ಬೆಳಗಾವಿ: ಮಹಿಳೆ ಮೇಲೆ ಹಲ್ಲೆ, ಸಂತ್ರಸ್ತೆ ಭೇಟಿಗೆ ಹೈಕೋರ್ಟ್ ನಿರ್ಬಂಧ
ಬೆಂಗಳೂರು, ಡಿಸೆಂಬರ್ 17: ಬೆಳಗಾವಿ ತಾಲೂಕಿನ ವಂಟೂರಿನಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ, ಹಲ್ಲೆ ಮಾಡಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತ ಮಹಿಳೆಯ ಭೇಟಿಗೆ ಕರ್ನಾಟಕ ಹೈಕೋರ್ಟ್ ನಿರ್ಬಂಧ ವಿಧಿಸಿದೆ.
ವೈದ್ಯರ ಲಿಖಿತ ಅನುಮತಿ ಇಲ್ಲದೆ ಯಾರೂ ಅವರನ್ನು ಭೇಟಿ ಮಾಡುವಂತಿಲ್ಲ ಎಂದು ಹೈಕೋರ್ಟ್ ಕಡಿವಾಣ ಹಾಕಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಲಯ, ಯಾವುದೇ ವ್ಯಕ್ತಿ, ಸಾರ್ವಜನಿಕರು, ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳು ಭೇಟಿ ಮಾಡಬಾರದು ಎಂದು ಆದೇಶಿಸಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿರುವ ವೈಧ್ಯಾಧಿಕಾರಿ ಲಿಖಿತ ಪೂರ್ವಾನುಮತಿ ಇಲ್ಲದೆ ಇತರರ ಭೇಟಿಗೆ ಅವಕಾಶ ನೀಡಬಾರದು ಎಂದು ಪೀಠ ತಿಳಿಸಿದೆ. ಅಲ್ಲದೆ, ಸಂಸ್ತ್ರಸ್ಥೆಯ ಕುಟುಂಬ ಸದಸ್ಯರು, ಶಾಸನ ಬದ್ಧ ಸಂಸ್ಥೆಗಳು, ಆಯೋಗಗಳು ಹಾಗೂ ತನಿಖಾ ಸಂಸ್ಥೆಗಳ ಪ್ರತಿನಿಧಿಗಳು ಭೇಟಿ ನೀಡುವುದಕ್ಕೆ ಯಾವುದೇ ಅಡ್ಡಿಯಿರುವುದಿಲ್ಲ ಎಂದು ಪೀಠ ಇದೇ ವೇಳೆ ಸ್ಪಷ್ಟ ಪಡಿಸಿದೆ.
ಪ್ರಕರಣ ಸಂಬಂಧ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರೊಂದಿಗೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸಂತ್ರಸ್ತೆಯನ್ನು ಭೇಟಿಯಾಗುತ್ತಿರುವ ಸಂಬಂಧ ಮಾಧ್ಯಮಗಳಲ್ಲಿ ವೀಕ್ಷಿಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ನ್ಯಾಯಪೀಠ, ಶನಿವಾರ ತಮ್ಮ ಕಚೇರಿಯಲ್ಲಿ ತುರ್ತು ವಿಚಾರಣೆ ನಡೆಸಿ ಈ ಆದೇಶ ನೀಡಿದೆ.
ಏಕೆ ಈ ನಿರ್ಬಂಧ ಆದೇಶ?; ಅಲ್ಲದೆ, ಸಾರ್ವಜನಿಕರ ಭೇಟಿಯನ್ನು ನಿರ್ಬಂಧ ವಿಧಿಸುವುದಕ್ಕೆ ನ್ಯಾಯಾಲಯ ಮುಂದಾಗುವುದಿಲ್ಲ. ಆದರೆ, ಗ್ರಾಮದಲ್ಲಿ ನಡೆದಿದ್ದ ಘಟನೆಯ ನಂತರ ಸಂತ್ರಸ್ತೆ ನೋವಿನಿಂದ ಕೊರಗುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಹೆಚ್ಚು ಮಂದಿ ಭೇಟಿ ಮಾಡಿ ಮಾತನಾಡುವುದು ಸೂಕ್ತವಾದ ಬೆಳವಣಿಗೆಯಲ್ಲ.
ಪ್ರಸ್ತುತ ಸಂತ್ರಸ್ಥೆ ತೀವ್ರ ತರದ ನೋವು ಅನುಭವಿಸುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಹೆಚ್ಚು ಸಾರ್ವಜನಿಕರು ಪದೇ ಪದೇ ಭೇಟಿ ಮಾಡುವುದರಿಂದ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಭೀರಲಿದೆ. ಜತೆಗೆ, ಚಿಕಿತ್ಸೆ ಪಡೆದುಕೊಳ್ಳುವುದಕ್ಕೂ ತೊಂದರೆಯಾಗುವ ಸಾಧ್ಯತೆಯಿರಲಿದೆ. ಆದ ಕಾರಣ ಸಾರ್ವಜನಿಕರ ಭೇಟಿಗೆ ಕಡಿವಾಣ ಹಾಕುತ್ತಿರುವುದಾಗಿ ಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ: ಬೆಳಗಾವಿ ತಾಲೂಕಿನ ವಂಟೂರಿನಲ್ಲಿ ಅದೇ ಗ್ರಾಮದ ಯುವತಿಯನ್ನು ಅವರದ್ದೇ ಸಮುದಾಯದ ಯುವಕ ಪ್ರೀತಿಸಿ ಪರಾರಿಯಾಗಿದ್ದರು. ಇದೇ ಕಾರಣದಿಂದ ಯುವತಿಯ ಕುಟುಂಬಸ್ಥರು ಯುವಕನ ತಾಯಿಯನ್ನು ಮಧ್ಯರಾತ್ರಿಯಲ್ಲಿ ಬೆತ್ತಲೆಗೊಳಿಸಿ ಊರಿನಲ್ಲಿ ಮೆರವಣಿಗೆ ಮಾಡಿ ಕಂಬಕ್ಕೆ ಕಟ್ಟಿ ಥಳಿಸಿದ್ದರು.
ಈ ವಿಚಾರ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದ ಸುದ್ದಿಯನ್ನು ಪರಿಶೀಲಿಸಿ ಹೈಕೋರ್ಟ್ ಸ್ವಯಂ ಪ್ರೇರಿತ ಸ್ವಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡು ವಿಚಾರಣೆ ನಡೆಸಿತ್ತು. ಈ ನಡುವೆ ಡಿಸೆಂಬರ್ 18ರಂದು ಬೆಳಗಾವಿ ಪೊಲೀಸ್ ಆಯುಕ್ತರು ಖುದ್ದು ಹಾಜರಾಗಿ ವಿವರಣೆ ನೀಡಬೇಕು ಎಂದು ಸೂಚನೆ ನೀಡಿತ್ತು. ಜತೆಗೆ, ಆರೋಪಿಗಳನ್ನು ಬಂಧಿಸಬೇಕು ಎಂದು ತಿಳಿಸಿ ವಿಚಾರಣೆ ಮುಂದೂಡಿತ್ತು. ಸೋಮವಾರ ಹೈಕೋರ್ಟ್ ಮತ್ತೆ ಪ್ರಕರಣದ ವಿಚಾರಣೆಯನ್ನು ನಡೆಸಲಿದೆ.












Click it and Unblock the Notifications