ಕೆಎಸ್ಆರ್‌ಟಿಸಿಯ ಬಯೋ ಬಸ್ ಉಪಯೋಗಗಳು
ಬೆಂಗಳೂರು, ಅಕ್ಟೋಬರ್ 05 : ಕೆಎಸ್ಆರ್‌ಟಿಸಿ ಬಯೋ ಡಿಸೇಲ್‌ನಿಂದ ಸಂಚರಿಸುವ 10 ಬಯೋ ಬಸ್ಸಿಗೆ ಚಾಲನೆ ನೀಡಿವೆ. ಪ್ರಾಯೋಗಿಕವಾಗಿ ಈ ಸೇವೆಯನ್ನು ಆರಂಭಿಸಲಾಗಿದ್ದು, ಇದು ಲಾಭದಾಯಕ ಎಂದು ತಿಳಿದುಬಂದರೆ 106 ಬಸ್ಸುಗಳನ್ನು ಬಯೋ ಡೀಸೆಲ್ ಮೂಲಕ ಓಡಿಸುವ ಗುರಿಯನ್ನು ಸಾರಿಗೆ ಸಂಸ್ಥೆ ಹೊಂದಿದೆ.
ಅಕ್ಟೋಬರ್ 2ರ ಶುಕ್ರವಾರ 10 'ಬಯೋ ಬಸ್' ಸಂಚಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದಾರೆ. ಬೆಂಗಳೂರಿನಿಂದ ಶಿವಮೊಗ್ಗ, ಸೋಮವಾರಪೇಟೆ, ಅನಂತಪುರ, ಕಡಪ, ತಿರುಪತಿ, ಪುಟ್ಟಪರ್ತಿ, ಚಿಕ್ಕಮಗಳೂರಿಗೆ ನಿತ್ಯ ಈ ಬಸ್ಸುಗಳು ಸಂಚಾರ ನಡೆಸಲಿವೆ. [ಬಯೋ ಬಸ್ ಸಂಚಾರ ಆರಂಭ]
ಈ ಬಸ್ಸುಗಳ ಕಾರ್ಯಕ್ಷಮತೆ, ಇಂಧನ ಕ್ಷಮತೆ ಮುಂತಾದವುಗಳನ್ನು ಪರಿಶೀಲಿಸಿ ವರದಿ ನೀಡಲು ಭಾರತೀಯ ವಿಜ್ಞಾನ ಸಂಸ್ಥೆ, ಜೆಎಸ್‌ಎಸ್ ಇಂಜಿನಿಯರಿಂಗ್ ಕಾಲೇಜಿನ ಜೊತೆ ಕೆಎಸ್ಆರ್‌ಟಿಸಿ ಒಪ್ಪಂದ ಮಾಡಿಕೊಂಡಿದೆ. ಈ ವರದಿ ಬಂದ ಬಳಿಕ ಉಳಿದ ಬಸ್ಸುಗಳಿಗೆ ಬಯೋ ಡೀಸೆಲ್ ಉಪಯೋಗಿಸುವ ಕುರಿತು ಕೆಎಸ್ಆರ್‌ಟಿಸಿ ನಿರ್ಧಾರ ಕೈಗೊಳ್ಳಲಿದೆ. [ಫ್ಲೈ ಬಸ್ ಸೇವೆ ವಿಸ್ತರಣೆ]
ಬಯೋ ಡಿಸೇಲ್ ಬಳಕೆಯಿಂದ ಕೆಎಸ್ಆರ್‌ಟಿಸಿಗೆ ಲೀಟರ್‌ಗೆ 5 ರೂ.ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ. ಹಣ ಉಳಿತಾಯವಾಗುವ ಜೊತೆ ಬಯೋ ಡೀಸೆಲ್ ಬಳಕೆಯಿಂದ ಮಾಲಿನ್ಯದ ಪ್ರಮಾಣವೂ ಕಡಿಮೆಯಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಶೇ 20ರಷ್ಟು ಬಯೋ ಡೀಸೆಲ್
ಕೆಎಸ್ಆರ್‌ಟಿಸಿ 10 ಬಯೋ ಬಸ್ ಸಂಚಾರಕ್ಕೆ ಚಾಲನೆ ನೀಡಿದೆ. ಬಯೋ ಡೀಸೆಲ್ ಮೂಲಕ ಈ ಬಸ್ಸುಗಳು ಸಂಚಾರ ನಡೆಸಲಿವೆ. ಈ ಬಸ್‌ಗಳಲ್ಲಿ ಶೇ. 20ರಷ್ಟು ಬಯೋ ಡೀಸೆಲ್ ಹಾಗೂ ಉಳಿದ ಶೇ. 80ರಷ್ಟು ಡೀಸೆಲ್ ಮಿಶ್ರಣವಿರುತ್ತದೆ.

ಪ್ರಾಯೋಗಿಕ ಸೇವೆ ಆರಂಭ
'ಪ್ರಾಯೋಗಿಕವಾಗಿ 10 ಬಯೋ ಬಸ್‌ಗಳ ಸಂಚಾರಕ್ಕೆ ಕೆಎಸ್ಆರ್‌ಟಿಸಿ ಚಾಲನೆ ನೀಡಿದೆ. ಇದು ಯಶಸ್ವಿಯಾದರೆ ಬೆಂಗಳೂರು ಕೇಂದ್ರೀಯ ವಿಭಾಗದ 5ನೇ ಘಟಕದಲ್ಲಿರುವ ಎಲ್ಲಾ 106 ಬಸ್ ಗಳನ್ನು ಬಯೋ ಡೀಸೆಲ್‌ಗೆ ಪರಿವರ್ತಿಸಲಾಗುತ್ತದೆ' ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಕೆಎಸ್ಆರ್‌ಟಿಸಿಗೆ ಎಷ್ಟು ಉಳಿತಾಯ?
ಬಯೋ ಡೀಸೆಲ್ ಬಳಕೆಯಿಂದ ಲೀಟರ್‌ಗೆ ಅಂದಾಜು 5 ರೂ. ಉಳಿತಾಯವಾಗಲಿದೆ. ಕೆಎಸ್‌ಆರ್‌ಟಿಸಿಯಲ್ಲಿ ಪ್ರಸ್ತುತ 8,200 ಬಸ್‌ಗಳು ಕಾರ್ಯಾಚರಣೆ ಮಾಡುತ್ತಿದ್ದು, ನಿತ್ಯ 5.87 ಲಕ್ಷ ಲೀಟರ್ ಡೀಸೆಲ್ ಬೇಕಾಗುತ್ತದೆ. ಎಲ್ಲ ಬಸ್ಸುಗಳಲ್ಲಿ ಶೇ. 20ರಷ್ಟು ಬಯೋ ಡೀಸೆಲ್ ಮಿಶ್ರಣ ಉಪಯೋಗಿಸಿದರೆ ನಿತ್ಯ ನಿಗಮಕ್ಕೆ 5.87 ಲಕ್ಷ ರೂ. ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ.

ಬಯೋ ಡೀಸೆಲ್ ಉತ್ಪಾದನೆ ಹೇಗೆ?
ಬಳಸಲ್ಪಟ್ಟ ಖಾದ್ಯತೈಲ, ಜಿಡ್ಡಿನ ಅಂಶಗಳಿಂದ ತಯಾರಿಸಲ್ಪಟ್ಟ ಬಯೋ ಡೀಸೆಲ್ ತಯಾರಿಸಲಾಗುತ್ತದೆ. ಕೃಷಿ ಉತ್ಪನ್ನಗಳ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ಕೊಳೆಯುವಂತೆ ಮಾಡಿಯೂ ಡೀಸೆಲ್ ತಯಾರಿಸಬಹುದಾಗಿದೆ.

ಎಲ್ಲಿಗೆ ತೆರಳಿವೆ ಬಯೋ ಬಸ್
ಬೆಂಗಳೂರಿನಿಂದ ಶಿವಮೊಗ್ಗ, ಸೋಮವಾರಪೇಟೆ, ಅನಂತಪುರ, ಕಡಪ, ತಿರುಪತಿ, ಪುಟ್ಟಪರ್ತಿ, ಚಿಕ್ಕಮಗಳೂರಿಗೆ ಈ ಬಯೋ ಬಸ್ಸುಗಳು ಸಂಚಾರ ನಡೆಸಲಿವೆ.












Click it and Unblock the Notifications