಎಂದರೆ ವಜ್ರವಿದ್ದಂತೆ. ತಿಳಿಯದವರಿಗೆ ಅದೊಂದು ಕಲ್ಲು ಎಂದು ಚಿತ್ರಕಲೆ ಮಹತ್ವ ವಿವರಿಸಿದರು.

ದೇಶದಲ್ಲಿ ಚಿತ್ರಕಲಾ ಪರಿಷತ್ತಿನಂತಹ ಸಂಸ್ಥೆ ಇನ್ನೊಂದಿಲ್ಲ: ಶ್ಲಾಘನೆ
ಚಿತ್ರಕಲೆಯನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಸಾರ್ವಜನಿಕರು ಹೆಚ್ಚೆಚ್ಚು ಪ್ರಯತ್ನಿಸಿದರೆ ಅದರಿಂದ ಉಪಯೋಗ ಹೆಚ್ಚಿದೆ. ಚಿತ್ರಕಲಾ ಪರಿಷತ್ತು ಕಲಾವಿದರಿಗೆ ವೇದಿಕೆ ನೀಡಿ ಅವರ ಕಲೆಯನ್ನು ಅಭಿವ್ಯಕ್ತ ಮಾಡಲು ಶಿಸ್ತುಬದ್ಧವಾದ ವ್ಯವಸ್ಥೆ ಹಾಗೂ ಸಾಮಾನ್ಯ ಜನರಲ್ಲಿ ಈ ಬಗ್ಗೆ ಆಸಕ್ತಿ ಹಾಗೂ ಭಾವನೆಗಳನ್ನು ತಿಳಿದುಕೊಳ್ಳುವ ಪ್ರಮುಖ ಕೆಲಸ ಮಾಡುತ್ತಿದೆ. ಚಿತ್ರಕಲಾ ಪರಿಷತ್ತಿನಂತಹ ಸಂಸ್ಥೆ ಇಡೀ ದೇಶದಲ್ಲಿ ಮತ್ತೊಂದಿಲ್ಲ ಎನ್ನುವುದು ನಮಗೆ ಹೆಮ್ಮೆ ಎಂದು ಹೇಳಿದರು.
ಕಷ್ಟದ ಕೆಲಸವಾದರೂ ಚಿತ್ರಸಂತೆ ಮೂಲಕ ಜನಸಾಮಾನ್ಯರನ್ನು ಚಿತ್ರಕಲೆಗೆ ಎಳೆದು ತರಲಾಗಿದೆ. ಅವರನ್ನು ಆಕರ್ಷಿಸಿ, ಚಿತ್ರಕಲೆಯನ್ನು ಕೊಂಡು ಮನೆಗೆ ಹೋದಾಗ ಅದರ ಬಗ್ಗೆ ಚರ್ಚೆ, ವಿಮರ್ಶೆಯಾಗಿ ಕಲೆ ಬೆಳೆಯಲು ಅವಕಾಶವಾಗುತ್ತದೆ. ಚಿತ್ರಸಂತೆ ಅವಶ್ಯಕ, ಆಗಲೇಬೇಕಾದ ಸಂತೆ. ಮನಸ್ಸಿಗೆ ಸಂತೋಷ ಉಲ್ಲಾಸ ನೀಡುವ ಒಂದು ವಾತಾವರಣ ಕಲ್ಪಿಸುತ್ತದೆ ಎಂದರು.
ಚಿತ್ರಸಂತೆಯಲ್ಲಿ ದೇಶದ ವಿವಿಧ ಕಡೆಯಿಂದ 1300ಕ್ಕೂ ಹೆಚ್ಚು ಕಲಾವಿದರು ಆಗಮಿಸಿದ್ದರು. ಲಕ್ಷಾಂತರ ಜನ ಆಗಮಿಸಿ, ತಮ್ಮಿಷ್ಟದ ಚಿತ್ರಕಲೆ, ಆಕೃತಿಗಳು ಖರೀದಿಸಿದರ. ಬಗೆಬಗೆಯ ತಿಂಡಿ ಸವಿಯುವ ಜೊತೆಗೆ ಚಿತ್ರಕಲೆಗಳ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಕಾರ್ಯಕ್ರಮದಲ್ಲಿ ಪರಿಷತ್ತಿನ ಅಧ್ಯಕ್ಷ ಬಿ.ಎಲ್.ಶಂಕರ್, ಉನ್ನತ ಶಿಕ್ಷಣ ಸಚಿವ ಡಾ: ಸಿ.ಎನ್.ಅಶ್ವತ್ ನಾರಾಯಣ್, ಸಂಸದ ಪಿ.ಸಿ.ಮೋಹನ್, ಶಾಸಕ ರಿಜ್ವಾನ್ ಅರ್ಷದ್, ಚಿತ್ರ ಕಲಾವಿದ ಲಕ್ಷ್ಮಣ ಗೌಡ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.












Click it and Unblock the Notifications