ಬೆಳಗಾವಿ ಅಧಿವೇಶನ ಸುಸೂತ್ರವಾಗಿ ನಡೆಯುವುದೇ?
ಬೆಳಗಾವಿ, ನವೆಂಬರ್ 23: ಅನ್ಯಮಾರ್ಗವಿಲ್ಲದೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಸಂತೋಷ್ ಲಾಡ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೇಫ್ ಆಗಿಸಿದ್ದಾರೆ. ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಸಿಲುಕಿದ್ದ ಸಂತೋಷ್ ಲಾಡ್ ಅವರ ರಾಜೀನಾಮೆ ವಿಚಾರ ಭಾರಿ ಚರ್ಚಗೆ ಗ್ರಾಸವಾಗಿತ್ತು.
ಮತ್ತು ಮುಂದಿನ ವಾರ ನಡೆಯಲಿರುವ ಅಧಿವೇಶನವನ್ನು ಆಪೋಷನ ತೆಗೆದುಕೊಳ್ಳಲಿದೆ ಎಂಬ ಭೀತಿಯನ್ನೂ ಹುಟ್ಟುಹಾಕಿತ್ತು. ಆದರೆ ಸಂತೋಷ್ ಅವರು ಸಿದ್ದು ಸಂಪುಟಕ್ಕೆ ದೊಡ್ಡ ಕೈಮುಗಿಯುವ ಮೂಲಕ 6 ತಿಂಗಳ ಸಿದ್ದು ಸರಕಾರವನ್ನು ಭಾರಿ ಸಂಕಟದಿಂದ ಪಾರು ಮಾಡಿದ್ದಾರೆ ಎನ್ನಬಹುದು.
ಇದರಿಂದ ನಿಸ್ತೇಜಗೊಂಡಿರುವ ಪ್ರತಿಪಕ್ಷಗಳು ಒಂದು ರೀತಿಯಲ್ಲಿ 'ಸನ್ಮಾನ್ಯ ಸಿದ್ದರಾಮಯ್ಯನವರು ಸಂತೋಷ್ ಲಾಡ್ ಅವರಿಂದ ರಾಜೀನಾಮೆ ಪಡೆಯುವ ಜಾಣತನ ತೋರುವ ಮೂಲಕ ನಮ್ಮ ಬತ್ತಳಿಕೆಯಲ್ಲಿದ್ದ ಪ್ರಮುಖ ಅಸ್ತ್ರವನ್ನು ಕಿತ್ತುಕೊಂಡಿದ್ದಾರೆ. ಚಳಿಗಾಲದ ಅಧಿವೇಶನವನ್ನು ಬಿಸಿಯಾಗಿಸಬೇಕೆಂಬ ನಮ್ಮ ಆಲೋಚನೆಗಳಿಗೆ ತಣ್ಣೀರೆರೆಚಿದ್ದಾರೆ' ಎಂದು ಪ್ರಲಾಪಿಸುವಂತಾಗಿವೆ.
ಹಾಗಾದರೆ ಬೆಳಗಾವಿಯಲ್ಲಿ ಸೋಮವಾರದಿಂದ ನಡೆಯಲಿರುವ 4ನೆಯ ವಿಧಾನಮಂಡಲ ಅಧಿವೇಶನದಲ್ಲಿ ಸಿದ್ದರಾಮಯ್ಯ ಅವರಿಗೆ ಮತ್ಯಾವುದೇ ಅಡೆತಡೆಗಳು/ ಕಂಟಕಗಳು ಎದುರಾಗುವುದಿಲ್ಲವೆ, ಅಧಿವೇಶನ ಸುಸೂತ್ರವಾಗಿ ನಡೆಯುವುದೇ? ಎಂಬ ಪ್ರಶ್ನೆ ಎದುರಾದಾಗ ಉತ್ತರ ರೂಪವಾಗಿ ಸಿದ್ದರಾಮಯ್ಯ ಅವರೇ ಸೃಷ್ಟಿಸಿಕೊಂಡಿರುವ ಕೆಲವು ಎಡವಟ್ಟು ನಿರ್ಧಾರಗಳು ಕಣ್ಣಿಗೆ ರಾಚುತ್ತವೆ.
ವಿರೋಧ ಪಕ್ಷಗಳು ಈಗಾಗಲೇ ಅಂತಹ ಅಂಶಗಳನ್ನು ಮುಂದಿಟ್ಟುಕೊಂಡು ಸಿದ್ದುಗೆ ಕಂಟಕ ತರಲು ಸಜ್ಜಾಗಿವೆ. ಮಾಜಿ ಮುಖ್ಯಮಂತ್ರಿಗಳಾದ ಜೆಡಿಎಸ್ ಪಕ್ಷದ ಎಚ್ ಡಿ ಕುಮಾರಸ್ವಾಮಿ, ಬಿಜೆಪಿಯ ಜಗದೀಶ್ ಶೆಟ್ಟರ್ ಸಜ್ಜಾಗಿದ್ದಾರೆ. ಇನ್ನು, ಕಳೆದ 24 ದಿನಗಳಿಂದ ಸಿದ್ದು ವಿರುದ್ಧ ಬುಸುಗುಡುತ್ತಿರುವ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ, ಕೆಜೆಪಿಯ ನಾಯಕ ಬಿಎಸ್ ಯಡಿಯೂರಪ್ಪ ಅವರಂತೂ ಶತಾಯಗತಾಯ ಹೋರಾಟ ನಡೆಸುವುದು ಖಚಿತವಾಗಿದೆ. ಪ್ರತಿಪಕ್ಷಗಳಿಗೆ ಅಸ್ತ್ರವಾಗಬಲ್ಲ ಅಂಶಗಳು ಯಾವುವು ಎಂಬುದರತ್ತ ಒಂದು ಸುತ್ತು...

ಸಂಪುಟದಲ್ಲಿ ಕುಬ್ಜರಾಗಿರುವ ಸಕ್ಕರೆ ಸಚಿವ:
ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ನಿಗದಿ: ರಾಜ್ಯದ ಕಬ್ಬು ಬೆಳೆಗಾರರು ಸಂಕಷ್ಟ ಅನಾದಿ ಕಾಲದಿಂದಲೂ ಇದೆ. ಯಾವುದೇ ಸರಕಾರ ಬಂದರೂ ಕಬ್ಬು ಬೆಳೆಗಾರರಿಗೆ ಸ್ಪಂದಿಸುವುದು ಅಷ್ಟರಲ್ಲೇ ಇದೆ. ಮತ್ತು ಇದು ಕರ್ನಾಟಕಕ್ಕಷ್ಟೇ ಸೀಮಿತವಾದುದಲ್ಲ. ಕಬ್ಬು ಬೆಳೆಯುವ ಎಲ್ಲ ರಾಜ್ಯಗಳ ರೈತರೂ ಅನುಭವಿಸುವ ಪಡಿಪಾಟಲು. ಸಿದ್ದು ಸರಕಾರವದಾದರೂ ಈ ಬಗ್ಗೆ ಆದ್ಯ ಗಮನ ಹರಿಸಿ, ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ದಕ್ಕಿಸಿಕೊಡುತ್ತದಾ? ಎಂಬ ಆಶಾಭಾವ ಇಲ್ಲವಾಗಿದೆ. ಸಕ್ಕರೆ ಸಚಿವ, ಸ್ಥಳೀಯ ಪ್ರಭಾವಿ ನಾಯಕ ಪ್ರಕಾಶ್ ಹುಕ್ಕೇರಿ ಅವರಾದರೂ ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ನೆರವಾಗುತ್ತಾರಾ? ಅಂದರೆ ಅದು ದೂರದ ಮಾತಾಗಿದೆ. ಅವರು ಅಂತಹ ಯಾವುದೇ ಧೈರ್ಯವನ್ನು ತೋರಿಲ್ಲ. ಹಾಗಾಗಿ ಪ್ರತಿಪಕ್ಷಗಳು ಸ್ವಲ್ಪ ಮಟ್ಟಿಗೆ ಈ ವಿಷಯವನ್ನು ಮುಂದಿಟ್ಟುಕೊಂಡು ಹೋರಾಟ ಮಾಡಬಹುದು.

ಬಿರುಗಾಳಿ ಎಬ್ಬಿಸುವ 2 ಸಂಗತಿಗಳು
ಶಾದಿ ಭಾಗ್ಯ ಮತ್ತು ಮೂಢನಂಬಿಕೆ ಕರಡು ಪ್ರತಿ - ಈ ಎರಡೂ ವಿಷಯಗಳು ಸದನದಲ್ಲಿ ಬಿರುಗಾಳಿ ಎಬ್ಬಿಸುವ ಸಾಧ್ಯತೆಗಳಿವೆ. ಒಂದು ವೇಳೆ ಅಕಸ್ಮಾತ್ ಮೂಢನಂಬಿಕೆ ಕರಡನ್ನು ಸದನದಲ್ಲಿ ಮಂಡಿಸಿಬಿಟ್ಟರೆ ಮುಗಿದೇ ಹೋಯ್ತು. ಸಿದ್ದು ಸಂಪುಟ ಬೆಂಗಳೂರಿಗೆ ವಾಪಸಾಗುವುದು ದುಸ್ತರವಾಗಲಿದೆ. ಅಷ್ಟರಮಟ್ಟಿಗೆ ಪ್ರತಿಪಕ್ಷಗಳು ಕೈಯಲ್ಲಿ ನಿಂಬೆಹಣ್ಣು ಹಿಡಿದು ಕಾಂಗ್ರೆಸ್ ಸರಕಾರವನ್ನು ನಿವಾಳಿಸಲು ಸಜ್ಜಾಗಿವೆ.
ಆದರೆ ಆರಂಭದಲ್ಲಿ ಏಕಾಏಕಿ ಮೂಢನಂಬಿಕೆ ಕರಡು ಪ್ರಸ್ತಾವನೆಗೆ ಭಾರಿ ವಿರೋಧ ವ್ಯಕ್ತವಾಯಿತು ಎಂಬುದು ನಿಜವೇ ಆದರೂ ಆನಂತರದ ದಿನಗಳಲ್ಲಿ ಕರಡು ಅಂಶಗಳ ಬಗ್ಗೆ ಸಾರ್ವಜನಿಕ ಚರ್ಚೆಗಳು ಹೆಚ್ಚು ಹೆಚ್ಚು ನಡೆಯುತ್ತಿದ್ದು, ಒಂದು ವರ್ಗವು ಮೂಢನಂಬಿಕೆ ಕರಡು ಮಂಡನೆಯಾಗಿಬಿಡಲಿ ಎಂದು ಆಶಿಸುತ್ತಿರುವುದು ಸುಳ್ಳಲ್ಲ.

ಇನ್ನು ಕೆಲ ಸವಕಲು ಅಂಶಗಳು
ಅನ್ನಭಾಗ್ಯ, ಕ್ಷೀರಭಾಗ್ಯ ಯೋಜನೆಗಳಲ್ಲಿ ಹುಳುಕುಗಳನ್ನು ಕಾಣಲು ಪ್ರತಿಪಕ್ಷಗಳು ಬಯಸುತ್ತಿವೆ. ಆದರೆ ಇದು ಈಗಾಗಲೇ ಜೊಳ್ಳು ಜೊಳ್ಳಾಗಿದೆ ಎಂಬುದು ಸಿದ್ದರಾಮಯ್ಯ ಅವರಿಗೇ ಮನವರಿಕೆಯಾಗಿದ್ದು, ಈ ನಿಟ್ಟಿನಲ್ಲೂ ಸಿದ್ದರಾಮಯ್ಯಗೆ ಹೆಚ್ಚೇನೂ ಪ್ರತಿರೋಧ ಎದುರಾಗುವುದಿಲ್ಲ ಎನ್ನಬಹುದು.

ಅಹಿಂದ ಶಾಲಾ ಪ್ರವಾಸ ವಿವಾದ ಇನ್ನೂ ಜೀವಂತ
ಅಹಿಂದ ಶಾಲಾ ಮಕ್ಕಳಿಗೆ ಮಾತ್ರ ಕರ್ನಾಟಕ ಪ್ರವಾಸ ಯೋಜನೆ ಕುರಿತಾದ ವಿವಾದ ಇನ್ನೂ ಜೀವಂತವಾಗಿದೆ. ಇದು ಸಿದ್ದರಾಮಯ್ಯ ಸರಕಾರಕ್ಕೆ ಮೂಢನಂಬಿಕೆ ಕರಡು ಪ್ರಸ್ತಾವನೆಯಷ್ಟೇ ಅಪಾಯಕಾರಿಯಾಗಬಹುದು. ಇದರ ಜತೆಗೆ, ಶಾಸಕರ ನಿಧಿಗೆ ಒಂದು ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಹೇಳಿ ಕೇವಲ 25 ಲಕ್ಷ ರೂ. ಮಾತ್ರ ಬಿಡುಗಡೆ ಮಾಡಿರುವುದೂ ಶಾಸಕರನ್ನು ಕೆರಳಿಸಿದೆ. ಇದೂ ಸಹ ಸದನದಲ್ಲಿ ಕೋಲಾಹಲವೆಬ್ಬಿಸುವ ಲಕ್ಷಣವಿವೆ.












Click it and Unblock the Notifications