ನಾಗೇಂದ್ರ ಕೊನೆಗೂ ಬಂಧನ; ರಾಮುಲುಗೆ ಸಂಕಷ್ಟ

ಈ ಮಧ್ಯೆ, ಈಗಾಗಲೇ ಸಿಬಿಐ ಬಂಧನದಲ್ಲಿರುವವರು ಬಿಎಸ್ಸಾರ್ ಕಾಂಗ್ರೆಸ್ ಅಧ್ಯಕ್ಷ ಶ್ರೀರಾಮುಲು ಸಹ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಸುಳಿವು ನೀಡಿರುವುದರಿಂದ ಮುಂದಿನ ಸರದಿಯಲ್ಲಿ ರಾಮುಲು ಸಹ ಬಂಧನಕ್ಕೀಡಾಗುವ ಸಾಧ್ಯತೆಯಿದೆ.
ಜನಾರ್ದನ ರೆಡ್ಡಿ ವಿದೇಶಗಳಲ್ಲಿ ಆರಂಭಿಸಿದ್ದ 19 ಬೇನಾಮಿ ಕಂಪನಿಗಳಿಗೆ ಶ್ರೀರಾಮುಲುವೇ ಸೂತ್ರಧಾರ ಎಂದು ಈಗಾಗಲೇ ಸಿಬಿಐ ಬಂಧನದಲ್ಲಿರುವ ಸುರೇಶ್ ಬಾಬು ಸೇರಿದಂತೆ ಇತರರು ಸಿಬಿಐಗೆ ಅರುಹಿರುವುದರಿಂದ ಹೆಚ್ಚಿನ ವಿಚಾರಣೆಗೆ ರಾಮುಲು ಸಿಬಿಐ ಆತಿಥ್ಯ ಪಡೆಯಬೇಕಾಗಿದೆ.
ಶಾಸಕ ನಾಗೇಂದ್ರ ಜತೆಗೆ ಅವರ ಆಪ್ತ ಜೀವ ರೆಡ್ಡಿ ಹಾಗೂ ಸರ್ಕಲ್ ಇನ್ಸ್ ಪೆಕ್ಟರ್ ರಮಾಕಾಂತ್ ಹುಲ್ಲೂರ್ ಸಹ ಬಂಧಿತಕ್ಕೀಡಾಗಿದ್ದಾರೆ. ಈ ಮೂವರೂ ನಿನ್ನೆ ಗುರುವಾರ ಮಧ್ಯಾಹ್ನ ಗಂಗಾನಗರದಲ್ಲಿರುವ ಸಿಬಿಐ ಕಚೇರಿಗೆ ವಿಚಾರಣೆಗಾಗಿ ಹಾಜರಾಗಿದ್ದರು. ವಿಚಾರಣೆ ನಂತರ ರಾತ್ರಿ ವೇಳೆಗೆ ಪೊಲೀಸರು ಮೂವರನ್ನೂ ಬಂಧಿಸಿದರು.
ಈಗಲ್ ಟ್ರೇಡರ್ ಕಂಪನಿ ಮಾಲಿಕರಾಗಿರುವ ನಾಗೇಂದ್ರ ಅವರನ್ನು ಅಕ್ರಮ ಗಣಿಗಾರಿಕೆ ಮಾಡಿದ ಸ್ಟಾಕ್ ಯಾರ್ಡ್‌ಗಳ ಅದಿರನ್ನು ಬೇಲೆಕೇರಿಗೆ ಸಾಗಾಟ ಮಾಡುತ್ತಿದ್ದರು. ಮಾಜಿ ಸಚಿವ ಜನಾರ್ದನ ರೆಡ್ಡಿಯ ನಿರ್ದೇಶನದಂತೆ ನಾಗೇಂದ್ರ ಈ ಕಾರ್ಯ ಮಾಡುತ್ತಿದ್ದರು ಎಂಬುದು ಸಿಬಿಐ ಆರೋಪ. ಇನ್ನು, ಜೀವರೆಡ್ಡಿ ಅವರನ್ನು ವಿದೇಶಕ್ಕೆ ಅಕ್ರಮವಾಗಿ ಅದಿರು ರಫ್ತು ಮಾಡುತ್ತಿದ್ದ ಆರೋಪದ ಮೇಲೆ ಬಂಧಿಸಲಾಗಿದೆ. ಗಣಿ ಅಕ್ರಮಗಳಿಗೆ ಸಹಕರಿಸಿರುವ ಆರೋಪವನ್ನು ರಮಾಕಾಂತ್ ಎದುರಿಸುತ್ತಿದ್ದಾರೆ.
ಬೇಲೇಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರಾದ ಸುರೇಶ್ ಬಾಬು, ಸತೀಶ್ ಸೈಲ್, ನಾಗೇಂದ್ರ ಹಾಗೂ ಆನಂದ ಸಿಂಗ್ ಅವರಿಗೆ ಸಿಬಿಐ ಅಧಿಕಾರಿಗಳು ಸೆ. 23ರೊಳಗೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದ್ದರು. ಸುರೇಶ್ ಬಾಬು ಹಾಗೂ ಸತೀಶ್ ಸೈಲ್ ವಿಚಾರಣೆಗೆ ಹಾಜರಾಗಿ ಬಂಧನಕ್ಕೊಳಗಾಗಿದ್ದಾರೆ.
ಆದರೆ, ಸಿಬಿಐ ನೋಟಿಸ್‌ಗೆ ಆನಂದ ಸಿಂಗ್ ಮತ್ತು ನಾಗೇಂದ್ರ ಕ್ಯಾರೆ ಎಂದಿರಲಿಲ್ಲ. ಅನಾರೋಗ್ಯವೆಂದು ಆನಂದ್ ಸಿಂಗ್ ಸಿಂಗಾಪುರದಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಹೇಳಿ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಆದರೆ ನಾಗೇಂದ್ರ ತಾನೇನೂ ತಪ್ಪೇ ಮಾಡಿಲ್ಲವೆಂದು, ರಾಜಾರೋಷವಾಗಿ ತಮ್ಮ ಕ್ಷೇತ್ರದಲ್ಲಿ ಸಾರ್ವಜನಿಕವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು.












Click it and Unblock the Notifications