ಬೆಂಗಳೂರಿನ ನಿರಾಶ್ರಿತರ ಪರಿಹಾರ ಕೇಂದ್ರದ ಕುರಿ ಸಾಕಾಣಿಕೆ ಕಥೆ!
ಬೆಂಗಳೂರು, ಜು. 17: ಕುರಿಗಳಿಗೆ ಚಳಿ ಆಗಬಾರದೆಂದು ಕುರಿ ಸಾಕಾಣಿಕೆ ಶೆಡ್‌ಗೆ ಭಿಕ್ಷುಕ ಹಳೇ ಬೆಡ್ ಶೀಟ್‌ಗಳನ್ನು ಕಟ್ಟಿದ್ದಾನೆ. ಪ್ರತಿ ದಿನ ಕುರಿ ಮೇಯಿಸಿ ಮೂಕ ಜೀವಿಗಳ ಪ್ರೀತಿಯಲ್ಲಿಯೇ ಮುಳುಗಿದ್ದಾನೆ.
ದಶಕದ ಹಿಂದೆ ಸರಣಿ ಸಾವಿಗೆ ನಾಂದಿ ಹಾಡಿದ್ದ ಬೆಂಗಳೂರಿನ ಸುಮ್ಮನಹಳ್ಳಿಯ ನಿರಾಶ್ರಿತರ ಪರಿಹಾರ ಕೇಂದ್ರ ಸಂಪೂರ್ಣ ಬದಲಾಗಿ ಹೋಗಿದೆ. ಅಲ್ಲಿ ಭಿಕ್ಷುಕರು ಕೂಡ ಬಿಂದಾಸ್ ಜೀವನ ಮಾಡುತ್ತಿದ್ದಾರೆ. ಒಬ್ಬೊಬ್ಬರದ್ದು ಒಂದೊಂದು ಕಸುಬು. ಅದರಲ್ಲಿ ರಾಮನಗರ ಮೂಲದ ಇರ್ಫಾನ್ ಕುಣಿ ಸಾಕಾಣಿಕೆ ಕೆಲಸ ಮಾಡುತ್ತಿದ್ದಾರೆ. ಕುರಿ ಸಾಕಾಣಿಕೆ ವಿಶೇಷವೇನಲ್ಲ. ಆದರೆ ಕುರಿಗಳ ಬಗ್ಗೆ ಆತ ತೋರಿರುವ ಕಾಳಜಿ, ಮುಗ್ಧ ಪ್ರೀತಿ ಗಮನ ಸೆಳೆದಿದೆ.
ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಭಿಕ್ಷುಕರು ಕುರಿ ಸಾಕಾಣಿಕೆಯಲ್ಲಿ ಸೈ ಎನಿಸಿದ್ದಾರೆ. ಸುಮಾರು 80 ಕುರಿಗಳಿಗೆ ಶೆಡ್ ಕಟ್ಟಲಾಗಿದೆ. ವಿಶಾಲವಾದ ಶೆಡ್‌ನಲ್ಲಿ ಗಾಳಿಯಾಡಲೆಂದೇ ಕಬ್ಬಿಣದ ಜಾಲರಿ ಹಾಕಿ ಹಾಗೇ ಬಿಡಲಾಗಿತ್ತು. ಮಳೆ ಬಿದ್ದರೆ ಕುರಿಗಳಿಗೆ ಚಳಿ. ಇದರಿಂದ ಸಾಮಾನ್ಯವಾಗಿ ರೋಗಕ್ಕೆ ತುತ್ತಾಗುವ ಸಂಭವವಿರುತ್ತದೆ.
ಕೃಷಿ ಬಗ್ಗೆ ಅರಿತಿದ್ದ ಇರ್ಫಾನ್, ಶೆಡ್‌ನಲ್ಲಿ ಕುರಿಗಳಿಗೆ ಚಳಿ ಆಗದಂತೆ ಬೆಡ್ ಶೀಟ್‌ಗಳನ್ನು ಕಟ್ಟಿ ಅವುಗಳನ್ನು ರಕ್ಷಣೆ ಮಾಡಿದ್ದಾನೆ. ಮೂಕ ಪ್ರಾಣಿಗಳ ಪ್ರೀತಿಗೆ ಪಾತ್ರನಾಗಿದ್ದಾನೆ. ಭಿಕ್ಷುಕರಾದರೂ ನಮ್ಮ ಹೃದಯ ಶ್ರೀಮಂತಿಕೆ ಕಡಿಮೆ ಇಲ್ಲ ಎಂಬುದನ್ನು ತೋರಿಸಿದ್ದಾರೆ.

ನಿರಾಶ್ರಿತರ ಶಿಬಿರ
ಯಾದಗಿರಿ ಮೂಲದ ಒಬ್ಬ ವ್ಯಕ್ತಿ ಹಾಗೂ ಇರ್ಫಾನ್ ಬೆಳಗ್ಗೆ ತಿಂಡಿ ಮುಗಿಸಿ ನಿರಾಶ್ರಿತರ ಪರಿಹಾರ ಕೇಂದ್ರದ ವಿಶಾಲ ಜಾಗದಲ್ಲಿ ಕುರಿ ಮೇಯಿಸುತ್ತಾರೆ. ಮಧ್ಯಾಹ್ನದ ಬಳಿಕ ಶೆಡ್‌ಗೆ ಹೊಡೆಯುತ್ತಾರೆ. ಅ ಬಳಿಕ ಅವುಗಳಿಗೆ ಬೇಕಾದ ಮೇವು ಹಾಕಿ ಅಲ್ಲಿಯೇ ಕಾವಲು ಕಾಯುತ್ತಾರೆ.
ಇರ್ಫಾನ್ ಜತೆಗೆ ಯಾದಗಿರಿ ಮೂಲದ ವ್ಯಕ್ತಿ ಇಬ್ಬರೂ ಕುರಿ ಶೆಡ್ ಪಕ್ಕದಲ್ಲಿಯೇ ನೆಲೆಸುತ್ತಾರೆ. ಕುರಿಗಳ ರಕ್ಷಣೆಗೆಂದೇ ನಾಯಿಯೊಂದನ್ನೂ ಸಾಕಿಕೊಂಡಿದ್ದಾರೆ. ಸರ್ಕಾರಿ ಲೆಕ್ಕ ಪುಸ್ತಕದಲ್ಲಿ ಅವರು ಭಿಕ್ಷುಕರಾಗಿದ್ದರೂ, ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡು ಖುಷಿ ಜೀವನ ಸಾಗಿಸುತ್ತಿದ್ದಾರೆ.

ಇರ್ಫಾನ್ ಮಾತುಗಳ ಮುಗ್ಧತೆ
"ಸಾರ್, ಈ ಕುರಿಗಳಿಗೆ ಚಳಿ ಬಂದರೆ ತಡೆಯಲ್ಲ. ನಮ್ಮ ಶೆಡ್ ಬೇಸಿಗೆ ಕಾಲಕ್ಕೆ ಸೂಕ್ತ. ಮಳೆಗಾಲ ಬಂದರೆ ಕುರಿಗಳಿಗೆ ಚಳಿ ಆಗುತ್ತದೆ. ಅವು ತಡೆಯಲ್ಲ. ಹೀಗಾಗಿ ನಾನೊಬ್ಬನೇ ಬೆಡ್ ಶೀಟ್ ಗಳನ್ನು ಸಂಗ್ರಹಿಸಿ ಕಟ್ಟಿದ್ದೇನೆ. ಒಂದು ಕಡೆ ಮಾತ್ರ ಬೆಳಕಿಗೆ ಜಾಗ ಬಿಟ್ಟಿದ್ದೇನೆ. ಇವಾಗ ಆರಾಮಾಗಿ ಮಲಗಿಕೊಳ್ಳುತ್ತವೆ. ನಮಗೆ ಚಳಿ ಆದಂಗೆ ಅವುಗಳಿಗೆ ಆಗುತ್ತದೆ. ಈವಾಗ ಆಗೋದಿಲ್ಲ ನೋಡಿ" ಎಂದು ತನ್ನ ಮುಗ್ಧ ಮಾತುಗಳನ್ನು ಒನ್ ಇಂಡಿಯಾ ಕನ್ನಡ ಜತೆ ಹಂಚಿಕೊಂಡರು ಇರ್ಫಾನ್

ಇರ್ಫಾನ್ ನಿರಾಶ್ರಿತರ ಕೇಂದ್ರ ಸೇರಿದ್ದು ಹೇಗೆ ?
ರಾಮನಗರ ಮೂಲದ ಇರ್ಫಾನ್ ಮಗ ಮೆಕಾನಿಕಲ್ ಓದಿದ್ದಾರಂತೆ. "ಕೆಲಸದ ನಿಮಿತ್ತ ನಾಗರಬಾವಿಗೆ ಬಂದಿದ್ದೆ. ಅಮೇಲೆ ನನ್ನ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಕರೆ ತಂದರು. ನಾನು ಇಲ್ಲಿರೋದು ಯಾರಿಗೂ ಗೊತ್ತಿಲ್ಲ. ಇಲ್ಲಿಗೆ ಬಂದು ಒಂದೂವರೆ ವರ್ಷ ಆಗೋಯಿತು. ಕುರಿ ಮೇಯಿಸ್ತಾ ಇದ್ದೀನಿ. ಇಲ್ಲಿ ಎಲ್ಲವೂ ಚೆನ್ನಾಗಿಯೇ ಇದೆ" ಎಂದು ಇರ್ಫಾನ್ ಹೇಳಿದರು.

ಅವರೇ ಮನೆಗೆ ಕಳಿಸುತ್ತಾರೆ
"ಇನ್ನೂ ಸ್ವಲ್ಪ ದಿನ ಇರ್ತೇನೆ. ಅಮೇಲೆ ಅವರೇ ಮನೆಗೆ ಕಳುಹಿಸುತ್ತಾರೆ" ಎಂದು ನಿರಾಶ್ರಿತರ ಪರಿಹಾರ ಕೇಂದ್ರ ಸೇರಿದ ಕಥೆಯನ್ನು ಇರ್ಫಾನ್ ಹೇಳಿಕೊಂಡರು.
ಇರ್ಫಾನ್ ಜತೆ ಕುರಿ ಸಾಕಾಣಿಕೆಗೆ ಕೈ ಜೋಡಿಸಿರುವ ಯಾದಗಿರಿ ಮೂಲದ ವ್ಯಕ್ತಿ ಕುರಿಗಳಿಗೆ ಮೇವು ಹಾಕುವ ಕಾಯಕದಲ್ಲಿಯೇ ಮುಳಗಿದ್ದ ದೃಶ್ಯ ಕಂಡು ಬಂತು. ಯಾರ ನೆರಳು ಇಲ್ಲದ ಇರ್ಫಾನ್ ಕೂಡ ಒಬ್ಬ ನಿರಾಶ್ರಿತ. ಆದರೆ ಮೂಕ ಪ್ರಾಣಿಗಳ ರಕ್ಷಣೆಗೂ ಆತ ತೋರಿರುವ ಕಾಳಜಿ ಆತನ ಆತ್ಮಸಾಕ್ಷಿ ಬದುಕಿಗೆ ಹಿಡಿದ ಕನ್ನಡಿಯಂತಿದೆ.












Click it and Unblock the Notifications